ಯುವ ಸಮೂಹಕ್ಕೆ ಸ್ಪೂರ್ತಿಯಾದ ‘ವಿಜಯಾನಂದ’ ಚಿತ್ರ
ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಛಲ, ವಿಶ್ವಾಸ, ಪ್ರಯತ್ನ ಹಾಗೂ ಪರಿಶ್ರಮಗಳಿದ್ದರೆ ಶೂನ್ಯದಿಂದಲೇ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿರುವ ಡಾ.ವಿಜಯ ಸಂಕೇಶ್ವರವರ ಜೀವನಾಧಾರಿತ ಚಿತ್ರ, ಕನ್ನಡದ ಮೊದಲ ಬಯೋಪಿಕ್ ‘ವಿಜಯಾನಂದ’ ಚಲನಚಿತ್ರವು ಪ್ರತ್ಯಕ್ಷ ಸಾಕ್ಷಿಯಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಲಕ್ಷಾಂತರ ಯುವ ಜನರಿಗೆ ಈ ಚಿತ್ರ ಸ್ಪೂರ್ತಿಯಾಗಿದ್ದು, ಜೀವನೋತ್ಸಾಹಕ್ಕೆ ಪ್ರೇರಣೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಯುವ ಉದ್ದಿಮೆದಾರರಿಗೆ ಹೊಸ ಉತ್ಸಾಹ, ಹೊಸ ಯೋಜನೆಗಳು ಮನಸ್ಸಿನಲ್ಲಿ ಆಳವಾಗಿ ಬೇರೂರುವಂತೆ ಮಾಡಿದೆ ಈ ಚಿತ್ರ. ಕೇವಲ ಒಂದು ಟ್ರಕ್‌ನಿಂದ ಆರಂಭಿಸಿದ ಬದುಕಿನ ಪಯಣ ಇಂದು ದೇಶಾದ್ಯಂತ ವಿಆರ್‌ಎಲ್ ಸಮೂಹ ೫೫೦೦ಕ್ಕೂ ಹೆಚ್ಚು ಟ್ರಕ್‌ಗಳನ್ನು ಒಳಗೊಂಡಿರುವ ಯಶೋಗಾಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಪ್ರತಿಯೊಬ್ಬರೂ ಪಾತ್ರಗಳಿಗೆ ಜೀವತುಂಬುವಂತೆ ಅಭಿನಯಿಸಿದ್ದಾರೆ. ಒಬ್ಬ ವ್ಯಕ್ತಿ ಸಾಧನೆ ಮಾಡಲು ಹೊರಟಾಗ ಪ್ರತಿ ಹೆಜ್ಜೆಗೂ ದಬ್ಬಾಳಿಕೆ, ಅವಮಾನ, ದೌರ್ಜನ್ಯ, ನೋವು, ನಿಂದನೆಗಳನ್ನು ಎದುರಿಸುತ್ತಾನೆ. ಅವೆಲ್ಲವನ್ನೂ ಸಹಿಸಿಕೊಂಡು ಕಲ್ಲು ಮುಳ್ಳುಗಳ ಹಾದಿಯಲ್ಲಿ ಸಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿ ತನ್ನೊಂದಿಗೆ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿರುವ ವಿಆರ್‌ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ವಿಜಯ ಸಂಕೇಶ್ವರವರ ಜೀವನಾಧಾರಿತ ಕನ್ನಡ ಚಲನಚಿತ್ರ ಪ್ರೇರಣಾತ್ಮಕವಾಗಿದ್ದು, ಇಂತಹ ಕನ್ನಡ ಚಲನಚಿತ್ರಗಳು ತೆರೆಯ ಮೇಲೆ ಮತ್ತಷ್ಟು ಮೂಡಿಬರಬೇಕಿದೆ.
-ಎನ್.ಪಿ.ಪರಶಿವಮೂರ್ತಿ, ನಂಜೀಪುರ, ಸರಗೂರು ತಾ.
ಸೊಗಸಾಗಿ ಮೂಡಿ ಬಂದ ‘ಮಾಯಾಬಜಾರ್’ ನಾಟಕ
ಮೈಸೂರಿನ ಕಲಾಮಂದಿರದಲ್ಲಿ ಪ್ರದರ್ಶನಗೊಂಡ ‘ಮಾಯಾಬಜಾರ್’ ನಾಟಕವು (ತೆಲುಗು) ಅತ್ಯಂತ ಸೊಗಸಾಗಿ ಮೂಡಿಬಂದು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಕೊನೆಯ ದಿನ ಪ್ರದರ್ಶನಗೊಂಡ, ಶ್ರೀ ವೆಂಕಟೇಶ್ವರ ಸುರಭಿ ಥಿಯೇಟರ್ ತೆಲಂಗಾಣ ತಂಡದ ಅಭಿನಯದ, ಮಲ್ಲಾಡಿ ವೆಂಕಟಕೃಷ್ಣರವರ ರಚನೆಯ, ಸುರಭಿ ಜಯಚಂದ್ರ ಶರ್ಮ ನಿರ್ದೇಶನದ ‘ಮಾಯಾಬಜಾರ್’ ನಾಟಕ ಹಲವಾರು ಆಕರ್ಷಣೆಗಳೊಂದಿಗೆ ನಾಟಕ ಪ್ರಿಯರನ್ನು ರಂಜಿಸಿತು. ಒಂದು ನಾಟಕದಲ್ಲಿ ಹೀಗೂ ಅನೇಕ ಚಮತ್ಕಾರಗಳನ್ನು ಪ್ರೇಕ್ಷಕರ ಎದುರು ಸೃಷ್ಟಿಸಬಹುದು ಎಂಬುದನ್ನು ಈ ತಂಡ ತೋರಿಸಿಕೊಟ್ಟಿತು. ಅತ್ಯುತ್ತಮ ವಿನ್ಯಾಸ, ಅತ್ಯುತ್ತಮ ವಸ್ತ್ರಾಲಂಕಾರದ ಜೊತೆಗೆ ಅಭಿನಯಕ್ಕೆ ತಕ್ಕಂತೆ ಸಂಗೀತ, ಇದರೊಂದಿಗೆ ಎರಡೂವರೆ ವರ್ಷದ ಪುಟ್ಟ ಮಗುವಿನಿಂದ ೮೦ ವರ್ಷದ ಹಿರಿಯರ ತನಕ ಎಲ್ಲಾ ಕಲಾವಿದರ ಅಮೋಘ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ತೆಲಂಗಾಣ ಕಲಾವಿದರನ್ನು ಮೈಸೂರಿಗೆ ಕರೆಸಿ ಒಂದೊಳ್ಳೆ ನಾಟಕವನ್ನು ಆಯೋಜಿಸಿ ಪ್ರೇಕ್ಷಕರಿಗೆ ಉತ್ತಮ ಮನರಂಜನೆಗೆ ಅವಕಾಶ ಮಾಡಿಕೊಟ್ಟ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ನವರಿಗೆ ಧನ್ಯವಾದಗಳು.
-ಅಹಲ್ಯ ಸಿ.ನಾ.ಚಂದ್ರ, ಜನತಾನಗರ, ಮೈಸೂರು
ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡೋಣ
ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣದಲ್ಲಿ ಲಾಭಗಳಿಸುವ ಉದ್ದೇಶ ಹೊಂದಿರುವ ರಾಜಕಾರಣಿಗಳು ಮತದಾರರನ್ನು ಸೆಳೆಯುವ ಸಲುವಾಗಿ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದ್ದಾರೆ. ತಮಗೆ ಅಽಕಾರ ಬಂದರೆ ತಮ್ಮ ಸೇವೆ ಮಾಡುತ್ತೇವೆ ಎಂಬುದಾಗಿ ಭರವಸೆ ನೀಡುತ್ತಾರೆ. ರಸ್ತೆಗಳಿಗೆ ಸಿಮೆಂಟ್, ಡಾಂಬರ್, ಬೀದಿ ದೀಪಗಳನ್ನು ಹಾಕಿಸುತ್ತೇವೆ, ಮಾಸಾಶನ, ವೃದ್ಧಾಪ್ಯ ವೇತನ, ವಿಶೇಷಚೇತನರ ವೇತನದ ಮೊತ್ತ ಹೆಚ್ಚಿಸುತ್ತೇವೆ ಎಂಬ ಭರವಸೆಗಳನ್ನು ನೀಡಿ, ಹಣ, ಮದ್ಯ, ಮಹಿಳೆಯರಿಗೆ ಸೀರೆ, ಕುಕ್ಕರ್ ಮತ್ತಿತರ ಆಮಿಷಗಳನ್ನೊಡ್ಡಿ ಮತಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದ್ದರಿಂದ ಮತದಾರರು ತಮ್ಮ ಮತಗಳನ್ನು ಇಂತಹವರಿಗೆ ಮಾರಾಟ ಮಾಡಬಾರದು. ಚುನಾವಣೆಯಲ್ಲಿ ಸ್ಪರ್ಧಿಸುವವರಲ್ಲಿ ಒಳ್ಳೆಯ ವ್ಯಕ್ತಿಯನ್ನು ಅವರ ಗುಣ, ಸ್ವಭಾವ ಹಾಗೂ ಜನರೊಂದಿಗಿನ ಅವರ ವರ್ತನೆಯನ್ನು ಗಮನಿಸಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಆಯ್ಕೆಯಾದ ವ್ಯಕ್ತಿ ನಮ್ಮ ಬದುಕಿನ ಸುಧಾರಣೆಗೆ ಅಗತ್ಯ ಸೇವೆಗಳನ್ನು ಮಾಡುವವನಾಗಿರಬೇಕು. ಆದ್ದರಿಂದ ನಮ್ಮ ಆಯ್ಕೆ ಒಳ್ಳೆಯದಾಗಿದ್ದರೆ ದೇಶದ ಅಭಿವೃದ್ಧಿಯೂ ಒಳ್ಳೆಯದಾಗಿರುತ್ತದೆ.
-ಬಿ.ಕೆ.ಆಕಾಶ್‌ಗೌಡ, ಪತ್ರಿಕೋದ್ಯಮ ವಿಭಾಗ, ಮಹಾರಾಜ ಕಾಲೇಜು.
ಮುಳ್ಳೂರು ರಸ್ತೆಯ ಅಭಿವೃದ್ಧಿ ಯಾವಾಗ?
ಕಳೆದ ವಾರ ನಮ್ಮ ಗ್ರಾಮ ಮುಳ್ಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ರಸ್ತೆಯನ್ನು ಕಂಡು ಬೇಸರವಾಯಿತು. ಮೈಸೂರಿನಿಂದ ಸರಗೂರು ಮಾರ್ಗವಾಗಿ ನುಗು ಬಿರ್ವಾಳ್ ತಲುಪಿದೆ. ಇಲ್ಲಿ ಸರಗೂರಿನಿಂದ ಬಿರ್ವಾಳ್ ಗ್ರಾಮದವರೆಗೂ ರಸ್ತೆ ಡಾಂಬರೀಕರಣ ಮಾಡಲಾಗಿದ್ದು ರಸ್ತೆ ಉತ್ತಮವಾಗಿದೆ. ಆದರೆ ನುಗು ಜಲಾಶಯದಿಂದ ಮುಳ್ಳೂರು ಗ್ರಾಮದವರೆಗೆ ಇರುವ ೫ ಕಿಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ಕಲ್ಲು, ದೊಡ್ಡ ಪ್ರಮಾಣದ ಹಳ್ಳಗಳು ಏರ್ಪಟ್ಟು, ಮಳೆ ನೀರಿನಿಂದಾಗಿ ಕೊರಕಲುಗಳು ಕೂಡಿದ್ದು, ಕನಿಷ್ಠವೆಂದರೆ ರಸ್ತೆಯ ೧೦೦ ಮೀ. ದೂರವೂ ಉತ್ತಮವಾದ ರಸ್ತೆ ಇಲ್ಲ.
ಇದರಿಂದ ಕಾಡಂಚಿನ ಈ ಭಾಗದಲ್ಲಿ ಜನರ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಎದುರಾಗಿದೆ. ರಾತ್ರಿವೇಳೆ ಈ ರಸ್ತೆಯಲ್ಲಿ ಸಂಚರಿಸುವುದು ಸಾಹಸದ ಕೆಲಸ. ಇದು ನೂತನ ಸರಗೂರು ತಾಲ್ಲೂಕಿನ ಮೂಲ ಸೌಕರ್ಯಗಳ ಅಭಿವೃದ್ಧಿ ಹೇಗಿದೆ ಎಂಬುದಕ್ಕೆ ನಿದರ್ಶನವಾಗಿದೆ. ಶಾಸಕರು, ಸಂಸದರು ಈ ಭಾಗಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಅರಿತು ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕು ಎಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ.
–ಮುಳ್ಳೂರು ಪ್ರಕಾಶ್,
ಕನಕದಾಸ ನಗರ, ಮೈಸೂರು.
ಮಂಡ್ಯ: ಸಕ್ಕರೆ ನಗರಿಯಲ್ಲಿ ಶುಕ್ರವಾರ ಆಕ್ಷರಶಃ ದೊಡ್ಡ ಜಾತ್ರೆಯ ಸೊಬಗು ಮನೆ ಮಾಡಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ; ಅದು…
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…