ಕಳೆದ ತಿಂಗಳು ಒಡಿಶಾದ ಭುವನೇಶ್ವರದಿಂದ 160 ಕಿ.ಮೀ. ದೂರದಲ್ಲಿರುವ ಬೆರುನಾಪಾಡಿ ಎಂಬ ಕುಗ್ರಾಮವೊಂದರಲ್ಲಿ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ‘ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ ಎಂಬ ಒಂದು ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿದರು. ಗ್ರಾಮೀಣ ಮಕ್ಕಳಿಗೆ ಉಚಿತವಾಗಿ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಹತ್ತು ಕೋಟಿ ರೂಪಾಯಿ ಖರ್ಚಿನಲ್ಲಿ ಇದನ್ನು ನಿರ್ಮಿಸಿದವರು 43 ವರ್ಷ ಪ್ರಾಯದ ಡಾ.ಪ್ರದೀಪ್ ಸೇಥಿ (ಕಪ್ಪು ಬಟ್ಟೆಯಲ್ಲಿರುವವರು) ಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಹೇರ್ ಟಾನ್ಸ್ ಪ್ಲಾಂಟ್ ಸರ್ಜನ್. ಈ ಸಂದರ್ಭದ ವಿಶೇಷವೇನೆಂದರೆ, ‘ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ ಸಂಸ್ಥೆ ತಲೆ ಎತ್ತಿ ನಿಂತಿರುವ ಜಾಗ 2020ರ ತನಕ ಒಂದು ಹೊಲವಾಗಿತ್ತು ಮತ್ತು ಪ್ರದೀಪ್ ಸೇಥಿ ಆ ಕೃಷಿ ಜಮೀನಿನಲ್ಲಿ ಒಬ್ಬ ಕೂಲಿಯಾಳಾಗಿ ದುಡಿಯುತ್ತಿದ್ದರು! ಅಂದು ಕೃಷಿಕೂಲಿಯಾಗಿದ್ದ ಪ್ರದೀಪ್ ಸೇಥಿ ಇಂದು ಒಬ್ಬ ಅಂತಾರಾಷ್ಟ್ರೀಯ ಹೇರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಆಗಿ ಬೆಳೆದುದು ಒಂದು ಸಿನಿಮೀಯ ಕಥೆ.
ಒಂದು ಬಡ ಕುಟುಂಬದಲ್ಲಿ ಹುಟ್ಟಿದ ಪ್ರದೀಪ್ ಸೇಥಿ ಸಂಸಾರ ನಡೆಸಲು ತನ್ನ ಹೆತ್ತವರಿಗೆ ನೆರವಾಗಲು ದಿನಗೂಲಿಯಾಗಿ ಹೊಲಗಳಲ್ಲಿ ದುಡಿಯುತ್ತಿದ್ದರು. ಆದರೆ, ಹಾಗೆ ದುಡಿಯುತ್ತಿದ್ದಾಗ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡು, ನವೋದಯ ಶಾಲೆಯಲ್ಲಿ ಪ್ರವೇಶ ಪಡೆದರು. ಅಲ್ಲಿ ಸೀನಿಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಪಡೆದು, ಒಡಿಶಾದ ಸಂಬಲಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದರು. ಮುಂದೆ, ದೆಹಲಿಯಲ್ಲಿ ‘ಆಲ್ ಇಂಡಿಯಾ ಮೆಡಿಕಲ್ ಸೈನ್ಸ್’ನಲ್ಲಿ ಡೆರ್ಮಟಾಲಾಜಿ (ಚರ್ಮಶಾಸ್ತ್ರ)ಯಲ್ಲಿ ಪದವಿ ಪಡೆದರು. ಬಡತನದಲ್ಲೂ ಪ್ರದೀಪ್ ಸೇಥಿ ಶೈಕ್ಷಣಿಕವಾಗಿ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾದುದು ವಿವಿಧ ಟ್ರಸ್ಟ್‌ಗಳು ನೀಡಿದ ಸ್ಕಾಲರ್‌ಶಿಪ್ ಹಾಗೂ ದಾನಿಗಳು ನೀಡಿದ ಆರ್ಥಿಕ ಸಹಾಯದಿಂದ.
ಪ್ರದೀಪ್ ಸೇಥಿ ಶಿಕ್ಷಣ ಮುಗಿಸಿದ ನಂತರ ಕೆಲ ಸಮಯದವರೆಗೂ ಉದ್ಯೋಗ ಸಿಗದ ಕಾರಣ, 2008ರಲ್ಲಿ ಹೃಷಿಕೇಶಕ್ಕೆ ಬಂದು ಅಲ್ಲಿ ತನ್ನ ಕ್ಲಿನಿಕ್ ತೆರೆದು ಪ್ರಾಕ್ಟಿಸ್ ಶುರು ಮಾಡಿದರು. ಅದು ಅವರಿಗೆ ವೃತ್ತಿಯಲ್ಲಿ ಬಹು ದೊಡ್ಡ ಅವಕಾಶ ಸಿಗಲು ಕಾರಣವಾಯಿತಲ್ಲದೆ, ಅವರ ಬದುಕಿನ ಉದ್ದೇಶವೇ ಬದಲಾಗುವಂತೆ ಮಾಡಿತು. ಅಲ್ಲಿ ಕ್ಲಿನಿಕ್ ತೆರೆದ ಕೆಲವೇ ವರ್ಷಗಳಲ್ಲಿ ಅವರು ತಮ್ಮ ಪತ್ನಿಯ ಸಹಭಾಗಿತ್ವದಲ್ಲಿ ‘ಯೂಜಿನಿಕ್ಸ್ ಹೇರ್ ಸೈನ್ಸ್’ ಎಂಬ ಹೆಸರಿನ ಹೇರ್ ಟ್ರಾನ್ಸ್‌ಪ್ಲಾಂಟ್ ಚೈನನ್ನು ಶುರು ಮಾಡಿದರು. ಇಂದು ದೇಶದಾದ್ಯಂತ ಏಳು ಶಾಖೆಗಳನ್ನು ಹೊಂದಿರುವ ಯೂಜಿನಿಕ್ಸ್ ಹೇರ್ ಸೈನ್ಸ್ ಸಾವಿರಾರು ಜನರಿಗೆ ಹೇರ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಕೊಡಿಸಿದೆ. ಅವರು ಚಿಕಿತ್ಸೆ ಕೊಟ್ಟ ಗ್ರಾಹಕರಲ್ಲಿ ಜನಪ್ರಿಯ ಸಿನಿಮಾ ತಾರೆಯರು, ಸಂಗೀತಗಾರರು, ಕ್ರೀಡಾಪಟುಗಳು, ಉದ್ಯಮಿಗಳು ಹಾಗೂ ಇತರ ಕ್ಷೇತ್ರಗಳ ವಿಐಪಿಗಳು ಸೇರಿದ್ದಾರೆ.
ಡಾ.ಪ್ರದೀಪ್ ಸೇಥಿಯವರ ವೃತ್ತಿ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಹೃಷಿಕೇಶವು ಅವರೊಳಗೆ ಸುಪ್ತವಾಗಿದ್ದ ಆಧ್ಯಾತ್ಮಿಕ ಚೇತನವನ್ನು ಕ್ರಿಯಾಶೀಲಗೊಳಿಸುವಲ್ಲೂ ಪ್ರಧಾನ ಪಾತ್ರ ವಹಿಸಿತು. ಅದರಲ್ಲೂ, ಸ್ವಾಮಿ ಪರಮಹಂಸ ಯೋಗಾನಂದರ ಬೋಧನೆಗಳು ಅವರನ್ನು ಬಹಳವಾಗಿ ಪ್ರಭಾವಿಸಿದ್ದವು. ಈ ಭೂಮಿ ಮೇಲಿನ ಎಲ್ಲವೂ ಒಂದು ಇನ್ನೊಂದರ ಭಾಗವಾಗಿದೆ ಎಂಬ ಪರಮಹಂಸ ಯೋಗಾನಂದರ ಮಾತು ಮತ್ತು, ಇತರರ ಸೇವೆ ಮಾಡುವ ಪ್ರಾಮುಖ್ಯತೆ ಬಗ್ಗೆ ಅವರ ಬೋಧನೆಗಳು ಪ್ರದೀಪ್ ಸೇಥಿಯವರ ಮೇಲೆ ಅಗಾಧ ಪರಿಣಾಮ ಬೀರಿದವು. ಯೋಗಾನಂದರ ‘ಆನ್ ಆಟೊಬಯಾಗ್ರಫಿ ಆಫ್ ಎ ಯೋಗಿ’ ಎಂಬ ಪುಸ್ತಕ ಪ್ರದೀಪ್ ಸೇಥಿಯವರ ಖಾಯಂ ಸಂಗಾತಿಯಾಯಿತು. ಇಂದಿಗೂ ಅವರು ಆ ಪುಸ್ತಕವನ್ನು ಇತರರಿಗೆ ಕಾಣಿಕೆಯಾಗಿ ಕೊಡುತ್ತಿರುತ್ತಾರೆ. ಆ ಪುಸ್ತಕ ಅವರಿಗೆ ಹಲವು ಸ್ನೇಹಿತರನ್ನು ಸಂಪಾದಿಸಿ ಕೊಟ್ಟಿತು. ತಾನು ಉತ್ತಮವಾದ ಶಿಕ್ಷಣ ಪಡೆದು ಈ ಮಟ್ಟಕ್ಕೆ ಬೆಳೆಯಲು ಗುರುತು ಪರಿಚಯವಿಲ್ಲದ ಹಲವು ಚಾರಿಟೆಬಲ್ ಟ್ರಸ್ಟ್‌ಗಳು, ಸಹೃದಯಿ ವ್ಯಕ್ತಿಗಳು ನೀಡಿದ ಸಹಕಾರವೇ ಕಾರಣ ಎಂದು ಬಗೆದ ಪ್ರದೀಪ್ ಸೇಥಿ, ತಾನು ಸಮಾಜದಿಂದ ಪಡೆದುದರ ಹತ್ತು ಪಟ್ಟನ್ನು ಸಮಾಜಕ್ಕೆ ವಾಪಸು ನೀಡಲು ನಿಶ್ಚಯಿಸುತ್ತಾರೆ.
ಡಾ.ಪ್ರದೀಪ್ ಸೇಥಿಯವರಿಂದ ಹೇರ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಮಾಡಿಸಿಕೊಂಡ ಅನೇಕ ವಿಐಪಿ ಗ್ರಾಹಕರು ಅವರ ಸ್ನೇಹಿತರಾಗಿ ಬದಲಾಗಿದ್ದರು. ಪ್ರದೀಪ್ ಸೇಥಿಯವರು ಅವರಲ್ಲಿ ತನ್ನ ಆಲೋಚನೆಯನ್ನು ಹಂಚಿಕೊಂಡಾಗ ಅವರುಗಳು ತಮ್ಮಿಂದಾದ ದೇಣಿಗೆ ನೀಡಲು ಮುಂದಾದರು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಆದಾರ್ ಪೂನಾವಾಲಾ ಒಂದು ಕೋಟಿ ರೂಪಾಯಿ ನೀಡಿದರು. ಝೀ ಟಿವಿಯ ಪುನೀತ್ ಗೊಯೆಂಕಾ 4.60 ಕೋಟಿ ರೂ. ಕೊಟ್ಟರು. ಬಜಾಜ್ ಕಂಪೆನಿಯ ರಾಜೀವ ಬಜಾಜ್ 3 ಕೋಟಿ ರೂ. ಕೊಟ್ಟರು. ಅವರಲ್ಲದೆ ಪ್ರದೀಪ್ ಸೇಥಿಯವರ ಗ್ರಾಹಕ ಪಟ್ಟಿಯಲ್ಲಿರುವ ಅನೇಕ ಖ್ಯಾತ ಕ್ರಿಕೆಟಿಗರು, ಸಿನಿಮಾ ತಾರೆಯರು ಅವರಿಗೆ ಆರ್ಥಿಕ ನೆರವು ನೀಡಿದರು. ಅವರೆಲ್ಲರ ಸಹಾಯದಿಂದ ಪ್ರದೀಪ್ ಸೇಥಿ ಹಿಂದೆ ತಾನು ಜೀವನ ನಿರ್ವಹಣೆಗೆ ಕೃಷಿ ಕೂಲಿ ಕೆಲಸ ಮಾಡುತ್ತಿದ್ದ ಅದೇ ಹೊಲದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ‘ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ ಕಟ್ಟಡ ಕಟ್ಟಿ ನಿಲ್ಲಿಸಿದರು.
‘ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ನ ಉದ್ಘಾಟನೆಯ ಸಮಯದಲ್ಲಿ ಡಾ.ಪ್ರದೀಪ್ ಸೇಥಿಯವರು ಮುಂದಿನ ಐದು ವರ್ಷಗಳಲ್ಲಿ ಒಂದು ನೂರು ಕೋಟಿ ರೂಪಾಯಿ ಸಂಗ್ರಹಿಸಿ ತನ್ನ ಆ ಶಾಲೆಗೆ ಅಂತಿಮ ರೂಪ ಕೊಡುವುದಾಗಿ ಘೋಷಿಸಿದ್ದಾರೆ. ಅವರ ಸ್ನೇಹಿತರಾಗಿರುವ ಆಕ್ಸ್ ಫರ್ಡ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯಗಳ ಕೆಲವು ಪ್ರೊಫೆಸರ್‌ಗಳು ಈಗಾಗಲೇ ‘ಉತ್ಕಲ್ ಗೌರವ್ ಇಂಟರ್‌ನ್ಯಾಷನಲ್ ಸ್ಕೂಲ್’ನ ಮಕ್ಕಳಿಗೆ ಆನ್‌ಲೈನ್ ಕ್ಲಾಸುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮೊದಲಾದ ದೇಶಗಳಿಂದ ಶಿಕ್ಷಕರು ಇಲ್ಲಿಗೇ ಬಂದು ಕಲಿಸಲು ಬೇಕಾದ ವ್ಯವಸ್ಥೆಗಳನ್ನು ನಿರ್ಮಿಸುತ್ತಿದ್ದಾರೆ. ಇಲ್ಲಿ ಕಲಿಯುವ ಗ್ರಾಮೀಣ ಮಕ್ಕಳನ್ನು ವಿದೇಶಗಳಿಗೆ ಕರೆದುಕೊಂಡು ಹೋಗಿ ಅವರಿಗೆ ಜಾಗತಿಕ ಮಟ್ಟದ ತಿಳಿವಳಿಕೆ ಲಭಿಸಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಮೈಸೂರು: ನೂತನ ವರ್ಷವನ್ನು ಮೈಸೂರಿನ ವಿಜಯನಗರದಲ್ಲಿರುವ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಯಿತು.…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ದೇಶ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೇ…
ಮೈಸೂರು: ಇಂದು ಹೊಸ ವರ್ಷದ ಸಂಭ್ರಮ ಮನೆ ಮಾಡಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.…
ರಾಜಕಾರಣಿಗಳು ಪ್ರತಿನಿತ್ಯ ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ವೈಯಕ್ತಿಕ ಪ್ರಚಾರ ಸಂಬಂಧ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಿ…
ಕಳೆದ ೨೫ ವರ್ಷಗಳಲ್ಲಿ ಷೇರುಪೇಟೆ ಸೇರಿದಂತೆ ಉಳಿದೆಲ್ಲ ಸ್ಥಿರಾಸ್ತಿಗಳ ಮೇಲಿನ ಹೂಡಿಕೆಗಿಂತ ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆ ಅತಿ…
ಮೈಸೂರಿನ ಕೆ.ಆರ್. ಆಸ್ಪತ್ರೆಯ ಕಲ್ಲು ಬಿಲ್ಡಿಂಗ್ ಬಳಿ ಕೋತಿಗಳ ಹಾವಳಿ ಮಿತಿ ಮೀರಿದ್ದು, ರೋಗಿಗಳ ಸಂಬಂಧಿಕರು ತರುವ ಊಟ, ತಿಂಡಿ…