ಪ್ರೊ.ಆರ್.ಎಂ ಚಿಂತಾಮಣಿ
೨೦೨೫-೨೬ರ ಮುಂಗಡಪತ್ರದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಪ್ರಾಧಾನ್ಯತೆ ಕೊಡಲಾಗಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಇವೆರಡೂ ಇಲಾಖೆಗಳಿಗೆ ಅನುಕ್ರಮವಾಗಿ ೨. ೭ ಲಕ್ಷ ಕೋಟಿ ರೂ. ಮತ್ತು ೧. ೭ ಲಕ್ಷ ಕೋಟಿ ರೂ. ಒದಗಿಸಲಾಗಿದೆ. ಇವುಗಳು ಕೃಷಿಗೆ ಪೂರಕ ವಲಯಗಳಾದ ಪಶು ಸಂಗೋಪನೆ, ಹೈನುಗಾರಿಕೆ, ತೋಟಗಾರಿಕೆ ಮತ್ತು ಮೀನುಗಾರಿಕೆಗಳನ್ನೂ ಒಳಗೊಂಡಿರುತ್ತವೆ. ಹೀಗಾಗಿ ಒಟ್ಟಾರೆ ೨೦೨೪-೨೫ರ ಬಜೆಟ್ ಅಂದಾಜಿಗಿಂತ ಶೇ. ೧೩ರಷ್ಟು ಮತ್ತು ಪರಿಷ್ಕೃತ ಅಂದಾಜಿಗಿಂತ ಶೇ. ೨೨ರಷ್ಟು ಹೆಚ್ಚಾದಂತಾಗುತ್ತದೆ.
ಇದರೊಡನೆ ಮುಂದುವರಿಯುತ್ತಿರುವ ಕೇಂದ್ರದ ವಿಶೇಷ ಯೋಜನೆಗಳಾದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಗ್ರಾಮ ಸಡಕ್ ಯೋಜನೆ, ಗ್ರಾಮೀಣ ಗೃಹ ನಿರ್ಮಾಣ ಯೋಜನೆ ಮುಂತಾದ ಹಲವು ಯೋಜನೆಗಳಿಗೆ ಸಾಕಷ್ಟು ಹಣ ಒದಗಿಸಲಾಗಿದೆ. ಇಲ್ಲಿಯ ಸಂಖ್ಯಾಪಟ್ಟಿಯಲ್ಲಿ ಕೇಂದ್ರದ ಪ್ರಮುಖ ಯೋಜನೆಗಳು ಮತ್ತು ಅವುಗಳಿಗೆ ಬಜೆಟ್‌ನಲ್ಲಿ ಕೊಡಲ್ಪಟ್ಟಿರುವ ಮೊತ್ತಗಳನ್ನು ಕೊಡಲಾಗಿದೆ.
ಈ ವಿಶೇಷ ಯೋಜನೆಗಳ ಪೈಕಿ ಬಹುತೇಕ ಯೋಜನೆಗಳಲ್ಲಿ ಕಳೆದ ವರ್ಷದ ಬಜೆಟ್ ಅಂದಾಜುಗಳಲ್ಲಿ ಬಹುಭಾಗವು ವೆಚ್ಚವಾಗಿರುವ ಬಗ್ಗೆ ಪರಿಷ್ಕ ತ ಅಂದಾಜುಗಳಲ್ಲಿ ಅರ್ಥ ಸಚಿವರು ಈ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಜಲ ಜೀವನ್ ಮಿಶನ್ ವಿಷಯದಲ್ಲಿ ಬಜೆಟ್ ಅಂದಾಜಿನ ೭೦,೧೬೩ ಕೋಟಿ ರೂ. ಗಳಲ್ಲಿ ತೀರ ಕಡಿಮೆ ೨೨,೬೯೪ ಕೋಟಿ ರೂ. ಗಳು ಮಾತ್ರ ಖರ್ಚಾಗುವುದಾಗಿ ಪರಿಷ್ಕ ತ ಅಂದಾಜುಗಳಲ್ಲಿ ಹೇಳಲಾಗಿದೆ. ಅದೇ ರೀತಿ ಗ್ರಾಮೀಣ ಗೃಹ ನಿರ್ಮಾಣ ಯೋಜನೆಯಲ್ಲಿ ಬಜೆಟ್ ಅಂದಾಜು ೫೪,೫೦೦ ಕೋಟಿ ರೂ. ಗಳಲ್ಲಿ ಕೇವಲ ೩೨,೪೨೬ ಕೋಟಿ ರೂ. ಗಳು ಖರ್ಚಾಗುವುದಾಗಿ ಪರಿಷ್ಕ ತ ಅಂದಾಜುಗಳಲ್ಲಿ ಹೇಳಲಾಗಿದೆ. ಹೀಗೆ ವೆಚ್ಚಗಳಲ್ಲಿ ಕೊರತೆಯಾದರೆ ಭೌತಿಕ ಗುರಿಗಳನ್ನು ಸಾಧಿಸುವುದು ಸಾಧ್ಯವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಉತ್ತರ ಹುಡುಕಲು ಅರ್ಥ ಇಲಾಖೆ ಬಜೆಟ್ ಅನುಷ್ಠಾನದಲ್ಲಿ ಹೆಜ್ಜೆ ಹೆಜ್ಜೆಗೆ ಪರಿವೀಕ್ಷಣೆ ಮತ್ತು ಪರಿಣಾಮಗಳ ಅಧ್ಯಯನ ಮಾಡಬೇಕಾಗುತ್ತದೆ.
ಯುರಿಯಾ ಸಬ್ಸಿಡಿ ವಿಷಯಕ್ಕೆ ಬಂದರೆ ರೈತರಿಗೆ ಕಡಿಮೆ ಬೆಲೆಯಲ್ಲಿ ಗೊಬ್ಬರ ಸಿಗಬೇಕೆಂಬ ಉದ್ದೇಶದಿಂದ ಇದನ್ನೂ ಕೃಷಿ ವಲಯಕ್ಕೆ ಸೇರಿಸಲಾಗುತ್ತದೆ. ಹಣಕಾಸಿನ ಲಾಭವೆಲ್ಲ ಕೈಗಾರಿಕೆಗಳಿಗೆ ಮತ್ತು ಮಾರುಕಟ್ಟೆ ಮಧ್ಯವರ್ತಿಗಳಿಗೆ ಹೋಗುತ್ತದೆ. ಸರ್ಕಾರ ದೊಡ್ಡ ಮೊತ್ತವನ್ನು ಪ್ರತಿವರ್ಷ ಖರ್ಚು ಮಾಡುತ್ತಿದ್ದು, ಕೇವಲ ಶ್ರೀಮಂತ ದೊಡ್ಡ ರೈತರಿಗೆ ಮಾತ್ರ ಅನುಕೂಲವಾಗುತ್ತಿದೆ. ಈ ಯೋಜನೆಯನ್ನು ಸಾಮಾನ್ಯ ರೈತಸ್ನೇಹಿ ಮಾಡಲು ಹೊಸ ರೂಪಕೊಡಬೇಕು.
ಕೃಷಿ ಉತ್ಪಾದನೆ ಹೆಚ್ಚಿಸಲು, ವಿಶೇಷವಾಗಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಮತ್ತು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಹೊಸ ‘ಧನ ಧಾನ್ಯ’ ಯೋಜನೆಯೊಂದನ್ನು ವಿತ್ತ ಮಂತ್ರಿಗಳು ಈ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ. ಇದು ಎಲ್ಲ ಕೃಷಿ ಉತ್ಪಾದನೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದೂ ಇದರಲ್ಲಿ ಸೇರಿರಬಹುದು. ಅದರ ವಿವರಗಳನ್ನು ಇನ್ನೂ ಪ್ರಕಟಿಸಬೇಕಾಗಿದೆ. ಅದರ ಲಾಭ ಸಾಮಾನ್ಯ ರೈತರಿಗೆ ತಲುಪಿದರೆ ಸಾಕು. ಅಲ್ಲದೆ ಕೃಷಿ ಉತ್ಪಾದಕತೆ ಹೆಚ್ಚಿಸಲು ಹೆಚ್ಚು ಇಳುವರಿ ಕೊಡುವ ಸುಧಾರಿತ ಬೀಜಗಳ ಸಂಶೋಧನೆ, ಉತ್ಪಾದನೆ ಮತ್ತು ವಿತರಣೆ ಮಾತು ಒಂದೆರಡು ಬಜೆಟ್‌ಗಳಿಂದ ಕೇಳಿಬರುತ್ತಿದೆ.
ಈ ದಿಕ್ಕಿನಲ್ಲಿ ಈವರೆಗಿನ ಪ್ರಗತಿ ಸಾಲದು. ಇನ್ನಷ್ಟು ಚಿಂತನೆ ಬೇಕು. ನೂರು ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ಯೋಜನೆ ಒಂದಿದೆ. ಇದೂ ಗ್ರಾಮೀಣಾಭಿ ವೃದ್ಧಿ ಯೋಜನೆ ಎನ್ನಬಹುದು. ಏಕೆಂದರೆ ಇಂಥ ಜಿಲ್ಲೆಗಳ ಬಹುಭಾಗ ಗ್ರಾಮೀಣ ಪ್ರದೇಶವಾಗಿರುತ್ತದೆ. ಸಮಯ ಬದ್ಧವಾದ ನಿರ್ದಿಷ್ಟ ಗುರಿಗಳನ್ನಿಟ್ಟುಕೊಂಡು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕಾಗುತ್ತದೆ. ಮೇಲಿಂದ ಮೇಲೆ ಮೌಲ್ಯಮಾಪನ ಬೇಕೇಬೇಕು. ತಿದ್ದುಪಡಿಗಳನ್ನೂ ಮಾಡಬೇಕಾಗುತ್ತದೆ. ಅವಶ್ಯಕತೆ ಇರುವವರಿಗೆ ಮತ್ತು ಅರ್ಹರಿಗೆ ಯೋಜನೆಗಳ ಲಾಭ ತಲುಪಿ ಬೆಳವಣಿಗೆಯಾಗಬೇಕು.
ಕೈಗಾರಿಕೆಗಳಿಗೆ ಮತ್ತು ನಗರಾಭಿವೃದ್ಧಿಗಾಗಿ ಕೊಡಲಾಗುವ ಸೌಲಭ್ಯಗಳು ಕೂಡಲೇ ಅರ್ಹರಿಗೆ ತಲುಪುತ್ತವೆ. ಏಕೆಂದರೆ ಅವರಿಗೆ ಮಾಹಿತಿ ವಿಸ್ತರಣೆ ಬೇಗ ಆಗುತ್ತದೆ. ಅರ್ಹರಿಗೆ ಬೇಗ ಸೌಲಭ್ಯಗಳು ತಲುಪಿ ಅಭಿವೃದ್ಧಿ ಕಾಣು ತ್ತದೆ. ಆದರೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯು ಹಾಗಲ್ಲ. ಭೌಗೋಳಿಕ ವಿಸ್ತಾರವೂ ದೊಡ್ಡದು ಮತ್ತು ಮಾಹಿತಿಯ ಕೊರತೆಯೂ ಕಾಡುತ್ತದೆ. ಆದ್ದರಿಂದ ಸರ್ಕಾರದ ಯೋಜನೆಗಳು ಕಟ್ಟ ಕಡೆಯ ರೈತನಿಗೆ ಮತ್ತು ಕಟ್ಟ ಕಡೆಯ ಹಳ್ಳಿಗೂ ತಲುಪುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ. ರಾಜ್ಯ ಸರ್ಕಾರಗಳ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರ ಮತ್ತು ಸಕ್ರಿಯ ಪಾಲುದಾರಿಕೆ ಬೇಕಾಗುತ್ತವೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ನಮ್ಮ ಸಂವಿಧಾನದಲ್ಲಿ ರಾಜ್ಯಗಳ ವ್ಯಾಪ್ತಿಯ ಪಟ್ಟಿಯಲ್ಲಿವೆ. ಆದ್ದರಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ನೀತಿ ರೂಪಿಸಬಹುದಷ್ಟೇ.
ಜಿಲ್ಲಾ ಯೋಜನೆಗಳ ಅವಶ್ಯಕತೆ ಇದೆಯೇ? : ಪ್ರತಿಯೊಂದು ಹಳ್ಳಿ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯದ ಅವಶ್ಯಕತೆಗಳು ವಿಶಿಷ್ಟ ರೀತಿಯಲ್ಲಿ ಬೇರೆ ಬೇರೆಯಾಗಿರುವುದರಿಂದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯೂ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಹಿಂದೆ ಕರ್ನಾಟಕದಲ್ಲಿ ೧೯೭೦ರ ದಶಕದಲ್ಲಿ ಪ್ರಯೋಗ ಮಾಡಿದಂತೆ ಜಿಲ್ಲಾ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಿದರೆ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಲ್ಲದೆ ಜಿಎಸ್‌ಟಿ ಕೌನ್ಸಿಲ್ ಇದ್ದಂತೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನೂಳಗೊಂಡು ಕೇಂದ್ರದ ನಾಯಕತ್ವದಲ್ಲಿ ಉನ್ನತಾಽಕಾರದ ಕೌನ್ಸಿಲ್ ಇರುವುದು ಒಳ್ಳೆಯದು. ಕೇಂದ್ರ ಸರ್ಕಾರ ಚಿಂತಿಸಲಿ.
ಮಡಿಕೇರಿ: ವಯೋವೃದ್ಧರೊಬ್ಬರ ಮನೆಯಲ್ಲಿ ಹೋಂ ನರ್ಸಿಂಗ್(ಕೇರ್ ಟೇಕರ್) ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ…
ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡನೇ ಶನಿವಾರ ಹಾಗೂ ಯುಗಾದಿ ಜಾತ್ರಾ…
ಟೆಹ್ರಾನ್ : ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆಯೂ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶತ್ರು ರಾಷ್ಟ್ರ ಮತ್ತು…
ಹುಣಸೂರು : ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿ ಸೇರಿದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲು…
ಮೈಸೂರು : ಕುಕ್ಕರಹಳ್ಳಿ ಕೆರೆಯ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿ ವತಿಯಿಂದ ಕುಕ್ಕರಹಳ್ಳಿ…
ಬೆಂಗಳೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿವಿಯಲ್ಲಿ ಖಾಲಿ ಇರುವ…