ನಾಲ್ಕು ದಿಕ್ಕಿನಿಂದ
ಸುಸ್ತಿಯ ಹಾದಿಯಲ್ಲಿ ಅರ್ಧ ಡಜನ್ ದೇಶಗಳು!
ದ್ವೀಪ ರಾಷ್ಟ್ರ ಶ್ರೀಲಂಕಾದಂತೆಯೇ ಅರ್ಧ ಡಜನ್ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಮಾಡಿದ ಸಾಲಕ್ಕೆ ಅಸಲು ಇರಲಿ, ಬಡ್ಡಿಯನ್ನು ಪಾವತಿ ಮಾಡಲಾಗದೇ ಸುಸ್ತಿದಾರರಾಗುವುದೇ ಆರ್ಥಿಕ ಬಿಕ್ಕಟ್ಟು. ಕೋವಿಡ್‌ನಿಂದ ಬಂದ ಸಂಕಷ್ಟಗಳು, ನಂತರ ಆರ್ಥಿಕ ಹಿನ್ನಡೆಗಳು, ಜಾಗತಿಕ ರಾಜಕೀಯ ಕ್ಷೋಭೆ ಮತ್ತಿತರ ಕಾರಣಗಳಿಂದಾಗಿ ಈ ದೇಶಗಳು ಬಿಕ್ಕಟ್ಟು ಎದುರಿಸುತ್ತಿವೆ. ಈ ನಡುವೆ ಡಾಲರ್ ಮೌಲ್ಯ ಯದ್ವಾ ತದ್ವಾ ಏರುತ್ತಿದೆ. ಡಾಲರ್ ಮೂಲಕವೇ ಸಾಲ ಮರುಪಾವತಿ ಮಾಡಬೇಕಾದ ಇತರ ರಾಷ್ಟ್ರಗಳೂ ಕಷ್ಟದಲ್ಲಿವೆ. ರಾಯಿಟರ್ಸ್ ವರದಿ ಪ್ರಕಾರ, ಏರುತ್ತಿರುವ ಬೆಲೆಗಳು, ಹಣದುಬ್ಬರ ಮತ್ತು ಸಾಲವು ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಶ್ರೀಲಂಕಾ ಅಲ್ಲದೇ, ಲೆಬನಾನ್, ರಷ್ಯಾ, ಸುರಿನಾಮ್ ಮತ್ತು ಜಾಂಬಿಯಾ ಈಗಾಗಲೇ ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿವೆ. ಅಂದರೆ, ಸಾಲ ಮರುಪಾವತಿ ಮಾಡಲಾಗದೆ ಸುಸ್ತಿದಾರರಾಗಿವೆ. ಬೆಲಾರಸ್ ಸಹ ಆ ಹಾದಿಯಲ್ಲೇ ಇದೆ. ಕೆಲವು ತಿಂಗಳು ಕಳೆದರೆ ಇನ್ನೂ ಒಂದು ಡಜನ್ ದೇಶಗಳು ಸುಸ್ತಿದಾರರಾಗುವ ಅಪಾಯದಲ್ಲಿವೆ. ಈ ಎಲ್ಲಾ ರಾಷ್ಟ್ರಗಳು ಸುಸ್ತಿಯಾಗಿರುವ ಸಾಲದ ಮೊತ್ತವೇ ೪೦೦ ಬಿಲಿಯನ್ ಡಾಲರ್. ರೂಪಾಯಿ ಲೆಕ್ಕದಲ್ಲಿ ೩೨ ಲಕ್ಷ ಕೋಟಿ!
ಅಸಂಸದೀಯ ಪದಗಳು!
ಸಂಸತ್ತಿನ ಕಲಾಪದ ವೇಳೆ ಪ್ರಧಾನಿ ಸೇರಿದಂತೆ ಯಾರನ್ನಾದರೂ ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಹೀಗೆ ತರಾಟೆಗೆ ತೆಗೆದುಕೊಳ್ಳುವಾಗ ಕೆಲ ಕಠಿಣ ಪದಗಳಿಂದ ಟೀಕಿಸಲೂ ಬಹುದಿತ್ತು. ಈಗ ಅಂತಹ ಕಠಿಣ ಪದಗಳಿಂದ ಟೀಕೆ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದೆ. ಆಯ್ದ ಕೆಲವು ಪದಗಳನ್ನು ಸಂಸದರು ಬಳಸುವಂತಿಲ್ಲ. ಬಳಸಬಾರದ ಪದಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅವುಗಳಲ್ಲಿ ‘ಜುಮ್ಲಾ ಜೀವಿ’ಯೂ ಸೇರಿದೆ. ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಟೀಕೆಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ, ಸಾಮರ್ಥ್ಯ, ಜಾಣ್ಮೆ, ಪ್ರಬುದ್ಧತೆ ಇತ್ಯಾದಿಗಳನ್ನು ವರ್ಣಿಸಲು ಬಳಸಲಾಗುತ್ತಿದ್ದ ಪದಗಳೆಲ್ಲವನ್ನೂ ಅಸಂಸದೀಯ ಪದಗಳ ವ್ಯಾಪ್ತಿಗೆ ತರಲಾಗಿದೆ. ‘ಜುಮ್ಲಾ ಜೀವಿ’ ಪದದ ಹುಟ್ಟಿಗೆ ಒಂದು ಪುಟ್ಟ ಇತಿಹಾಸ ಇದೆ. ಕೃಷಿ ಕಾಯ್ದೆ ವಿರೋಧಿಸಿ ರೈತರು ಚಳಿ, ಮಳೆ, ಬಿಸಿಲಲ್ಲೂ ವರ್ಷವಿಡೀ ಪ್ರತಿಭಟನೆ ಮಾಡುತ್ತಿದ್ದಾಗ, ಸಂಸತ್ತಿನಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಅವರು ‘ಆಂದೋಲನ ಜೀವಿ’ಗಳು ಎಂಬ ಪದ ಬಳಸಿ ಟೀಕಿಸಿದ್ದರು. ಅದಾದ ನಂತರ ಪ್ರಧಾನಿ ಮೋದಿ ಅವರಿಗೆ ‘ಜುಮ್ಲಾ ಜೀವಿ‘ ಎಂಬ ಪದ ಖಾಯಂ ಆಗಿತ್ತು! ಅದಕ್ಕೂ ಮುನ್ನ ‘ಜುಮ್ಲೆಬಾಝ್‘ ಅನ್ನಲಾಗುತ್ತಿತ್ತು!
ಇಂದಿನಿಂದ ಮತ್ತಷ್ಟು ದುಬಾರಿ ದುನಿಯಾ!
ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಇತ್ತೀಚಿನ ತೆರಿಗೆ ಪರಿಷ್ಕರಣೆ ಆದೇಶ ಜುಲೈ ೧೮ರಿಂದ ಜಾರಿಯಾಗುತ್ತಿದೆ. ಅಂದರೆ, ಗ್ರಾಹಕರ ಮೇಲಿನ ತೆರಿಗೆ ಭಾರ ಮತ್ತಷ್ಟು ಏರಲಿದೆ. ತೆರಿಗೆ ಹೇರಿಕೆಯ ಹೊಸ ಅಧ್ಯಾಯಕ್ಕೆ ಗ್ರಾಹಕರು ತೆರೆದುಕೊಳ್ಳಬೇಕಿದೆ. ೫,೦೦೦ ರೂಪಾಯಿಗಳಿಗಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆ ಕೊಠಡಿಗಳು ದುಬಾರಿಯಾಗಲಿವೆ. ಅದು ಶ್ರೀಮಂತರ ಕತೆ. ಶ್ರೀಸಾಮಾನ್ಯರು ಬಳಸುವ ಆಟಾ (ಗೋಧಿ ಹಿಟ್ಟು), ಮೊಸರು, ಪನೀರ್ ಮೇಲೆ ಶೇ.೫ರಷ್ಟು ಜಿಎಸ್‌ಟಿ ಹೇರಲಾಗಿದೆ.
ದಿನಕ್ಕೆ ೧,೦೦೦ ರೂಪಾಯಿ ದರ ಹೊಂದಿರುವ ಹೋಟೆಲ್ ಕೊಠಡಿಗಳು, ಶೈಕ್ಷಣಿಕ ನಕ್ಷೆಗಳು ಮತ್ತು ಚಾರ್ಟ್‌ಗಳು, ಅಟ್ಲಾಸ್‌ಗಳ ಮೇಲೆ ಶೇ.೧೨ರಷ್ಟು ಸರಕು ಮತ್ತು ಸೇವಾ ತೆರಿಗೆ ಹೇರಲಾಗಿದೆ. ನೀವು ಬ್ಯಾಂಕಿನಿಂದ ಪಡೆವ ಚೆಕ್ ಬುಕ್ಕಿನ ಮೇಲೂ ಶೇ.೧೮ರಷ್ಟು ಜಿಎಸ್‌ಟಿ ಇದೆ. ಈಗಾಗಲೇ ಪೆಟ್ರೋಲ್, ಡಿಸೇಲ್, ಎಲ್ ಪಿಜಿ ಸಿಲಿಂಡರ್, ಆಹಾರಧಾನ್ಯಗಳು, ಖಾದ್ಯ ತೈಲಗಳ ದರ ಏರಿಕೆಯಿಂದ ತತ್ತರಿಸುವ ಜನರಿಗೆ ಈಗ ಮತ್ತಷ್ಟು ಹೊರೆ ಹೇರಲಾಗಿದೆಯಷ್ಟೇ!
ಭವಿಷ್ಯ ನಿಧಿಗೂ ತೆರಿಗೆ ಹೇರಿಕೆ!
ತೆರಿಗೆ ಸುಧಾರಣಾ ಪರ್ವವಿದು. ಇದುವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದ್ದ ಕಾರ್ಮಿಕರ ಭವಿಷ್ಯ ನಿಧಿಯ ಮೇಲೂ ೨೦೨೨ ಏಪ್ರಿಲ್ ೧ರಿಂದ ತೆರಿಗೆ ಹೇರಲು ನಿರ್ಧರಿಸಲಾಗಿದೆ. ಈ ಮೊದಲು ಕಾರ್ಮಿಕರು ತಮ್ಮ ಭವಿಷ್ಯ ನಿಧಿ ಖಾತೆಗೆ ವಾರ್ಷಿಕ ಎಷ್ಟಾದರೂ ಪಾವತಿ ಮಾಡಬಹುದಿತ್ತು. ಹಾಗೆಯೇ ಭವಿಷ್ಯನಿಧಿಯಲ್ಲಿರುವ ಮೊತ್ತಕ್ಕೆ ಬರುವ ಬಡ್ಡಿಯ ಮೇಲೂ ಯಾವುದೇ ತೆರಿಗೆ ಇರಲಿಲ್ಲ. ಈಗ ಪರಿಷ್ಕೃತ ಆದೇಶದಂತೆ ಒಬ್ಬ ಕಾರ್ಮಿಕ ೨.೫ ಲಕ್ಷ ರೂಪಾಯಿ ಮೀರಿ ಭವಿಷ್ಯ ನಿಧಿಗೆ ಪಾವತಿ ಮಾಡಿದ್ದರೆ, ಅದರ ಮೇಲೆ ತೆರಿಗೆ ಹೇರಲಾಗುತ್ತದೆ. ಅದೇ ವೇಳೆ ಕಾರ್ಮಿಕನ ಭವಿಷ್ಯ ನಿಧಿಯ ಮೇಲೆ ವಾರ್ಷಿಕ ೨.೫ ಲಕ್ಷ ರೂಪಾಯಿಗಿಂದ ಹೆಚ್ಚು ಬಡ್ಡಿ ಬಂದರೆ ಅದಕ್ಕೂ ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಇನ್ನು ಮುಂದೆ ಭವಿಷ್ಯ ನಿಧಿ ಸಂಪೂರ್ಣ ತೆರಿಗೆ ಮುಕ್ತವಲ್ಲ. ತೆರಿಗೆ ವಿನಾಯಿತಿ ಇದೆ ಎಂಬ ಕಾರಣಕ್ಕೆ ಬಹಳಷ್ಟು ಜನ ಭವಿಷ್ಯನಿಧಿಗೆ ಹೆಚ್ಚಿನ ಪಾಲು ಹೂಡಿಕೆ ಮಾಡುತ್ತಿದ್ದರು. ಹಾಗೆಯೇ ಬಡ್ಡಿ ಸಹ ಬ್ಯಾಂಕುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿತ್ತು. ಇದೀಗ ೨.೫ ಲಕ್ಷ ಮೀರಿದ ಪಾವತಿ ಮತ್ತು ೨.೫ ಲಕ್ಷ ಮೀರಿದ ಬಡ್ಡಿ ಆದಾಯದ ಮೇಲೆ ತೆರಿಗೆ ಬೀಳಲಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…