ಎಡಿಟೋರಿಯಲ್

ಫೀಸು ಕಟ್ಟಲಾಗದ ಬಡ ಹುಡುಗ ಜಗತ್ತೇ ಕೊಂಡಾಡುವ ಶಾಲೆ ಕಟ್ಟಿದ!

ಪಂಜು ಗಂಗೊಳ್ಳಿ

ನಿನಗೆ ಫೀಸ್ ಕಟ್ಟಲು ಆಗದಿದ್ದರೆ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಏಳನೇ ಕ್ಲಾಸಲ್ಲಿ ಕಲಿಯುತ್ತಿದ್ದ ಮೆಮೂನ್ ಅಖ್ತರ್‌ನನ್ನು ಟೀಚರ್ ಶಾಲೆಯಿಂದ ಹೊರಹಾಕುತ್ತಾರೆ. ಇದರಿಂದ ಪುಟ್ಟ ಬಾಲಕ ಮೆಮೂನ್ ನೋವು, ಅವಮಾನದಿಂದ ಚಡಪಡಿಸಿದರೂ ಎದೆಗುಂದುವುದಿಲ್ಲ. ಬದಲಿಗೆ, ತಾನು ಈ ಶಿಕ್ಷಣ ಕ್ಷೇತ್ರದಲ್ಲೇ ಏನಾದರೂ ಮಾಡಿ ತೋರಿಸುತ್ತೇನೆ ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ. ಮೆಮೂನ್ ಅಖ್ತರ್ ಮುಂದೇನು ಮಾಡಿದ ಎಂಬುದು ಒಂದು ಸಿನಿಮೀಯ ಕತೆ!

ಪ. ಬಂಗಾಳದ ಟಿಕಿಯಾಪಾರಾ ಎಂಬಲ್ಲಿ ಒಂದು ಅತ್ಯಂತ ಬಡಕುಟುಂಬದಲ್ಲಿ ಹುಟ್ಟಿದ ಮೆಮೂನ್ ಅಖ್ತರ್‌ಗೆ ಶಾಲೆಗೆ ಹೋಗುವುದೆಂದರೆ ಬಹಳ ಖುಷಿ. ಕಲಿಕೆಯಲ್ಲೂ ಉತ್ತಮನಾಗಿದ್ದ. ಆವತ್ತು ಫೀಸು ಕಟ್ಟಲಾಗದ ಕಾರಣ ಟೀಚರ್ ಅವನನ್ನು ಶಾಲೆಯಿಂದ ಹೊರ ಹಾಕಿದ ನಂತರ ಮನೆಗೆ ಬಂದ ಮೆಮೂನ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಆ ದಿನದಿಂದ ಅವನು ನರ್ಸರಿ ಮತ್ತು ಒಂದನೇ ಕ್ಲಾಸ್ ಮಕ್ಕಳಿಗೆ ಟ್ಯೂಷನ್ ಕೊಡಲು ಶುರುಮಾಡುತ್ತಾನೆ. ಮತ್ತು, ತಾನು ಸ್ವತಃ ಒಬ್ಬರು ಟ್ಯೂಷನ್ ಟೀಚರಲ್ಲಿ ಟ್ಯೂಷನ್ ಪಡೆದು, ಖಾಸಗಿಯಾಗಿ ಹತ್ತನೇ ಕ್ಲಾಸ್ ಮತ್ತು ಹನ್ನೆರಡನೇ ಕ್ಲಾಸ್ ಪರೀಕ್ಷೆ ಕಟ್ಟಿ ಪಾಸಾಗುತ್ತಾನೆ.

ಮೆಮೂನ್ ಅಖ್ತರ್ ವಾಸಿಸುವ ವಠಾರ ಒಂದು ಸ್ಲಮ್ ಏರಿಯಾ. ಅಲ್ಲಿ ಅಪರಾಧಗಳು ನಿತ್ಯದ ದಿನಚರಿಯಂತೆ ನಡೆಯುತ್ತಿದ್ದವು. ಡ್ರಗ್ ಮಾರಾಟ, ವಾಹನಗಳ ಬಿಡಿಭಾಗಗಳನ್ನು ಕದ್ದು ಮಾರುವುದು ಅಲ್ಲಿ ಅತ್ಯಂತ ಸಾಮಾನ್ಯ ಚಟುವಟಿಕೆಗಳಾಗಿದ್ದವು. ಹೆಂಗಸರು ಮಕ್ಕಳು ಕೂಡಾ ಆ ದಂಧೆಯಲ್ಲಿ ಭಾಗಿಯಾಗುತ್ತಿದ್ದರು. ಶಾಲಾ ಶಿಕ್ಷಣ ಎಂಬುದಕ್ಕೆ ಅಲ್ಲಿ ಯಾವ ಮಹತ್ವವೂ ಇರಲಿಲ್ಲ. ೧೯೯೯ರ ಒಂದು ದಿನ ಬೆಳಿಗ್ಗೆ ಮೆಮೂನ್ ಟಿಕಿಯಾಪುರದ ಗಲ್ಲಿಯೊಂದರಲ್ಲಿ ನಡೆದು ಹೋಗುತ್ತಿದ್ದಾಗ ಒಬ್ಬ ರೌಡಿ ಹೆಂಗಸೊಬ್ಬಳಿಗೆ ಹೊಡೆಯುತ್ತಿದ್ದ. ಜನ ಸುತ್ತಲು ನೆರೆದು ನೋಡುತ್ತಿದ್ದರೇ ವಿನಾ ಯಾರೊಬ್ಬರೂ ಅವನನ್ನು ತಡೆಯಲು ಮುಂದಾಗಲಿಲ್ಲ. ಮೆಮೂನ್ ಮಧ್ಯ ಪ್ರವೇಶಿಸಿದಾಗ ರೌಡಿ ಇವನಿಗೂ ಬೈದು, ಹೊಡೆದರೂ ಆ ಹೆಂಗಸನ್ನು ಅವನ ಕೈಯಿಂದ ಪಾರು ಮಾಡುವಲ್ಲಿ ಸಫಲರಾದರು. ಆ ರೌಡಿ ಯಾಕೆ ಹೊಡೆಯುತ್ತಿದ್ದ ಎಂದು ಕೇಳಿದಾಗ ಆಕೆ, ಅವನು ಡ್ರಗ್ ಮಾರಲು ತನ್ನನ್ನು ಒತ್ತಾಯಿಸುತ್ತಿದ್ದ ಎಂದು ಹೇಳಿದಳು. ಅಷ್ಟರಲ್ಲಿ, ಇನ್ನೂ ಬಾಲಕನಾಗಿದ್ದ ಅವಳ ಮಗ ಅಲ್ಲಿಗೆ ಬರುತ್ತಾನೆ. ಅವನು ತನಗೆ ಕಲಿಯಲು ತುಂಬಾ ಆಸೆ, ಆದರೆ, ತನ್ನಲ್ಲಿ ಹಣ ಇಲ್ಲ ಎಂದು ಮೆಮೂನ್‌ಗೆ ಹೇಳುತ್ತಾನೆ.

ಮೆಮೂನ್ ಮರುದಿನ ತನ್ನ ಮನೆಗೆ ಬರುವಂತೆ ಆ ಬಾಲಕನಿಗೆ ಹೇಳುತ್ತಾರೆ.

ಮರುದಿನ ಬೆಳಿಗ್ಗೆ ಆ ಬಾಲಕ ಮೆಮೂನ್ ಮನೆಯೆದುರು ಹಾಜರಾಗುತ್ತಾನೆ. ಆ ದಿನದಿಂದಲೇ ಮೆಮೋನ್ ಆ ಬಾಲಕನಿಗೆ ಕಲಿಸಲು ಶುರು ಮಾಡುತ್ತಾರೆ. ಮರುದಿನ ಬರುವಾಗ ಆ ಬಾಲಕ ತನ್ನೊಂದಿಗೆ ಇನ್ನೂ ಮೂವರು ಬಾಲಕರನ್ನು ಕರೆತರುತ್ತಾನೆ. ಮೂರನೇ ದಿನ ಇನ್ನೂ ಇಬ್ಬರು ಬಾಲಕರನ್ನು ಕರೆತರುತ್ತಾನೆ. ಆ ಮೂಲಕ ಮೆಮೂನ್ ಅಖ್ತರ್ ಶಿಕ್ಷಣ ಯಾತ್ರೆ ಪ್ರಾರಂಭವಾಗುತ್ತದೆ. ೨೦೦೧ರಲ್ಲಿ ಮೆಮೂನ್ ತನ್ನ ಮನೆಯ ಪಕ್ಕದಲ್ಲೇ ೩೦೦ ಚದರಡಿ ವಿಸ್ತೀರ್ಣದ ಒಂದು ಕೋಣೆಯನ್ನು ಪಡೆದು ಟ್ಯೂಷನ್ ಕ್ಲಾಸ್ ಪ್ರಾರಂಭಿಸುತ್ತಾರೆ. ಆಗ ಅವರಲ್ಲಿಗೆ ಆರು ಮಕ್ಕಳು ಕಲಿಯಲು ಬರುತ್ತಿದ್ದರು. ಆ ಕೋಣೆ ಹೇಗಿತ್ತೆಂದರೆ ಮಳೆ ಬಂದಾಗ ನೀರೆಲ್ಲ ಒಳಗೇ ಸೋರುತ್ತದೆ. ಕೋಣೆಯ ಹತ್ತಿರದಲ್ಲಿ ಒಂದು ಚರಂಡಿ. ಮಕ್ಕಳಿಗೆ ಆ ಚರಂಡಿಯೇ ಟಾಯ್ಲೆಟ್. ಆದರೂ, ಶಿಕ್ಷಣದ ಮಹತ್ವವನ್ನು ಅರಿತ್ತಿದ್ದ ಮೆಮೂನ್‌ಗೆ ಮಕ್ಕಳಿಗೆ ಚೆನ್ನಾಗಿ ಕಲಿಸಲು ಅದಾವುದೂ ಅಡ್ಡಿಯಾಗಲಿಲ್ಲ.

೨೦೦೩ರ ಒಂದು ದಿನ ಮೆಮೂನ್ ಅಖ್ತರ್ ದಿನಪತ್ರಿಕೆಯನ್ನು ಓದುತ್ತಿದ್ದಾಗ ಅಮೆರಿಕದ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರ ಪತ್ನಿ ಸಾಮಾಜಿಕ ಸೇವೆಯಲ್ಲಿ ನಿರತರಾದ ಸಂಘಟನೆಗಳಿಗೆ ಆರ್ಥಿಕ ಸಹಾಯ ನೀಡುವ ಚಿಕ್ಕದೊಂದು ವರದಿ ಅವರ ಗಮನ ಸೆಳೆಯಿತು. ಮೆಮೂನ್ ಆಕೆಗೆ ತಾನು ಮಾಡುತ್ತಿರುವ ಕಾರ್ಯದ ಬಗ್ಗೆ ಒಂದು ಪತ್ರ ಬರೆದರು. ಕೆಲವು ದಿನಗಳಲ್ಲಿ ಸ್ವತಃ ಮೆಮೂನ್‌ಗೇ ಆಶ್ಚರ್ಯವಾಗುವಂತೆ ಆಕೆ ಅವರಿಗೆ ಹತ್ತು ಸಾವಿರ ರೂಪಾಯಿಗಳನ್ನು ಕಳಿಸಿಕೊಟ್ಟರು. ಅದು ಮೆಮೂನ್‌ಗೆ ಬಹಳ ಉಪಯೋಗಕ್ಕೆ ಬಂದಿತು. ಆ ಹಣದಿಂದ ಅವರು ತನ್ನ ಟ್ಯೂಷನ್ ಕೋಣೆಯ ಮಾಡನ್ನು ರಪೇರಿ ಮಾಡಿದರು. ಮಕ್ಕಳಿಗೆ ಚಿಕ್ಕದೊಂದು ಟಾಯ್ಲೆಟನ್ನು ಕಟ್ಟಿಸಿದರು. ಆಕೆ ಏಷಿಯನ್ ಏಜ್ ಪತ್ರಿಕೆಯಲ್ಲಿ ಮೆಮೂನ್ ಹಾಗೂ ಅವರ ಕಾರ್ಯದ ಬಗ್ಗೆ ಒಂದು ವರದಿಯನ್ನು ಬರೆಸಿದರು.

ಆ ವರದಿಯನ್ನು ಓದಿದ ಮುಂಬೈಯ ದಾನಿ ರಮೇಶ್ ಕಚೋಲಿಯಾ ಎಂಬವರು ಮೆಮೂನ್‌ಗೆ ನೆರವಿನ ಹಸ್ತ ಚಾಚಿದರು. ಅವರ ಸಹಕಾರದಿಂದ ಮೆಮೂನ್ ಟ್ಯೂಷನ್ ಕೋಣೆಗೆ ಬಾಗಿಲು, ಕಿಟಕಿ ಹಾಗೂ ಮಕ್ಕಳಿಗೆ ಬೆಂಚು, ಡೆಸ್ಕ್ ಮೊದಲಾದ ಫರ್ನಿಚರ್‌ಗಳನ್ನು ಮಾಡಿಸಿದರು. ೮೦ಕ್ಕೂ ಹೆಚ್ಚು ವರ್ಷವಾಗಿರುವ ರಮೇಶ್ ಕಚೋಲಿಯಾ ಈಗಲೂ ಮೆಮೂನ್‌ಗೆ ಸಹಾಯ ಮಾಡುವ ಜೊತೆಯಲ್ಲಿ ಸೂಕ್ತ ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ.

ಮುಂದೆ ತುಸು ಹೆಚ್ಚಿನ ಪ್ರಮಾಣದ ದೇಣಿಗೆ ಬರಲು ಶುರುವಾದಾಗ ಮೆಮೂನ್ ಅಖ್ತರ್ ಒಂದು ಜಮೀನು ಖರೀದಿಸಿ, ಅದರಲ್ಲಿ ತಮ್ಮ ಪ್ರಪ್ರಥಮ ಶಾಲೆಯನ್ನು ಕಟ್ಟಿಸಲು ಪ್ರಾರಂಭಿಸಿದರು. ಮಕ್ಕಳಿಗೆ ಯೂನಿಫಾರ್ಮ್ ಕೊಡಿಸಿದರು. ಪ್ರಪ್ರಥಮ ಬಾರಿಗೆ ಯೂನಿಫಾರ್ಮ್ ಧರಿಸಿದ ಮಕ್ಕಳ ಆನಂದಕ್ಕೆ ಪಾರವೇ ಇಲ್ಲ.

೨೦೦೮ರಲ್ಲಿ ಅವರ ಮೊತ್ತಮೊದಲ ಶಾಲೆ ಪೂರ್ಣಗೊಂಡಿತು. ಅದಕ್ಕೆ ‘ಸೆಮಾರಿಟಾನ್ ಮಿಷನ್ ಸ್ಕೂಲ್’ ಎಂದು ನಾಮಕರಣ ಮಾಡಿದರು. ಅದರಲ್ಲಿ ನರ್ಸರಿಯಿಂದ ಮೂರನೇ ತರಗತಿ ತನಕ ಇತ್ತು. ಮುಂದೆ, ಪ್ರತಿವರ್ಷ ಒಂದೊಂದು ತರಗತಿಯನ್ನು ಸೇರಿಸುತ್ತ ಹೋದರು. ೨೦೧೪ರಲ್ಲಿ ಮೆಮೋನ್ ತನ್ನ ಸಾಧನೆಯಲ್ಲಿ ಇನ್ನೊಂದು ದೊಡ್ಡ ಹೆಜ್ಜೆ ಇಟ್ಟರು. ಟಿಕಿಯಾಪಾರಾದಲ್ಲಿ ೧೫೦ ವರ್ಷ ಹಳೆಯದಾದ ‘ಬೆಲಿಲಿಯಸ್ ಟ್ರಸ್ಟ್ ಎಸ್ಟೇಟ್’ ಎಂಬ ಸಂಸ್ಥೆಗೆ ಸೇರಿದ ಒಂದು ಖಾಲಿ ಜಾಗ ಇತ್ತು. ಅದನ್ನು ಡ್ರಗ್ ಮಾಫಿಯಾ ಮತ್ತು ಸ್ಥಳೀಯ ಗೂಂಡಾಗಳು ಅತಿಕ್ರಮಣ ಮಾಡಿಕೊಂಡಿದ್ದರು. ಮೆಮೂನ್ ಸ್ಥಳೀಯರು ಮತ್ತು ಹೌರಾ ಪೊಲೀಸರ ಸಹಾಯದಿಂದ ಆ ಖಾಲಿ ಜಾಗವನ್ನು ತಮ್ಮ ವಶಕ್ಕೆ ಪಡೆದರು. ಎಂಟು ವರ್ಷಗಳ ನಂತರ, ಅಂದರೆ ೨೦೧೬ರಲ್ಲಿ ಪ. ಬಂಗಾಳ ಬೋರ್ಡು ಸೆಮಾರಿಟಾನ್ ಮಿಷನ್ ಸ್ಕೂಲಿಗೆ ಅಧಿಕೃತ ಮಾನ್ಯತೆ ನೀಡಿತು.

ಮುಂದೆ ೨೦೧೧ರಲ್ಲಿ ಇಂಗ್ಲೆಂಡ್ ಮೂಲದ ಸಂಶೋಧನಾ ಸಂಸ್ಥೆಯೊಂದು ‘ಸೆಮಾರಿಟಾನ್ ಮಿಷನ್ ಸ್ಕೂಲ್’ನ್ನು ಜಗತ್ತಿನ ಹತ್ತು ಅತ್ಯುತ್ತಮ ಸ್ಫೂರ್ತಿದಾಯಕ ಶಾಲೆಗಳಲ್ಲೊಂದು ಎಂದು ಗುರುತಿಸುವ ಮೂಲಕ ಮೆಮೋನ್‌ರ ಸಾಧನೆಯನ್ನು ವಿಶ್ವವ್ಯಾಪಿಗೊಳಿಸಿತು.

ಮೆಮೂನ್ ಅಖ್ತರ್ ಈಗ ಇಂತಹ ನಾಲ್ಕು ಸೆಮಾರಿಟಾನ್ ಮಿಷನ್ ಶಾಲೆಗಳನ್ನು ಕಟ್ಟಿಸಿದ್ದಾರೆ. ಅವುಗಳಲ್ಲಿ ೬೦೦೦ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಈ ಮಕ್ಕಳಲ್ಲಿ ಕೆಲವರ ತಂದೆಯಂದಿರು ಜೈಲುಗಳಲ್ಲಿದ್ದಾರೆ. ಕೆಲವು ಮಕ್ಕಳ ತಾಯಂದಿರು ಡ್ರಗ್ ಮಾರಾಟದ ಜಾಲದಲ್ಲೋ, ಬೇರಾವುದೋ ಕ್ರಿಮಿನಲ್ ಚಟುವಟಿಕೆಯಲ್ಲೋ ನಿರತರಾಗಿದ್ದಾರೆ. ಆದರೆ, ಈ ಮಕ್ಕಳಿಗೆ ತಮ್ಮ ಭವಿಷ್ಯ ತಮ್ಮ ಹೆತ್ತವರಂತಾಗದೆ ತಮ್ಮದೇ ದಾರಿಯಲ್ಲಿ ಕಟ್ಟಿಕೊಳ್ಳಬೇಕೆಂಬ ಬಯಕೆ. ಮೆಮೂನ್ ಅವರ ಮೂವರು ಮಕ್ಕಳೂ ಇದೇ ಸೆಮಾರಿಟಾನ್ ಮಿಷನ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ನಮಗೆಲ್ಲರಿಗೂ ಸಿಗುವುದು ಇದೊಂದೇ ಬದುಕು. ಅದನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿ. ನಮ್ಮ ಮಕ್ಕಳು ಕೇವಲ ಅಕ್ಷರಸ್ಥರಾದರೆ ಸಾಲದು ಅವರು ವಿದ್ಯಾವಂತರಾಗಬೇಕು. ಇದೇ ಸೆಮಾರಿಟಾನ್ ಮಿಷನ್ ಶಾಲೆಯ ಧ್ಯೇಯ ಎನ್ನುವ ಮೆಮೂನ್ ಅಖ್ತರ್ ತಮ್ಮ ಬದುಕನ್ನೇ ಈ ಮಕ್ಕಳ ಭವಿಷ್ಯಕ್ಕಾಗಿ ಧಾರೆ ಎರೆದಿದ್ದಾರೆ.

andolana

Recent Posts

ಶಿವಮೊಗ್ಗ ಜೈಲಿನಿಂದ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಬಿಡುಗಡೆ

ಶಿವಮೊಗ್ಗ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿರುವುದಾಗಿ ದೂರು ನೀಡಿ ಬಂಧಿತನಾಗಿದ್ದ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಈಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಚಿನ್ನಯ್ಯನಿಗೆ…

6 mins ago

ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌

ರಾಮನಗರ: ರಾಮನಗರದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌ ಎಸಗಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಕಾಸ್‌, ಪ್ರಶಾಂತ್‌, ಚೇತನ್‌…

33 mins ago

ಚಾಮರಾಜನಗರ| ಕಾಡಾನೆ ದಾಳಿ: ವ್ಯಕ್ತಿ ಸಾವು

ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯದ ಜಲ್ಲಿಪಾಳ್ಯ ಹತ್ತಿರ ಬೈಕ್‌ನಲ್ಲಿ…

1 hour ago

ಸಿದ್ದರಾಮಯ್ಯ ಔಟ್‌ ಗೋಯಿಂಗ್‌ ಸಿಎಂ: ಬಿ.ವೈ.ವಿಜಯೇಂದ್ರ ಲೇವಡಿ

ಬೆಳಗಾವಿ: ಸಿದ್ದರಾಮಯ್ಯ ಔಟ್‌ ಗೋಯಿಂಗ್‌ ಸಿಎಂ. ಇದು ಅವರ ಕೊನೆಯ ಅಧಿವೇಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಲೇವಡಿ ಮಾಡಿದ್ದಾರೆ.…

1 hour ago

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಮೈಸೂರಿನ ಕುವೆಂಪು ನಗರದ ಅಪೋಲೋ ಆಸ್ಪತ್ರೆಯ ಹಿಂಭಾಗ ದಲ್ಲಿರುವ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎದುರಿನ ದೊಡ್ಡಮೋರಿ ಯಿಂದ ತೆಗೆದ ಕಸವನ್ನು…

2 hours ago

ಓದುಗರ ಪತ್ರ: ರೈತರ ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳಿ

ಕಳೆದ ಮೂರು ವರ್ಷಗಳ ಅವಧಿಯಲ್ಲಿ, ರಾಜ್ಯದಲ್ಲಿ ೨,೮೪೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿಆರ್‌ಬಿ)…

2 hours ago