ಅಶ್ವತ್ಥ ನಾರಾಯಣ ಸಚಿವರೋ? ರೌಡಿಯೋ?
ಸಿದ್ದರಾಮಯ್ಯರವರನ್ನು ‘ಹೊಡೆದು ಹಾಕಬೇಕು’ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣರವರು, ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಟೀಕಿಸುವ ಭರದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಸಭ್ಯತೆಯೇ ಎಂದು ಪ್ರಶ್ನಿಸುವಂತಾಗಿದೆ. ಡಾ.ಅಶ್ವತ್ಥ ನಾರಾಯಣರವರು ಸಿದ್ದರಾಮಯ್ಯರವರನ್ನು ಟಿಪ್ಪು ಸುಲ್ತಾನ್‌ಗೆ ಹೋಲಿಸಿ, ಉರಿಗೌಡ ಮತ್ತು ನಂಜೇಗೌಡ ಎಂಬುವವರು ಟಿಪ್ಪುವನ್ನು ಏನು ಮಾಡಿದರು? ಎಂದು ಸಾರ್ವಜನಿಕವಾಗಿ ಅವರೇ ಪ್ರಶ್ನಿಸಿ ಬಳಿಕ ಅವರು ಟಿಪ್ಪುವನ್ನು ಹೊಡೆದು ಹಾಕಿದರು ಎನ್ನುವುದರೊಂದಿಗೆ, ಅದೇ ರೀತಿ ನೀವೂ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎನ್ನುವ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆಯನ್ನು ನೀಡಿರುವ ಡಾ.ಅಶ್ವತ್ಥ ನಾರಾಯಣರವರು ಸಚಿವರೋ ಅಥವಾ ಬೀದಿ ರೌಡಿಯೋ ಎಂಬ ಅನುಮಾನ ಮೂಡಿದೆ. ಉನ್ನತ ಸ್ಥಾನದಲ್ಲಿದ್ದು ಇವರೇ ಕ್ರೌರ್ಯಕ್ಕೆ ಆಹ್ವಾನ ಕೊಟ್ಟಂತೆ ಪ್ರಚೋದನಾತ್ಮಕ ಹೇಳಿಕೆ ಕೊಡುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಈ ಹಿಂದೆಯೂ ರಾಮನಗರದ ಸಾರ್ವಜನಿಕ ಸಭೆಯೊಂದರ ವೇದಿಕೆ ಮೇಲೆ ಕುಸ್ತಿ ಪೈಲ್ವಾನರಂತೆ ಎದೆಯ ಮೇಲೆ ಕೈ ತಟ್ಟಿ ‘ಯಾರ್ರೊ ಬನ್ರೋ, ಗಂಡಸರು, ನೋಡ್ಕೋತ್ತಿನಿ’ ಎಂದು ಕುಸ್ತಿಗೆ ಆಹ್ವಾನಿಸಿದಂತೆ ವರ್ತಿಸಿದ್ದರು. ಈ ಮೂಲಕ ತಾನೊಬ್ಬ ರಾಜಕಾರಣಿ ಎನ್ನುವುದಕ್ಕಿಂತ ತಾನೊಬ್ಬ ರೌಡಿ ಎಂಬುದನ್ನು ಸಾಬೀತು ಮಾಡಲು ಮುಂದಾಗಿದ್ದಾರೆ. ಇಂತಹ ರಾಜಕಾರಣಿಗಳಿಂದ ಇಂದು ಸಮಾಜದಲ್ಲಿ ಶಾಂತಿ ಕದಡುವ ಸನ್ನಿವೇಶಗಳು ಉದ್ಭವವಾಗುತ್ತಿದ್ದು, ಇವರುಗಳ ವಿರುದ್ಧ ಪೊಲೀಸರು ಏಕೆ ‘ರೌಡಿ’ ಶೀಟರ್ ಎಂದು ಪ್ರಕರಣ ದಾಖಲಿಸಬಾರದು?
–ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.
ಬದಲಾವಣೆ? ಭರದಿಂದ ಬರುತ್ತಿದೆ,
ಬಿರುಗಾಳಿಯಂತೆ ಚುನಾವಣೆ:
ಯಾರು ಯಾರಿಂದಲೋ
ಯಾರು ಯಾರಿಗೋ ಚಿತಾವಣೆ!
‘ಚಿತೆ’ಗೆ ಬೀಳುವವರು ಯಾರೊ;
‘ಅಗ್ನಿ ಪರೀಕ್ಷೆ’ಯನ್ನು ಉತ್ತರಿಸುವವರು ಯಾರೊ
ಕಾದು ನೋಡೋಣ. ಅಂತೂ
ಹಲವು ಪ್ರಶ್ನೆಗಳಿಗೆ ಉತ್ತರ
ಕಾಣಿಸಲಿದೆ ಚುನಾವಣೆ;
ಏನಾದರೇನು, ನಿರೀಕ್ಷಿಸಲಾಗದು
ಭಾರಿ ಬದಲಾವಣೆ!
(ಖಾಲಿ ಖಾಲಿ ಜನ ಸಾಮಾನ್ಯರ ಹಣೆ).
– ಸಿಪಿಕೆ, ಮೈಸೂರು.
ಗಡಿಭಾಗದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು ಉತ್ತಮ ಬೆಳವಣಿಗೆ
ಕರ್ನಾಟಕದ ಗಡಿಭಾಗದ ತಾಲ್ಲೂಕ್ಕಾಗಿರುವ ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ನೆರೆ ರಾಜ್ಯದವರ ಪ್ರಭಾವ ಹೆಚ್ಚಾಗಿದ್ದು, ಇದರಿಂದ ಗಡಿಯಲ್ಲಿ ಕನ್ನಡ ಭಾಷೆ ನಶಿಸುವಂತಾಗಿದೆ. ಈಗಾಗಲೇ ತಾಲ್ಲೂಕಿನ ಸಾಕಷ್ಟು ಜನರು ಕೇರಳದೊಂದಿಗೆ ವ್ಯವಹಾರಿಕ ಸಂಪರ್ಕ ಹೊಂದಿರುವುದರಿಂದ ಕೆಲಸ ಕಾರ್ಯಗಳಿಗೆ ಕೇರಳದವರ ಮೊರೆ ಹೋಗುತ್ತಿದ್ದಾರೆ. ಈ ವೇಳೆ ಕನ್ನಡದಲ್ಲಿ ವ್ಯವಹರಿಸುವ ಬದಲಿಗೆ ಮಲಯಾಳಂ ಭಾಷೆಯಲ್ಲಿಯೇ ವ್ಯವಹರಿಸುತ್ತಿದ್ದು, ಕ್ಷೇತ್ರದಲ್ಲಿ ಕನ್ನಡ ನಶಿಸುವ ಹಂತದಲ್ಲಿದೆ. ಇನ್ನು ಕೆಲ ಅಂಗಡಿಗಳ ನಾಮಫಲಕಗಳಲ್ಲಿಯೂ ಅನ್ಯಭಾಷೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಕನ್ನಡ ಭಾಷೆಯ ಬಳಿಕ ಕಡಿಮೆಯಾಗಿದೆ.ಇಂತಹ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿಭಾಗವಾದ ಅಂತರಸಂತೆಯಲ್ಲಿ ಆಯೋಜಿಸಿದ್ದು, ಇದು ಈ ಭಾಗದಲ್ಲಿ ಕನ್ನಡದ ಉಳಿವಿನ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರಬಹುದು ಎಂಬುದನ್ನು ಕಾದನೋಡಬೇಕಿದೆ. ಮತ್ತೊಂದೆಡೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಿಗರೇ ಹೆಚ್ಚಾಗಿ ಆಗಮಿಸದಿದ್ದದ್ದು ಬೇಸರದ ಸಂಗತಿಯಾಗಿದೆ. ಈಗಾದರೆ ಗಡಿಭಾಗಗಳಲ್ಲಿ ಕನ್ನಡ ಉಳಿಯುವುದು ಹೇಗೆ? ಇಂತಹ ಕಾರ್ಯಕ್ರಮಗಳಿಗೆ ಕನ್ನಡದ ಮನಸ್ಸುಗಳು ಹೆಚ್ಚಾಗಿ ಒಗ್ಗೂಡಬೇಕಿದೆ.ಇದರೊಂದಿಗೆ ನಾವೂ ಅನ್ಯ ರಾಜ್ಯದವರೊಂದಿಗೆ ಹೆಚ್ಚಾಗಿ ನಮ್ಮ ಭಾಷೆಯಲ್ಲಿಯೇ ವ್ಯವಹರಿಸುವ ಮೂಲಕ ಅವರಿಗೆ ನಮ್ಮ ಭಾಷೆಯನ್ನು ಪರಿಚಯಿಸಬೇಕಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರುವಾಗ ಎಲ್ಲರೊಂದಿಗೂ ಕನ್ನಡದಲ್ಲಿಯೇ ವ್ಯವಹರಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಅಂತರಸಂತೆಯಲ್ಲಿ ನಡೆದ ಸಮ್ಮೇಳನ ಅನುಕೂಲವಾಗಿದೆ.
–ರಾಜೇಶ್, ಅಂತರಸಂತೆ, ಎಚ್.ಡಿ.ಕೋಟೆ ತಾ.
ಹುಲಿಮರಿಗಳ ಮೇಲೆ ನಿಗಾ ಅಗತ್ಯ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ ಪ್ರವಾಸಿಗರ ನೆಚ್ಚಿನ ಹುಲಿಯಾಗಿದ್ದ ‘ಬ್ಯಾಕ್‌ವಾಟರ್ ಫೀಮೇಲ್’ ಎಂದೇ ಹೆಸರು ಪಡೆದಿದ್ದ ಹೆಣ್ಣು ಹುಲಿಯೊಂದು ಮತ್ತೊಂದು ಹುಲಿಯೊಂದಿಗಿನ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ರಕ್ಷಣೆಯ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯು ಹುಲಿಗೆ ಅರಿವಳಿಕೆ ನೀಡಿ ಸೆರೆಹಿಡಿದು ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ರವಾನಿಸಿದೆ. ಆದರೆ ಸೆರೆಯಾಗಿರುವ ಹುಲಿಗೆ ಒಂದು ವರ್ಷ ವಯಸ್ಸಿನ ನಾಲ್ಕು ಮರಿಗಳಿವೆ ಎಂಬುದು ಆತಂಕಕಾರಿಯಾಗಿದೆ. ಕಾಡಿನಲ್ಲಿ ತಾಯಿಯ ಆರೈಕೆಯಲ್ಲಿ ಬೆಳೆಯುತ್ತಿದ್ದ ಮರಿಗಳು ಈಗಾ ಏಕಾಏಕಿ ಕಾಣೆಯಾದ ತಮ್ಮ ತಾಯಿಯನ್ನು ಬಿಟ್ಟು ಕಾಡಿನಲ್ಲಿ ಅನಾಥವಾಗಿ ಹೇಗೆ ಬದುಕುತ್ತವೆ ಎಂಬ ಪ್ರಶ್ನೆ ಉಂಟಾಗಿದೆ. ಅರಣ್ಯ ಇಲಾಖೆಯು ಗಾಯಗೊಂಡ ಹುಲಿಯ ರಕ್ಷಣೆಗೆ ಕ್ರಮವಹಿಸಿದಷ್ಟೇ ಜವಾಬ್ದಾರಿಯುತವಾಗಿ ಮರಿಗಳಿಗೂ ಕಾಡಿನಲ್ಲಿಯೇ ಸೂಕ್ತ ರಕ್ಷಣೆಯನ್ನು ನೀಡಿ ಅವುಗಳೇ ಸ್ವತಃ ಬೇಟೆಯಾಡುವರೆಗೂ ನಿಗಾವಹಿಸಬೇಕಿದೆ. ಈ ಹಿಂದೆಯೂ ಇದೇ ನಾಗರಹೊಳೆ ವ್ಯಾಪ್ತಿಯ ಅಂತರಸಂತೆ ವಲಯದ ತಾರಕ ಗಸ್ತಿನ ಬಳಿ ಹೆಣ್ಣು ಹುಲಿಯೊಂದು ಕಳ್ಳಬೇಟೆಗಾರರ ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು. ಈ ವೇಳೆ ಅರಣ್ಯ ಇಲಾಖೆ ಅದರ ಮರಿಗಳ ಮೇಲೆ ನಿಗಾವಹಿಸಿತಾದರೂ ಒಂದು ಗಂಡು ಮರಿ ಮತ್ತೊಂದು ಹುಲಿಯ ದಾಳಿಗೆ ಸಿಲುಕಿ ಸಾವನ್ನಪ್ಪಿತ್ತು. ಇದಾದ ಬಳಿಕ ಉಳಿದೆರಡು ಮರಿಗಳು ಏನಾದವು ಎಂಬುದು ಮಾತ್ರ ತಿಳಿಯಲೇ ಇಲ್ಲ. ಈಗ ಅಂತಹದ್ದೇ ಪರಿಸ್ಥಿತಿ ಈ ಹುಲಿ ಮರಿಗಳಿಗೆ ಎದುರಾಗಿದ್ದು, ಅವುಗಳು ಬಗ್ಗೆ ಅರಣ್ಯ ಇಲಾಖೆ ಸಂಪೂರ್ಣ ನಿಗಾವಹಿಸಬೇಕಿದೆ. ಅಲ್ಲದೆ ದೇಶದ ಇತರೆ ಕಾಡುಗಳಲ್ಲಿ ಈ ರೀತಿ ಮರಿಗಳನ್ನು ಅಗಲಿ ತಾಯಿ ಹುಲಿ ಸಾವನ್ನಪ್ಪಿದ ಸಂದರ್ಭದಲ್ಲಿ ಮರಿಗಳ ರಕ್ಷಣೆಗೆ ಅಲ್ಲಿ ಅನುಸರಿಸಿದ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲೂ ಜಾರಿಗೆ ತರುವ ಜವಾಬ್ದಾರಿವಹಿಸಬೇಕಿದೆ.
–ಭೂಮಿಕ ಪೂಜಾರಿ, ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ ಮೈಸೂರು.
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ 106ನೇ ಘಟಿಕೋತ್ಸವವು ಜ.5ರಂದು ಬೆಳಿಗ್ಗೆ 11:30ಕ್ಕೆ ಕ್ರಾಫರ್ಡ್ ಭವನದಲ್ಲಿ ನಡೆಯಲಿದೆ. ಒಟ್ಟು 30,966 ವಿದ್ಯಾರ್ಥಿಗಳಿಗೆ…
ಬಳ್ಳಾರಿ : ಬಳ್ಳಾರಿಯಲ್ಲಿ ವಾಲ್ಮೀಕಿ ಬ್ಯಾನರ್ ಕಟ್ಟುವ ವಿಚಾರವಾಗಿ ಗುಂಪುಗಳ ನಡುವೆ ನಡೆದ ಮಾರಮಾರಿಯಲ್ಲಿ ವೇಳೆ ಗುಂಡು ತಗುಲಿ ಮೃತಪಟ್ಟಿದ್ದ…
ಕೊಳ್ಳೇಗಾಲ : ಸುಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಮೊದಲನೇ ದಿನವಾದ ಶನಿವಾರ ತಡರಾತ್ರಿ ಚಂದ್ರ ಮಂಡಲೋತ್ಸವದ ಮೂಲಕ ವಿದ್ಯುಕ್ತ ಚಾಲನೆ…
ಹೊಸದಿಲ್ಲಿ : ವೇಗ, ಸೌಲಭ್ಯ, ಆರಾಮಕ್ಕಾಗಿಯೇ ಜನಪ್ರಿಯವಾಗಿರುವ ವಂದೇ ಭಾರತ್ ಇದೀಗ ಸ್ಲೀಪರ್ ಆವೃತ್ತಿ ಮೂಲಕವೂ ಹಳಿಗಿಳಿಯಲು ಸಜ್ಜಾಗಿದೆ. ಪ್ರಯಾಣಿಕರ…
ರಾಯಚೂರು : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮ-ನರೇಗಾ) ಕಾಯ್ದೆಯನ್ನು ಹೊಸ ಹೆಸರಲ್ಲಿ ಹೊಸ ಕಾಯ್ದೆಯೆಂದು ಘೋಷಿಸಿರುವ…
ಕ್ಯಾರಕಾಸ್ : ವೆನೆಜುವೆಲಾ ಮೇಲಿನ ವೈಮಾನಿಕ ದಾಳಿ ಬಳಿಕ ಅಮೆರಿಕ ಪಡೆಗಳು ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು…