ನೋಡನೋಡುತ್ತಿದ್ದಂತೆ, ನಮ್ಮೂರಿನಲ್ಲಿ ಜನ ಸಿರಿವಂತರಾದರು. ಮಸೀದಿ ಬಂದಿತು. ನಮಾಜು ಸಂಸ್ಕೃತಿ ನೆಲೆನಿಂತಿತು. ಮೊಹರಂ ಮತ್ತು ಸೂಫಿಸಂತರ ಆಚರಣೆಗಳು ಬತ್ತಿಹೋದವು. ಮೊಹರಂ ಕಲಾವಿದರು ಹಾಗೂ ಸೂಫಿ ಸಂತರನ್ನು ಮೈಮೇಲೆ ಆವಾಹನೆ ಮಾಡಿಕೊಳ್ಳುತ್ತಿದ್ದವರೂ ಒಬ್ಬೊಬ್ಬರಾಗಿ ಲೋಕಕ್ಕೆ ಅಲಬಿದಾ ಹೇಳಿದರು. ಈಗ ಬಂದಿರುವ ಹೊಸತಲೆಮಾರಿಗೆ ಈ ಯಾವುದರ ನೆನಪುಗಳೂ ಇಲ್ಲ. ಈ ನೆನಪುಗಳಿರುವ ನನ್ನ ತಲೆಮಾರಿನ ಕೆಲವರು ‘ಹೌದು, ಅಜ್ಞಾನವಿದ್ದ ಕಾಲದಲ್ಲಿ ಇದನ್ನೆಲ್ಲ ಮಾಡಿದೆವು’ ಎಂಬ ಲಜ್ಜೆಯೊಂದಿಗೆ ನೆನಪಿಸಿಕೊಳ್ಳುವರು. ಇದು ಅಜ್ಞಾನವೇ? ನನ್ನ ಪಾಲಿಗೆ ಮಾತ್ರ ಇದು ಕಳೆದುಹೋದ ಮಧುರ ಲೋಕವಾಗಿ ಉಳಿದಿದೆ.
ನನ್ನ ಹುಟ್ಟೂರು ಸಮತಳದಲ್ಲಿ ನನ್ನ ಬಾಲ್ಯಕಾಲದಲ್ಲಿ, ಮಸೀದಿಯ ನಮಾಜು ಸಂಸ್ಕೃತಿಗಿಂತ ಮೊಹರಂ ಮತ್ತು ಸೂಫಿ ಸಂಸ್ಕೃತಿಗಳು ಹೆಚ್ಚು ಜನಪ್ರಿಯವಾಗಿದ್ದವು. ಮೊದಲನೆಯದು ಅಮೂರ್ತ ದೈವಕ್ಕೆ ಶರಣಾಗುವ ಭಯಭಕ್ತಿಯ ಸ್ತರ; ಪ್ರಾರ್ಥನೆ ದಾನ ಅಲ್ಲಿ ಮುಖ್ಯ. ಆದರೆ ಕೊನೆಯವೆರಡು ಚರಿತ್ರೆಯಲ್ಲಿ ಆಗಿಹೋದವರ ಸ್ಮೃತಿಯಲ್ಲಿ ನಡೆಯುವ ಭಕ್ತಿ ಮತ್ತು ಸಂಭ್ರಮ ಮಿಶ್ರಿತ ಸ್ತರಗಳು. ಇವು ನಮಾಜು ಸಂಸ್ಕೃತಿಗಿಂತ ಮುಸ್ಲಿಮೇತರರನ್ನೂ ಹೆಚ್ಚಾಗಿ ಒಳಗೊಳ್ಳುತ್ತಿದ್ದ ಕಾರಣ, ಸಹಜವಾಗಿ ಸ್ಥಳೀಕರಣಗೊಂಡಿದ್ದವು; ಕಾವ್ಯ ಹಾಡು ಕುಣಿತಗಳಂತಹ ಸೃಜನಶೀಲ ಕಲೆಗಳಿಂದ ಅಲಂಕೃತಗೊಂಡಿದ್ದವು.
ಮೊಹರಮ್ಮಿನ ಹತ್ತೂ ದಿವಸ ಹುಡುಗರಾದ ನಾವೆಲ್ಲ ಅಲಾವಿಯ ಸುತ್ತಮುತ್ತಲೇ ಕಾಲ ಕಳೆಯುತ್ತಿದ್ದೆವು. ಬೆಂಕಿಗೆ ಕೊಂಡ ಅಗೆಯುವುದರಿಂದ ಇದು ಶುರುವಾಗುತ್ತಿತ್ತು. ಎಂಟೂ ದಿನ ಕೊಂಡಕ್ಕೆ ಕಟ್ಟಿಗೆ ಒಟ್ಟುವ, ಸೋಗಿನ ರಿಹರ್ಸಲ್ ಮಾಡುವ ಬಗೆಬಗೆಯ ಕೆಲಸಗಳು. ಮೊಹರಂ ಕಳೆಗಟ್ಟುತ್ತಿದ್ದುದುದು ಒಂಬತ್ತನೇ ದಿನ. ಖತಲರಾತ್ರಿಯ ದಿನವದು. ಆಗ ಸವಾರಿಯನ್ನು ಹಿಡಿದವರು ಕೆಂಡದಲ್ಲಿ ಹಾಯುತ್ತಿದ್ದರು. ಆಗ ಗಾಳಿಹಿಡಿದಿದೆ ಎನ್ನಲಾದ ಕೆಲವು ಮಹಿಳೆಯರು ಸೆರಗನ್ನು ಹೊದ್ದು ಅಲಾವಿಯ ಬಳಿ ಕೂರುತ್ತಿದ್ದುದುಂಟು. ಅವರ ತಲೆಯ ಮೇಲೆ ಕೆಂಡತುಂಬಿದ ಜರಡಿ ಹಿಡಿದು ಮೇಲಿನಿಂದ ಕೊಡದಲ್ಲಿ ಕೆಂಡವನ್ನು ನೀರು ಸುರಿಯಲಾಗುತ್ತಿತ್ತು. ಸುಂಯ್ಯೆಂದು ಮೇಲೇಳುವ ಆವಿಯನ್ನು ಗಾಳಿ ತೊಲಗಿ ಹೋಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಖತಲ ರಾತ್ರಿಯಂದು ಊರ ಹೆಂಗಸರೆಲ್ಲ ಅಲಾವಿಯ ಸುತ್ತಲಿನ ಮನೆಗಳ ಜಗುಲಿಯಲ್ಲಿ ಅಣಿನೆರೆಯುತ್ತಿದ್ದರು. ಆಗ ತರುಣರು ವಾರದಿಂದ ಅಭ್ಯಾಸ ಮಾಡಿದ ನಾನಾ ಸೋಗುಗಳನ್ನು ಧರಿಸಿ ಬಂದು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ತಮಗೆ ಬೇಕಾದ ಜೀವಗಳನ್ನು ಮೆಚ್ಚಿಸುವುದೂ ಅವರ ಇನ್ನೊಂದು ಉದ್ದೇಶವಿರುತ್ತಿತ್ತು. ಒಮ್ಮೆ ಕೋಡಂಗಿ ಪಾತ್ರ ಧರಿಸುತ್ತಿದ್ದ ನಮ್ಮ ದಾಯಾದಿ ಚಿಕ್ಕಪ್ಪನೊಬ್ಬ, ಕತ್ತಲಲ್ಲಿ ಕಾಣದೆ ಜಗುಲಿಯಲ್ಲಿ ಕುಳಿತಿದ್ದ ಹೆಂಗಸರ ಮುಂದೆ ಅಡಿಕೆಹಾಳೆಯನ್ನು ಮುಂದೊಡ್ಡುತ್ತ ಹೋಗಿ, ತನ್ನ ಅತ್ತೆಯ ಮುಂದೆ ಬಾಗಿನಿಂತು ಪೀಡಿಸಲು, ಆಕೆ ನಾಚಿಕೆಯಿಂದ ಸತ್ತುಹೋಗಿದ್ದಳು. ಬೆಂಕಿಕೊಂಡದ ಎದುರಿನ ಮನೆಯವರು, ದೊಡ್ಡದೊಡ್ಡ ಗುಡಾಣಗಳಲ್ಲಿ, ಬೆಲ್ಲ, ಕಾಮಕಸ್ತೂರಿಯ ಎಲೆ, ಗುಲಾಬಿಪಕಳೆ, ಏಲಕ್ಕಿ ಹಾಕಿ ಮಾಡಿದ ಶರಬತ್ತನ್ನು ಬಂದವರಿಗೆಲ್ಲ ಹಂಚುತ್ತಿದ್ದರು.
ಕೊನೆಯ ದಿನದ ಸಂಜೆ ಮೊಹರಂ ದೇವರ ವಿಸರ್ಜನೆ. ಕರ್ಬಲಾ ಯುದ್ಧದ ಹುತಾತ್ಮರಾದವರ ಹೆಸರಲ್ಲಿರುವ ಬೆಳ್ಳಿಯ ಹಸ್ತಗಳನ್ನು ಹಾಗೂ ಶವಪೆಟ್ಟಿಗೆ ಪ್ರತಿರೂಪವಾದ ತಾಬೂತನ್ನು ಚೆನ್ನಾಗಿ ಸಿಂಗರಿಸುತ್ತಿದ್ದರು. ಈ ಅಲಂಕೃತ ಶವದಾನಿಯನ್ನು ಹಿರಿಯರು ಹೊತ್ತರೆ, ನಾವು ಹುಡುಗರು ಹುತಾತ್ಮರ ಸಂಕೇತಗಳನ್ನು, ಕವಾಯತು ಮಾಡುವಾಗ ಸೈನಿಕರು ಕೋವಿ ಹಿಡಿಯುವಂತೆ ಹಿಡಿದಿರುತ್ತಿದ್ದೆವು. ನಮ್ಮನ್ನು ಕುದುರೆಗಳೆಂದೂ ಹುತಾತ್ಮರ ಸಂಕೇತಗಳನ್ನು ಸವಾರಿಗಳೆಂದೂ ಕರೆಯಲಾಗುತ್ತಿತ್ತು. ವಿಸರ್ಜನ ಮೆರವಣಿಗೆ ಲಿಂಗಾಯತರ ಕೇರಿಯ ಮೂಲಕ ಹಾಯುತ್ತಿತ್ತು. ನಮ್ಮನ್ನು ಉಳಿದ ದಿನಗಳಲ್ಲಿ ಕೂಲಿಯಾಳಾಗಿ ಹೊಲಮನೆಗಳಿಗೆ ಕರೆಯಿಸುವ ಲಿಂಗಾಯತರು, ಆದಿನ ಅಂಗಳ ಗುಡಿಸಿ ಚೊಕ್ಕ ಮಾಡಿರುತ್ತಿದ್ದರು; ಸವಾರಿಗಳನ್ನು ಹೊತ್ತ ಕುದುರೆಗಳಾದ ನಮ್ಮ ಕಾಲಿಗೆ ನೀರು ಸುರಿಯುತ್ತಿದ್ದರು. ಮನೆಯ ಬಾಗಿಲ ಮುಂದೆ ಕೈಮುಗಿದು ನಿಂತು ಸಕ್ಕರೆ ಕೊಟ್ಟು ಓದಿಕೆ ಮಾಡಿಸುತ್ತಿದ್ದರು. ಪಂಜೆಗಳನ್ನು ಹೊತ್ತು ದೊಡ್ಡಹಳ್ಳಕ್ಕೆ ಹೋಗಿ ಅಲಂಕಾರ ತೆಗೆದು, ಬಿಚ್ಚಿ ಪೆಟ್ಟಿಗೆಗೆ ಸೇರಿಸಲಾಗುತ್ತಿತ್ತು. ಬಳಿಕ ಹುಲ್ಲುಹಾಸಿನ ಬಯಲಲ್ಲಿ ಎಲ್ಲರೂ ಕೂತು ಮೊಸರನ್ನ-ಚೋಂಗೆಯ ಬುತ್ತಿ ಹಂಚಿಕೊಂಡು ತಿನ್ನುತ್ತಿದ್ದೆವು. ಮೊಸರು ಶುಂಠಿ ಬೆಳ್ಳುಳ್ಳಿ ಕರಿಮೆಣಸು ಪರಿಮಳದ, ಅಡಕೆಪಟ್ಟೆಯಲ್ಲಿ ಸುತ್ತಿಟ್ಟರೆ ಎರಡು ದಿನವಾದರೂ ಕೆಡದ ಸೊಗಸಾದ ಬುತ್ತಿ. ಬಳಿಕ ಸಂಜೆಗತ್ತಲಲ್ಲಿ ಹುತಾತ್ಮರಿಗೆ ವಿದಾಯ ಹೇಳುವ ಶೋಕಗೀತೆ ಹಾಡುತ್ತ ಲಿಂಗಾಯತ ಕೇರಿಗಳ ಮೂಲಕ ಊರನ್ನು ಪ್ರವೇಶಿಸಲಾಗುತ್ತಿತ್ತು. ಆಗಲೂ ಅವರು ಹೊರಗೆ ಬಂದು ನಿಂತು ಹಾಡಿಕೆ ಕೇಳುತ್ತಿದ್ದರು.
ನಮ್ಮೂರಲ್ಲಿ ಅಲ್ಬಿದಾ ಗೀತೆಗಳನ್ನು ಹಾಡುವುದಕ್ಕೆಂದೇ ಮೀಸಲಾದ ಗಾಯಕರಿದ್ದರು. ಅವರು ಪೈಗಂಬರರ ಮೊಮ್ಮಗನಾದ ಹುಸೇನ್, ರಣಭೂಮಿಯಲ್ಲಿ ಪಟ್ಟ ಕಷ್ಟಗಳನ್ನು ವರ್ಣಿಸುವ ಎರಡು ಚರಣಗಳನ್ನು ಮೊದಲಿಗೆ ನುಡಿಯುತ್ತಿದ್ದರು. ಬಳಿಕ ಅವರ ಹಿಂದಿರುವ ನೆರವಿ ‘‘ಅಲ್ ಬಿದಾಯೊ ಅಲಬಿದಾ, ಶಾಹೇ ಶಹೀದಾ ಅಲ್ ಬಿದಾ.. ಏ ಹುಸೇನಿ ಫಾತಿಮಾ, ಜಹಾಂಕೆ ಸುಲ್ತಾನ್ ಅಲ್ಬಿದಾ’’ ಎಂದು ಪಲ್ಲವಿ ಹಾಡುತ್ತಿತ್ತು. ಮುಸ್ಸಂಜೆಯ ನಿಶ್ಯಬ್ದದಲ್ಲಿ ಹಲವಾರು ಕೊರಳುಗಳಲ್ಲಿ ಒಟ್ಟಿಗೆ ಈ ಪಲ್ಲವಿ ದುಃಖಘೋಷವಾಗಿ ಹೊಮ್ಮುತಿತ್ತು. ಪ್ರತಿಸಾಲಿನ ಕೊನೇ ಪದವನ್ನು ಆಕ್ರಾಂತ ಭಾವದಲ್ಲಿ ದೀರ್ಘವಾಗಿ ಎಳೆದು ಹಾಡಲಾಗುತ್ತಿತ್ತು. ಅಲಾವಿಯ ಮುಂದೆ ಸೋಗುಕಟ್ಟಿ ಕುಣಿದು ಜನರನ್ನು ರಂಜಿಸಿದವರೇ, ಈಗ ದುಃಖದ ಹಾಡುಗಳನ್ನು ಹಾಡುತ್ತಿದ್ದರು ಮತ್ತು ಅಳಿಸುತ್ತಿದ್ದರು. ಈ ಶೋಕಗೀತೆಗಳಿಗೆ ಪೂರಕವಾಗಿ ತೋಡಿರಾಗ ನುಡಿಸುವ ಶಹನಾಯಿಗಳು. ಆಗ ಮನಸ್ಸಿನೊಳಗೆ ಮರುಕ ಉಮ್ಮಳಿಸಿ, ಮೈ ಝುಮ್ಮೆನ್ನುತ್ತಿತ್ತು. ಕಣ್ಣೀರು ತಾನಾಗೇ ಹರಿಯುತ್ತಿತ್ತು. ಚಿಕ್ಕವಯಸ್ಸಿನ ಹುಸೇನರು ರಣಭೂಮಿಯಲ್ಲಿ ಜೀವಬಿಡುವಾಗ ಸಂಭವಿಸಿದ ಪ್ರಾಕೃತಿಕ ಉತ್ಪಾತದ ಚಿತ್ರಗಳೂ ಆ ಶೋಕಗೀತೆಯಲ್ಲಿದ್ದವು:
ಬಾದಲ್ ಮೇ ಬಿಜಲಿ ಖಡಕಡಿ, ದರಿಯಾಮೇ ಮಚಲಿ ಥಲ್ ಮಲೀ
ರೋತೇ ಬತಾಕೇ ಸಬ್ ವಲೀ, ದೇಖೀ ಚಲೋ ದೀದಾರ ಹೋ
ಹುಸೇನರ ಮರಣವಾಗುವಾಗ, ಆಗಸದಲ್ಲಿ ಸಿಡಿಲು ಖಡಖಡಿಸುತ್ತಿತ್ತಂತೆ. ಹೊಳೆಯೊಳಗಿನ ಮೀನು ತಳಮಳಿಸುತ್ತಿದ್ದವಂತೆ. ವಿಶೇಷವೆಂದರೆ ಉರ್ದುವಿನಲ್ಲಿರುವ ಈ ಬಿದಾಯಿ ಹಾಡು ಇದ್ದಕ್ಕಿದ್ದಂತೆ ಕನ್ನಡಕ್ಕೆ ಹೊರಳಿಬಿಡುತ್ತಿತ್ತು.
ಹಸನ್ ಹುಸೇನರು ಅಣ್ಣತಮ್ಮಗಳು, ಬೀಬಿ ಫಾತೀಮರ ಮಕ್ಕಳೋ
ಜಗಕೆ ಎಲ್ಲ ಶರಣರು, ದೇಖೀ ಚಲೋ ದೀದಾರ ಹೋ
ಈ ಹೊರಳಿಕೆಯ ಪರಿ, ಊರಿನ ಎಲ್ಲ ಧರ್ಮದ ಮತ್ತು ಎಲ್ಲ ಭಾಷೆಯ ಜನರನ್ನು ಒಳಗೊಳ್ಳುವುದರ ಭಾಗವಾಗಿತ್ತು. ವಿದಾಯದ ಶೋಕಗೀತೆ ಆಶೂರಖಾನೆ ಮುಟ್ಟುವುದರೊಂದಿಗೆ ಮುಗಿಯುತ್ತಿದ್ದವು. ಹತ್ತು ದಿನ ಚಟುವಟಿಕೆಯಿಂದ ಗಿಜಿಗುಟ್ಟಿದ ಊರು, ತಾಬೂತವು ಮರಳಿ ಆಶೂರಖಾನೆಗೂ, ಪಂಜೆಗಳು ಮರಳಿ ಪೆಟ್ಟಿಗೆಗೂ ಸೇರಿದ ಬಳಿಕ, ಸ್ಮಶಾನ ಮೌನ ಹೊದ್ದುಕೊಳ್ಳುತ್ತಿತ್ತು. ಮೊಹರಂನ ಸಂಭ್ರಮ ಮತ್ತು ದುಃಖಗಳ ಭಾವ, ಎಷ್ಟೊ ದಿನಗಳ ತನಕ ಎಲ್ಲರನ್ನೂ ಆವರಿಸಿಕೊಂಡಿರುತ್ತಿತ್ತು.
ನಮ್ಮೂರಲ್ಲಿ ಸೂಫಿಸಂತರ ದರ್ಗಾ ಇರಲಿಲ್ಲ. ಆದರೆ ಬಗದಾದ್ ಮುಂತಾದ ಜಗತ್ತಿನ ಯಾವುದೊ ಶಹರಿನ ಸೂಫಿಗಳು ಹಾಗೂ ಅರಬಸ್ಥಾನದಲ್ಲಿ ಮಡಿದ ಮೊಹರಂ ಹುತಾತ್ಮರು, ನಮ್ಮೂರ ಕೆಲವರ ಮೇಲೆ ಪೀರರಾಗಿ ಆವಾಹನೆಯಾಗುತ್ತಿದ್ದರು. ನಮ್ಮ ಮಖಬೂಲ್ ಚಿಕ್ಕಪ್ಪನ ಮೇಲೆ ಬರುವ ದೇವರು, ಉಗ್ರ ಮತ್ತು ಸತ್ಯವಂತ ಎಂದು ಖ್ಯಾತಿಯಾಗಿತ್ತು. ದೇವರನ್ನು ಬರೆಯಿಸುವವರು ತಮ್ಮ ಮನೆಗೆ ದೇವರು ಮೈಮೇಲೆ ಬರುವ ವ್ಯಕ್ತಿಯನ್ನು ಕರೆಸಿಕೊಳ್ಳುತ್ತಿದ್ದರು. ಆತ ಜಳಕ ಮಾಡಿ ಒಗೆದ ಬಟ್ಟೆಯುಟ್ಟು ಬಂದು ಕೂರುತ್ತಿದ್ದನು. ಊದುಬತ್ತಿ ಹಚ್ಚಿ, ದೂಪಹಾಕಿ, ಕುರಾನಿನ ಕೆಲವು ಮಂತ್ರಗಳನ್ನು ಪಠಿಸುತ್ತಿದ್ದಂತೆ ಆತ ಸಣ್ಣಗೆ ಕಂಪಿಸುವನು. ಬಳಿಕ ಧಿಗ್ಗನೆದ್ದು ನಿಂತು, ಹಿಂದುಮುಂದಕ್ಕೆ ಬಳುಕುತ್ತ, ತಡೆತಡೆದು ‘ಯಾಕೆ ನನ್ನನ್ನು ಕರೆಯಿಸಿದಿರಿ?’ ಎಂದು ಕೇಳುವನು. ಆಗ ದೇವರ ಜತೆ ಸಂಭಾಷಣೆ ಮಾಡುವುದರಲ್ಲಿ ಪರಿಣತಿ ಪಡೆದ ಹಿರಿಯನೊಬ್ಬ ಸಮಸ್ಯೆ ಮಂಡಿಸುತ್ತಿದ್ದನು. ಹೆಚ್ಚಿನ ಸಮಸ್ಯೆಗಳೆಂದರೆ ಮೇಯಲು ಹೋದ ಹಸು ಬಾರದೆ ಎರಡು ದಿನಗಳಾದವು, ಬಾವಿಯ ಗಡಗಡೆಯ ಮೇಲಿದ್ದ ಹಗ್ಗವನ್ನು ಯಾರೊ ಒಯ್ದಿದ್ದಾರೆ, ತೋಟದಲ್ಲಿ ತೆಂಗಿನಕಾಯಿ ಕದ್ದವರು ಯಾರೆಂದು ಗೊತ್ತಾಗುತ್ತಿಲ್ಲ, ಕಾಯಿಲೆಬಿದ್ದ ಕೂಸು ಮೇಲೆದ್ದಿಲ್ಲ, ಮಗಳ ಮದುವೆ ಯಾವಾಗ ಆಗಬಹುದು ಇತ್ಯಾದಿ. ಆಗ ದೇವರು ಈ ದಿಕ್ಕಿನಲ್ಲಿ ನಡುಗುತ್ತ ಕಂಪಿಸುತ್ತ ಒಂದು ದಿಕ್ಕನ್ನು ತೋರಿಸುತ್ತಿತ್ತು. ಕೈಬೆರಳಲ್ಲಿ ದಿನಗಳನ್ನು ಸೂಚಿಸುತ್ತಿತ್ತು. ಆ ದಿಕ್ಕಿನಲ್ಲಿದೆ ದನ, ಮೂರು ದಿವಸದೊಳಗೆ ಬರುತ್ತದೆ ಎಂದು ಅರ್ಥೈಸಲಾಗುತ್ತಿತ್ತು. ಕೊನೆಗೆ ದೇವರು ಬಿಟ್ಟುಹೋದ ಬಳಿಕ ಸವಾರಿ ನಿಗುರಿ ಕೇಕೆಹಾಕಿ ಬೀಳುತ್ತಿತ್ತು. ಅದನ್ನು ಸುತ್ತ ಇದ್ದವರು ಹಿಡಿದು ಮಲಗಿಸುತ್ತಿದ್ದರು.
ಜನ ಸ್ಥಾಪಿತವಾದ ಧರ್ಮದ ಮೂಲನಿಮಯಗಳಂತೆ ಬದುಕುವುದಿಲ್ಲ. ನಿಯಮಗಳನ್ನು ತಮಗೆ ಬೇಕಾದಂತೆ ದೈನಿಕ ಬದುಕಿನಲ್ಲಿ ಮಾರ್ಪಡಿಸುತ್ತಲೂ ಇರುತ್ತಾರೆ. ವೈಚಾರಿಕತೆ ದೃಷ್ಟಿಯಿಂದ ಮೂಢನಂಬಿಕೆ ಎಂದು ಕರೆಯುವ ಈ ಜನತೆಯ ಧರ್ಮವು, ಮೂಲಭೂತವಾಗಿಯಾಗಿರಲಿಲ್ಲ. ಶೋಷಕನಾಗಿರಲಿಲ್ಲ. ತನ್ನದೇ ರೀತಿಯಲ್ಲಿ ಜನರ ಕಷ್ಟಸುಖಗಳಿಗೆ ಮಿಡಿಯುತ್ತಿತ್ತು. ನಗಿಸುತ್ತಿತ್ತು. ಅಳಿಸುತ್ತಿತ್ತು. ಊರವರ ಸಂಬಂಧವನ್ನು ಸೃಜನಶೀಲವಾಗಿ ಬೆಸೆಯುತ್ತಿತ್ತು.
ನೋಡನೋಡುತ್ತಿದ್ದಂತೆ, ನಮ್ಮೂರಿನಲ್ಲಿ ಜನ ಸಿರಿವಂತರಾದರು. ಮಸೀದಿ ಬಂದಿತು. ನಮಾಜು ಸಂಸ್ಕೃತಿ ನೆಲೆನಿಂತಿತು. ಮೊಹರಂ ಮತ್ತು ಸೂಫಿಸಂತರ ಆಚರಣೆಗಳು ಬತ್ತಿಹೋದವು. ಮೊಹರಂ ಕಲಾವಿದರು ಹಾಗೂ ಸೂಫಿ ಸಂತರನ್ನು ಮೈಮೇಲೆ ಆವಾಹನೆ ಮಾಡಿಕೊಳ್ಳುತ್ತಿದ್ದವರೂ ಒಬ್ಬೊಬ್ಬರಾಗಿ ಲೋಕಕ್ಕೆ ಅಲಬಿದಾ ಹೇಳಿದರು. ಈಗ ಬಂದಿರುವ ಹೊಸತಲೆಮಾರಿಗೆ ಈ ಯಾವುದರ ನೆನಪುಗಳೂ ಇಲ್ಲ. ಈ ನೆನಪುಗಳಿರುವ ನನ್ನ ತಲೆಮಾರಿನ ಕೆಲವರು ‘ಹೌದು, ಅಜ್ಞಾನವಿದ್ದ ಕಾಲದಲ್ಲಿ ಇದನ್ನೆಲ್ಲ ಮಾಡಿದೆವು’ ಎಂಬ ಲಜ್ಜೆಯೊಂದಿಗೆ ನೆನಪಿಸಿಕೊಳ್ಳುವರು. ಇದು ಅಜ್ಞಾನವೇ? ನನ್ನ ಪಾಲಿಗೆ ಮಾತ್ರ ಇದು ಕಳೆದುಹೋದ ಮಧುರ ಲೋಕವಾಗಿ ಉಳಿದಿದೆ. ಲೋಕವೆಷ್ಟೇ ಬದಲಾಗಲಿ, ನಮ್ಮ ಬಾಲ್ಯವನ್ನು ಆವರಿಸಿದ, ನಮ್ಮನ್ನು ಅಳಿಸಿ ನಗಿಸಿದ ಸೃಜನಶೀಲ ನೆನಪುಗಳು ವಿದಾಯ ಹೇಳುವುದಿಲ್ಲ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…