ಎಡಿಟೋರಿಯಲ್

ಕತಾರ್‌ನಲ್ಲಿ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ; ಭಾರತಕ್ಕೆ ಆಘಾತ

ಪ್ಯಾಲಿಸ್ಟೇನ್ ಜನರ ಗಾಜಾಪಟ್ಟಿ ಪ್ರದೇಶದ ಮೇಲಿನ ಇಸ್ರೇಲ್ ಬಾಂಬ್ ದಾಳಿ ಭೀಕರ ಸ್ವರೂಪ ಪಡೆಯುತ್ತಿರುವಂತೆ ಇಸ್ರೇಲ್ ವಿರೋಧಿ ಹಮಾಸ್ ಉಗ್ರರಿಗೆ ಬೆಂಬಲವಾಗಿರುವ ಕತಾರ್ ಮತ್ತು ಇಸ್ರೇಲ್ ಪರವಾದಿ ಭಾರತದ ನಡುವಣ ಸಂಬಂಧಗಳು ಇಕ್ಕಟ್ಟಿಗೆ ಒಳಗಾಗುವಂಥ ಬೆಳವಣಿಗೆಗಳು ಕಳೆದ ವಾರ ನಡೆದಿವೆ. ಗೂಢಚರ್ಯೆ ಆರೋಪದಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ಬಂಧಿಸಲಾಗಿದ್ದ ಭಾರತದ ನೌಕಾಪಡೆಯ ಎಂಟು ಮಂದಿ ನಿವೃತ್ತ ಅಧಿಕಾರಿಗಳಿಗೆ ಕತಾರ್‌ನ ಕೋರ್ಟೊಂದು ಕಳೆದ ವಾರ ಗಲ್ಲುಶಿಕ್ಷೆ ಘೋಷಿಸಿರುವುದರಿಂದಾಗಿ ಉಭಯ ದೇಶಗಳ ನಡುವಣ ಬಾಂಧವ್ಯ ಆಘಾತಕ್ಕೆ ಒಳಗಾದಂತೆ ಆಗಿದೆ.

ಭಾರತ ನೌಕಾಪಡೆಯ ಆ ಮಾಜಿ ಅಧಿಕಾರಿಗಳು ಕತಾರ್‌ನ ದೋಹಾದಲ್ಲಿ ದಹರಾ ಗ್ಲೋಬಲ್ ಎಂಬ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕತಾರ್ ಸರ್ಕಾರ ಇಟಲಿಯಿಂದ ಯು212 ಎಂಬ ಎರಡು ಜಲಂತರ್ಗಾಮಿ ಯುದ್ಧ ನೌಕೆಗಳನ್ನು ಕೊಂಡಿದ್ದು ಅವುಗಳನ್ನು ಬಳಕೆಗೆ ತರುವ ಆರಂಭಿಕ ಕಾರ್ಯವನ್ನು ದಹರಾ ಗ್ಲೋಬಲ್‌ಗೆ ವಹಿಸಲಾಗಿತ್ತು. ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿಗಳು ಈ ಯೋಜನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ಆ ಸಬ್‌ಮೆರಿನ್‌ಗಳ ಬಗ್ಗೆ ಈ ಅಧಿಕಾರಿಗಳು ಇಸ್ರೇಲ್‌ಗೆ ರಹಸ್ಯವಾಗಿ ಮಾಹಿತಿ ನೀಡಿದ್ದರು ಎನ್ನುವುದು ಆರೋಪ (ಈ ಮಾಹಿತಿ ಅಧಿಕೃತವಲ್ಲ). ಭಾರತವಾಗಲಿ, ಕತಾರ್ ಆಗಲಿ ಆರೋಪ ಏನೆಂದು ಬಹಿರಂಗ ಮಾಡಿಲ್ಲ. ಅಷ್ಟೇ ಏಕೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್ ಕೂಡ ಆರೋಪಗಳೇನು ಎನ್ನುವುದನ್ನು ಬಹಿರಂಗ ಮಾಡಿಲ್ಲ. ಕೇವಲ ಗೂಢಚರ್ಯೆ ಆರೋಪ ಎಂದಷ್ಟೇ ತಿಳಿಸಲಾಗಿದೆ.

ಹಮಾಸ್ ಉಗ್ರರ ನಾಯಕರ ನೆಲೆವಾಸ ಕತಾರ್. ಇಸ್ರೇಲ್ ವಿರುದ್ಧದ ಹಮಾಸ್ ಉಗ್ರರ ಹೋರಾಟಕ್ಕೆ ಕತಾರ್ ಮೊದಲಿನಿಂದಲೂ ಬೆಂಬಲವಾಗಿ ನಿಂತಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಗಾಜಾದ ಹಮಾಸ್ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ದಾಳಿ ಭಿನ್ನ ರೀತಿಯ ಜಾಗತಿಕ ನಿಲುವುಗಳಿಗೆ ಕಾರಣವಾಯಿತು. ಹಮಾಸ್ ದಾಳಿಯನ್ನು ಭಾರತ ಖಂಡಿಸಿತಲ್ಲದೆ ಹಮಾಸ್ ವಿರುದ್ಧ ಇಸ್ರೇಲ್ ಘೋಷಿಸಿರುವ ಯುದ್ಧವನ್ನು ಭಾರತ ಬೆಂಬಲಿಸಿತು.

ಭಾರತದ ಈ ನಿಲುವು ಆಶ್ಚರ್ಯ ಹುಟ್ಟಿಸುವಂಥದ್ದೇನೂ ಆಗಿರಲಿಲ್ಲ. ಪ್ಯಾಲೆಸ್ಟೇನ್ ಸಮಸ್ಯೆ ಉದ್ಭವವಾದಾಗಿನಿಂದಲೂ ಭಾರತ ಪ್ಯಾಲೆಸ್ಟೇನ್ ಜನರ ಪರ ನಿಲ್ಲುತ್ತ ಬಂದಿದೆ. ಇಂದಿರಾ ಗಾಂಧಿ ಅವರು ಪ್ಯಾಲೆಸ್ಟೇನ್ ಪರವಾದಿ ನಿಲುವುಳ್ಳವರಾಗಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಭಾರತದ ವಿದೇಶಾಂಗ ನೀತಿ ಕ್ರಮೇಣ ಅಮೆರಿಕದ ಪರವಾಗಿ ತಿರುಗುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಮಿತ್ರ ದೇಶ ಇಸ್ರೇಲ್ ಪರವಾಗಿ ಭಾರತ ನಿಂತಿರುವುದು ಸಹಜವಾದುದೇ ಆಗಿದೆ.

ಸಮಸ್ಯೆ ಇರುವುದು ಇಲ್ಲಿಯೇ. ಕತಾರ್ ಪ್ಯಾಲೆಸ್ಟೇನ್ ಹಮಾಸ್ ಹೋರಾಟಗಾರರ ಪರ. ಭಾರತ ಇಸ್ರೇಲ್ ಪರ. ಪರಸ್ಪರ ವಿರುದ್ಧವಾದ ನಿಲುವು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಅಮೆರಿಕದ ಜೊತೆ ಬಾಂಧವ್ಯ ಹೆಚ್ಚಾದಂತೆ ಇಸ್ಲಾಮಿಕ್ ದೇಶಗಳ ಜೊತೆಗೂ ಅವರು ಮೈತ್ರಿ ಬೆಳೆಸಿದ್ದು ವಿಶೇಷ. ಮೋದಿ ಅವರ ಅಧಿಕಾರದ ಅವಧಿಯಲ್ಲಿ ಕತಾರ್ ಜೊತೆಗೂ ಭಾರತ ಉತ್ತಮ ಬಾಂಧವ್ಯ ಹೊಂದಿದೆ. ಸುಮಾರು ಏಳು ಲಕ್ಷ ಮಂದಿ ಭಾರತೀಯರು ಕತಾರ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಎರಡೂ ದೇಶಗಳ ನಡುವೆ ಉತ್ತಮ ವಾಣಿಜ್ಯ ಬಾಂಧವ್ಯ ಇದೆ. ಭಾರತ, ಮಧ್ಯಪ್ರಾಚ್ಯ, ಯುರೋಪ್ ಆರ್ಥಿಕ ವಲಯ ರಚಿಸುವ ಯೋಜನೆಗೆ ಜಿ-20ರ ದೆಹಲಿ ಶೃಂಗಸಭೆಯಲ್ಲಿ ಒಪ್ಪಂದವಾಗಿದೆ.

ಕತಾರ್ ಕೂಡ ಈ ಯೋಜನೆಯಲ್ಲಿ ಬಂಡವಾಳ ಹೂಡಲಿದೆ. ಇಂಥ ಸಂಬಂಧ ಇದೀಗ ಇಸ್ರೇಲ್ ಯುದ್ಧದ ಕಾರಣಕ್ಕೆ ಕೆಡುವ ಸೂಚನೆಗಳು ಕಾಣಿಸುತ್ತಿವೆ. ಭಾರತದ ನೌಕಾದಳದ ಮಾಜಿ ಅಧಿಕಾರಿಗಳನ್ನು ಗಲ್ಲು ಶಿಕ್ಷೆಗೆ ಒಳಗುಮಾಡುವ ಕೋರ್ಟಿನ ನಿರ್ಧಾರಕ್ಕೂ ಇಸ್ರೇಲ್ ವಿಚಾರದಲ್ಲಿ ಎರಡೂ ದೇಶಗಳ ನಡುವಣ ಭಿನ್ನ ನಿಲುವುಗಳಿಗೂ ಸಂಬಂಧ ಇರಲಾರದು. ಆದರೆ ಆರೋಪಿಗಳ ಪರ ಕತಾರ್ ಸರ್ಕಾರದ ಜೊತೆ ಮಾತುಕತೆ ಆರಂಭಿಸಿದರೆ ಈ ಭಿನ್ನ ನಿಲುವುಗಳು ಸಮಸ್ಯೆಗೆ ಪರಿಹಾರ ತಂದುಕೊಡುವ ಸಾಧ್ಯತೆ ಇಲ್ಲ. ಆದ್ದರಿಂದಲೇ ಈ ವಿಚಾರ ಈಗ ಸೂಕ್ಷ ಹಂತ ತಲುಪಿದೆ. ಮೋದಿ ಸರ್ಕಾರ ಈ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಈ ಎಂಟು ಮಂದಿಯನ್ನೂ ಕತಾರ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ ನಂತರ ಆರೋಪಿಗಳ ಕುಟುಂಬ ಕತಾರ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಜೈಲಿನಲ್ಲಿ ಒಬ್ಬೊಬ್ಬರನ್ನೂ ಪ್ರತ್ಯೇಕ ಕೋಣೆಗಳಲ್ಲಿ ಇರಿಸಲಾಗಿತ್ತು. ಈ ಮನವಿಯ ನಂತರ ಒಂದು ಕೋಣೆಗೆ ಇಬ್ಬರು ಆರೋಪಿಗಳನ್ನು ನಿಗದಿಮಾಡಲಾಗಿದೆ. ಜೊತೆಗೆ ಆ ಆರೋಪಿಗಳು ಪರಸ್ಪರ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ಭಾರತ ಸರ್ಕಾರಕ್ಕೂ ಆ ಕುಟುಂಬಗಳು ಮನವಿ ಸಲ್ಲಿಸಿದ್ದು, ಅಧಿಕಾರಿಗಳ ಜೊತೆ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ತಾನೆ ಆರೋಪಿಗಳ ಕುಟುಂಬ ವರ್ಗದವರು ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಸರ್ಕಾರ ಸಾಧ್ಯವಾದ ಎಲ್ಲವನ್ನೂ ಮಾಡುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಜೈಲಿನಲ್ಲಿರುವ ಅಪರಾಧಿಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ 2015ರಲ್ಲಿ ಒಪ್ಪಂದವಾಗಿದೆ. ಅದನ್ನು ಬಳಸಿ ಕೊಳ್ಳುವ ವಿಚಾರ ಇದೀಗ ಪ್ರಸ್ತಾಪವಾಗುತ್ತಿದೆ. ಆರೋಪಿಗಳು ಭಾರತದ ನೌಕಾಪಡೆಯಲ್ಲಿ ಉನ್ನತ ಹುದ್ದೆಗಳಲ್ಲಿ ಇದ್ದವರು. ಅನೇಕ ಪ್ರಶಸ್ತಿಗಳನ್ನು ಪಡೆದವರು. ಪ್ರಾಮಾಣಿಕತೆಗೆ ಹೆಸರಾದವರು. ನಿವೃತ್ತರಾದ ನಂತರ ಉತ್ತಮ ಉದ್ಯೋಗಕ್ಕಾಗಿ ಆ ಕಂಪೆನಿಗೆ ಸೇರಿದ್ದಾರೆ. ಅವರು ಇಸ್ರೇಲ್‌ಗೆ ಗೂಢಚರ್ಯೆ ಮಾಡಿದ್ದಾರೆ ಎಂದು ಊಹಿಸಿಕೊಳ್ಳುವುದೂ ಕಷ್ಟ ಎನ್ನುತ್ತಾರೆ ಅವರ ಜೊತೆ ಕೆಲಸ ಮಾಡಿದ ಭಾರತದ ನೌಕಾಪಡೆಯ ಅಧಿಕಾರಿಗಳು. ಈ ಪ್ರಕರಣದ ಹಿಂದೆ ಏನೋ ಸಂಚಿದೆ. ಪಾಕಿಸ್ತಾನ ಈ ಸಂಚಿನ ಹಿಂದೆ ಇರಬಹುದು ಎಂಬ ಅನುಮಾನವನ್ನು ಆ ಅಧಿಕಾರಿಗಳು ವ್ಯಕ್ತಮಾಡಿದ್ದಾರೆ. ಅಪರಾಧಕ್ಕಿಂತ ಹೆಚ್ಚಾಗಿ ಎರಡೂ ದೇಶಗಳ ನಡುವೆ ಇರುವ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೊದಲು ಬಗೆಹರಿಸಿಕೊಳ್ಳುವ ಅಗತ್ಯವಿದೆ. ಇದು ಆಗಬೇಕಾದರೆ ಮೊದಲು ಇಸ್ರೇಲ್ ಯುದ್ಧ ಅಂತ್ಯವಾಗಬೇಕು. ಆದರೆ ಯುದ್ಧ ಸದ್ಯಕ್ಕೆ ಅಂತ್ಯವಾಗುವ ಸೂಚನೆಗಳು ಕಾಣುತ್ತಿಲ್ಲ. ಆದರೆ ಹಮಾಸ್ ಉಗ್ರರ ವಶದಲ್ಲಿರುವ ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಗೆ ಕತಾರ್ ಸಂಧಾನ ನಡೆಸುತ್ತಿದೆ. ಈಗಾಗಲೇ ನಾಲ್ವರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ವಿದೇಶೀ ಒತ್ತೆಯಾಳುಗಳನ್ನೂ ಬಿಡುಗಡೆಗೊಳಿಸುವಲ್ಲಿ ಕತಾರ್ ಸಂಧಾನ ಕಾರರು ಯಶಸ್ವಿಯಾಗಿದ್ದಾರೆ. ಎಲ್ಲ ಒತ್ತೆಯಾಳುಗಳ ಬಿಡುಗಡೆಯಾದರೆ ಪರಿಸ್ಥಿತಿ ತಿಳಿಯಾಗಬಹುದು. ಆ ನಂತರ ಭಾರತ ಈ ಪ್ರಕರಣವನ್ನು ಇತ್ಯರ್ಥ ಗೊಳಿಸುವ ದಿಸೆಯಲ್ಲಿ ಕತಾರ್ ಜೊತೆಯಲ್ಲಿ ಸಂಧಾನ ನಡೆಸಬೇಕಿದೆ. ಇದೇನೇ ಇದ್ದರೂ ಈ ಪ್ರಕರಣವನ್ನು ಬಹು ಎಚ್ಚರಿಕೆಯಿಂದ ಭಾರತ ಸರ್ಕಾರ ನಿಭಾಯಿಸಬೇಕಿದೆ.

ಇಂಥ ಪ್ರಕರಣವನ್ನು ಭಾರತ ನಿಭಾಯಿಸಬೇಕಾಗಿ ಬಂದಿರುವುದು ಇದು ಮೊದಲೇನಲ್ಲ. ನೌಕಾಪಡೆಯ ಹಿರಿಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣ ತುಂಬಾ ಹಳೆಯದು. ಭಾರತದ ಗೂಢಚರ್ಯೆ ಸಂಸ್ಥೆ ‘ರಾ’ ಪರವಾಗಿ ಕೆಲಸ ಮಾಡುತ್ತಿರುವ ಆರೋಪದ ಮೇಲೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಕುಲಭೂಷಣ್ ಅವರನ್ನು ಬಲೂಚಿಸ್ತಾನದಲ್ಲಿ 2016ರಲ್ಲಿ ಬಂಧಿಸಿ ಜೈಲಿನಲ್ಲಿಟ್ಟಿದೆ. ವಾಸ್ತವವಾಗಿ ಅವರು ಇರಾನ್‌ನಲ್ಲಿ ನೆಲೆಸಿದ್ದು ಪಾಕಿಸ್ತಾನದ ಗೂಢಚರ್ಯೆ ಏಜೆಂಟರು ಅವರನ್ನು ಅಪಹರಿಸಿ ತಂದು ಅವರ ಮೇಲೆ ಆರೋಪ ಹೊರಿಸಲಾಗಿ ಜೈಲಿಗೆ ಕಳುಹಿಸಲಾಗಿದೆ ಎಂಬ ವರದಿಗಳೂ ಇವೆ. ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಸೇನಾ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಇದನ್ನು ವಿರೋಧಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಸದ್ಯಕ್ಕೆ ಗಲ್ಲು ಶಿಕ್ಷೆಗೆ ತಡೆ ಸಿಕ್ಕಿದೆ. ವಿಚಾರಣೆ ಮುಂದುವರಿಯಲಿದೆ. ಶತ್ರು ದೇಶವಾದ ಪಾಕಿಸ್ತಾನ ಜಾಧವ್ ಪ್ರಕರಣದಲ್ಲಿ ಸಂಧಾನಕ್ಕೆ ಮುಂದಾಗುವ ಸಾಧ್ಯತೆ ಇಲ್ಲ. ಆದರೆ ಕತಾರ್ ಪ್ರಕರಣದಲ್ಲಿ ಭಾರತ ಅಂತಾರಾಷ್ಟ್ರೀಯ ಕೋರ್ಟ್‌ಗೆ ಹೋಗಬೇಕಾದ ಪರಿಸ್ಥಿತಿ ಬರಲಾರದು. ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಸಾಧ್ಯತೆಗಳು ಇವೆ.

lokesh

Share
Published by
lokesh

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

6 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

7 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

7 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

8 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

8 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

8 hours ago