ಎಡಿಟೋರಿಯಲ್

ದಾರುಣ ದುಸ್ಥಿತಿಗೆ ಆಡಳಿತ ವ್ಯವಸ್ಥೆಯೇ ಕಾರಣ!

ನಾ ದಿವಾಕರ

ಬಂಡವಾಳಶಾಹಿ ಆರ್ಥಿಕತೆಯಲ್ಲಿ ಚುನಾಯಿತ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಶಾಹಿ ಮತ್ತು ತಳಮಟ್ಟದ ಅಧಿಕಾರ ಕೇಂದ್ರಗಳು ಅತಿ ಹೆಚ್ಚು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತವೆ. ಈ ಎಲ್ಲ ಅಧಿಕಾರ ಮತ್ತು ಆಡಳಿತ ಕೇಂದ್ರಗಳೂ ಅಂತಿಮವಾಗಿ ಮಾರುಕಟ್ಟೆ ಶಕ್ತಿಗಳೊಡನೆ ನೇರ ಸಂಬಂಧವನ್ನು ಹೊಂದಿರುತ್ತವೆ. ಸುಂದರ ನಗರಿಯನ್ನು ನಿರ್ಮಿಸುವ ಎಲ್ಲ ಆಡಳಿತ ಯೋಜನೆಗಳ ಹಿಂದೆಯೂ ಈ ಸೌಂದರ್ಯೀಕರಣವು ಮಾರುಕಟ್ಟೆಯ ಅನಿವಾರ್ಯತೆಗಳನ್ನು, ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ನಡೆಯುತ್ತದೆ.
ಭಾರತದ ಸಿಲಿಕಾನ್ ಸಿಟಿ ಎಂದೇ ಕರೆಯಲಾಗುವ ಬೆಂಗಳೂರನ್ನು ಸುಂದರ ನಗರಿ ಎಂದು ಪರಿಗಣಿಸಬೇಕೇ ಬೇಡವೇ ಎಂದು ನಿಷ್ಕರ್ಷೆ ಮಾಡುವ ಮುನ್ನ ನಮ್ಮ ಸೌಂದರ್ಯಪ್ರಜ್ಞೆ ಯಾವ ನೆಲೆಯಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ವೈಮಾನಿಕ ನೋಟದಲ್ಲಿ ಒಂದು ಕಾಲದಲ್ಲಿ ದಟ್ಟ ಹಸಿರು ವನಗಳ ನಡುವೆ ಇರುವಂತೆ ಕಾಣುತ್ತಿದ್ದ ಬೆಂಗಳೂರು ಇಂದು ಅಲ್ಪಸ್ವಲ್ಪ ಹಸಿರನ್ನು ಉಳಿಸಿಕೊಂಡಿದ್ದರೂ ಬೃಹತ್ ಕಾಂಕ್ರೀಟ್ ಕಾಡಿನಂತೆ ಕಾಣುವುದು ವಾಸ್ತವ. ಇದನ್ನು ಅಭಿವೃದ್ಧಿ, ಪ್ರಗತಿ ಅಥವಾ ಆಧುನಿಕತೆ ಎನ್ನುವುದೇ ಆದರೆ ನಾವು ಇಂದು ಕಾಣುತ್ತಿರುವ ಅನಾಹುತಗಳನ್ನೂ ಸಹಜ ಪ್ರಕ್ರಿಯೆಯೆಂದೇ ಸ್ವೀಕರಿಸಬೇಕಾಗುತ್ತದೆ.
ರಸ್ತೆ, ಮೆಲ್ಸೇತುವೆ, ಚರಂಡಿ, ಒಳಚರಂಡಿ, ರಾಜಕಾಲುವೆ, ಉದ್ಯಾನ ಇವೆಲ್ಲವನ್ನೂ ನಿರ್ವಹಿಸುವ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಆಡಳಿತಾರೂಢ ಸರ್ಕಾರಗಳು ಅಭಿವೃದ್ಧಿ ಎಂಬ ಪರಿಕಲ್ಪನೆಯನ್ನು ಮಾರುಕಟ್ಟೆ ದೃಷ್ಟಿಯಿಂದಲೇ ನೋಡುವುದರಿಂದ, ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಯನ್ನು ಪೋಷಿಸುವ, ಮಾರುಕಟ್ಟೆಯನ್ನು ಬೆಳೆಸುವ ಮತ್ತು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಹಾದಿಯನ್ನು ಸುಗಮಗೊಳಿಸುವ ಚೌಕಟ್ಟಿನಲ್ಲೇ ರೂಪುಗೊಳ್ಳುತ್ತವೆ.
ಒಂದು ನಗರ ಎಷ್ಟು ಬೆಳೆಯುತ್ತದೆ ಎನ್ನುವುದನ್ನೇ ಪ್ರಧಾನವಾಗಿ ಬಿಂಬಿಸಿ ನಮ್ಮ ನಗರದ ಭೂ ವಿಸ್ತೀರ್ಣ ನಿರಂತರವಾಗಿ ಹೆಚ್ಚಾಗುತ್ತಿರುವುದನ್ನು ಸಂಭ್ರಮಿಸುವ ಮೇಲ್ವರ್ಗದ ಸಮಾಜಕ್ಕೆ, ಈ ವಿಸ್ತರಣೆಗೆ ಪೂರಕವಾದ ಮೂಲ ಸೌಕರ್ಯಗಳು ತಳಮಟ್ಟದ ಜನಸಮುದಾಯಗಳಿಗೆ ತಲುಪುವುದೋ ಇಲ್ಲವೋ ಎಂದು ಯೋಚಿಸಲೂ ಮುಂದಾಗುವುದಿಲ್ಲ. ಈ ಹಿತವಲಯದ ಸಮಾಜವನ್ನೇ ಪ್ರಧಾನವಾಗಿ ಪ್ರತಿನಿಧಿಸುವ ಇಂದಿನ ಸರ್ಕಾರಗಳಿಗೆ ಬಂಡವಾಳದ ಒಳಹರಿವು, ಆದಾಯದ ವೃದ್ಧಿ ಮತ್ತು ಬಂಡವಾಳದ ಹೂಡಿಕೆಗಳೇ ಪ್ರಮುಖವಾಗುವುದೇ ಹೊರತು, ಜನಜೀವನ ಅಥವಾ ಜನರ ಜೀವನೋಪಾಯ ಅಲ್ಲ.
ಕಳೆದ ೯೦ ವರ್ಷಗಳಲ್ಲೇ ಅತಿ ಹೆಚ್ಚು ಮಳೆ ಈ ವರ್ಷ ಬೆಂಗಳೂರು ಮತ್ತು ಕರ್ನಾಟಕವನ್ನು ಕಂಗೆಡಿಸಿದೆ. ಈ ಪ್ರಮಾಣದ ಮಳೆಯನ್ನು ತಡೆದುಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯ ನಮಗೆ ಇದೆಯೋ ಇಲ್ಲವೋ ಎಂದು ಯೋಚಿಸುವ ಮುನ್ನ, ನಾವೇ ಕಟ್ಟಿಕೊಂಡಿರುವ ಸುಂದರ ನಗರದ ವಿನ್ಯಾಸ, ಶೈಲಿ ಮತ್ತು ವಿಸ್ತಾರವನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ.
ಬಂಡವಾಳದ ವ್ಯಾಮೋಹ ಮತ್ತು ಔದ್ಯಮಿಕ ಪ್ರಗತಿಯ ದಾಹ ಮಾರುಕಟ್ಟೆ ವ್ಯವಸ್ಥೆಯನ್ನು ಪಾಪದ ಕೂಪವನ್ನಾಗಿ ಪರಿವರ್ತಿಸುತ್ತದೆ. ಹಾಗೆಯೇ ಸಾಮಾನ್ಯ ಜನರು ಬದುಕ ಬಯಸುವ ವಾತಾವರಣವನ್ನೂ ಕಲುಷಿತಗೊಳಿಸಿಬಿಡುತ್ತದೆ. ಬೆಂಗಳೂರು ಕಳೆದ ಐದು ದಶಕಗಳಲ್ಲಿ ಕಂಡಿರುವ ಹೊರ ವರ್ತುಲ ರಸ್ತೆಗಳತ್ತ ಗಮನ ಹರಿಸಿದಾಗ ಇದು ಸ್ಪಷ್ಟವಾಗುತ್ತದೆ. ಹೊರ ವರ್ತುಲ ರಸ್ತೆ ಎನ್ನುವುದೇ ನಗರ ವಿಸ್ತೀರ್ಣಕ್ಕೆ ಕಡಿವಾಣ ಹಾಕಬೇಕಾದ ಒಂದು ಗಡಿ. ಅದರಿಂದಾಚೆಗೂ ನಗರ ಬೆಳೆಯಬೇಕೆಂದರೆ, ಈ ಬೆಳವಣಿಗೆಗೆ ಪೂರಕವಾದ ಮೂಲ ಸೌಕರ್ಯಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಮುಂಚಿತವಾಗಿಯೇ ಯೋಚಿಸಬೇಕಾದ್ದು ಆಡಳಿತ ವ್ಯವಸ್ಥೆಯ ಕರ್ತವ್ಯ. ನಗರಾಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ವೈಜ್ಞಾನಿಕ ಯೋಜನಾ ವಿಧಾನಗಳನ್ನು ಅನುಸರಿಸದೆ ಹೋದರೆ ಇನ್ನು ನೂರು ವರ್ಷಗಳಲ್ಲಿ ಹತ್ತು ’ಬೆಂಗಳೂರುಗಳು ‘ಸೃಷ್ಟಿಯಾಗುತ್ತವೆ.
‘ನಗರವಾಸಿ’ ಎನಿಸಿಕೊಳ್ಳಲು ಹಾತೊರೆಯುವ ಹಿತವಲಯದ ಒಂದು ವರ್ಗದ ದೃಷ್ಟಿಯಲ್ಲಿ ರಸ್ತೆಗಳ ನವಿರು, ಅಗಲ ಮತ್ತು ವಿಸ್ತೀರ್ಣ ಬಹಳ ಮುಖ್ಯವಾಗಿ ಕಾಣುತ್ತದೆ. ಸಿಲಿಕಾನ್ ನಗರ ಎಂದು ಹೆಸರು ಗಳಿಸಲು ಕಾರಣವಾದ ಬೆಂಗಳೂರಿನ ಐಟಿ ಹಬ್ ಈ ಹಿತವಲಯದ ಆವಾಸಸ್ಥಾನವಾಗಿದೆ. ಕೃಷ್ಣರಾಜಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ವಿಸ್ತರಿಸುವ ೧೭ ಕಿಲೋಮೀಟರ್ ಬೆಂಗಳೂರಿನ ಮತ್ತು ಕರ್ನಾಟಕದ ಆರ್ಥಿಕತೆಯ ಕೇಂದ್ರ ಬಿಂದು. ಒಂದು ಅಂದಾಜಿನ ಪ್ರಕಾರ ಈ ವ್ಯಾಪ್ತಿಯಲ್ಲೇ ಹತ್ತು ಲಕ್ಷಕ್ಕೂ ಹೆಚ್ಚು ದುಡಿಮೆಗಾರರಿದ್ದಾರೆ. ಈ ಆಧುನಿಕ ‘ನವಿರು ಸಾಮ್ರಾಜ್ಯಕ್ಕೆ’ ಅನುಕೂಲಗಳನ್ನು ಕಲ್ಪಿಸದೆ ಹೋದರೆ ಹರಿದುಬಂದ ಬಂಡವಾಳ ಹಾಗೆಯೇ ಹೊರಗೆ ಹರಿದು ಹೋಗುತ್ತದೆ ಎಂಬ ಭೀತಿ ಸರ್ಕಾರಗಳನ್ನು ಸದಾ ಕಾಡುತ್ತಲೇ ಇರುತ್ತದೆ. ಈ ವಲಯದಲ್ಲಿ ಹಸಿರು ನಿಷಿದ್ಧವಾಗಿರುತ್ತದೆ. ಭೂಮಿ ಎಂದರೆ ಕೇವಲ ಕಾಂಕ್ರೀಟು, ಸಿಮೆಂಟು, ಗಾರೆ, ನೆಲಹಾಸು ಮತ್ತು ಗ್ರಾನೈಟ್‌ಗಳಿಂದ ಅಲಂಕೃತವಾದ ಒಂದು ಸ್ವತ್ತು ಎನ್ನುವ ಭಾವನೆ ದಟ್ಟವಾಗಿ ಬೇರೂರಿರುತ್ತದೆ. ಗಗನದೆತ್ತರದ ಕಟ್ಟಡಗಳು ಮತ್ತಷ್ಟು ಸುಂದರವಾಗಿ ಕಾಣಬೇಕೆಂದರೆ ಗಾಜಿನ ಗೋಡೆಗಳೇ ಅಲಂಕಾರ ಸಾಧನಗಳಾಗುತ್ತವೆ. ನಿಸರ್ಗ ಒದಗಿಸುವ ಶುದ್ಧವಾಯು ಕಾಂಕ್ರೀಟ್ ಗೋಡೆಗಳ ಶಾಖೋತ್ಪನ್ನಕ್ಕೆ ಬಲಿಯಾಗಿ ಬಿಸಿಯಾಗುತ್ತದೆ. ಸುಂದರ ಗಗನಚುಂಬಿಗಳಲ್ಲಿ ಕುಳಿತ ಹಿತವಲಯದ ಸಮಾಜಕ್ಕೆ ಹವಾನಿಯಂತ್ರಣದ ಯಂತ್ರಗಳು ಉಸಿರು ನೀಡುತ್ತವೆ.
ಈ ಅಭಿವೃದ್ಧಿ ಮಾದರಿಯನ್ನು ಉಪೇಕ್ಷೆ ಮಾಡಲಾಗುವುದಿಲ್ಲ. ಏಕೆಂದರೆ ದೇಶದ ಪ್ರಗತಿಯನ್ನು ಅಳೆಯುವುದೇ ಈ ಮಾನದಂಡಗಳ ಮೂಲಕ.
ಅತಿ ಹೆಚ್ಚು ಕಾರುಗಳು, ಅತಿ ಎತ್ತರದ ಕಟ್ಟಡಗಳು ಮತ್ತು ನವಿರಾದ ಚತುಷ್ಪಥ-ಷಟ್ಪಥ ರಸ್ತೆಗಳು ಆಧುನಿಕತೆ ಮತ್ತು ಅಭಿವೃದ್ಧಿಯ ಸೂಚಿಗಳಾಗಿಯೇ ಕಾಣುತ್ತವೆ. ಐಟಿ ಕಂಪನಿಗಳ ಈ ಹಿತವಲಯದಲ್ಲಿ ಆಗಸ್ಟ್ ೩೦ರಂದು ಬಿದ್ದ ಮಳೆಯಿಂದಲೇ ೨೨೫ ಕೋಟಿ ರೂ ನಷ್ಟವಾಗಿದೆ ಎಂದು ಐಟಿ ಕಂಪನಿಗಳು ಹುಯಿಲೆಬ್ಬಿಸುತ್ತಿವೆ. ಈ ನಷ್ಟಕ್ಕೆ ಕಾರಣ ಸಿಬ್ಬಂದಿಗಳಿಗೆ ತಮ್ಮ ಕಾರ್ಯಸ್ಥಳಗಳನ್ನು ತಲುಪಲು ಸಾಧ್ಯವಾಗಿಲ್ಲ ಎನ್ನುವುದು. ಸರ್ಕಾರ ಮತ್ತು ಮಾರುಕಟ್ಟೆಯ ದೃಷ್ಟಿಯಲ್ಲಿ ಈ ಮಾರುಕಟ್ಟೆ ನಷ್ಟ ಪ್ರಾಮುಖ್ಯತೆ ಪಡೆಯುತ್ತದೆ. ಈ ನವಿರು ಸಾಮ್ರಾಜ್ಯದಲ್ಲಿ ದುಡಿಯಲು ಬರುವವರು ವಾಸ ಮಾಡುವ ಬಡಾವಣೆಗಳಿಗೂ, ಐಟಿ ಪಾರ್ಕಿಗೂ ನಡುವೆ ಮಳೆಯಿಂದ ಉಂಟಾಗುವ ಅನಾಹುತಗಳು ಮಧ್ಯಮ ವರ್ಗದ ಅಥವಾ ಕೆಳವರ್ಗದ ಜನತೆಯ ಸಮಸ್ಯೆಯಾಗಿ ಉಳಿದುಬಿಡುತ್ತವೆ. ಈ ಹಿತವಲಯದ ಜನರ ನಡುವೆಯೂ ಅಭಿವೃದ್ಧಿ ಮತ್ತು ಪರಿಸರ ಸಮತೋಲನದ ನಡುವೆ ಇರುವ ಸೂಕ್ಷ್ಮ ಸಂಬಂಧಗಳು ಅರ್ಥವಾಗದೆ ಹೋದಾಗ, ಅವೈಜ್ಞಾನಿಕವಾಗಿ ರೂಪುಗೊಂಡಿರುವ ಅಪಾರ್ಟ್‌ಮೆಂಟ್‌ಗಳು, ಬಡಾವಣೆಗಳು, ರಸ್ತೆಗಳು, ಅಂಡರ್‌ಪಾಸ್‌ಗಳು, ಅಡೆತಡೆಯಿಲ್ಲದೆ ತಲೆ ಎತ್ತುತ್ತವೆ.
ಇಡೀ ಬೆಂಗಳೂರು ಮುಳುಗಿಲ್ಲ ಎಂದು ಸಮಾಧಾನಪಟ್ಟುಕೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿರುವಂತೆ ಕಳೆದ ೯೦ ವರ್ಷಗಳಲ್ಲೇ ಅತಿ ಹೆಚ್ಚು ಮಳೆ ಈ ಬಾರಿ ಅಪ್ಪಳಿಸಿದೆ. ೯೦ ವರ್ಷಗಳ ಹಿಂದೆ ರೀತಿಯ ಮಳೆ ಬಂದಿದ್ದರೆ ಬೆಂಗಳೂರಿನ ಒಂದು ಭಾಗವೂ ಮುಳುಗುತ್ತಿರಲಿಲ್ಲ. ಏಕೆಂದರೆ ಆಗ ಬೆಂಗಳೂರಿನಲ್ಲಿ ನೂರಾರು ಕೆರೆಗಳು ಜೀವಂತಿಕೆಯಿಂದಿದ್ದವು. ಹಸಿರು ಅರಣ್ಯ ನಗರಕ್ಕೆ ಹೊದಿಕೆಯಂತೆ ಕಾಣುತ್ತಿತ್ತು. ಬಹುತೇಕ ಎಲ್ಲ ಬಡಾವಣೆಗಳಲ್ಲೂ ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಕಂಗೊಳಿಸುತ್ತಿತ್ತು. ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇಲ್ಲದಿದ್ದರೂ ಮಳೆ ನೀರನ್ನು ಸೆಳೆದುಕೊಳ್ಳಲು ಭೂಮಿ ಸಿದ್ಧವಾಗಿತ್ತು. ಈ ನೀರು ಇಂಗುವ ಪ್ರಕ್ರಿಯೆಯು ಸ್ವಾಭಾವಿಕವಾದದ್ದು. ನಿಸರ್ಗ ತಾನು ಮಾಡುವ ಅನಾಹುತಗಳಿಗೆ ತನ್ನೊಳಗೇ ಪರಿಹಾರ ಮಾರ್ಗಗಳನ್ನೂ ನಿರ್ಮಿಸಿಕೊಂಡಿರುತ್ತದೆ. ಕೆರೆ ಕುಂಟೆಗಳು, ಹಸಿರು ವಲಯಗಳು, ಉದ್ಯಾನಗಳು ಮತ್ತು ಸಾಲು ಮರಗಳು ಈ ನಿಟ್ಟಿನಲ್ಲಿ ಸಹಾಯಕವಾಗಿರುತ್ತವೆ. ಈ ಎಲ್ಲ ಸ್ವಾಭಾವಿಕ ನಿಸರ್ಗ ನೆಲೆಗಳನ್ನೂ ಧ್ವಂಸ ಮಾಡಿ, ಶಾಖೋತ್ಪನ್ನ ಮಾಡುವಂತಹ ಕಾಂಕ್ರೀಟ್ ಭೂಮಿಯನ್ನು ನಿರ್ಮಿಸುವುದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

8 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

10 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

11 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

11 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago