ಎಡಿಟೋರಿಯಲ್

ಈ ಜೀವ ಈ ಜೀವನ | ಕಾಡು ರಕ್ಷಣೆಗಾಗಿ ಗಟ್ಟಿಯಾಗಿ ನಿಂತ ಬುಟಕಟ್ಟು ಜನರು

– ಪಂಜುಗಂಗೊಳ್ಳಿ

ಹಣಕ್ಕಾಗಿ ಕಾಡುಗಳನ್ನು ಬಿಟ್ಟುಕೊಟ್ಟರೆ ಮುಂದೆ ನಮ್ಮ ಕೈಯಲ್ಲಿ ಈ ಹಣವೂ ಇರದು, ಮುಂದಿನ ತಲೆಮಾರುಗಳಿಗೆ ಈ ಕಾಡೂ ಇರದು! 

ಆದಿವಾಸಿ ಹಾಗು ಬುಡಕಟ್ಟು ಜನರ ವಿರೋಧ ಹಾಗು ಒಗ್ಗಟ್ಟನ್ನು ಮುರಿಯಲು ಸರ್ಕಾರ ಮತ್ತು ಕಂಪೆನಿಗಳು ವಿವಿಧ ಉಪಾಯಗಳನ್ನು ಮಾಡುತ್ತಿವೆ. ಕೈಗಾರಿಕೆಗಳು ಬಂದರೆ ಶಾಲೆ, ಆಸ್ಪತ್ರೆ, ರಸ್ತೆಗಳು ಬರುತ್ತವೆ, ಪ್ರತಿ ಮನೆಯವರಿಗೆ ಕೆಲಸ ಸಿಗುತ್ತದೆ ಎಂದೆಲ್ಲ ಹೇಳಿ ಅವರಲ್ಲಿ ಆಸೆ ಹುಟ್ಟಿಸಲು ನೋಡಿದರು. ಜನ ಅದಕ್ಕೆ ಕಿವಿಗೊಡಲಿಲ್ಲ. ಕೇಂದ್ರ ಸರ್ಕಾರವೂ ಬಿರ್ಸಾ ಮುಂಡಾನ ಲೋಹದ ಮೂರ್ತಿಯನ್ನು ನಿಲ್ಲಿಸುವುದು, ಬುಡಕಟ್ಟು ಸಮುದಾಯದ ಒಬ್ಬರು ಮಹಿಳೆಯನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕುಳ್ಳಿರಿಸುವುದು ಮೊದಲಾದ ಭಾವನಾತ್ಮಕ ಆಮಿಷಗಳನ್ನು ತೋರಿಸಿ, ಈ ಜನಗಳ ನ್ನು ಮೆತ್ತಗೆ ಮಾಡಲು ಬೇರೆ ರೀತಿಯಲ್ಲಿ ಪ್ರಯತ್ನಿಸುತ್ತಿದೆ.

ದೇಶದ ಬೇರೆ ರಾಜ್ಯಗಳ ಸರ್ಕಾರಗಳಂತೆ ಜಾರ್ಖಾಂಡ್ ಸರ್ಕಾರವೂ ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿಯ ಹೆಸರಲ್ಲಿ ಬೃಹತ್ ಪ್ರಮಾಣದಲ್ಲಿ ಕೈಗಾರಿಕಾಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ದೊಡ್ಡ ದೊಡ್ಡ ಕಬ್ಬಿಣ ಮತ್ತು ಗಣಿಗಾರಿಕೆ ಕಂಪೆನಿಗಳನ್ನು ರಾಜ್ಯಕ್ಕೆ ಆಹ್ವಾನಿಸುತ್ತಿದೆ. ಇದಕ್ಕಾಗಿ ಸುಮಾರು ೫೭,೦೦೦ ಹೆಕ್ಟೇರ್‌ನಷ್ಟು ಹಸಿರು ಕಾಡಿಗೆ ಕೊಡಲಿ ಹಾಕಲು ಮುಂದಾಗಿದೆ. ಆದರೆ, ಈ ಕಾಡುಗಳಲ್ಲಿ ತಲೆಮಾರುಗಳಿಂದ ಜೀವಿಸುತ್ತ ಬಂದಿರುವ ಬುಡಕಟ್ಟು, ಆದಿವಾಸಿ ಜನಗಳು ತಮ್ಮ ಭವಿಷ್ಯಕ್ಕೇ ಕೊಡಲಿ ಏಟು ಬೀಳುವುದನ್ನು ಕಂಡು ಅದಕ್ಕೆ ತೀವ್ರ ರೀತಿಯ ವಿರೋಧ ಒಡ್ಡುತ್ತಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಕೈಗಾರಿಕೆಗಳು ತಲೆಯೆತ್ತಿ ಕಾಡು ನಾಶವಾದರೆ ಅದರಿಂದ ನೇರವಾಗಿ ಸಂಕಟಕ್ಕೆ ಒಳಗಾಗುವವರು ಈ ಆದಿವಾಸಿ ಜನಗಳೇ ಆದರೂ, ಸರ್ಕಾರ ಕೈಗಾರಿಕೋದ್ಯಮಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲು ಆ ಬಗ್ಗೆ ಈ ಜನಗಳ ಅಭಿಪ್ರಾಯವನ್ನಾಗಲೀ, ಅವರ ಒಪ್ಪಿಗೆಯನ್ನಾಗಲೀ ಕೇಳುವ ಗೋಜಿಗೆ ಹೋಗಿಲ್ಲ. ಈಗ ಈ ಜನರು ತಮ್ಮ ಕಾಡು ನಾಶವಾಗುವುದನ್ನು ಶತಾಯ ಗತಾಯ ತಡೆಯಲು ತೀಮಾನಿಸಿ ಬೀದಿಗಿಳಿದಿದ್ದಾರೆ. ಅದಕ್ಕಾಗಿ ಅವರು ವಿವಿಧ ಜನಸಮುದಾಯಗಳ ಸಂಘಟನೆಗಳನ್ನು ರಚಿಸಿಕೊಂಡು ವಿವಿದೆಡೆಗಳಲ್ಲಿ ತೀವ್ರವಾಗಿ ವಿರೋಧಿಸುತ್ತಿದ್ದಾರೆ.

ಉದಿಕೆಲ್ ಪಂಚಾಯತ್ನ ನಂದಿ ಪಹಾನ್ ಎಂಬ ಆದಿವಾಸಿ ಮುಖಂಡ, ‘ಕೈಗಾರಿಕೆಗಳಿಗೆ ಯಾವ ಕಾರಣಕ್ಕೂ ನಾವು ಕಾಡನ್ನು ಬಿಡೆವು. ಏಕೆಂದರೆ, ಈ ಕಾಡೇ ನಮಗೆ ಸರ್ವಸ್ವ. ನಮ್ಮದೆಲ್ಲವೂ ಈ ಕಾಡಲ್ಲಿದೆ. ನಮ್ಮ ಮನೆ, ನಮ್ಮ ಸ್ಮಶಾನ ಸ್ಥಳ, ನಮ್ಮ ಹೊಲಗದ್ದೆ, ನಮ್ಮ ಧಾರ್ಮಿಕ ಸ್ಥಳಗಳು ಎಲ್ಲವೂ ಈ ಕಾಡಲ್ಲಿದೆ. ನಮ್ಮ ಹಬ್ಬ ಹರಿದಿನಗಳು ನಡೆಯುವುದು ಇಲ್ಲೆಯೇ. ಈ ಕಾಡಲ್ಲಿ ನಾವು ಹಣ್ಣುಹಂಪಲು, ಔಷಧಿ, ಕಾಡುತ್ಪನ್ನಗಳನ್ನು ಹೆಕ್ಕಿ, ಮಾರುತ್ತೇವೆ. ನಮ್ಮ ಕೃಷಿ ಸಲಕರಣೆಗನ್ನು ತಯಾರಿಸಲು ಬೇಕಾದ ಕಟ್ಟಿಗೆ ಸಿಗುವುದೂ ಈ ಕಾಡಲ್ಲೇ. ಒಂದು ಫ್ಯಾಕ್ಟರಿ ಇದನ್ನೆಲ್ಲ ಕೊಡುತ್ತದೆಯೇ? ನಮ್ಮ ಬದುಕೇ ಆಗಿರುವ ಇಂತಹ ಕಾಡನ್ನು ಬಿಟ್ಟು ಎಲ್ಲಿಗೆ ಹೋಗಲಿ? ಹೋಗಿ ಏನು ಮಾಡಲಿ?’ ಎಂದು ಕೇಳುತ್ತಾನೆ.

ಈ ಫ್ಯಾಕ್ಟರಿಗಳು ಇಲ್ಲಿಗೆ ಬಂದರೆ ಇದು ‘ಕಾಲಾಪಾನಿ’ಯಾಗುತ್ತದೆ. ನಮ್ಮ ಮಣ್ಣು ಹಾಳಾಗುತ್ತದೆ. ನಮ್ಮ ನೀರು ಕಲುಷಿತಗೊಳ್ಳುತ್ತದೆ. ಪಕ್ಷಿಜಾನುವಾರುಗಳು ಕಾಯಿಲೆ ಬೀಳುತ್ತವೆ. ಉಸಿರಾಡುವ ಗಾಳಿಯೂ ಕಲುಷಿತವಾಗುತ್ತದೆ. ಜಮೀನು ಹರಿದು ಹಂಚಿ ಹೋಗುತ್ತದೆ. ನಮ್ಮ ನಾಯಕ ಬಿರ್ಸಾ ಮುಂಡಾ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮನಾದುದು ನಮ್ಮ ಹಕ್ಕಿನ ಈ ‘ಖುಂಕಟ್ಟಿ’ (ಸಾಂಪ್ರದಾಯಿಕ) ಕಾಡುನೆಲವನ್ನು ಉಉಳಿಸಿಕೊಳ್ಳುವುದಕ್ಕಾಗಿಯೇ. ಈಗ ನಾವು ಕೈಗಾರಿಕೆಗಳಿಗೆ ಕಾಡು ಬಿಟ್ಟುಕೊಟ್ಟು, ನೆಲ ಹರಿದುಹಂಚಿ ಹೋದರೆ ಅವನ ಬಲಿದಾನ ವ್ಯರ್ಥವಾಗುತ್ತದೆ. ಹಾಗಾಗಲು ನಾವು ಎಂದಿಗೂ ಬಿಡಲಾರೆವು ಎಂದು ಅವರೆಲ್ಲ ಒಕ್ಕೊರಲಿನಿಂದ ದೃಢ ನಿಶ್ಚಯದಿಂದ ಹೇಳುತ್ತಾರೆ.

ಆದಿವಾಸಿ ಹಾಗು ಬುಡಕಟ್ಟು ಜನರ ವಿರೋಧ ಹಾಗು ಒಗ್ಗಟ್ಟನ್ನು ಮುರಿಯಲು ಸರ್ಕಾರ ಮತ್ತು ಕಂಪೆನಿಗಳು ವಿವಿಧ ಉಪಾಯಗಳನ್ನು ಮಾಡುತ್ತಿವೆ. ಕೈಗಾರಿಕೆಗಳು ಬಂದರೆ ಶಾಲೆ, ಆಸ್ಪತ್ರೆ, ರಸ್ತೆಗಳು ಬರುತ್ತವೆ, ಪ್ರತಿ ಮನೆಯವರಿಗೆ ಕೆಲಸ ಸಿಗುತ್ತದೆ ಎಂದೆಲ್ಲ ಹೇಳಿ ಅವರಲ್ಲಿ ಆಸೆ ಹುಟ್ಟಿಸಲು ನೋಡಿದರು. ಜನ ಅದಕ್ಕೆ ಕಿವಿಗೊಡಲಿಲ್ಲ. ಕೇಂದ್ರ ಸರ್ಕಾರವೂ ಬಿರ್ಸಾ ಮುಂಡಾನ ಲೋಹದ ಮೂರ್ತಿಯನ್ನು ನಿಲ್ಲಿಸುವುದು, ಬುಡಕಟ್ಟು ಸಮುದಾಯದ ಒಬ್ಬರು ಮಹಿಳೆಯನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕುಳ್ಳಿರಿಸುವುದು ಮೊದಲಾದ ಭಾವನಾತ್ಮಕ ಆಮಿಷಗಳನ್ನು ತೋರಿಸಿ, ಈ ಜನಗಳ ನ್ನು ಮೆತ್ತಗೆ ಮಾಡಲು ಬೇರೆ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಆದಿವಾಸಿ-ಬುಡಕಟ್ಟು ಜನಗಳ ಒಪ್ಪಿಗೆಯಿಲ್ಲದಿದ್ದರೂ ಕೆಲವು ಕಂಪೆನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಈಗಾಗಲೇ ‘ಎನ್ವಿರಾನ್ಮೆಂಟ್ ಕ್ಲಿಯರೆನ್ಸ್’ ಮೊದಲಾದ ಅಗತ್ಯ ಪರವಾನಿಗೆಗಳನ್ನು ಪಡೆದಿವೆ.

ಶತಾಯ ಗತಾಯ ಅಲ್ಲಿ ತಮ್ಮ ಉದ್ಯಮಗಳನ್ನು ಪ್ರಾರಂಭಿಸಲೇ ಬೇಕೆಂದು ನಿಶ್ಚಯಿಸಿರುವ ಈ ಕಂಪೆನಿಗಳು ಈ ಆದಿವಾಸಿ-ಬುಡಕಟ್ಟು ಜನಗಳನ್ನು ಮಣಿಸಲು ಹವಣಿಸುತ್ತಿವೆ. ಆಮಿಷಗಳಿಂದ ಪ್ರಯೋಜನವಾಗದಿದ್ದುದನ್ನು ಕಂಡು ಕಂಪೆನಿಗಳು ಬಾಡಿಗೆ ಗೂಂಡಾಗಳನ್ನು ಕಳಿಸಿ, ಸ್ಥಳಿಯಾಡಳಿತಗಳನ್ನು ಬೆದರಿಸಲು ಪ್ರಯತ್ನಿಸಿದರು. ಆದರೆ, ಜನಗಳು ದೊಡ್ಡ ಮೋರ್ಚಾ ನಡೆಸಿ ಅದನ್ನು ನಿಲ್ಲಿಸಿದರು.

ಈಗ ಈ ಕಂಪೆನಿಗಳು ಅಪಾರ ಪ್ರಮಾಣದ ಪರಿಹಾರ ಹಣ ನೀಡುವ ಹೊಸ ಆಮಿಷದ ಮೂಲಕ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿವೆ. ಉದಾಹರಣೆಗೆ, ಕಲ್ಲಿದ್ದಲು ಗಣಿಗಾರಿಕೆ ಮಾಡುವ ‘ದಾಮೋರ್ದ ವ್ಯಾಲಿ ಕಾರ್ಪೋರೇಷನ್ ಕಂಪೆನಿ’ಯು ಭೂಪರಿಹಾರ ಹಣದ ಮೊತ್ತವನ್ನು ಹೆಚ್ಚಿಸಿ, ಪ್ರತಿ ಎಕರೆ ಕೃಷಿಭೂಮಿಗೆ ೨೭,೩೬,೭೦೦ ರುಪಾಯಿ ಮತ್ತು ೫೪,೭೩,೫೦೦ ರುಪಾಯಿ ಪ್ರತಿ ಎಕರೆ ವಸತಿ ಜಾಗಕ್ಕೆ ಕೊಡುವುದೆಂದು ವಾಗ್ದಾನ ನೀಡಿತು. ಮತ್ತು, ಪರಿಹಾರ ಧನದ ಜೊತೆಗೆ ಅವರ ಮನೆಗಳನ್ನು ಕಂಪೆನಿ ಖರ್ಚಲ್ಲೇ ಸ್ಥಳಾಂತರಿಸುತ್ತೇವೆ, ಸ್ಥಳಿಯ ಜನರನ್ನು ಕಂಪೆನಿ ಕೆಲಸಕ್ಕೆ ನೇಮಿಸಿಕೊಳ್ಳುತ್ತೇವೆ ಎಂದು ಮುಂತಾಗಿ ಲೌಡ್ ಸ್ಪೀಕರ್ಗಳ ಮೂಲಕ ಜನರಿಗೆ ಅಹವಾಲು ಮಾಡಿಕೊಂಡರು. ಆದರೆ, ಜನ ಅದಾವುದಕ್ಕೂ ಸೊಪ್ಪು ಹಾಕದೆ, ತಂಡ ತಂಡವಾಗಿ ಹೊರ ಬಂದು ಕಂಪೆನಿ ಅಧಿಕಾರಿಗಳನ್ನು ಹಳ್ಳಿಗಳಿಂದ ಓಡಿಸಿದರು.

ಕಲ್ಲಿದ್ದಲು ಗಣಿಗಾರಿಕೆ ನಡೆಯುವ ಜಾಗದ ವಿಸ್ತೀರ್ಣ ಸುಮಾರು ೪೬೦ ಹೆರ್ಕ್ಟೇ. ಇದರಲ್ಲಿ ೨೩೦ ಹೆಕ್ಟೇರ್ ಕೃಷಿ ಜಾಗ, ೧೬೨ ಹೆಕ್ಟೇರ್ ಅರಣ್ಯ, ೩೯ ಹೆಕ್ಟೇರ್ ಜವುಗು ಪ್ರದೇಶ, ೨೨ ಹೆಕ್ಟೇರ್ ನೀರಿನ ಮೂಲಗಳು ಮತ್ತು ೧ ಹೆಕ್ಟೇರ್ ಜನವಸತಿ ಜಾಗ ಮೊದಲಾದವು ಸೇರಿವೆ. ಇಷ್ಟೂ ಜಾಗ ತುಬೈಡ್, ಮಾಂಗ್ರಾ, ದಿಹಿ, ಅಂಬಜರನ್, ಧೋಬಿಯಾಜರನ್ ಮತ್ತು ನೆವಾರಿ ಎಂಬ ಆರು ಗ್ರಾಮಗಳಲ್ಲಿ ಹರಡಿ ಹೋಗಿದೆ. ಕಲ್ಲಿದ್ದಲು ಗಣಿಗಾರಿಕೆ ನಡೆಸಲು ತೀರ್ಮಾನಿಸಲು ಅಂದಾಜಿಸಿರುವ ಕಾಲ ೩೦ ವರ್ಷ.

ನಾವು ಬಡವರು. ಆದರೆ, ಹಣ ನಮಗೆ ಪ್ರಯೋಜನಕ್ಕೆ ಬಾರದು. ಈಗ ಹೇರಳ ಹಣ ಸಿಗುತ್ತದೆಂದು ಅದನ್ನು ತೆಗೆದುಕೊಂಡು ನಮ್ಮ ಕಾಡುಗಳನ್ನು ಬಿಟ್ಟುಕೊಟ್ಟರೆ ಮುಂದೆ ನಮ್ಮ ಕೈಯಲ್ಲಿ ಈ ಹಣವೂ ಇರದು, ನಮ್ಮ ಮುಂದಿನ ತಲೆಮಾರುಗಳಿಗೆ ಈ ಕಾಡೂ ಇರದು. ನಮಗೆ ಈ ಕಾಡಷ್ಟೆ ಬದುಕು ಕೊಡಬಲ್ಲದೇ ವಿನಃ ಹಣ ಅಲ್ಲ. ಈ ಕಾಡನ್ನು ಬಿಟ್ಟು ಬಿಟ್ಟರೆ ತಮ್ಮ ದೇವತೆ ಸಿಟ್ಟಾಗಿ, ತಲೆಮಾರುಗಳ ಪರ್ಯಂತ ನಾವು ಅದಕ್ಕೆ ಬೆಲೆ ತೆರಬೇಕಾಗಿ ಬರುತ್ತದೆ ಎಂದು ಈ ಅನಕ್ಷರಸ್ಥ ಆದಿವಾಸಿ-ಬುಡಕಟ್ಟು ಜನ ಹೇಳುವಾಗ, ನಿಜವಾದ ಅಭಿವೃದ್ಧಿ ಯಾವುದು? ಎಂದು ಯಾರೇ ಆದರೂ ಒಮ್ಮೆ ಯೋಚಿಸುವಂತೆ ಮಾಡದಿರದು.

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

7 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

7 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

7 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

8 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

8 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

8 hours ago