ಎಡಿಟೋರಿಯಲ್

ಅಖಿಲ ಭಾರತ ಕೌಟುಂಬಿಕ ಆದಾಯ ಸಮೀಕ್ಷೆ

ಪ್ರೊ. ಆರ್. ಎಂ. ಚಿಂತಾಮಣಿ

ಕೇಂದ್ರ ಸರ್ಕಾರದ ಅಂಕಿ ಸಂಖ್ಯಾ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯವು ತನ್ನ ಪ್ರಕಟಣೆಯೊಂದರಲ್ಲಿ ಬರುವ ವರ್ಷದಲ್ಲಿ ರಾಷ್ಟ್ರಮಟ್ಟದ ಕೌಟುಂಬಿಕ ಆದಾಯ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದೆ. ಈ ಸಮೀಕ್ಷೆಯಿಂದ ದೇಶದಲ್ಲಿಯ ಕುಟುಂಬಗಳ ಆದಾಯಗಳಲ್ಲಿಯ ಬದಲಾವಣೆ ಗಳು, ಆದಾಯಗಳಲ್ಲಿಯ ಅಂತರ ಅಥವಾ ಅಸಮಾನತೆಯ ಅತಿಯಾದ ಹೆಚ್ಚಳ ಮತ್ತು ಕಡಿಮೆ ಹೆಚ್ಚಳ ಮುಂತಾದವುಗಳನ್ನು ತಿಳಿದುಕೊಂಡು ಮತ್ತು ಕಾರಣಗಳನ್ನು ಹುಡುಕಿ ಸರ್ಕಾರ ಸೂಕ್ತ ಆರ್ಥಿಕ ನೀತಿಗಳನ್ನು ರೂಪಿಸಲು ಅನುಕೂಲವಾಗುವುದು ಎಂದು ಹೇಳಲಾಗಿದೆ. ಇದೊಂದು ಸಾಮಾಜಿಕ, ಆರ್ಥಿಕ ಪ್ರಕ್ರಿಯೆಯಾಗಿದೆ ಎಂದೂ ಸರ್ಕಾರ ಹೇಳಿಕೊಂಡಿದೆ. ಸಮೀಕ್ಷೆಗಳು ಸಣ್ಣ ಪ್ರಮಾಣದ ಗಣತಿಗಳಿದ್ದಂತೆ. ಗಣತಿಗಳಲ್ಲಿ ದೇಶದ ಎಲ್ಲ ಕುಟುಂಬಗಳ ಸಮಗ್ರ ಮಾಹಿತಿಗಳನ್ನೂ ಸಂಗ್ರಹಿಸಲಾಗುವುದು. ಅದರ ಉದ್ದೇಶಗಳು ವ್ಯಾಪಕವಾಗಿದ್ದು, ದೀರ್ಘ ಕಾಲ ಉಪಯೋಗಿಸುವಂಥವುಗಳಾಗಿರುತ್ತವೆ. ಆದರೆ ಸಮೀಕ್ಷೆಗಳು ಸಣ್ಣ ಪ್ರಮಾಣದಲ್ಲಿದ್ದು, ಆಯ್ದ ಕೆಲವು ಪ್ರಾತಿನಿಧಿಕ ಕುಟುಂಬಗಳಿಂದ ನಿರ್ದಿಷ್ಟ ಉದ್ದೇಶಗಳಿಗೆ ಸಂಬಂಧಪಟ್ಟಂತೆ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ವಿಧಾನ ಮಾತ್ರ ಎರಡರಲ್ಲಿಯೂ ಒಂದೇ ಆಗಿರುತ್ತದೆ. ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆಯಲಾಗುತ್ತದೆ. ಆದರೆ ಉತ್ತರ ಕೊಟ್ಟವರ ಮತ್ತು ಕುಟುಂಬಗಳ ಹೆಸರು ಮತ್ತು ವಿಳಾಸಗಳನ್ನು ಗೌಪ್ಯವಾಗಿಡಲಾಗುತ್ತದೆ.

ಸಮೀಕ್ಷೆಗಳ ಗಾತ್ರ ಮತ್ತು ವಿಧಾನಗಳು : ಉದ್ದೇಶಗಳು ಮತ್ತು ವ್ಯಾಪ್ತಿಗಳಿಗೆ ಅನುಸಾರವಾಗಿ ಸಮೀಕ್ಷೆಗಳ ಗಾತ್ರಗಳು ನಿರ್ಧಾರವಾಗುತ್ತವೆ. ಉದ್ದೇಶಗಳು ದೊಡ್ಡದಾಗಿದ್ದು ವ್ಯಾಪ್ತಿಯೂ ಹೆಚ್ಚಾಗಿದ್ದರೆ ಸಮೀಕ್ಷೆಗಳ ಗಾತ್ರವೂ ದೊಡ್ಡದಾಗಿರುತ್ತದೆ. ಪ್ರಾತಿನನೀಕವಾಗಿ ಉತ್ತರ ಕೊಡಬೇಕಾದವರ ಸಂಖ್ಯೆಯೂ ದೊಡ್ಡದಾಗಿದ್ದು, ಪ್ರಶ್ನಾವಳಿಗಳೂ ವ್ಯಾಪಕವಾಗಿರುತ್ತವೆ. ಸಂಖ್ಯೆಯೂ ದೊಡ್ಡದಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆದ ಸಿಬ್ಬಂದಿ ಬೇಕಾಗಿದ್ದು, ಹೆಚ್ಚು ಸಮಯ ಬೇಕಾಗುತ್ತದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಥ ಸಮೀಕ್ಷೆಗಳು ನಡೆಯುತ್ತವೆ. ವೆಚ್ಚಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ಸಮೀಕ್ಷೆ ನಡೆಸುವ ಸರ್ಕಾರಗಳು ಅಥವಾ ಸಂಸ್ಥೆಗಳು ವೆಚ್ಚಗಳನ್ನು ನಿಭಾಯಿಸುತ್ತವೆ.

ಸಮೀಕ್ಷೆಗಳು ವಾಸ್ತವಕ್ಕೆ ಸಮೀಪದಲ್ಲಿದ್ದು, ನೈಜ ಚಿತ್ರಣವನ್ನು ಬಿಂಬಿಸಬೇಕು. ಆಗ ಮಾತ್ರ ಸರ್ಕಾರಗಳಿಗೆ ಸೂಕ್ತ ಆರ್ಥಿಕ, ಸಾಮಾಜಿಕ ನೀತಿಗಳನ್ನು ರೂಪಿಸಲು ಸಹಾಯಕವಾಗುತ್ತವೆ. ಪ್ರಾತಿನಿಧಿಕ ಕುಟುಂಬಗಳ (ಉತ್ತರಿಸುವ) ಸೂಕ್ತ ಆಯ್ಕೆ ಮಹತ್ವ ಪಡೆಯುತ್ತದೆ. ಇವುಗಳ ಸಂಖ್ಯೆಯೂ ಸಮರ್ಪಕವಾಗಿರಬೇಕು.

ಪ್ರಶ್ನೆಗಳು ನೇರ ಮತ್ತು ಸಂಕ್ಷಿಪ್ತ ಉತ್ತರ (ಹೌದು, ಇಲ್ಲ/ಅಲ್ಲ, ಸಂಖ್ಯೆ, ಒಂದೋ ಎರಡೋ ಶಬ್ದ ಹೀಗೆ ) ಬರುವಂತೆ ಇರಬೇಕು. ಅನವಶ್ಯಕ ಪ್ರಶ್ನೆಗಳಿರಬಾರದು. ಉತ್ತರ ಕೊಡುವವರ ಭಾವನೆಗಳಿಗೆ ಧಕ್ಕೆಯಾಗುವಂತಿರಬಾರದು. ಪ್ರಶ್ನೆಗಳ ಸಂಖ್ಯೆ ಅತಿಯಾಗಿರಬಾರದು. ಉತ್ತರ ಕೊಡುವವರ ತಾಳ್ಮೆಯನ್ನು ಪರೀಕ್ಷಿಸುವಂತಿರಬಾರದು. ಮುಖ್ಯ ಉದ್ದೇಶದ ಸುತ್ತಲೇ ಎಲ್ಲ ಪ್ರಶ್ನೆಗಳೂ ಇರಬೇಕಾದದ್ದು ಅತ್ಯವಶ್ಯಕ.

ಸಮೀಕ್ಷಕರು ಅಥವಾ ಮಾಹಿತಿ ಸಂಗ್ರಹಕಾರರು ತಾಳ್ಮೆಯುಳ್ಳವರಾಗಿರಬೇಕು. ಇದಕ್ಕಾಗಿ ಸೂಕ್ತ ತರಬೇತಿ ಹೊಂದಿರಬೇಕು. ಸಂಗ್ರಹಿಸಿದ ಮಾಹಿತಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಹೀಗೆ ಗೌಪ್ಯತೆ ಕಾಪಾಡಿಕೊಳ್ಳುವ ಬಗ್ಗೆ ಉತ್ತರ ಕೊಡುವವರಿಗೆ ಖಚಿತಪಡಿಸಬೇಕು. ಅನವಶ್ಯಕ ಪ್ರಶ್ನೆಗಳನ್ನು ಕೇಳಬಾರದು. ಚರ್ಚೆಗಿಳಿಯಬಾರದು. ಪ್ರಶ್ನೆಗಳನ್ನು ಕೇಳುವಾಗ ಉತ್ತರ ಕೊಡುವವರಿಗೆ ಇರುಸುಮುರುಸಾಗುವಂತೆ ನಡೆದುಕೊಳ್ಳಬಾರದು. ಅವರು ಹೇಳಿದ್ದನ್ನು ಮಾತ್ರ ದಾಖಲಿಸಿಕೊಳ್ಳಬೇಕು. ಸಮಯ ಪಾಲನೆ ಮಾಡಬೇಕು. ದಾಖಲೆಗಳನ್ನು ಸುರಕ್ಷಿತವಾಗಿ, ಸುಸ್ಥಿತಿಯಲ್ಲಿ ಇಟ್ಟು ಸೂಕ್ತ ಅಧಿಕಾರಿಗಳಿಗೆ ಸಲ್ಲಿಸಬೇಕು.

ಉತ್ತರ ಕೊಡುವವರ ಜವಾಬ್ದಾರಿಗಳೂ ಇರುತ್ತವೆ. ಸಂಬಂಧಪಟ್ಟ ಸೂಕ್ತ ವ್ಯಕ್ತಿ ಮಾತ್ರ ಉತ್ತರಿಸಬೇಕು ಮತ್ತು ಸರಿಯಾಗಿ ದಾಖಲಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು ಅವುಗಳನ್ನು ಋಜುವಾತುಪಡಿಸಬೇಕು. ಪ್ರಶ್ನೆಗಳಿಗೆ ನೇರವಾಗಿ, ಸಂಕ್ಷಿಪ್ತವಾಗಿ ಇದ್ದದ್ದು ಇದ್ದಂತೆ ಉತ್ತರಿಸಬೇಕು. ಏನನ್ನೂ ಮರೆಮಾಚಬಾರದು. ಹೆಚ್ಚಿನದನ್ನು ಸೇರಿಸಬಾರದು. ಸುಳ್ಳು ಹೇಳಬಾರದು. ಸಮೀಕ್ಷೆಗೆ ಸಹಕರಿಸಬೇಕು. ಸಂಬಂಧಪಟ್ಟ ಎಲ್ಲರೂ ವೃತ್ತಿಪರರಾಗಿದ್ದು, ನಿಷ್ಠೆಯಿಂದ ಕಾರ್ಯ ನಿರ್ವಹಿಸುವತ್ತ ಸಹಕರಿಸಿದಾಗ ಮಾತ್ರ ಸಮೀಕ್ಷೆಗಳು ಅರ್ಥಪೂರ್ಣ ವಾಗುತ್ತವೆ. ಯಶಸ್ವಿಯಾಗುತ್ತವೆ.

ಸಮೀಕ್ಷೆಯ ಮಾಹಿತಿ, ದಾಖಲೆಗಳನ್ನು ಕೇಂದ್ರ ಸ್ಥಳದಲ್ಲಿ ಸಂಗ್ರಹಿಸಿ , ಸಂಸ್ಕರಿಸಿ, ಸಂಖ್ಯಾಶಾಸ ಸೂತ್ರಗಳನ್ನು ಬಳಸಿ ಪರಿಣಾಮಗಳನ್ನು ಕಂಡು ಹಿಡಿಯಬೇಕಾಗುತ್ತದೆ. ಅವುಗಳ ಆಧಾರದ ಮೇಲೆ ಮುಂದಿನ ನೀತಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಇದು ಸಾಧ್ಯವಾಗುವುದಾದರೆ ಆಗ ಸಮೀಕ್ಷೆಯ ಪೂರ್ಣ ಉಪಯೋಗವಾದಂತಾಗುತ್ತದೆ. ಹೀಗಾಗದಿದ್ದರೆ ಸಮೀಕ್ಷೆಗಳಿಗೆ ಅರ್ಥವೇ ಇರುವುದಿಲ್ಲ.

ಹಿಂದಿನ ಸಮೀಕ್ಷೆಗಳ ಕಥೆ, ಹೊಸ ಸಮೀಕ್ಷೆ : ಈಗ ಸರ್ಕಾರ ಪ್ರಕಟಿಸಿರುವ ಸಮೀಕ್ಷೆಗಳೇನೂ ಹೊಸದಲ್ಲ. ವರದಿಗಳ ಪ್ರಕಾರ ೧೯೫೫ರಿಂದ ಹಲವು ಸಮೀಕ್ಷೆಗಳು ನಡೆದಿವೆ. ಆದರೆ ಕೆಲವು ನೆಲ ಬಿಟ್ಟು ಮೇಲೇಳಲೇ ಇಲ್ಲ. ಕೆಲವು ಮಾತ್ರ ಪೂರ್ಣಗೊಂಡು ಸರ್ಕಾರಕ್ಕೆ ಉಪಯುಕ್ತ ವರದಿಗಳಾಗಿರುವ ವರದಿಗಳಿವೆ. ಇನ್ನು ಕೆಲವು ಸಮೀಕ್ಷೆಗಳಲ್ಲೇ ದೋಷಗಳಿದ್ದು, ಸರ್ಕಾರ ಅವುಗಳನ್ನು ತಿರಸ್ಕರಿಸಿರುವುದೂ ಉಂಟು. ಅಂಥವುಗಳಲ್ಲಿ ಒಂದನ್ನು ಇಲ್ಲಿ ಉದಾಹರಿಸಬಹುದು. ೧೯೬೪-೭೦ರ ಅವಧಿಯಲ್ಲಿ ಎರಡು ಕೌಟುಂಬಿಕ ಸ್ವೀಕೃತಿ ಮತ್ತು ವೆಚ್ಚಗಳ ಸಮೀಕ್ಷೆಗಳು ನಡೆದಿದ್ದವು. ಆದರೆ ಕುಟುಂಬಗಳ ವೆಚ್ಚಗಳು ಮತ್ತು ಉಳಿತಾಯಗಳ ಮೊತ್ತಗಳೇ ಸ್ವೀಕೃತಿಗಳಿಗಿಂತ ಹೆಚ್ಚಾಗಿರುವುದನ್ನು ಸಮೀಕ್ಷೆ ವರದಿಗಳಲ್ಲಿ ತೋರಿಸಿರುವುದರಿಂದ ಅವುಗಳನ್ನು ಸರ್ಕಾರ ತಿರಸ್ಕರಿಸಿತ್ತು. (ಬಿಸಿನೆಸ್ ಸ್ಟ್ಯಾಂಡರ್ಡ್ ದೈನಿಕದ ಸಂಪಾದಕೀಯ, ೨೭-೦೬-೨೦೨೫ )

ಈಗ ಹೊಸ ಸಮೀಕ್ಷೆಯ ಬಗ್ಗೆ ಪ್ರಕಟಿಸಲಾಗಿದೆ. ಇದರಲ್ಲಿ ದೇಶದಲ್ಲಿಯ ವಿವಿಧ ವರ್ಗಗಳ ಕೌಟುಂಬಿಕ ಆದಾಯಗಳ ಮಾಹಿತಿ ಸಂಗ್ರಹ ಮತ್ತು ಅಧ್ಯಯನವಲ್ಲದೆ ಗ್ರಾಮೀಣ ಮತ್ತು ನಗರಗಳಲ್ಲಿಯ ಕುಟುಂಬಗಳಲ್ಲಿಯ ಆದಾಯಗಳ ಅಂತರ ಮತ್ತು ಅದಕ್ಕೆ ಕಾರಣಗಳನ್ನೂ ಅಧ್ಯಯನ ಮಾಡಲಾಗುವುದು ಎಂದು ಹೇಳಲಾಗಿದೆ.

ಈ ಪ್ರಕಟಣೆಗೆ ಕಾಕತಾಳಿಯವೆಂಬಂತೆ ಇತ್ತೀಚೆಗೆ ಪ್ಯಾರಿಸ್‌ನಲ್ಲಿರುವ ಅರ್ಥಶಾಸಜ್ಞ ಥಾಮಸ್ ಪೆಕೆಟಿ ನೇತೃತ್ವದ ‘ವರ್ಲ್ಡ್ ಇನ್ ಇಕ್ವಾಲಿಟಿ ಲ್ಯಾಬ್’ ಒಂದು ವರದಿಯಲ್ಲಿ ಭಾರತದಲ್ಲಿ ೧೯೪೭ರಿಂದ ೧೯೮೦ರವರೆಗೆ ಆರ್ಥಿಕ ಅಸಮಾನತೆ ಕಡಿಮೆಯಾಗುತ್ತಾ ಹೋಗಿತ್ತು. ಆದರೆ ನಂತರ ಅಸಮಾನತೆ ಹೆಚ್ಚುತ್ತ ಹೋಗಿ ೨೦೨೨-೨೩ರ ಹೊತ್ತಿಗೆ ಭಾರತದ ಮೇಲಿನ ಶೇ. ೧೦ ಜನರು ರಾಷ್ಟ್ರೀಯ ಆದಾಯದ ಶೇ. ೬೦ರಷ್ಟು ಭಾಗವನ್ನು ಕಬಳಿಸುತ್ತಿದ್ದಾರೆ. ಮತ್ತು ಕೆಳಗಿನ ಶೇ. ೫೦ರಷ್ಟು ಜನರು ಕೇವಲ ಶೇ. ೧೫ರಷ್ಟನ್ನು ಮಾತ್ರ ಪಡೆಯುತ್ತಿದ್ದಾರೆ ಎಂದು ಹೇಳಿತ್ತು. ಇದರ ನೈಜತೆಯನ್ನು ಅರಿಯಲು ಮತ್ತು ಸರಿಪಡಿಸಲು ಸರ್ಕಾರ ಈ ಸಮೀಕ್ಷೆ ನಡೆಸಲಿದೆಯೇ?

ಆಂದೋಲನ ಡೆಸ್ಕ್

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

11 hours ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

11 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

12 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

12 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

13 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

13 hours ago