ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 13 ಶುಕ್ರವಾರ 2023

ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಸ್ವಾಗತಾರ್ಹ

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನವೊಂದನ್ನು ನಿರ್ಮಾಣ ಮಾಡಲು ಮುಂದಾಗುತ್ತಿರುವುದು ಸ್ವಾಗತಾರ್ಹವಾಗಿದೆ. ಮೈಸೂರು ಹೊರವಲಯದ ಹಂಚ್ಯಾ-ಸಾತಗಳ್ಳಿಯ ವ್ಯಾಪ್ತಿಯಲ್ಲಿ ಸುಮಾರು ೨೦ಎಕರೆ ಭೂಮಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವನ್ನು ನಿರ್ಮಿಸಲು ಯೋಜಿಸಲಾಗಿದ್ದು, ಇದರಿಂದ ಕ್ರೀಡಾಪಟುಗಳು ಹಾಗೂ ವೃತ್ತಿಪರ ಕ್ರಿಕೆಟಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮೈಸೂರಿನಲ್ಲಿ ಕೆಪಿಎಲ್, ಕೆಲವು ಬಾರಿ ರಣಜಿ, ವಿವಿಧ ಕ್ಲಬ್‌ಪಂದ್ಯಾವಳಿಗಳನ್ನು ಮಾನಸ ಗಂಗೋತ್ರಿಯಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿತ್ತು. ಕೆಲವು ಬಾರಿ ಅಲ್ಲಿ ಅಂತಾರಾಷ್ಟ್ರೀಯ ಆಟಗಾರರು ಬಂದಾಗ ಆಟ ನೋಡಲು ಬರುತ್ತಿದ್ದ ಹೆಚ್ಚಿನ ಪ್ರೇಕ್ಷಕರಿಗೆ ಕೂರಲು ಸ್ಥಳಾವಕಾಶದ ಕೊರತೆ ಉಂಟಾಗುತ್ತಿತ್ತು.

ಆದರೆ ಈಗ ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಸಿದ್ಧವಾಗುತ್ತಿರುವುದರಿಂದ ಹೆಚ್ಚಿನ ಜನರು ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಅಲ್ಲದೇ ಮೈಸೂರು ಭಾಗದಿಂದ ಕೆಪಿಎಲ್, ಐಪಿಎಲ್, ರಣಜಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಆಟಗಾರರಿಗೆ ಹಾಗೂ ತರಬೇತಿಯಲ್ಲಿರುವ ಆಟಗಾರರಿಗೆ ಅನುಕೂಲವಾಗಲಿದೆ. ಆದಷ್ಟು ಬೇಗ ಸ್ಟೇಡಿಯಂ ನಿರ್ಮಾಣವಾಗಲಿ ಎಂಬುದು ನಮ್ಮ ಆಶಯ.

ಸಿ.ಭಾಸ್ಕರ್, ಅಧ್ಯಕ್ಷ, ವನಸಿರಿ ಸ್ಪೋರ್ಟ್ಸ್ ಕಬ್ಲ್, ಎಚ್.ಡಿ.ಕೋಟೆ.


ಮೈಸೂರು-ಬೆಂಗಳೂರು ದಶಪಥ ರಸ್ತೆಗೆ ಸರ್ ಎಂ.ವಿ ಹೆಸರು ಸೂಕ್ತ

ಉದ್ಘಾಟನೆಯ ಹಂತದಲ್ಲಿರುವ ‘ಮೈಸೂರು-ಬೆಂಗಳೂರು’ ದಶಪಥ ರಸ್ತೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಹಾಗೂ ಕಾವೇರಿ ನದಿಗೆ ಅಡ್ಡಲಾಗಿ ಕೆಆರ್‌ಎಸ್ ಅಣೆಕಟ್ಟ್ಟೆ ನಿರ್ಮಾಣ ಮಾಡಲು ಯೋಜಿಸಿ ಮೈಸೂರು, ಬೆಂಗಳೂರು, ಮಂಡ್ಯದ ಜನತೆಗೆ ನೀರು ಪೂರೈಕೆಯಾಗುವಂತೆ ಮಾಡಿದ ಹಾಗೂ ಮಂಡ್ಯ ಜಿಲ್ಲೆಯ ಲಕ್ಷಾಂತರ ರೈತರ ಬಾಳಿಗೆ ಬೆಳಕಾದ ವಿಶ್ವ ಕಂಡ ಅತ್ಯಂತ ಶ್ರೇಷ್ಠ ಇಂಜಿನಿಯರ್ ‘ಸರ್ ಎಂ.ವಿಶ್ವೇಶ್ವರಯ್ಯ’ ಅವರ ಹೆಸರನ್ನು ನಾಮಕರಣ ಮಾಡಬಹುದಾಗಿದೆ. ಸರ್ ಎಂ.ವಿಶ್ವೇಶ್ವರಯ್ಯನವರ ಹೆಸರನ್ನು ನಾಮಕರಣ ಮಾಡಲು ಬಹುಶಃ ಯಾರ ವಿರೋಧವೂ ವ್ಯಕ್ತವಾಗುವುದಿಲ್ಲ ಎನಿಸುತ್ತದೆ.

ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರಿಗೆ ಇವರ ಕೊಡುಗೆ ಅಪಾರವಾಗಿರುವುದರಿಂದ ಇವರ ಹೆಸರು ಅತ್ಯಂತ ಸೂಕ್ತ. ವಿಶ್ವೇಶ್ವರಯ್ಯನವರು ರಾಜ್ಯಕ್ಕೆ ಕೊಟ್ಟ ಶಿಂಷಾ ಜಲ ವಿದ್ಯುತ್ ಉತ್ಪಾದನಾ ಯೋಜನೆ, ಮೈಸೂರು ಸಾಬೂನು ಕಾರ್ಖಾನೆ, ಸಾರ್ವಜನಿಕ ಗ್ರಂಥಾಲಯ ಮುಂತಾದ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಇವರ ಹೆಸರನ್ನು ನಾಮಕರಣ ಮಾಡುವ ಮೂಲಕ ಅಜರಾಮರಗೊಳಿಸಬೇಕಿದೆ.

ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು


ಎತ್ತಿನಗಾಡಿ ಸ್ಪರ್ಧೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿತ್ತು

ಚಿಕ್ಕಮಂಡ್ಯ ಗ್ರಾಮದಲ್ಲಿ ಶ್ರೀ ಹಳ್ಳಿಕೇಶ್ವರ -ಬೋರೇಶ್ವರ ಹಾಗೂ ರೈತಮಿತ್ರ ಬಳಗದ ವತಿಯಿಂದ ಆಯೋಜಿಸಿದ್ದ ಅಂತಾರಾಜ್ಯ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಅವಘಡವೊಂದು ಸಂಭವಿಸಿ ರೈತರೊಬ್ಬರು ಜೀವತೆತ್ತ ದಾರುಣ ಘಟನೆ ನಡೆದಿದೆ. ಕೀಲಾರ ಗ್ರಾಮದ ರೈತ ನಾಯಕ ನಾಗರಾಜು ಅವರು ಎತ್ತಿಗಾಡಿ ಓಟದ ಸ್ಪರ್ಧೆ ನೋಡಲು ಆಗಮಿಸಿದ್ದರು.

ಆದರೆ ಸ್ಪರ್ಧೆ ಆರಂಭವಾಗುತ್ತಲೇ ವೇಗವಾಗಿ ನುಗ್ಗಿದ ಎತ್ತಿನ ಗಾಡಿಯೊಂದರ ನೊಗ ಬಡಿದು ಕೆಳಕ್ಕೆ ಬಿದ್ದಾಗ ಅವರ ಮೇಲೆ ಗಾಡಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಈ ಘಟನೆ ಆಘಾತಕಾರಿಯಾಗಿದೆ. ಇಂತಹ ಸ್ಪರ್ಧೆಗಳನ್ನು ಆಯೋಜಿಸುವಾಗ ಆಯೋಜಕರು ಹೆಚ್ಚಿನ ಗಮನ ನೀಡಬೇಕು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಅಲ್ಲದೇ ಸಂಬಂಧಪಟ್ಟವರಿಂದ ಮಾರ್ಗದರ್ಶನ, ನಿಯಾಮನುಸಾರ ಅನುಮತಿ ಪಡೆದು ಕಾರ್ಯಕ್ರಮ ಯೋಜಿಸಬೇಕು. ಆಗ ಇಂತಹ ಅಹಿತಕರ ಘಟನೆಗಳನ್ನು ತಪ್ಪಿಸಬಹುದು. ಮೃತ ರೈತ ಹಾಗೂ ಗಾಯಗೊಂಡಿರುವ ಬಾಲಕನ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಬೇಕು.ಇನ್ನು ಮುಂದಾದರೂ ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವ ಸಂಘಟನೆಗಳು ಸರ್ಕಾರದ ಅನುಮತಿ ಪಡೆದು ಎಚ್ಚರಿಕೆ ಕ್ರಮಗಳ ಜೊತೆ ಕಾರ್ಯಕ್ರಮ ರೂಪಿಸಿದರೆ ಇಂತಹ ಅವಘಡಗಳು ಮರುಕಳಿಸುವುದಿಲ್ಲ.

ಬೆಸಗರಹಳ್ಳಿ  ರವಿ ಪ್ರಸಾದ್‌, ಕೆ ಸಿ ನಗರ, ಮೈಸೂರು

andolanait

Recent Posts

ದೇಶದಲ್ಲಿ ಜಿಲ್ಲೆಗಳ ಸಂಖ್ಯೆ ಹೆಚ್ಚಾಗಿದೆಯೇ?

ಪ್ರೊ.ಆರ್.ಎಂ.ಚಿಂತಾಮಣಿ ಇಂದು ನಮ್ಮಲ್ಲಿ ಲಢಾಕ್ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಕಟಣೆಯಾಗಿ ಇನ್ನೂ ಜಾರಿಯಾಗದೇ ಇರುವ ಐದು ಹೊಸ ಜಿಲ್ಲೆಗಳೂ ಸೇರಿ ಒಟ್ಟು…

7 mins ago

ʼಅಪಶಕುನದ ಮಾತೇ ದಿಟ್ಟ ಬದುಕಿಗೆ ಮೆಟ್ಟಿಲಾಯಿತು’

ನಿರೂಪಣೆ: ರಶ್ಮಿ ಕೋಟಿ ಇದು ಸಮಾಜವಾದಿ ನಾಯಕ ದಿವಂಗತ ಕಿಶನ್ ಪಟ್ನಾಯಕ್ ಅವರ ಪತಿ ವಾಣಿ ದಾಸ್ ಅವರ ಬದುಕಿನ…

27 mins ago

ಓದುಗರ ಪತ್ರ: ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದವರಿಗೆ ಧನ್ಯವಾದಗಳು

ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದ್ದು, ಅಂದಾಜಿನ ಪ್ರಕಾರ ೬ ಲಕ್ಷ…

47 mins ago

ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ವಿರೋಧ

ನವೀನ್ ಡಿಸೋಜ ಕೆಲವೇ ದಿನಗಳಲ್ಲಿ ರಸ್ತೆಗಳು ಮತ್ತೆ ಹದಗೆಡುವ ಹಿನ್ನೆಲೆ : ಸಂಪೂರ್ಣ ರಸ್ತೆ ಡಾಂಬರೀಕರಣಕ್ಕೆ ಒತ್ತಾಯ ಮಡಿಕೇರಿ: ರಸ್ತೆ…

52 mins ago

ಪಶು ವೈದ್ಯರೇ ಇಲ್ಲದೆ ಪರಿತಪಿಸುತ್ತಿರುವ ಇಂಡುವಾಳು ರೈತರು

ಖಾಯಂ ಪಶು ವೈದ್ಯರ ನೇಮಕ ಮಾಡಲು ಅನ್ನದಾತರ ಒತ್ತಾಯ ಮೋಹನ್‌ ಕುಮಾರ್‌  ಮಂಡ್ಯ: ರೈತರು ಕೃಷಿ ಚಟುವಟಿಕೆ ನಡೆಸಲು ಜಾನುವಾರುಗಳೇ…

53 mins ago

ಓದುಗರ ಪತ್ರ: ಮೈಸೂರು ಹಾಪ್‌ಕಾಮ್‌ಗಳ ಉಳಿವಿಗೆ ಕ್ರಮಕೈಗೊಳ್ಳಬೇಕು

ಮಾಧ್ಯಮವೊಂದರ ವರದಿಯ ಪ್ರಕಾರ ಆನ್‌ಲೈನ್ ಮಾರುಕಟ್ಟೆಗಳ ಭರಾಟೆಯಿಂದಾಗಿ ಸರ್ಕಾರಿ ಸ್ವಾಮ್ಯದ ಹಾಪ್‌ ಕಾಮ್ಸ್ ಮಳಿಗೆಗಳು ನಷ್ಟಕ್ಕೆ ಸಿಲುಕಿದ್ದು, ಅವು ಮುಚ್ಚುವ…

55 mins ago