ಸಹಕಾರಿ ತತ್ವದಲ್ಲಿ ಪ್ರವರ್ಧಮಾನಕ್ಕೆ ಬಂದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್)ದಲ್ಲಿ ಇತ್ತೀಚೆಗೆ ಒಂದಿಲ್ಲೊಂದು ಭ್ರಷ್ಟಾಚಾರದ ಪ್ರಕರಣಗಳು ನಡೆಯುತ್ತಿದ್ದು, ಸಂಸ್ಥೆಯು ಭ್ರಷ್ಟಾಚಾರಿಗಳ ಕಾಮಧೇನುವಾಗಿ ಬಳಕೆಯಾಗುತ್ತಿರುವುದು ಆಘಾತ ಕಾರಿ ಸಂಗತಿಯಾಗಿದೆ. ಕಳೆದ ಆಡಳಿತ ಮಂಡಳಿಯಿಂದ ೭೩ ಕೋಟಿ ರೂ. ವಸೂಲಿ, ಹಾಲಿಗೆ ನೀರು ಮಿಶ್ರಣ ಮಾಡಿ ವಂಚನೆ ಪ್ರಕರಣ, ಅಕ್ರಮ ನೇಮಕಾತಿ ಸೇರಿದಂತೆ ಹಲವು ಪ್ರಕರಣಗಳು ಮನ್‌ಮುಲ್‌ನ ಆಡಳಿತ ಮಂಡಳಿಯನ್ನು ಗುಮಾನಿಯಿಂದ ನೋಡುವಂತೆ ಮಾಡಿದ್ದು ದಿಟ.
ಇದೀಗ ಮೆಗಾ ಡೇರಿ ಉದ್ಘಾಟನೆ ಹಂತದಲ್ಲಿರುವಾಗ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ಅಗತ್ಯವಿಲ್ಲದಿದ್ದರೂ ೧೮೭ ಹುದ್ದೆಗಳಿಗೆ ಮತ್ತೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವ ಮೂಲಕ ಹಣ ಮಾಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಸ್ತುತ ಮನ್‌ಮುಲ್‌ನಲ್ಲಿ ೨೮೫ ಖಾಯಂ ನೌಕರರು ಹಾಗೂ ೧೩೦೦ ಹೊರ ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ ೫೧೦ ಹುದ್ದೆಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಹಕಾರ ಇಲಾಖೆಯ ಉಪನಿಬಂಧಕರಿಂದ ಮಂಜೂರಾತಿ ಪಡೆದುಕೊಂಡಿದ್ದಾರೆ. ಮೆಗಾ ಡೇರಿ ನಿರ್ಮಾಣವಾಗಿರುವಾಗ ಇಷ್ಟೊಂದು ಹುದ್ದೆಯ ಅಗತ್ಯವಿಲ್ಲದಿದ್ದರೂ ಹಣ ಮಾಡುವ ಏಕೈಕ ಉದ್ದೇಶದಿಂದ ಹೆಚ್ಚುವರಿ ಹುದ್ದೆಗಳ ಸೃಷ್ಟಿಸಿ ಆರ್ಥಿಕ ಹೊರೆಯನ್ನುಂಟು ಮಾಡಿದ್ದಾರೆ ಎಂಬುದು ಲೋಕಾಯುಕ್ತದ ಮುಂದಿರುವ ದೂರಿನ ಸಾರಾಂಶ.
ಮಾತ್ರವಲ್ಲ ಮೆಗಾ ಡೇರಿಗೆ ೪ ಸಾವಿರ ಕೆ.ವಿ. ಸಾಮರ್ಥ್ಯದ ವಿದ್ಯುತ್ ಅವಶ್ಯಕತೆ ಇದ್ದು, ಆಡಳಿತ ಮಂಡಳಿಯವರು ವಿದ್ಯುತ್ ಇಲಾಖೆಯಿಂದ ಸಂಪರ್ಕ ಪಡೆದುಕೊಳ್ಳದೆ ೨೫೦೦ ಕೆ.ವಿ. ಸಾಮರ್ಥ್ಯದ ಡೀಸೆಲ್ ಜನರೇಟರನ್ನು ಖರೀದಿಸಿದ್ದು, ಇದರಿಂದ ಒಕ್ಕೂಟಕ್ಕೆ ಪ್ರತಿ ತಿಂಗಳು ೧ ಕೋಟಿ ರೂ.ಗೂ ಅಧಿಕ ನಷ್ಟವಾಗುತ್ತಿದೆ ಎಂಬ ಆರೋಪವನ್ನು ನಿರ್ಲಕ್ಷಿಸಲಾಗದು.
ಹಾಗೆ ನೋಡಿದರೆ ಇತ್ತೀಚೆಗೆ ದೇಶದ ಜನರನ್ನು ದಿಗ್ಭ್ರಾಂತರನ್ನಾಗಿಸಿದ ಪಿಎಸ್‌ಐ ನೇಮಕಾತಿ ಹಗರಣಕ್ಕಿಂತಲೂ ಮನ್‌ಮುಲ್‌ನಲ್ಲಿ ನಡೆದಿರುವ ಹಗರಣ ದೊಡ್ಡದಾಗಿದೆ. ಒಂದೆಡೆ ನೀರು ಮಿಶ್ರಿತ ಹಾಲು ಹಗರಣ ಸಿಐಡಿ ತನಿಖೆಯಲ್ಲಿದೆ. ಕಳೆದ ಆಡಳಿತ ಮಂಡಳಿ ೭೨ ಕೋಟಿ ರೂ. ಅವ್ಯವಹಾರ ನಡೆಸಿರುವ ಆರೋಪಕ್ಕೆ ಗುರಿಯಾಗಿದೆ. ಮೆಗಾ ಡೇರಿ ಸ್ಥಾಪನೆ ಅವ್ಯವಹಾರದ ತನಿಖೆ ಇನ್ನೂ ನಡೆದಿಲ್ಲ. ಈ ಎಲ್ಲ ಗೊಂದಲಗಳ ನಡುವೆಯೇ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ಸರಿಯೇ ಎಂಬ ಗೊಂದಲ ಸಾರ್ವಜನಿಕರಲ್ಲಿದೆ.
ಈ ನೇಮಕಾತಿಯಲ್ಲಿ ಪರೀಕ್ಷೆ ಬರೆಯಲು ಸಿದ್ಧರಾಗಿರುವ ಅಭ್ಯರ್ಥಿಗಳು ಈಗಲೇ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಳ್ಳಲು ಆಸೆ ಪಟ್ಟರೆ, ಮುಂದೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿದ್ದಲ್ಲಿ ಇತ್ತ ಕೆಲಸವೂ ಇಲ್ಲ, ಅತ್ತ ಹಣವೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಲೂಬಹುದು.
ಹೀಗೆ ಮನ್‌ಮುಲ್‌ನಲ್ಲಿ ನಡೆದಿದೆ ಎನ್ನಲಾದ ಹಲವು ಹಗರಣಗಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿರುವ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷರೂ ಆದ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಹೋರಾಟಕ್ಕಿಳಿದಿರುವುದು ಸಮಾಧಾನಕರ ಸಂಗತಿ. ಮನ್‌ಮುಲ್‌ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ಪ್ರಧಾನಮಂತ್ರಿಯವರ ಕಚೇರಿಯಿಂದ ರಾಜ್ಯದ ಇಲಾಖೆಗೆ ಸೂಚನೆ ಕೊಡಲಾಗಿದೆ. ಇದಲ್ಲದೆ ಹಗರಣದ ತನಿಖೆಗೆ, ಅದರಲ್ಲಿಯೂ ಈಗ ನಡೆಯುತ್ತಿರುವ ೧೮೭ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಸಚಿವರಾದ ಕೆ.ಗೋಪಾಲಯ್ಯ, ಸೋಮಶೇಖರ್ ಸೇರಿದಂತೆ ಕೆಎಂಎಫ್ ಎಂಡಿ, ಮನ್‌ಮುಲ್ ಎಂಡಿಗೆ ಪತ್ರವನ್ನೂ ಬರೆಯಲಾಗಿದೆ. ಅಕ್ರಮ ಕಣ್ಣಿಗೆ ಕಾಣುತ್ತಿದ್ದರೂ ಕ್ರಮ ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಲ್ಲಿ ಎಲ್ಲ ಪಕ್ಷದವರೂ ಸೇರಿಕೊಂಡಿದ್ದಾರೆನ್ನುವ ಅನುಮಾನ ವ್ಯಕ್ತಪಡಿಸಿರುವ ಹೋರಾಟಗಾರರಿಗೆ ಮನ್‌ಮುಲ್‌ನಿಂದ ಯಾವುದೇ ಸ್ಪಷ್ಟೀಕರಣವಾ ಗಲಿ, ಸಮಜಾಯಿಷಿಯಾಗಲಿ ಸಿಗದಿರುವುದು ಅಚ್ಚರಿಗೆ ಕಾರಣವಾಗಿದೆ.
ಮನ್‌ಮುಲ್‌ನಲ್ಲಿ ನಡೆಯುತ್ತಿರುವ ಅಕ್ರಮ ನೇಮಕಾತಿಯನ್ನು ರದ್ದುಗೊಳಿಸುವಂತೆ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಯಿಂದ ಸಲ್ಲಿಸಿದ್ದ ದೂರನ್ನು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಿರುವುದು ಉತ್ತಮ ಬೆಳವಣಿಗೆ.
ಇದಲ್ಲದೆ ನೇಮಕಾತಿ ಪ್ರಕ್ರಿಯೆಯಲ್ಲಿಯೇ ಹಲವು ದೋಷವಿರುವುದು ಅಕ್ರಮ ಎನ್ನುವುಕ್ಕೆ ಪುಷ್ಟಿನೀಡುವಂತಿದೆ. ನೇಮಕಾತಿ ಪ್ರಕ್ರಿಯೆ ಕುರಿತಂತೆ ಈಗಾಗಲೇ ಸರ್ಕಾರ ಹೊರಡಿಸಿರುವ ಆದೇಶವನ್ನು ಮನ್‌ಮುಲ್ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಮನ್‌ಮುಲ್ ಭ್ರಷ್ಟಾಚಾರ ಮುಕ್ತವಾಗಿ ವಹಿವಾಟು ನಡೆಸುವುದು ಅತ್ಯಗತ್ಯ. ಮನ್‌ಮುಲ್‌ಅನ್ನು ಸಾವಿರಾರು ರೈತರು ಅವಲಂಬಿಸಿದ್ದಾರೆ. ರೈತರ ಆರ್ಥಿಕ ಬೆಳವಣಿಗೆ ಮನ್‌ಮುಲ್‌ನೊಂದಿಗೆ ಬೆಸೆದುಕೊಂಡಿದೆ. ಯಾರೋ ಬೆರಳೆಣಿಕೆಯಷ್ಟು ಮಂದಿ ನಡೆಸುವ ಭ್ರಷ್ಟಾಚಾರದಿಂದಾಗಿ ಇಡೀ ಸಂಸ್ಥೆಗೆ ಕೆಟ್ಟ ಹೆಸರು ಬರುವುದು ಒಳ್ಳೆಯ ಬೆಳವಣಿಗೆಯಲ್ಲ. ಮನ್‌ಮುಲ್‌ಗೆ ಭ್ರಷ್ಟಾಚಾರದ ಕಳಂಕ ತಟ್ಟಿದರೆ, ಅದು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಖಾಸಗಿ ವಲಯದ ಡೇರಿಗಳು ಇದನ್ನು ತಮ್ಮ ಮಾರುಕಟ್ಟೆ ವಿಸ್ತರಣೆಗೆ ಬಳಸಿಕೊಳ್ಳುತ್ತವೆ ಎಂಬ ಎಚ್ಚರಿಕೆಯೂ ಇರಬೇಕು.
ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…
ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…
ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…
ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ʼಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ…
ಬಳ್ಳಾರಿ : ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು…
ಬೆಂಗಳೂರು : ಆಸ್ಪ್ರೇಲಿಯಾದ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ…