ಎಡಿಟೋರಿಯಲ್

ಗಿಡಗಳ ಫೀಸು ಪಡೆಯುವ ಅಪರೂಪದ ಕೋಚಿಂಗ್ ಕ್ಲಾಸ್!

ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಲು ಹುಟ್ಟಿಕೊಂಡ ‘ಬಿಎಎಸ್ ಕ್ಲಬ್’ ಪರಿಸರ ಜಾಗೃತಿ ಮೂಡಿಸುತ್ತಾ ಇದುವರೆಗೆ ೧.೭ ಲಕ್ಷ ಗಿಡಗಳನ್ನು ನೆಟ್ಟಿದೆ
ಪಂಜು ಗಂಗೊಳ್ಳಿ

ಬಿಹಾರದ ಸಮಷ್ಟಿಪುರದ ಬಲ್ಜಿತ್ ಕುಮಾರ್‌ನ ತಂದೆ ಗಾರೆ ಕೆಲಸ ಮಾಡುವ ಒಬ್ಬ ದಿನಗೂಲಿ. ಆರ್ಥಿಕ ಕಾರಣದಿಂದ ಸಹಜವಾಗಿಯೇ ಈತನಿಗೆ ಬಲ್ಜಿತ್‌ನ ಶಿಕ್ಷಣದ ಖರ್ಚನ್ನು ಸಂಭಾಳಿಸುವುದು ಬಹಳ ಕಠಿಣವಾಗಿತ್ತು. ಆದರೂ, ಬಲ್ಜಿತ್ ಉತ್ತಮ ಶಿಕ್ಷಣ ಪಡೆದು ಈಗ ರೈಲ್ವೇಯಲ್ಲಿ ನೌಕರಿ ಮಾಡುತ್ತಿದ್ದಾನೆ. ಇದಕ್ಕೆ ಕಾರಣ ಸಮಷ್ಟೀಪುರದ ‘ಬಿಎಸ್‌ಎಸ್ ಕ್ಲಬ್’ ಎಂಬ ಒಂದು ಕೋಚಿಂಗ್ ಕ್ಲಾಸು. ಬಲ್ಜಿತ್ ಕುಮಾರ್‌ನಂತೆಯೇ ಪಿಯೂಷ್ ಕುಮಾರ್ ಕೂಡಾ ಒಂದು ಬಡ ಕುಟುಂಬದಿಂದ ಬಂದವನು. ಅವನ ತಂದೆ ಒಂದು ಚಿಕ್ಕ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಅವನೂ ಇದೇ ‘ಬಿಎಸ್‌ಎಸ್ ಕ್ಲಬ್’ ಕೋಚಿಂಗ್ ಕ್ಲಾಸಿನ ನೆರವಿನಿಂದ ಈಗ ದೆಹಲಿಯಲ್ಲಿ ಇನ್‌ಕಮ್ ಟ್ಯಾಕ್ಸ್ ಇಲಾಖೆಯಲ್ಲಿ ನೌಕರಿಯಲ್ಲಿದ್ದಾನೆ. ಬಲ್ಜಿತ್ ಕುಮಾರ್ ಮತ್ತು ಪಿಯೂಷ್ ಕುಮಾರ್ ಇಬ್ಬರೂ ತಮ್ಮ ಶಿಕ್ಷಣಕ್ಕಾಗಿ ಖರ್ಚು ಮಾಡಿದ್ದು ಕೇವಲ ತಲಾ ೧೮ ಗಿಡಗಳು! ಹೌದು, ೧೮ ಗಿಡಗಳು!!

ಇಂದು ದೇಶದ ಮೂಲೆ ಮೂಲೆಗಳಲ್ಲೂ ಕೋಚಿಂಗ್ ಕ್ಲಾಸುಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ. ಇವೆಲ್ಲವೂ ಹಣ ಮಾಡಲು ಹುಟ್ಟಿಕೊಂಡ ಕೇಂದ್ರಗಳೆಂಬುದು ಸಾಮಾನ್ಯ ನಂಬುಗೆ. ಈ ನಂಬಿಕೆ ಸಂಪೂರ್ಣವಾಗಿ ಸುಳ್ಳೂ ಅಲ್ಲ. ಆದರೆ, ಬಿಹಾರದ ಸಮಷ್ಟಿಪುರದಲ್ಲಿರುವ ‘ಬಿಎಸ್‌ಎಸ್ ಕ್ಲಬ್’ ಕೋಚಿಂಗ್ ಕ್ಲಾಸ್ ಇದಕ್ಕೊಂದು ಅಪವಾದ. ಬಡಕುಟುಂಬಗಳ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಲು ಹುಟ್ಟಿಕೊಂಡ ‘ಬಿಎಸ್‌ಎಸ್ ಕ್ಲಬ್’ ತನ್ನ ವಿದ್ಯಾರ್ಥಿಗಳಿಂದ ಫೀಸಿನ ರೂಪದಲ್ಲಿ ಪಡೆಯವುದು ೧೮ ಗಿಡಗಳು!

ಇಂದು ಬಲ್ಜಿತ್ ಕುಮಾಕ್ ಮತ್ತು ಪಿಯೂಷ್ ಕುಮಾರ್‌ರಂತಹ ಏಳು ನೂರಕ್ಕೂ ಹೆಚ್ಚು ಬಡಮಕ್ಕಳು ಒಳ್ಳೆಯ ಶಿಕ್ಷಣ ಪಡೆದು, ಪರೀಕ್ಷೆಗಳನ್ನು ಪಾಸು ಮಾಡಿ ಸರ್ಕಾರೀ ಇಲಾಖೆಗಳಲ್ಲಿ ಉದ್ಯೋಗ ಪಡೆದಿದ್ದಾರೆ.

ಬಿಹಾರದ ರೊಸೇರಾ ನಗರದ ೩೪ ವರ್ಷ ಪ್ರಾಯದ ರಾಜೇಶ್ ಕುಮಾರ್ ಸುಮನ್ ಒಬ್ಬ ಪರಿಸರ ಮತ್ತು ‘ಕ್ಲೈಮೇಟ್ ಚೇಂಜ್’ ಚಳವಳಿಗಾರ. ೨೦೦೮ ರಲ್ಲಿ ಅವರು ‘ಬಿಎಸ್‌ಎಸ್ ಕ್ಲಬ್’ ಕೋಚಿಂಗ್ ಕ್ಲಾಸನ್ನು ಶುರು ಮಾಡಿದರು. ಬಿಎಸ್‌ಎಸ್ ಕ್ಲಬ್ ಅನ್ನುವುದು ‘ಬಿನೋದ್ ಸ್ಮೃತಿ ಸ್ಟಡಿ ಕ್ಲಬ್’ ಅನ್ನುವುದರ ಚುಟುಕು ರೂಪ. ಬಿನೋದ್ ಸ್ಮೃತಿ ರಾಜೇಶ್ ಕುಮಾರರ ಸೋದರ ಮಾವನ ಹೆಸರು. ಅವರೇ ರಾಜೇಶ್ ಕುಮಾರ್‌ಗೆ ಬಡಮಕ್ಕಳಿಗೆ ಸಹಾಯ ಮಾಡು ಎಂದು ಉತ್ತೇಜಿಸಿದ ಕಾರಣ ಅವರ ಹೆಸರಲ್ಲೇ ಈ ಕೋಚಿಂಗ್ ಕ್ಲಾಸನ್ನು ತೆರೆದರು. ಅದರಂತೆ, ‘ಬಿಎಸ್‌ಎಸ್ ಕ್ಲಬ್’ ಅವತ್ತಿನಿಂದ ಈವರೆಗೆ ೧೦ ಸಾವಿರಕ್ಕೂ ಹೆಚ್ಚು ಬಡಮಕ್ಕಳ ಬದುಕನ್ನು ಹಸನಾಗಿಸಿದೆ.

ಆದರೆ, ೧೮ ಗಿಡಗಳನ್ನು ಫೀಸಿನ ರೂಪದಲ್ಲಿ ಪಡೆಯುವುದಕ್ಕೆ ಕಾರಣವೇನು? ಎಂದು ಕೇಳಿದರೆ ರಾಜೇಶ್ ಕುಮಾರ್, ‘ಒಬ್ಬ ಮನುಷ್ಯ ತನ್ನ ಜೀವಮಾನದಲ್ಲಿ ಸರಾಸರಿ ೧೮ ಗಿಡಗಳು ಪರಿಸರಕ್ಕೆ ಬಿಡುಗಡೆ ಮಾಡುವ ಪ್ರಮಾಣದಷ್ಟು ಆಮ್ಲಜನಕವನ್ನು ಉಸಿರಾಡುತ್ತಾನೆ. ಮಕ್ಕಳಲ್ಲಿ ಮನುಷ್ಯನ ಬದುಕಿನಲ್ಲಿ ಗಿಡಗಳ ಪ್ರಾಮುಖ್ಯತೆ ಮನದಟ್ಟಾಗಲು ಅವರಿಂದ ಫೀಸಿನ ರೂಪದಲ್ಲಿ ೧೮ ಗಿಡಗಳನ್ನು ಪಡೆಯುತ್ತೇನೆ’ ಎಂದು ಹೇಳುತ್ತಾರೆ. ಹದಿನೆಂಟು ಗಿಡಗಳ ಫೀಸಿನ ಕಾರಣಕ್ಕಾಗಿ ಸ್ಥಳಿಯರು ‘ಬಿಎಸ್‌ಎಸ್ ಕ್ಲಬ್’ ನ್ನು ಗ್ರೀನ್ ಪಾಠಶಾಲಾ ಎಂದು ಕರೆಯುತ್ತಾರೆ.

ಕಳೆದ ೧೪ ವರ್ಷಗಳಲ್ಲಿ ‘ಬಿಎಸ್‌ಎಸ್ ಕ್ಲಬ್’ ಸುಮಾರು ೧.೭ ಲಕ್ಷ ಗಿಡಗಳನ್ನು ಫೀಸಿನ ರೂಪದಲ್ಲಿ ಪಡೆದಿದೆ. ಅದನ್ನೆಲ್ಲ ಉತ್ತರ ಬಿಹಾರದ ಸಮಷ್ಟಿಪುರ, ಬೆಗುಸರೈ, ದರ್ಭಾಂಗ, ಖಾಗಾರಿಯಾ ಮತ್ತು ಮುಝಾಪ್ಪರ್‌ಪುರ ಮೊದಲಾದ ಜಿಲ್ಲೆಗಳಲ್ಲಿ ನೆಟ್ಟಿದ್ದಾರೆ.

ಮಕ್ಕಳಿಂದ ಫೀಸು ಪಡೆಯದೆ ಕೋಚಿಂಗ್ ಕ್ಲಾಸಿನ ಖರ್ಚನ್ನು ಹೇಗೆ ನಿಭಾಯಿಸುತ್ತಾರೆ? ಅದಕ್ಕೆ ರಾಜೇಶ್ ಕುಮಾರ್, ‘ನಮ್ಮಲ್ಲಿ ಕೆಲಸ ಮಾಡುವ ಶಿಕ್ಷಕರೆಲ್ಲ ಸ್ವಯಂ ಸೇವಕರು. ಅವರೆಲ್ಲರೂ ಜೀವನ ನಿರ್ವಹಣೆಗೆ ಬೇರೆ ಉದ್ಯೋಗ ಮಾಡುತ್ತಾರೆ. ಸ್ವತಃ ನಾನು ಕೂಡಾ ಕೃಷಿ ಮಾಡುವ ಮೂಲಕ ನನ್ನ ಜೀವನ ನಡೆಸುತ್ತಿದ್ದೇನೆ’ ಎಂದು ಹೇಳುತ್ತಾರೆ. ಪ್ರಾರಂಭದಲ್ಲಿ ರಾಜೇಶ್ ಕುಮಾರ್ ಬಹಳ ಕಷ್ಟ ಪಡಬೇಕಾಯಿತು. ಅವರು ಯಾವುದಾದರೂ ಕಾರ್ಯಕ್ರಮಗಳಿಗೆ ಹೋಗಿ, ಗಿಡಗಳ ಪ್ರಸ್ತಾಪ ಮಾಡಿದರೆ ಜನ ಅವರನ್ನು ದೂರ ಓಡಿಸುತ್ತಿದ್ದರು. ಅವರನ್ನು ಹುಚ್ಚ ಅಂತ ಗೇಲಿ ಮಾಡುತ್ತಿದ್ದರು. ಇಂದು ಅದೇ ಜನ ತಮ್ಮ ಕಾರ್ಯಕ್ರಮಗಳಿಗೆ ಅವರನ್ನು ಅತಿಥಿಯಾಗಿ ಕರೆಸುತ್ತಾರೆ. ತಮ್ಮ ಮದುವೆ, ಜನ್ಮದಿನಾಚರಣೆ ಮೊದಲಾದ ಸಮಾರಂಭಗಳ ಆಮಂತ್ರಣ ಪತ್ರಿಕೆಗಳಲ್ಲಿ ಅವರ ಹೆಸರು ಛಾಪಿಸುತ್ತಾರೆ.

ರಾಜೇಶ್ ಕುಮಾರ್ ಗಿಡ ನೆಡುವುದರ ಜೊತೆಯಲ್ಲಿ ತನ್ನದೇ ರೀತಿಯಲ್ಲಿ ‘ಬೇಟಿ ಪಡಾವ್ ಬೇಟಿ ಬಚಾವ್’ ಕಾರ್ಯಕ್ರಮವನ್ನೂ ನಡೆಸುತ್ತಾರೆ. ‘ಬಿಎಸ್‌ಎಸ್ ಕ್ಲಬ್’ ಸಂಜೆ ಹೊತ್ತು ಹುಡುಗರಿಗೆ ಕ್ಲಾಸು ನಡೆಸಿದರೆ, ಬೆಳಗ್ಗಿನ ಹೊತ್ತು ಹುಡುಗಿಯರಿಗೆ. ಹುಡುಗಿಯರ ಸಂಖ್ಯೆ ಹೆಚ್ಚೂ ಕಡಿಮೆ ಹುಡುಗರಷ್ಟೇ ಇದೆ. ಹಳ್ಳಿಗಳಲ್ಲಿ ಸುತ್ತಿ, ‘ಮನೆಯ ಹೆಣ್ಣು ಮಕ್ಕಳ ಹೆಸರಲ್ಲಿ ಮನೆ ಎದುರು ಗಿಡ ನೆಡಿ. ಮುಂದೆ ಆ ಹೆಣ್ಣು ಮಕ್ಕಳು ಮದುವೆಯಾಗಿ ಹೋದಾಗ ಆ ಗಿಡಗಳು ನಿಮ್ಮ ಮನೆ ಎದುರು ನಳನಳಿಸುತ್ತ ದಿನಾ ಅವರ ನೆನಪನ್ನು ಮಾಡಿಸುತ್ತವೆ’ ಎಂದು ಹಳ್ಳಿಯ ಜನರನ್ನು ಕೇಳಿಕೊಳ್ಳುತ್ತಾರೆ. ಹಾಗೆಯೇ, ಹೆಣ್ಣು ಮಕ್ಕಳಿಗೂ ಅವರ ಕೈಯ್ಯಾರೆ ಗಿಡ ನೆಡಲು ಹುರಿದುಂಬಿಸುತ್ತಾರೆ. ಮುಂದೆ ಅವರು ಮದುವೆಯಾಗಿ ಬೇರೆ ಮನೆಗೆ ಹೋದಾಗ ಅವರ ಹೆತ್ತವರು ಆ ಗಿಡಗಳನ್ನು ತಮ್ಮ ಹೆಣ್ಣುಮಕ್ಕಳಂತೆ ನೋಡಿಕೊಳ್ಳುವಂತೆ ಅವರ ಹೆತ್ತವರನ್ನು ವಿನಂತಿಸುತ್ತಾರೆ. ನಾಲ್ಕು ಹಳ್ಳಿಗಳನ್ನು ದತ್ತು ಪಡೆದು, ಅಲ್ಲಿ ಗಿಡ ನೆಡುವುದನ್ನು ಚಳವಳಿಯ ರೂಪದಲ್ಲಿ ನಡೆಸಿ, ಜನರಿಗೆ ಮನುಷ್ಯನ ಬದುಕಿನಲ್ಲಿ ಗಿಡಗಳ ಪ್ರಾಮುಖ್ಯತೆಯನ್ನು ಮನದಟ್ಟು ಮಾಡುತ್ತಿದ್ದಾರೆ.

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

4 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

5 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

5 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

6 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

6 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

6 hours ago