ಯಾರ ಶೇಕಡಾವಾರು ಎಷ್ಟು?
ನಮ್ಮದು ಶೇಕಡಾ ೪೦ ಕಮಿಷನ್ ಸರ್ಕಾರ ವಾದರೆ, ನಿಮ್ಮದು ಶೇಕಡಾ ೧೦೦ ಕಮಿಷನ್ ಸರ್ಕಾರ- ಹೀಗೆ ಒಬ್ಬರ ಮೇಲೆ, ಇನ್ನೊಬ್ಬರ ಆರೋಪ, ಪ್ರತ್ಯಾರೋಪ. ಮುಂದಿನ ವರ್ಷ ಚುನಾವಣೆಯಲ್ಲಿ ಮತದಾರರು ಯಾವ-ಯಾವ ಪಕ್ಷಗಳಿಗೆ ಎಷ್ಟೆಷ್ಟು ಮತ ನೀಡುವರೋ? ಯಾವ ಯಾವ ಪಕ್ಷಗಳು ಪಡೆದ ಮತದಾನದ ಶೇಕಡಾವಾರು ಹೆಚ್ಚುವುದೋ? ಅಂತೂ ಶೇಕಡವಾರು ಹಿಂದೆಂದಿಗಿಂತಲೂ ಕುತೂಹಲ ಹುಟ್ಟಿಸಿದೆ.
-ಬೂಕನಕೆರೆ ವಿಜೇಂದ್ರ, ಮೈಸೂರು.
ಪರಿಸರ ಸ್ನೇಹಿ ದಸರೆಗೆ
ಮೈಸೂರಿಗರು ಸಂಕಲ್ಪ ಮಾಡಿ
ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ಆಹಾರ ಮೇಳ ಮತ್ತಿತರೆ ಕಡೆ ತಿಂಡಿ ಅಂಗಡಿಯವರು ಏಕ ಬಳಕೆಯ ಪ್ಲಾಸ್ಟಿಕ್ ಚಮಚಾಗಳನ್ನು ನೀಡುತ್ತಾರೆ. ಈ ಅವಧಿಯಲ್ಲಿ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಪರಿಸರಕ್ಕೆ ಸೇರುತ್ತದೆ. ಇದು ನಿಜಕ್ಕೂ ದುರಂತ. ಮೈಸೂರಿಗರಾದ ನಾವು ಸ್ವಲ್ಪ ಮಟ್ಟಿಗಾದರೂ ಇದನ್ನು ತಡೆಯುವುದು ಸಾಧ್ಯವಿದೆ. ಮೈಸೂರಿಗರು ತಮ್ಮ ಮನೆಗೆ ಬರುವ ನೆಂಟರಿಷ್ಟರ ಜೊತೆ ಆಹಾರ ಮೇಳ ಮತ್ತು ಇತರೆ ಬೀದಿ ಬದಿಯ ಚಾಟ್ ಸೆಂಟರ್‌ಗಳಿಗೆ ಭೇಟಿ ನೀಡುವುದು ಸಹಜ. ಆ ಸಂದರ್ಭದಲ್ಲಿ ಮನೆಯಿಂದಲೇ ಸ್ಟೀಲ್ ಚಮಚಗಳನ್ನು, ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಿ ಬಳಸಿದರೆ ಪರಿಸರ ಹಾನಿ ತಪ್ಪಿಸಿದಂತೆಯೂ ಆಗುತ್ತದೆ, ತಮ್ಮ ನೆಂಟರಿಷ್ಟರ ಆರೋಗ್ಯ ರಕ್ಷಣೆಯೂ ಆಗುತ್ತದೆ. ವ್ಯಾಪಾರಿಗಳೂ ಸಹ ಮೈಸೂರಿನ ಪರಿಸರವನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಏಕ ಬಳಕೆಯ ಪ್ಲಾಸ್ಟಿಕ್ ಪದಾರ್ಥಗಳ ಬದಲು ಅಡಕೆ ಎಲೆಯ ಚಮಚಗಳನ್ನು, ತಟ್ಟೆಗಳನ್ನು ಗ್ರಾಹಕರಿಗೆ ನೀಡಿ ಪರಿಸರ ಮತ್ತು ಗ್ರಾಹಕರ ಆರೋಗ್ಯ ಎರಡನ್ನೂ ಕಾಪಾಡಬೇಕು. ಸಾಧ್ಯವಿರುವೆಡೆಯೆಲ್ಲ ಸಾಧ್ಯವಾದ ಪರಿಸರ ಸ್ನೇಹಿ ಮಾರ್ಗಗಳನ್ನು ಅನುಸರಿಸಿ. ಪರಿಸರ ಸ್ನೇಹಿ ದಸರಾ ಮಹೋತ್ಸವದ ಆಚರಣೆ ನಮ್ಮೆಲ್ಲರ ಆದ್ಯತೆಯಾಗಲಿ.
-ಎಸ್.ರವಿ, ವಕೀಲ, ಮೈಸೂರು.
ಕನ್ನಡದಲ್ಲೇ ಹೇಳಿಕೊಡಿ!
ರಾಜ್ಯ ಶಿಕ್ಷಣ ಇಲಾಖೆಯು ಬರುವ ಡಿಸೆಂಬರ್ ಮಾಸದಿಂದ ಶಾಲೆಗಳಲ್ಲಿ ‘ಭಗವದ್ಗೀತೆ’ಯನ್ನು ಪಠ್ಯಕ್ರಮದಲ್ಲಿ ಸೇರಿಸುವ ಸದುದ್ದೇಶ ಹೊಂದಿದೆಯೆಂದು ಸುದ್ದಿ. ಒಳ್ಳೆಯದೆ. ಅದನ್ನು ಸ್ಥಳೀಯ ನುಡಿಯಲ್ಲಿ ಹೇಳಿಕೊಡುವ ಏರ್ಪಾಡಾದರೆ ಉದ್ದೇಶವು ಗುರಿಮುಟ್ಟೀತು. ಅಂದರೆ, ಕರ್ನಾಟಕದಲ್ಲಿ ಕನ್ನಡದಲ್ಲೇ ಹೇಳಿಕೊಡಲಿ. ಕರ್ನಾಟಕದಲ್ಲಿ ಇದನ್ನು ಕಾರ್ಯರೂಪಕ್ಕೆ ತರುವ ಪರಿಯು ದೇಶದ ಉಳಿದ ಭಾಗಗಳಿಗೂ ಮಾದರಿಯಾದೀತು.
-ಡಿ.ವಿ.ಮೋಹನ ಪ್ರಕಾಶ್, ಗೋಕುಲ ರಸ್ತೆ, ಮೈಸೂರು.
ಮನು ಕುಲದ ಮಹಾನ್
ಚೇತನ ಡಾ.ಕಮಲಾ ರಾಮನ್
ವೈದ್ಯಕೀಯ ವೃತ್ತಿಯಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿ, ಅತ್ಯಂತ ಜನಪ್ರಿಯತೆಯುಳ್ಳವರಾಗಿದ್ದ, ಸಮಸ್ತ ಜನರಿಗೂ ತಾಯಿಯ ಮನೋಭಾವ ಚಿಕಿತ್ಸೆ ನೀಡುತ್ತಿದ್ದ ಡಾ.ಜೆ. ಕಮಲಾ ರಾಮನ್ ಅವರ ಅಕಾಲಿಕ ನಿಧನದಿಂದ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ. ಹಿಂದೆ ಕಮಲಾ ರಾಮನ್ ಕ್ಲಿನಿಕ್ ಎಂದರೆ ಸಾಕು ಅಲ್ಲಿಗೆ ಜನ ಮುಗಿಬೀಳುತ್ತಿದ್ದರು. ಈಗಿನಂತೆ ಆಗ ಮೈಸೂರಿನಲ್ಲಿ ಅಷ್ಟೊಂದು ಹೆಸರುವಾಸಿಯಾದ ಕ್ಲಿನಿಕ್‌ಗಳಿರಲಿಲ್ಲ . ಬಡವರು ಎಂದು ಗೊತ್ತಾದ ತಕ್ಷಣ ಅವರಿಗೆ ಡಾ.ಕಮಲಾ ರಾಮನ್ ಅವರು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ಬಡ ಗರ್ಭಿಣಿ ಮಹಿಳೆಯರಿಗೂ ಉಚಿತವಾಗಿ ಪ್ರಸವ ಮಾಡಿಸುತ್ತಿದ್ದ ನಿದರ್ಶನ ಸಾಕಷ್ಟಿದೆ. ರೋಟರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ ಅನೇಕ ವರ್ಷಗಳಿಂದ ಟ್ರಸ್ಟಿ ಆಗಿ ಅವಿರತವಾಗಿ ಸೇವೆ ಸಲ್ಲಿಸಿದ್ದಾರೆ. ನಗರದ ಯಾವುದಾದರೂ ಪ್ರಮುಖ ರಸ್ತೆಗೆ ಡಾ.ಕಮಲಾ ರಾಮನ್ ಹೆಸರಿಡಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು.
-ಜಿ.ಪಿ.ಹರೀಶ್, ವಿ.ವಿ.ಮೊಹಲ್ಲ, ಮೈಸೂರು.