ಎಡಿಟೋರಿಯಲ್

ಚುನಾವಣಾ ಆಯೋಗಕ್ಕೆ ಅಗ್ನಿಪರೀಕ್ಷೆಯ ಕಾಲ

ದೆಹಲಿ ಕಣ್ಣೋಟ‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಚುನಾವಣಾ ಆಯೋಗವು ಕಾಲಕ್ಕೆ ತಕ್ಕಂತೆ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದೆ. ಟಿ.ಎನ್. ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾದ ನಂತರ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಮಾದರಿ ಚುನಾವಣಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಅವರ ನಂತರ ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯನ್ನು ಅಲಂಕರಿಸಿದವರು ಬದ್ಧತೆಯನ್ನು ಪ್ರದರ್ಶಿಸದ ಕಾರಣ ದೇಶದ ವಿವಿಧೆಡೆ ಅಕ್ರಮಗಳ ಸರಮಾಲೆ ನಿರಂತರವಾಗಿ ನಡೆದು ಬರುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ‘ಮತಕಳವು’ ನಡೆದಿದೆ ಎಂದು ಆರೋಪಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಹಿರಂಗ ಪಡಿಸಿರುವ ‘ಅಕ್ರಮಗಳು ’ ಈಗ ಚುನಾವಣಾ ಆಯೋಗದ ಪ್ರಾಮಾಣಿಕತೆ, ನಿಷ್ಪಕ್ಷಪಾತ , ಪಾರದರ್ಶಕತೆ ಹಾಗೂ ಅದರ ದಕ್ಷತೆಯನ್ನು ಈಗ ಅನುಮಾನದಿಂದ ನೋಡುವಂತೆ ಮಾಡಿವೆ.

ಕಾಂಗ್ರೆಸ್ ಪಕ್ಷವು ನಡೆಸಿದ ಸತ್ಯಶೋಧನೆಯಲ್ಲಿ ಚುನಾವಣಾ ಆಯೋಗದಿಂದಲೇ ಪಡೆದಿರುವ ಮತದಾರರ ಪಟ್ಟಿಯಲ್ಲಿ ಹಲವಾರು ಲೋಪಗಳು ಕಂಡು ಬಂದಿವೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮಗಳು ಹೆಚ್ಚಾಗಿ ಕಂಡು ಬಂದಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು ಇರುವುದು ಬಹಿರಂಗವಾಗಿದೆ. ಮತದಾನ ನಿಷ್ಪಕ್ಷಪಾತವಾಗಿ ನಡೆದಿದೆ ಎಂದು ನಂಬಿದ್ದವರಿಗೆ ಇದರಿಂದ ಆಘಾತವಾಗಿದೆ.

ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರ ಕ್ಕೆ ಸೇರಿದ ಮಹದೇವಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಹೆಚ್ಚಿರುವುದರಿಂದ ಮತ್ತು ಎಲೆಕ್ಟ್ರಾನಿಕ್ ಸಿಟಿ ಸಮೀಪವಾಗಿರುವುದರಿಂದ ಆ ಕ್ಷೇತ್ರದಲ್ಲಿ ಉತ್ತರದ ರಾಜ್ಯಗಳಿಂದ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಸತ್ಯಶೋಧನೆಯ ಪ್ರಕಾರ ಗುರುಕಿರತ್ ಸಿಂಗ್ ಎನ್ನುವ ವ್ಯಕ್ತಿಯ ಹೆಸರು ನಾಲ್ಕು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿದೆ. ಆದಿತ್ಯ ಶ್ರೀವಾತ್ಸವ ಎನ್ನುವ ಮತದಾರನ ಹೆಸರು ಲಕ್ನೋ, ಮುಂಬೈ ಮತ್ತು ಬೆಂಗಳೂರಿನಲ್ಲೂ ಇದೆ. ಸುಮಾರು ೪೦,೦೦೯ ನಕಲಿ ಮತದಾರರಿದ್ದು, ಅವರ ವಿಳಾಸ ಸರಿಯಾಗಿಲ್ಲ. ಹಾಗೆಯೇ ಮುನಿರೆಡ್ಡಿ ಗಾರ್ಡನ್‌ನ ಮನೆ ನಂಬರ್ ೩೫ರ ವಿಳಾಸದಲ್ಲಿ ೮೦ ಮತದಾರರು ಇರುವುದು ಪತ್ತೆಯಾಗಿದೆ. ಹೀಗೆ ಈ ಒಂದು ವಿಧಾನಸಭಾ ಕ್ಷೇತ್ರದಲ್ಲಿಯೇ ಸುಮಾರು ಒಂದು ಲಕ್ಷ ಮತದ ಕಳ್ಳತನವಾಗಿದೆ. ಅಂದರೆ ನಕಲಿ ಮತದಾರರ ಸೃಷ್ಟಿಯಾಗಿ ಚುನಾವಣೆಯಲ್ಲಿ ವಂಚನೆ ಆಗಿರುವುದಾಗಿ ಬಹಿರಂಗಪಡಿಸಲಾಗಿದೆ.

ಈ ಮತದಾರರ ಪಟ್ಟಿಯನ್ನು ಅಖೈರು ಮಾಡುವಾಗ ಒಂದೇ ವಿಳಾಸದಲ್ಲಿ ೮೦ರಷ್ಟು ಮತದಾರರು ಇರುವುದು ಆಯೋಗದ ಗಮನಕ್ಕೆ ಬಂದಿಲ್ಲವೇ? ಹಾಗೆಯೇ ಮತಗಟ್ಟೆಗಳಲ್ಲಿ ವಿವಿಧ ಪಕ್ಷಗಳ ಏಜೆಂಟರಾಗಿ ಕೆಲಸ ಮಾಡುವವರಿಗಾದರೂ ಈ ಕುರಿತು ಅನುಮಾನ ಬರಲಿಲ್ಲವೇ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.

ಇಂತಹ ಅಕ್ರಮಗಳು ದೇಶದಾದ್ಯಂತ ನಡೆದಿವೆ. ಕಳೆದ ಲೋಕಸಭೆ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನು ಬಿಜೆಪಿ ಮೋಸದಿಂದ ಗೆದ್ದುಕೊಂಡಿದೆ ಎಂಬುದು ರಾಹುಲ್ ಗಾಂಧಿಯವರ ನೇರ ಆರೋಪ. ಈ ಆರೋಪವನ್ನು ಬಿಜೆಪಿ ಮತ್ತು ಚುನಾವಣಾ ಆಯೋಗ ನಿರಾಕರಿಸಿವೆ.

ರಾಹುಲ್ ಗಾಂಧಿ ಅವರು ಚುನಾವಣಾ ಅಕ್ರಮದ ಕುರಿತು ಮಾಡಿರುವ ಆರೋಪವನ್ನು ಸಾಬೀತುಪಡಿಸಲು ಸಲ್ಲಿಸುವ ದೂರಿನ ಜೊತೆ ಪ್ರಮಾಣ ಪತ್ರಕ್ಕೆ ಸಹಿಹಾಕಬೇಕು, ಇಲ್ಲವೇ ತಾವು ಅಸಂಬದ್ಧ ಆರೋಪವನ್ನು ಮಾಡಿರುವುದಾಗಿ ದೇಶದ ಕ್ಷಮೆ ಕೇಳಬೇಕೆಂದು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಚುನಾವಣಾ ಆಯೋಗ ನೀಡಿರುವ ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ರಾಹುಲ್ ಗಾಂಧಿ ಅವರು ಮಾಡುತ್ತಿರುವ ಆರೋಪ ಸಮರ್ಪಕವಾಗಿರದಿದ್ದರೆ ಚುನಾವಣಾ ಆಯೋಗ ನೀಡಿರುವ ಮತದಾರರ ಪಟ್ಟಿಯ ದೋಷಕ್ಕೆ ಆಯೋಗವೇ ಹೊಣೆ ಹೊರತು ರಾಹುಲ್ ಗಾಂಧಿ ಅವರಾಗುವುದಿಲ್ಲ.

ಚುನಾವಣಾ ಆಯೋಗದ ಈ ಸೂಚನೆ ಬೆದರಿಕೆಯ ತಂತ್ರವಲ್ಲದೆ ಬೇರೇನೂ ಅಲ್ಲ. ಚುನಾಯಿತ ಪ್ರತಿನಿಧಿಯಾಗಲೀ ಅಥವಾ ಒಬ್ಬ ಸಾಮಾನ್ಯ ಪ್ರಜೆಯಾಗಲಿ ಮತದಾರರ ಪಟ್ಟಿಯಲ್ಲಿ ದೋಷ ಇರುವುದನ್ನು ಪತ್ತೆ ಹಚ್ಚಿ ದೂರು ನೀಡಿದರೆ ಅದನ್ನು ಪರಿಶೀಲಿಸಬೇಕೆ ಹೊರತು ದೂರು ಕೊಟ್ಟವರನ್ನೇ ಅಪರಾಧ ಸ್ಥಾನದಲ್ಲಿ ನಿಲ್ಲಿಸಿ ಬೆದರಿಕೆ ಹಾಕುವುದು ಜನತಂತ್ರ ವಿರೋಧ ನೀತಿ. ಚುನಾವಣಾ ಆಯೋಗದ ಈ ನಿಲುವು ಖಂಡನಾರ್ಹ.

ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳ ಕುರಿತು ಆರೋಪ ಮಾಡುತ್ತಿದ್ದಂತೆ ಚುನಾವಣಾ ಆಯೋಗವು ವಿವಿಧ ರಾಜ್ಯಗಳ ಮತದಾರರ ಪಟ್ಟಿಯ ವೆಬ್ ಸೈಟ್‌ಅನ್ನು ತೆಗೆದುಹಾಕಿರುವ ಆರೋಪಗಳು ಕೇಳಿ ಬರುತ್ತಿವೆ. ಆದರೆ ಈ ಆರೋಪವನ್ನು ಚುನಾವಣಾ ಆಯೋಗ ತಳ್ಳಿಹಾಕಿದೆ.

ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯ ದೋಷದಿಂದ ಕಳೆದ ಲೋಕಸಭೆ ಚುನಾವಣೆಯನ್ನು ಬಿಜೆಪಿ ಗೆದ್ದಿದೆ ಎಂದು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರತ್ತ ಬೊಟ್ಟು ಮಾಡಿರುವುದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಇದರಿಂದಾಗಿ ಬಿಜೆಪಿ ನಾಯಕರು ರಾಹುಲ್ ಗಾಂಽಯವರ ವಿರುದ್ಧ ತಿರುಗಿಬೀಳುವ ಮೂಲಕ ತಮ್ಮ ನಾಯಕರ ರಕ್ಷಣೆಗೆ ನಿಂತಿದ್ದಾರೆ. ಇದೇನೇ ಇದ್ದರೂ ರಾಹುಲ್ ಗಾಂಧಿ ಅವರ ಆರೋಪಗಳಿಗೆ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕಿದೆ. ಕಾನೂನಿನ ಬೆದರಿಕೆ ಹಾಕಿ ನುಣುಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ.

ಈಗಾಗಲೇ ಬಿಹಾರ ರಾಜ್ಯದಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯದಿಂದ ಮೊದಲ ಹಂತದಲ್ಲಿಯೇ ೬೫ ಲಕ್ಷ ಮತದಾರರ ‘ಕಣ್ಮರೆ’ ಬಗೆಗೆ ಸುಪ್ರೀಂ ಕೋರ್ಟ್ ಪ್ರತಿಯೊಬ್ಬ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಿರುವುದನ್ನು ಕಾರಣ ಸಹಿತ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಎಚ್ಚರಿಕೆ ನೀಡಿರುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಹೀಗಾಗಿ ಚುನಾವಣಾ ಆಯೋಗವು ತನಗಿಷ್ಟ ಬಂದಂತೆ ಅಥವಾ ಬಾಹ್ಯ ಒತ್ತಡದಿಂದ ಕೆಲಸ ಮಾಡಿ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಸುಪ್ರೀಂ ಕೋರ್ಟಿನ ತೂಗು ಕತ್ತಿ ತನ್ನ ತಲೆಯ ಮೇಲಿದೆ ಎಂಬ ಎಚ್ಚರಿಕೆ ಚುನಾವಣಾ ಆಯೋಗಕ್ಕೆ ಬರಬೇಕಿದೆ.

ಸುಪ್ರೀಂ ಕೋರ್ಟು ಈಗಾಗಲೇ ಜಾರಿ ನಿರ್ದೇಶನಾಲಯದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿ ತನಿಖಾ ಸಂಸ್ಥೆಗಳು ರಾಜಕೀಯದಿಂದ ದೂರವಿರಲು ಎಚ್ಚರಿಸಿದೆ. ಈಗ ಚುನಾವಣಾ ಆಯೋಗಕ್ಕೂ ಎಚ್ಚರಿಕೆ ನೀಡುವ ಕಾಲ ಸನ್ನಿಹಿತವಾಗಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಇತರೆ ಇಬ್ಬರು ಆಯುಕ್ತರು ಎಚ್ಚೆತ್ತುಕೊಂಡು ಆಯೋಗದ ಕಾರ್ಯವೈಖರಿಯ ಬಗೆಗೆ ವಿಶ್ವಾಸ ಮೂಡಿಸುವ ಅವಶ್ಯಕತೆ ಈಗ ಹಿಂದೆಂದಿಗಿಂತಲೂ ಮುಖ್ಯ ಎಂಬುದನ್ನು ಮನಗಾಣಬೇಕಿದೆ.

ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅವರು ಅಕ್ರಮವಾಗಿ ಮತದಾನ ಮಾಡುವುದನ್ನು ತಡೆಗಟ್ಟಲು ಮತದಾರರ ಭಾವಚಿತ್ರದ ಗುರುತಿನ ಚೀಟಿಯನ್ನು ಜಾರಿಗೆ ತಂದಿದ್ದರು. ವಿದ್ಯುನ್ಮಾನ ಯಂತ್ರಗಳ ಪರಿಚಯವಾಯಿತು. ಆದರೂ ಅಕ್ರಮಗಳು ಒಂದಲ್ಲಾ ಒಂದು ರೀತಿಯಲ್ಲಿ ನಡೆಯುತ್ತಿದ್ದು, ಇದಕ್ಕೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನಾಯಕರ ಒತ್ತಡವೇ ಕಾರಣವೇ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಚುನಾವಣಾ ಅಕ್ರಮಗಳಿಗೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಆಪಾದಿಸಿದ್ದಾರೆ. ತಮ್ಮ ಮೇಲೆ ಇಂತಹ ಗಂಭೀರವಾದ ಆರೋಪಗಳು ಬಂದಾಗ ಪ್ರಧಾನಿ ಅವರು ಸಂಸತ್ತಿನಲ್ಲಿ ಅಧಿಕೃತ ಹೇಳಿಕೆ ನೀಡಿ ವಿರೋಧ ಪಕ್ಷದ ನಾಯಕರಿಗೆ ಸಮಜಾಯಿಷಿ ನೀಡಬೇಕು. ಮತ್ತು ಅಷ್ಟೇ ಮುಖ್ಯವಾಗಿ ಈಗಲಾದರೂ ಪತ್ರಿಕಾಗೋಷ್ಠಿಯನ್ನು ಕರೆದು ಈ ಬಗ್ಗೆ ದೇಶದ ಜನತೆಗೆ ವಿವರಣೆ ನೀಡಬೇಕು. ಆದರೆ ಇಂತಹ ಕಾರ್ಯವನ್ನು ಪ್ರಧಾನಿ ಮೋದಿ ಅವರಿಂದ ನಿರೀಕ್ಷಿಸಬಹುದೇ ಎನ್ನುವುದೇ ಕಷ್ಟದ ಕೆಲಸ.

ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ ಜಾರಿಗೆ ತಂದ ಆಧಾರ್ ಕಾರ್ಡನ್ನು ಮತದಾರರ ಗುರುತಿನ ಚೀಟಿಗಳಿಗೆ ಜೋಡಿಸುವ ಮೂಲಕ ಸಾಕಷ್ಟು ಅಕ್ರಮಗಳನ್ನು ತಡೆಯಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಪಾನ್ ಕಾರ್ಡ್ , ಬ್ಯಾಂಕುಗಳ ಖಾತೆ ತೆಗೆಯಲು ಕಡ್ಡಾಯ ಮಾಡಿರುವ ಸರ್ಕಾರವು ಚುನಾವಣಾ ಆಯೋಗದ ಮೂಲಕ ಆಧಾರ್ ಲಿಂಕ್ ವ್ಯವಸ್ಥೆಯನ್ನು ಜಾರಿಗೊಳಿಸುವುದು ಸೂಕ್ತ. ಈ ಬಗ್ಗೆ ಚುನಾವಣಾ ಆಯೋಗ ಅಥವಾ ಕೇಂದ್ರ ಸರ್ಕಾರ ಪರಿಶೀಲಿಸಿಲ್ಲ ಎಂದು ಹೇಳಲಾಗದು. ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಲು ಯಾವುದೇ ತೊಂದರೆಯಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಈ ಬಗ್ಗೆ ಗಂಭೀರವಾಗಿ ಪರಿಶೀಲಿಸವುದು ಅವಶ್ಯ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಅಧ್ಯಯನ ಮಾಡಿ ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಜನರ ಮುಂದಿಟ್ಟಿರುವುದು ಶ್ಲಾಘನೀಯ. ಇಲ್ಲವಾದರೆ ಒಬ್ಬ ವ್ಯಕ್ತಿ ಒಂದು ಮತ ಎನ್ನುವ ಜನತಂತ್ರ ಮೌಲ್ಯ ಅರ್ಥ ಕಳೆದುಕೊಳ್ಳಲಿದೆ. ಹಾಗಾಗಿ ಈಗ ಬಂದಿರುವ ಆರೋಪಗಳನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ. ಚುನಾವಣಾ ಆಯೋಗ ಮತದಾರರ ಪಟ್ಟಿಯ ಲೋಪ ದೋಷಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ತನ್ನಿಂದಾಗಿರುವ ದೋಷಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಚುನಾವಣಾ ಆಯೋಗಕ್ಕೆ ಇದು ಅಗ್ನಿ ಪರೀಕ್ಷೆಯ ಕಾಲ.

-ಶಿವಾಜಿ ಗಣೇಶನ್

ಆಂದೋಲನ ಡೆಸ್ಕ್

Recent Posts

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ 2 ತಿಂಗಳಲ್ಲಿ ದಾಖಲೆಯ ಆದಾಯ

ದಕ್ಷಿಣ ಕನ್ನಡ: ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣು ದೇವಸ್ಥಾನದ ಆದಾಯ 2025ರ ನವೆಂಬರ್‌ ಹಾಗೂ…

1 hour ago

ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ: ವಿಜಯೇಂದ್ರ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ…

1 hour ago

ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್:‌ 10 ಮಂದಿ ನಕ್ಸಲರ ಹತ್ಯೆ

ಜಾರ್ಖಂಡ್:‌ ಜಾರ್ಖಂಡ್‌ನ ಸಾರಂಡಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 10 ಮಂದಿ ನಕ್ಸಲರು…

1 hour ago

ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿ ವಿರೋಧಿಸಿ ಮುಂದುವರಿದ ಪ್ರತಿಭಟನೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ತೋಡಿಕೆ ಮತ್ತು ನಿರ್ಮಾಣ ಕಾರ್ಯಗಳ ವಿರುದ್ಧ ಮೈಸೂರಿನ ಹಲವು ನಾಯಕರು, ಚಿಂತಿತ ನಾಗರಿಕರು…

2 hours ago

ಸದನದಲ್ಲಿ ಅಗೌರವ ತೋರಿದ ಶಾಸಕರ ವಿರುದ್ಧ ಕ್ರಮ ಆಗಲಿ: ಆರ್.‌ಅಶೋಕ್‌

ಬೆಂಗಳೂರು: ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ಕಾಂಗ್ರೆಸ್‌ ನಡೆಸಿದೆ ಎಂದು ವಿಪಕ್ಷ ನಾಯಕ ಆರ್.‌ಅಶೋಕ್‌ ಕಿಡಿಕಾರಿದ್ದಾರೆ.…

2 hours ago

ಜನವರಿ.28ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು: ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜನವರಿ.28ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ…

3 hours ago