- ಜೋಡೊ ರಸ್ತೆ
ಬದನವಾಳುವಿನಲ್ಲಿರುವ ಮಹಾತ್ಮ ಗಾಂಧೀಜಿ ಅವರು 1927 ರಲ್ಲಿ ಭೆೇಟಿ ನೀಡಿದ್ದ ರಸ್ತೆಯನ್ನು ಕಳೆದ 29 ವರ್ಷಗಳ ಹಿಂದಿನ ಅಹಿತಕರ ಘಟನೆಯಿಂದ ಸಂಪರ್ಕವೇ ಇಲ್ಲದೆ ಮುಚ್ಚಲಾಗಿತ್ತು. ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಕೈಗೊಂಡು ಈ ರಸ್ತೆಯನ್ನು ಜನಸಂಪರ್ಕಕ್ಕೆ ಮುಕ್ತಗೊಳಿಸಿ ‘ಜೋಡೊ ರಸ್ತೆ’ ಎಂದು ನಾಮಕರಣ ಮಾಡಿ ಐತಿಹಾಸಿಕ ಕ್ಷಣಕ್ಕೆ ಕಾರಣರಾಗಿದ್ದಾರೆ. 29 ವರ್ಷಗಳ ನಂತರ ಎಲ್ಲಾ ಸಮುದಾಯದವರು ಒಂದೆಡೆ ಕಲೆತು ಸಹಭೋಜನ ಮಾಡಿರುವುದು ತುಂಬಾ ಮನಮೆಚ್ಚುವ ಸಂಗತಿ ಮತ್ತು ಇಲ್ಲಿ ಆಚರಿಸಿದ ಗಾಂಧಿ ಜಯಂತಿ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿದೆ. ಯಾವುದೇ ನಾಯಕರು ಸಮುದಾಯಗಳನ್ನು ಒಂದು ಮಾಡುವುದು ಉತ್ತಮವಾದ ಕೆಲಸ. ರಾಹುಲ್ ಗಾಂಧಿ ಅವರು ಶ್ಲಾಘನೀಯ ಕೆಲಸ ಮಾಡಿದ್ದಾರೆ. ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.
ಯಾವ ನೈತಿಕ ಶಿಕ್ಷಣವಿದೆ?
ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಬಾರದೆಂದು ವಿವಾದ ಸೃಷ್ಟಿಯಾದಾಗ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲಾ
ಕಾಲೇಜುಗಳಲ್ಲಿ ಧರ್ಮವನ್ನು ಆಚರಿಸಬಾರದು ಎಂಬ ಹೇಳಿಕೆ ನೀಡಿದರು. ವಿವಿಧ ಧರ್ಮಗಳ ಹಿನ್ನೆಲೆಯ ಮಕ್ಕಳು ಒಟ್ಟಿಗೆ ಕೂರುವಾಗ ಹಿಜಾಬ್ ಹಾಕಿಕೊಳ್ಳುವುದು ಸರಿಯಲ್ಲ, ಅದು ಸಮವಸ್ತ್ರ ಸಂಹಿತೆಯ
ಉಲ್ಲಂಘನೆ ಎಂಬ ವಾದವನ್ನು ಹೂಡಲಾಯಿತು. ಈಗ ಇದೇ ಸಚಿವ ಬಿ.ಸಿ.ನಾಗೇಶ್, ನೈತಿಕ ಶಿಕ್ಷಣ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಿ, ಡಿಸೆಂಬರ್‌ನಿಂದ ಮಕ್ಕಳಿಗೆ ಬೋಧಿಸಲು
ಪ್ರಯತ್ನಿಸಲಾಗುವುದು. ಹಾಗೆಯೇ, ಪಠ್ಯಗಳಲ್ಲಿರುವ ಇತಿಹಾಸದ ತಪ್ಪುಗಳನ್ನು ಸರಿ ಮಾಡಲಾಗುವುದು ಎಂದು ಭಗವದ್ಗೀತೆಯನ್ನು ಬೋಧಿಸುತ್ತೇವೆ ಎನ್ನುತ್ತಿದ್ದಾರೆ. ಪಠ್ಯಪುಸ್ತಕವನ್ನು ತಮ್ಮ ಸಿದ್ಧಾಂತಕ್ಕನುಗುಣವಾಗಿ ತಿರುಚುವುದು, ಇತಿಹಾಸಕ್ಕೆ ಅಪಚಾರವೆಸಗುವುದು, ಮಕ್ಕಳ ಮೇಲೆ ವೈದಿಕ ಪರಂಪರೆಯ ಆಲೋಚನೆಗಳನ್ನು ಹೇರುವುದು, ವೇದಗಣಿತವನ್ನು ದಲಿತ ಮಕ್ಕಳಿಗೆ ಕಲಿಸುತ್ತೇವೆ ಎನ್ನುವುದು- ಈ ರೀತಿಯ ವಿಚಾರಗಳಲ್ಲೇ ಸರ್ಕಾರ ಕಾಲಕ್ಷೇಪ ಮಾಡುತ್ತಿರುವಂತೆ ಕಾಣುತ್ತಿದೆ. ಭಗವದ್ಗೀತೆಯನ್ನು ಮಕ್ಕಳಿಗೆ ಬೋಧಿಸುವ ಉದ್ದೇಶವಾದರೂ ಏನು? ಇದರಿಂದ ಯಾವ ಪ್ರಯೋಜನವಾಗುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.
-ಮದನ್ ಹಾದನೂರು, ಮೈಸೂರು.
ಪಿಎಮ್ ಕಿಸಾನ್ ಯೋಜನೆ ಖಜಾನೆ ಲೂಟಿ?
ಪ್ರಧಾನಮಂತ್ರಿ ಕಿಸಾನ್ ಯೋಜನೆ ಕುರಿತಂತೆ ವೃತ್ತ ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿ ಈ ಕಳೆಕಂಡಂತೆ ಇದೆ:
(1) 3.97ಲಕ್ಷ ಅನರ್ಹ ರೈತರಿಗೆ 442 ಕೋಟಿ ರೂ.ಪಾವತಿ. (2) 3312 ಮೃತ ರೈತರ ಖಾತೆಗಳಿಗೆ ಹಣ ಜಮಾ ಆಗಿದೆ.
(3) 9,1969 ಮಂದಿ ಫಲಾನುಭವಿಗಳು ಆದಾಯ ತೆರಿಗೆ ಕಟ್ಟುತ್ತಿದ್ದಾರೆ. (4) 1.06 ಲಕ್ಷ ರೈತರು ಅನರ್ಹರೆಂದು ಪತ್ತೆ ಆಗಿದೆ.
(5) ಸ್ವಯಂ ನೋಂದಣಿ ವಿಚಾರದಲ್ಲಿ ಸರ್ಕಾರಕ್ಕೆ ವಂಚಿಸಿ ನೋಂದಣಿಯಾಗಿರುವ ರೈತರ ಸಂಖ್ಯೆ 1,06,416
ದೇಶದ ಪ್ರತಿಯೊಬ್ಬ ರೈತನೂ ಉದ್ಧಾರವಾಗಲೆಂದೇ 6ಸಾವಿರ ರೂ.ಗಳನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರ ತನ್ನ ಪಾಲಾದ 4 ಸಾವಿರ ರೂ.ಗಳನ್ನು ಈ ಯೋಜನೆಗೆ ಜಮಾ ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸರ್ಕಾರದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಪಾತ್ರವಿಲ್ಲದೇ ಅಕ್ರಮ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಕೇವಲ ರೈತರೇ ತಪ್ಪೆಸಗಿದ್ದಾರೆ ಎಂದು ಹೇಳಲಾಗದು. ಕಾಣದ ಕೈಗಳು ಈ ಕೃತ್ಯದ ಹಿಂದೆ ಕೆಲಸ ಮಾಡುತ್ತಿರುವುದಂತೂ ಸತ್ಯ. ದುರುಪಯೋಗವಾಗಿರುವ ಹಣವನ್ನು ರೈತರ ಖಾತೆಗಳಿಂದ ಹಿಂಪಡೆಯುವ ಬಗ್ಗೆ ಬ್ಯಾಂಕ್
ಅಧಿಕಾರಿಗಳಿಗೆ ಸೂಚನೆ ಹೋಗಿದೆಯಂತೆ, ಸ್ವಲ್ಪ
ಭಾಗದಲ್ಲಿ ರೈತರುಗಳಿಂದ ವಾಪಸ್ಸು ಬಂದಿದೆ ಎಂತಲೂ ಸುದ್ದಿ ಇದೆ. ಇಂತಹ ಕೃತ್ಯಗಳಿಗೆ ಕೊನೆ ಎಂದು ?
– ಎ.ಎಸ್.ಗೋಪಾಲಕೃಷ್ಣ ,ರಾಮಕೃಷ್ಣನಗರ, ಮೈಸೂರು.
ಕ್ಯಾ- ರೇಟ್ ?!
ಆಗಿಹುದಂತೆ
ತರಕಾರಿಗಳ
ಬೆಲೆ
ಭಾರಿ ತುಟ್ಟಿ!
ಏನಿದೆ ಬೇರೆ ದಾರಿ?
ಮೊನ್ನೆಯಿಂದ ಖಾಲಿ
ಖಾಲಿಯಾಗಿಹುದು
ಅಡುಗೆ ಮನೆಯಲ್ಲಿ
ತರಕಾರಿಗಳ ಬುಟ್ಟಿ !!
-ಮ ಗು ಬಸವಣ್ಣ, , ಜೆಎಸ್‌ಎಸ್ ಸಂಸ್ಥೆ, ಸುತ್ತೂರು.