ಎಡಿಟೋರಿಯಲ್

ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಣೆಯಾಗಲಿ

-ವಿ.ಎನ್. ಲಕ್ಷ್ಮೀನಾರಾಯಣ, ಮೈಸೂರು.

ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗಿನ, (ಆಸೇತು ಹಿಮಾಚಲದವರೆಗಿನ) ಈ ಹೊತ್ತಿನ ಭಾರತದಲ್ಲಿ ನಮ್ಮ ಸಹಜೀವಿಗಳಾದ ಜನಸಾಮಾನ್ಯರು, ಅತಿವೃಷ್ಟಿ, ಪ್ರವಾಹ, ಭೂಕುಸಿತ, ಹೊಲಗದ್ದೆಗಳ ಮುಳುಗಡೆ, ಗುಡ್ಡಗಳು ಜರುಗಿ ಮನೆ ಮಠಗಳ ನಾಶ, ಜಾನುವಾರುಗಳ ಸಾವು ಹೀಗೆ ಬಹುಮುಖಿಯಾದ ಅತೀವ ಕಷ್ಟಗಳಿಗೆ ಸಿಕ್ಕಿ ನರಳುತ್ತಿದ್ದಾರೆ. ಈ ಅನಾಹುತಗಳು ಈಗಲೂ, ದೇಶದಾದ್ಯಂತ ನಿರಂತರವಾಗಿ ಸಂಭವಿಸುತ್ತಲೇ ಇವೆ. ಮಕ್ಕಳಾದಿಯಾಗಿ ನೂರಾರು ಮಂದಿ ಈಗಾಗಲೇ ಪ್ರಾಣಕಳೆದುಕೊಂಡಿದ್ದಾರೆ. ಸಾವಿರಾರು ಮನೆಗಳ ಗೋಡೆ ಕುಸಿದು, ಜನಸಾಮಾನ್ಯರು ಇದ್ದಲ್ಲೇ ನಿರಾಶ್ರಿತರಾಗಿದ್ದಾರೆ. ರಸ್ತೆ, ಹೊಲ ಗದ್ದೆ ಊರು ಕೇರಿಗಳು ಜಲಮಯವಾಗಿ ವಾಸಸ್ಥಳಗಳನ್ನು ತೊರೆದು ಎಲ್ಲೆಲ್ಲೋ, ಹೋಗಿ ಕಷ್ಟಪಡುತ್ತಿದ್ದಾರೆ. ಸಾಲದ್ದಕ್ಕೆ ದೇಶದ ಕೆಲವು ಭಾಗಗಳಲ್ಲಿ ಅನಾವೃಷ್ಟಿ-ಪೈರು ಒಣಗುವಿಕೆಯೂ ರೈತರ ಪ್ರಾಣವನ್ನು ಹಿಂಡುತ್ತಿವೆ.

ಭಾರತದ ಸನಾತನ ಬಡತನ, ಸರ್ಕಾರದ ನಿಯಂತ್ರಣ ತಪ್ಪಿರುವ ಬೆಲೆಯೇರಿಕೆ, ಯುವಜನರ ನಿರುದ್ಯೋಗ ಮತ್ತು ಕೇಂದ್ರ ಸರ್ಕಾರದ ತಪ್ಪುನೀತಿಗಳ ಫಲವಾಗಿ ಈ ಮೊದಲೇ ಜನರ ಜೀವನಗಳಲ್ಲಿ ತಳವೂರಿರುವ ದೈನಂದಿನ ಕಷ್ಟ ಕಾರ್ಪಣ್ಯಗಳನ್ನು ಈಗಿನ ಅತಿವೃಷ್ಟಿ- ಅನಾವೃಷ್ಟಿಗಳು ಮತ್ತಷ್ಟುಹೆಚ್ಚಿಸಿವೆ. ಇಂಥ ಅಸಾಧಾರಣ ಸನ್ನಿವೇಶವು ಕೆಲವೇ ವರ್ಷಗಳ ಹಿಂದೆ ಎದುರಾಗಿದ್ದರೆ, ಬಹುಶಃ ಅದನ್ನು ಜನರ ಮೇಲೆ ಎರಗಿರುವ ರಾಷ್ಟ್ರೀಯ ವಿಪತ್ತೆಂದು ಪರಿಗಣಿಸಿ ಆಳುವ ಸರ್ಕಾರ ಮತ್ತು ವಿಪಕ್ಷಗಳ ನೇತಾರರು ಒಂದಿಷ್ಟಾದರೂ ಪರಿಹಾರ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು. ಈಗ ಇವರೆಲ್ಲರೂ ಪಕ್ಷಭೇದವಿಲ್ಲದೆ ಪರಸ್ಪರ ದೂಷಣೆಗಳ ಕೆಸರಾಟದಲ್ಲಿ, ಮತ್ತು ತಮ್ಮನ್ನು, ತಮ್ಮ ಆಡಳಿತವನ್ನು ತಾವೇ ಹೊಗಳಿಕೊಂಡು ಮೈಮರೆಯುವ ಉತ್ಸವ, ಆಚರಣೆಗಳಲ್ಲಿ ಮುಳುಗಿದ್ದಾರೆ.

ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಮುಂದಿನ ೨೫ ವರ್ಷಗಳಲ್ಲಿ ಭಾರತ ಹೇಗಿರುತ್ತದೆ ಇತ್ಯಾದಿ ಚಿತ್ರಗಳನ್ನು ವರ್ಣಿಸುವ ಕೆಲಸವನ್ನು ನಮ್ಮ ಪ್ರಧಾನ ಮಂತ್ರಿಗಳು ಮಾಡುತ್ತಿದ್ದಾರೆ. ಇಂಥ ದಾರುಣ ಪರಿಸ್ಥಿತಿಯಲ್ಲಿ ಭಾರತದ ೭೫ನೇ ಸ್ವತಂತ್ರ್ಯದ ದಿನಾಚರಣೆಯನ್ನು ಅಮೃತ ಮಹೋತ್ಸವವಾಗಿ ಆಚರಿಸಬೇಕೆಂದು ಅಧಿಕೃತವಾಗಿ ತೀರ್ಮಾನಿಸಲಾಗಿದೆ. ಇದರ ಅಂಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಬೇಕೆಂದು ಮಾನ್ಯ ಪ್ರಧಾನ ಮಂತ್ರಿಗಳು ದೇಶದ ಜನರಿಗೆ ಕರೆಕೊಟ್ಟಿದ್ದಾರೆ. ಅಧಿಕಾರಿಗಳು ಈಗಾಗಲೇ ಈ ಬಾವುಟ ಹಾರಿಸುವ ಅಭಿಯಾನದ ತಯಾರಿಯಲ್ಲಿ ತೊಡಗಿದ್ದಾರೆ. ಸುದ್ದಿ ವಾಹಿನಿಗಳಂತೂ ಅತಿವೃಷ್ಟಿ, ಪ್ರವಾಹಗಳು ಮಾಡುತ್ತಿರುವ ಅನಾಹುತಗಳಿಗೆ ಸಿಕ್ಕಿರುವ ನತದೃಷ್ಟ ನಾಗರಿಕರ ಕಷ್ಟಗಳನ್ನು ರೋಮಾಂಚಕಾರಿಯಾದ ಮನರಂಜನೆ ಎಂಬಂತೆ ತಮ್ಮ ಜಾಹೀರಾತುಗಳ ನಡುವೆ ಪೋಣಿಸಿ ಮತ್ತೆ ಮತ್ತೆ ಪ್ರಸಾರ ಮಾಡುತ್ತಿವೆ. ಯಾವುದೇ ಪರಿಹಾರ ಕಾರ್ಯಗಳ ವರದಿ ತಮಗೇ ಸಂಬಂಧಿಸಿದ್ದಲ್ಲ ಎಂಬಂತೆ ವರ್ತಿಸುತ್ತಿವೆ.

ಈ ಹೊತ್ತಿನಲ್ಲಿ ಮಧ್ಯಮ ವರ್ಗದ ಜನರು ವಿವೇಕಶೂನ್ಯರಾಗಿ ಮಾಡುವ ಹಬ್ಬ, ಉತ್ಸವ ಸಂಭ್ರಮಾಚರಣೆಗಳು ಮಾತ್ರವಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು ಮಾಡುವ ಪ್ರತಿಭಟನೆ, ವಿರೋಧಗಳೂ ಅರ್ಥ ಕಳೆದುಕೊಂಡು ಶುಷ್ಕ ಆಚರಣೆಗಳಾಗಿಬಿಟ್ಟಿವೆ. ಇಷ್ಟಾದರೂ, ನಾವು ಮಾಡಬಹುದಾದದ್ದು ಏನಾದರೂ ಇದೆಯೇ? ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಉತ್ತರವಾಗಿ ನನ್ನದೊಂದು ಸಲಹೆ. ಇದು ಸದ್ಯ ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರವಲ್ಲ. ಜನರ ಅತೀವ ಕಷ್ಟಗಳ ನಡುವೆಯೇ ಸಂವೇದನಾರಹಿತವಾಗಿ ಮನೆ ಮನೆ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಆಚರಿಸಲು ಹೊರಟಿರುವ ಅಮೃತ ಮಹೋತ್ಸವದ ಅರ್ಥರಾಹಿತ್ಯವನ್ನು ಕೊಂಚಮಟ್ಟಿಗಾದರೂ ಮಾರ್ಪಡಿಸಿ ಅಮೃತಹೋತ್ಸವಕ್ಕೆ ನಿಜವಾದ ಅರ್ಥವನ್ನು ತಂದುಕೊಡುವ ಪ್ರಯತ್ನ ಆಗಬೇಕು.

ಅದೇನೆಂದರೆ, ಇಂದಿನ ಮಾನವ ನಿರ್ಮಿತ ಕಷ್ಟಗಳು ಮತ್ತು ಪ್ರಕೃತಿ ವಿಕೋಪದ ಫಲವಾಗಿ ನಮ್ಮನ್ನು ಕಾಡುತ್ತಿರುವ ಸಮಸ್ಯೆಗಳ ಈ ಸಂದರ್ಭದಲ್ಲಿ ಈ ಸಲದ ಸ್ವಾತಂತ್ರ್ಯ ದಿನಾಚರಣೆಯನ್ನು, ಮನೆ ಮನೆಯಲ್ಲಿ ಬಾವುಟ ಹಾರಿಸಿ ಆಚರಿಸುವ ಬದಲು ಶಿವರಾತ್ರಿ ಹಬ್ಬದಲ್ಲಿ ಮಾಡುವಂತೆ ಉಪವಾಸ, ಜಾಗರಣೆ, ಗಾಯನ ಮುಂತಾದ ಸಾಂಸ್ಕ ೃತಿಕ ಕಾರ್ಯಕ್ರಮಗಳ ಮೂಲಕ ರಾಷ್ಟೀಯ ಜಾಗೃತಿ ಮತ್ತು ದೇಶಪ್ರೇಮದ ದಿನವನ್ನಾಗಿ ಆಚರಿಸುವುದು. ಇದು ಎಲ್ಲಾ ದೃಷ್ಟಿಯಿಂದಲೂ ಸದ್ಯದ ಸಂದರ್ಭಕ್ಕೆ ಹೊಂದಿಕೊಳ್ಳುವಂಥ, ಲಗತ್ತಾದ ಆಚರಣೆಯಾಗುತ್ತದೆ. ಇದು ಪ್ರತಿಭಟನೆಯಲ್ಲ ಅಥವಾ ಯಾವುದೇ ವ್ಯಕ್ತಿ, ಪಕ್ಷ, ಇತ್ಯಾದಿ ಯಾರ ವಿರುದ್ಧವೂ ಅಲ್ಲವಾದ್ದರಿಂದ, ಇದೊಂದು ವಿನೂತನ ಬಗೆಯ ಸ್ವಾತಂತ್ರತ್ಯೋತ್ಸವದ ವಿಶಿಷ್ಟ ಆಚರಣೆ ಆಗುತ್ತದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಜನರ ಸಂಘಟನೆಗಾಗಿ ಗಣೇಶನನ್ನು ಬಳಸಿಕೊಂಡಂತೆ, ಈಗಿರುವ ಕಷ್ಟಗಳ ನಡುವೆೆುೀಂ ದೇಶದ ನಾಗರಿಕರ ದೇಶಪ್ರೇಮವನ್ನು ಗಟ್ಟಿಗೊಳಿಸಲು ಸ್ವಾತತ್ರ್ಯದ ಅಮೃತ ಮಹೋತ್ಸವದ ಈ ವಿಶೇಷ ಕಾರ್ಯಕ್ರಮವನ್ನು, ಶಿವ ಹುಟ್ಟಿದ ದಿನವೆಂದು ಜನಸಾಮಾನ್ಯರು ನಂಬುವ ಶಿವರಾತ್ರಿಯ ಆಚರಣಾ ವಿಧಾನವನ್ನು, ಮಾದರಿಯಾಗಿಟ್ಟುಕೊಂಡು ಅಂದರೆ, ಜಾಗರಣೆ, ಉಪವಾಸಗಳನ್ನು ಮಾಡುವುದು ಅತ್ಯಂತ ಸೂಕ್ತವಾದ ಆಚರಣೆ ಆಗುತ್ತದೆ. ಹೇಗಿದ್ದರೂ ಭಾರತದ ಲಕ್ಷಾಂತರ ಕೃಷಿಕರ, ಬಡವರ, ದೀನ- ದಲಿತರ ದೇವರು ಶಿವ. ಕಾಯಕದ ಮಹತ್ವವನ್ನು ೧೨ನೇ ಶತಮಾನದಲ್ಲೇ ಜಗತ್ತಿಗೆ ಸಾರಿ ಹೇಳಿದ ಬಸವಾದಿ ಪ್ರಮಥರ ಮತ್ತು ಶಿವ ಶರಣ-ಶರಣೆಯರ ಆರಾಧ್ಯ ಶಿವನೇ ಆಗಿದ್ದಾನೆ. ಆದ್ದರಿಂದ, ಅಮೃತ ಮಹೋತ್ಸವದ ಆಚರಣೆಯ ಅರ್ಥಪೂರ್ಣತೆಗೆ ಇದರಿಂದ ಯಾವ ರೀತಿಯಲ್ಲೂ ಕುಂದು ಬರುವುದಿಲ್ಲ. ಬದಲು ಶಿವರಾತ್ರಿಯ ಆಚರಣೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗಳ ಅರ್ಥಪೂರ್ಣತೆಗಳು ವಿಶಿಷ್ಟ ರೀತಿಯಲ್ಲಿ ಮೇಳೈಸುತ್ತವೆ.

 

 

 

 

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

8 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

8 hours ago