ಊರಿಗೆ ಹೋದರೆ ತಮ್ಮಿಬ್ಬರನ್ನೂ ಉಳಿಸುವುದಿಲ್ಲವೆಂದು ಯುವ ಪ್ರೇಮಿಗಳಿಗೆ ಖಾತ್ರಿಯಾಗಿದೆ. ಜಾನಗಿಗೆ ತನ್ನಪ್ಪ ಚಾಲಾಕಿ ಎಂಬುದು ಗೊತ್ತು. ಮೆತ್ತಗೆ ಬೆಣ್ಣೆ ಮಾತಾಡುತ್ತ ಕರೆದುಕೊಂಡು ಹೋಗಿ ಒಡವೆ ಕದ್ದಿದ್ದಾನೆ ಅಂತ ವೇಲುವನ್ನು ಜೈಲಿಗೆ ಹಾಕಿಸುತ್ತಾರೆ. ತನಗೆ ಬೇರೆ ಮದುವೆ ಮಾಡಿಸುತ್ತಾರೆಂದು ಗೊತ್ತು. ತಲ್ಲಣಕ್ಕೆ ಬೇರೆ ದಾರಿ ಕಂಡಿಲ್ಲ. ನಾವಿಬ್ಬರೂ ಇಲ್ಲೇ ಜೊತೆಯಾಗಿ ಸತ್ತು ಹೋಗೋಣ ಎಂದು ಒತ್ತಾಯಿಸಿದ್ದಾಳೆ.
ಸೀಫ್ ಸಾದಾ ಹುಡುಗ ವೇಲು. ಅವನಿಗೂ ಅಪಾಯ ಅರ್ಥವಾಗಿದೆ. ದೂಸರಾ ಮಾತಾಡದೆ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ತಕ್ಷಣವೇ ಎರಡು ಬಾರಿ ಜೋರಾಗಿ ಹೊಟ್ಟೆಗೆ ಇರಿದು ಕೊಂಡಿದ್ದಾನೆ. ಕರುಳು ಹೊರಬಂದು ರಕ್ತ ಚಿಮ್ಮತೊಡಗಿದೆ. ನೀನೂ ಹೊಡಕೋ ಎಂದು ಅದೇ ಚಾಕನ್ನು ಜಾನಗಿಗೆ ಕೊಟ್ಟಿದ್ದಾನೆ. ಅವನೇನೋ ಇರಿದುಕೊಂಡ. ಅವಳು? ಇರಿದುಕೊಳ್ಳಲು ಮೊದಲು ತೀರ್ಮಾನಿಸಿದ್ದೇ ಅವಳು. ಆದರೆ ಅವನ ಹೊಟ್ಟೆಯಿಂದ ಚಿಮ್ಮುತ್ತಿದ್ದ ರಕ್ತವನ್ನು ನೋಡಿ ಹೆದರಿ ಬಿಟ್ಟಳು! ಆದರೇನು? ತೀರ್ಮಾನ ಕೈಗೊಂಡಾಗಿದೆ. ಅವಳೂ ಇರಿದುಕೊಂಡಳು. ಆದರೆ ಆಳದ ಗಾಯವಾಗಲಿಲ್ಲ. ಮತ್ತೊಂದು ಬಾರಿ ಹೊಟ್ಟೆಗೆ ಚುಚ್ಚಿಕೊಳ್ಳಲು ಹೋದರೂ ಅದು ಮೇಲಿರಿತದ ಚಿಕ್ಕ ಗಾಯವಾಗಿದೆ. ಪ್ರಿಯತಮನ ದುಸ್ಥಿತಿ ನೋಡಿ ಬೊಬ್ಬಿರಿದಿದ್ದಾಳೆ. ಹೊರಗಿದ್ದವರೆಲ್ಲಾ ಓಡೋಡಿ ಬಂದರೂ ಏನೂ ಮಾಡಲಾಗದೆ ದಿಙ್ಮೂಢರಾಗಿದ್ದಾರೆ. ಕೊನೆಗೆ ಹೇಗೋ ಅವನ ಕರುಳನ್ನು ಹೊಟ್ಟೆಯೊಳಗೆ ಸೇರಿಸಿ ಬಟ್ಟೆಯೊಂದರಿಂದ ಮೃದುವಾಗಿ ಕಟ್ಟಿದ್ದಾರೆ. ಅದೋ ದೂಳು ಹಿಡಿದ ಹಳೆಯ ಬಟ್ಟೆ. ಅದರಿಂದ ಏನೇನು ಅನಾಹುತವಾಗುತ್ತದೆಯೆಂದು ಗೊತ್ತಿಲ್ಲ. ಅರ್ಜೆಂಟಿಗೆ ತೋಚಿದ್ದನ್ನು ಮಾಡಿದ್ದಷ್ಟೇ.
ಸೂರು ಹಾರುವಂತೆ ಜಾನಗಿ ಕಿರುಚಾಡಿದ್ದರಿಂದ ಸುತ್ತಮುತ್ತಲ ದೂರದ ಮನೆಯವರೂ ಏನಾಯ್ತೆಂದು ನೋಡಲು ಬಂದಿದ್ದಾರೆ. ಆ ಭೀಕರ ದೃಶ್ಯ ನೋಡಿ ಯಾರೋ ಕಂಟ್ರೋಲ್ ರೂಮಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಇಲ್ಲಿದ್ದ ಯಾರಿಗೂ ಏನೂ ಮಾಡಲಾಗದ ಅಯೋಮಯ ಸ್ಥಿತಿ. ಅಸ್ಪತ್ರೆಗೆ ಸೇರಿಸುವುದೋ? ಪೊಲೀಸಿಗೆ ತಿಳಿಸುವುದೋ? ಒಂದೂ ಗೊತ್ತಾಗದೆ ಚಡಪಡಿಕೆ. ಆಸ್ಪತ್ರೆಗೆ ಸೇರಿಸೋಣವೆಂದರೆ ಡ್ರೈವರ್ ಒಪ್ತಿಲ್ಲ. ‘ಇದು ಪೊಲೀಸ್ ಕೇಸಾಗುತ್ತೆ. ನಾನೀಗ ಕರೆದುಕೊಂಡು ಹೋದರೆ ಗಾಡಿ ಸೀಜ್ ಮಾಡುತ್ತಾರೆ. ಇದರ ಮೇಲಿನ ಸಾಲವೇ ತೀರಿಲ್ಲ. ಮರಡ್ರು ಕೇಸಿಗೆ ಸಿಕ್ಕಿ ಹಾಕಿಕೊಳ್ತೀನಿ. ನಾನೇ ಯಾವುದಾರೂ ಆಟೋ ಹಿಡ್ಕಂಡು ಬರ್ತೀನಿ’ ಎಂದು ಕಾರು ಓಡಿಸಿಕೊಂಡು ಹೋಗಿದ್ದಾನೆ!
1983ರ ಸಮಯ. ಸಿದ್ದಾರ್ಥನಗರವೆಂಬುದು ನಿರ್ಜನ ಹೊಸ ಬಡಾವಣೆ. ಅದೂ ರಾತ್ರಿ. ಆಟೋ, ಜಟಕಾ, ಟಾಂಗ, ಮಣ್ಣು ಮಸಿ ಯಾವುದೂ ಸಿಕ್ಕುತ್ತಿರಲಿಲ್ಲ. ಸಿಟಿ ತನಕ ಹೋಗಿ ಯಾವುದೋ ಆಟೋ ಹಿಡಿದುಕೊಂಡು ಬಂದಿದ್ದಾನೆ. ಮೈಲಿಗಟ್ಟಲೇ ಯಾವ್ಯಾವುದೋ ನಿರ್ಜನ ರಸ್ತೆಗಳನ್ನು ನೋಡಿ ಆಟೋದವನು ಹೆದರಿ ಹಾಗೇ ಹಿಂತಿರುಗಿ ಹೋಗಿದ್ದಾನೆ! ಇವನೂ ಖಾಲಿ ಕೈಲಿ ವಾಪಸಾಗಿದ್ದಾನೆ.
ನಾವು ಬರುವ ವೇಳೆಗೆ ವೇಲು ನೋವು ತಾಳಲಾರದೆ ಬಟ್ಟೆಯನ್ನು ಕಿತ್ತುಕೊಂಡಿದ್ದ. ರಕ್ತವೇನೋ ನಿಂತಿತ್ತು. ಆದರೆ ಕರುಳು ಹೊಟ್ಟೆಯೊಳಗಿಂದ ಬುರು ಬುರು ಬಲೂನಿನಂತೆ 10-12 ಅಡಿ ಹೊರಬಂದಿತ್ತು. ಗೌಂಡರ್ ಹೆಗಲಿನ ಟವಲನ್ನೇ ಮೃದುವಾಗಿ ಕಟ್ಟಿ ಕಾರಿನ ಹಿಂಭಾಗದ ಸೀಟಿನಲ್ಲಿ ಮಲಗಿಸಿದೆವು. ಮುಂಭಾಗದಲ್ಲಿ ಜಾನಗಿ ಮತ್ತು ಉಳಿದವರೆಲ್ಲ ಕೂತರು.
ಪರೀಕ್ಷಿಸಿದ ಕೆ.ಆರ್.ಆಸ್ಪತ್ರೆಯ ವೈದ್ಯರು ರೇಗಾಡಿದರು.
‘ಯಾವುದೋ ಬಟ್ಟೆ ಹೊದಿಸಿ ತಂದಿದ್ದೀರಲ್ಲಾ? ಖಛಿqಛ್ಟಿಛಿ ಜ್ಞ್ಛಿಛ್ಚಿಠಿಜಿಟ್ಞ ಆಗಿರುತ್ತೆ. ಕರುಳಿಗೇನು ಅಂಥ ಡ್ಯಾಮೇಜ್ ಆಗಿಲ್ಲ. ಆದರೆ ಪೆರಿಟೋನಿಯಂ ಮೆಂಬ್ರೇನ್ ಅಂತ ಇರುತ್ತೆ. ಅದು ಹೊಟ್ಟೆಯ ಎಲ್ಲ ಅಂಗಾಂಗಗಳನ್ನು ರಕ್ಷಿಸುವ ಹೊರಚೀಲ. ತುಂಬಾ ಸೂಕ್ಷ ವಾದ ಪೊರೆ ಅದೂ. ಹಾಗೇ ತರಬೇಕಿತ್ತು. ಯಾವುದೋ ಹಚ್ಚಡ ಕಟ್ಟಿ ತಂದಿದ್ದೀರಿ. ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ತೀವ್ರ ಸೋಂಕು ತಗುಲಿಬಿಡುತ್ತೆ. ರಾತ್ರಿ ಎಂಟು ಗಂಟೆಗೆ ತಿವಿದುಕೊಂಡಿದ್ದಾನೆ. ಈಗ ರಾತ್ರಿ ಹನ್ನೆರಡು ಗಂಟೆಯಾಗಿದೆ. ನಾಲ್ಕು ಗಂಟೆಗಳ ಕಾಲ expose ಆಗಿದೆ ಅಂದ್ರೆ ತುಂಬಾ ಅಪಾಯಕಾರಿ’ ಎಂದೆಲ್ಲ ಹೇಳಿ ಚಿಕಿತ್ಸೆ ಶುರು ಮಾಡಿದ್ದರು.
ಜಾನಗಿಗೆ ಅಂಥ ದೊಡ್ಡ ಗಾಯವೇನೂ ಆಗಿಲ್ಲದಿದ್ದುದರಿಂದ ಬ್ಯಾಂಡೇಜ್ ಹಾಕಿ ಕೂರಿಸಿದ್ದರು. ಇನ್ನೂ ವಾರ್ಡ್ ನಿಗದಿಯಾಗಿರಲಿಲ್ಲ. ಆದರೆ ಅವಳ ದುಃಖ ಹೇಳತೀರದು. ತನ್ನಿಂದಾಗಿ ದುರಂತ ಸಂಭವಿಸಿತೆಂಬ ಗಿಲ್ಟ್ ಕಾಡುತ್ತಿತ್ತು ಅನಿಸುತ್ತದೆ. ಮುಖ ಮುಚ್ಚಿಕೊಂಡು ಬಿಕ್ಕುತ್ತಿದ್ದಳು.
ವೇಲುವಿನ ಆಪರೇಷನ್ ನಡೆಯುತ್ತಿತ್ತು. ಆ ವೇಳೆಗೆ ಬಂದಿದ್ದ ಮಹಿಳಾ ಪೊಲೀಸರಿಗೆ, ‘ಇವಳನ್ನು ತುಂಬಾ ಎಚ್ಚರಿಕೆಯಿಂದ ಕಣ್ಣಲ್ಲಿ ಕಣ್ಣಿಟ್ಟು ಕಾಯ್ದುಕೊಳ್ಳಬೇಕು. ದುಃಖ ತಡೆಯದೇ ಅವಳೇ ಏನಾದರೂ ಮಾಡಿಕೊಳ್ಳಬಹುದು. ಇಲ್ಲವೇ ಎತ್ಲಾಗೋ ಪರಾರಿಯಾಗಬಹುದು. ಇಂಥ ಸಮಯದಲ್ಲಿ ಏನು ಮಾಡಿಕೊಳ್ಳುತ್ತಾರೋ ಗೊತ್ತಾಗಲ್ಲ. ಒಟ್ಟಿನಲ್ಲಿ ನೀವು ಎಚ್ಚರವಾಗಿ ನೋಡಿಕೊಳ್ಳಬೇಕು’ ಎಂದು ಸನ್ನಿವೇಶ ವಿವರಿಸಿದೆ. ಹೇಗೂ ಜಾನಗಿಯ ಪೋಷಕರಿದ್ದರಲ್ಲ ಅವರಿಗೂ ನೋಡಿಕೊಳ್ಳುವಂತೆ ತಾಕೀತು ಮಾಡಿದೆವು.
ನಮ್ಮ ಸರ್ಕಲ್ ಇನ್‌ಸ್ಪೆಕ್ಟರೂ ಬಂದರು. ‘ಇಂಥ ಘಳಿಗೆಯಲ್ಲಿ ಇವರೆಲ್ಲಾ ಏನು ಮಾಡಿಕೊಳ್ತಾರೋ ಹೇಳಲು ಬರೋದಿಲ್ಲ. ಒಂದು ಕೈಗೆ ಹ್ಯಾಂಡ್ ಕಫ್ ಹಾಕಿ ಇನ್ನೊಂದನ್ನು ಮಂಚಕ್ಕೆ ಕಟ್ಟಿಬಿಡೋಣ’ ಎಂದರು. ಅವರ ಸಲಹೆಯೇನೋ ಸರಿ. ಅಷ್ಟು ದುಃಖದಿಂದ ಆಘಾತಗೊಂಡಿರುವ ಹುಡುಗಿಗೆ ಕೈಬೇಡಿ ಹಾಕಿದರೆ ಇನ್ನೇನೇನು ವಿಪರೀತಕ್ಕಿಟ್ಟುಕೊಳ್ಳುತ್ತೋ ಎಂದು ಹಿಂಜರಿದೆ. ‘ಅವೆಲ್ಲಾ ರಿಸ್ಕೇ ಬೇಡಿ’ ಎಂದು ನಮ್ಮ ಇನ್‌ಸ್ಪೆಕ್ಟರ್ ಬೇಡಿ ಹಾಕಿಸಿಯೇ ಬಿಟ್ಟರು.
‘ಇದನ್ನೇ ದೊಡ್ಡ ಹಗರಣ ಮಾಡಿದರೆ ಏನು ಮಾಡೋದು ಸಾರ್?’
‘ಅವೆಲ್ಲಾ ಇದ್ದದ್ದೇ. ಅವಳು ಎರಡು ಮೂರು ಬಾರಿ ಓಡಿಹೋಗಲು ಯತ್ನಿಸಿದಳು. ವೇಲು ಇರುವ ವಾರ್ಡಿನತ್ತ ನುಗ್ಗಿದಳು ಅಂತ ಕೇಸ್ ಡೈರಿಯಲ್ಲಿ ಬರ್ಕೊಳ್ಳಿ. ‘lets save our skin first !’ ಎಂದರು. ಇನ್ನೊಂದು ಮಾತನ್ನೂ ಸೇರಿಸಿದರು. ‘ಇಬ್ಬರೂ ಸತ್ತು ಹೋಗೋಣ ಅನ್ನೋ ನಿರ್ಧಾರ ತಗಂಡೋಳೂ ಅವಳೇ. ಈಗ ಈ ಗಳಿಗೇಲಿ ಏನು ಮಾಡಿಕೊಳ್ತಾಳೋ ಹೇಳೋದಿಕ್ಕೆ ಆಗೋದಿಲ್ಲ.309 IPC(ಆತ್ಮಹತ್ಯೆ ಪ್ರಯತ್ನ) ಕೇಸನ್ನು ಅವಳ ಮೇಲೂ ತಗೊಳ್ಳಬೇಕು. ಅವಳ ತಂದೆಯ ಜಾಮೀನು ತಗೊಂಡು ಈಗಲೇ ಬಿಡುಗಡೆ ಮಾಡಿಬಿಡಿ’
ಇನ್ನೇನು ಠಾಣೆಗೆ ಹೊರಡಲಿದ್ದೆ. ಮಹಿಳಾ ಪೊಲೀಸ್ ಓಡಿಬಂದಳು, ‘ಸಾರ್ ಆ ನರ್ಸಮ್ಮ ಸಿಕ್ಕಾಪಟ್ಟೆ ಕೂಗಾಡ್ತಾ ಅವ್ಳೇ. ಅಟ್ಟದಿಂದ ಬಿದ್ದೋರನ್ನು ದಡಿ ತಗೊಂಡು ಬಾರಿಸಿದರಂತೆ ಪಾಪದ ಹುಡುಗೀಗೆ ಬೇಡಿ ಹಾಕಿದ್ದೀರಲ್ಲಾ? ಒಂಚೂರೂ ಮನುಷ್ಯತ್ವ ಬೇಡ್ವಾ ಅಂತಿದ್ದಾಳೆ. ವಾರ್ಡಿನಲ್ಲಿರೋ ಹೆಂಗಸ್ರೆಲ್ಲಾ ನಮಗೇ ಬೈತಿದ್ದಾರೆ’
‘ಸಬ್ ಇನ್‌ಸ್ಪೆಕ್ಟರ್‌ಗೆ ಫೋನ್ ಮಾಡ್ತೀನಿ. ನಮಗೂ ಇದು ಸರಿ ಬರ್ತಿಲ್ಲ’ ಅಂತ ಆಚೆ ಹೋಗಿ ಬಂದು ಅವರಿನ್ನೂ ಠಾಣೆಗೆ ಬಂದಿಲ್ಲಾಂತ್ಹೇಳಿ. ‘ಇನ್ನೊಂದು ಸಾರಿನೂ ಹಾಗೇ ಮಾಡಿ. ಎಲ್ರೂ ಸುಮ್ನೆ ಬಿದ್ಕೊತಾರೆ. ನೀವೂ ಅಯ್ಯೋ ಪಾಪ ಅಂದ್ಕೊಂಡು ಸುಮ್ನಿರಿ!’ ಎಂದು ಹೊರಟೆ.
(ಮುಂದುವರಿಯುವುದು)
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…