ಶ್ವಾನಗಳ ಸೇವೆಯಲ್ಲಿ ನಿರತರಾದ ಡಾ.ಅಶ್ವಿನಿ; ಕಾಯಕ ರತ್ನಗಳು

ಸೊಂಟ ಮುರಿದ ನಾಯಿಗಾಗಿ ಚಕ್ರಗಳ ಪರಿಕರ ತಯಾರಿಸಿದ ವೈದ್ಯೆ
ಸುಮ್ಮನೆ ಕುಳಿತಿದ್ದಾಗ ಹೀಗೊಂದು ಸ್ಥಿತಿಯ ಬಗ್ಗೆ ಯೋಚಿಸಿ. ಕಾಡುಗಳಿಲ್ಲ, ಪ್ರಾಣಿ-ಪಕ್ಷಿಗಳಿಲ್ಲ, ನದಿ-ತೊರೆಗಳು ಮಾರಾಟವಾಗಿವೆ. ಕೆರೆಗಳು ನಿವೇಶನಗಳಾಗಿವೆ. ಹೊಟ್ಟೆಗಳಿಗೆ ಹಣ ತುಂಬುವ ಹಪಾಹಪಿಕೆಯಲ್ಲಿ ಬಳಸಲಾದ ವಿಷಗಳಿಂದ ಕ್ರಿಮಿ-ಕೀಟ, ಉರಗಗಳ ಜಗತ್ತು ಕತ್ತಲಿಗೆ ಸರಿದಿದೆ. ಮರುಸೃಷ್ಟಿ ಕ್ರಿಯೆಯು ಪ್ರಶ್ನಾರ್ಥಕದಲ್ಲಿ ತೊಯ್ದಾಡುತ್ತಿದೆ. ಇಂತಹ ಜಗತ್ತಿನಲ್ಲಿ ಕೇವಲ ಮನುಷ್ಯರು ಅದರಲ್ಲೂ ಗಂಡು ಸಂತಾನವೇ ಉಳಿದುಬಿಟ್ಟರೆ? ಮನುಕುಲದ ಆಯಸ್ಸಿನ ಬಗ್ಗೆ ಸಹಜವಾಗಿಯೇ ಚಿಂತೆ ಮೂಡುತ್ತದೆ.
ಆದರೆ ಸೃಷ್ಟಿಯ ವೈಶಿಷ್ಟ್ಯವನ್ನೂ ನೋಡಿ! ದಬ್ಬಾಳಿಕೆಯಿಂದ ನಿಸರ್ಗವನ್ನು ರಕ್ಷಿಸಿ, ಸಮತೋಲನವನ್ನು ಕಾಯ್ದುಕೊಳ್ಳಲು ಮನುಷ್ಯ ಮನುಷ್ಯರೊಳಗೆ ಸಾವಿರಾರು ಬಗೆಯ ಚಿಂತೆನೆಗಳು ಹಾಗೂ ಸಹಸ್ಪಂದನೆಗಳು ಹೊಮ್ಮುತ್ತಿರುವುದರಿಂದ ಭಕ್ಷಿಸುವವರೆದುರು, ಕೆಲವರಾದರೂ ರಕ್ಷಕರಾಗಿ ಹುಟ್ಟಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಯುವಪೀಳಿಗೆಯ ಭಾಗವೊಂದು ಇರಲೇಬೇಕಾದವುಗಳ ಅಭಾವ, ಅಧ್ಯಯನಶೀಲ ಸ್ವಭಾವ ಹಾಗೂ ಜೀವನದೊತ್ತಡಗಳ ಕಾರಣ ಪರಿಸರಕ್ಕೆ ಬಹಳಷ್ಟು ಹತ್ತಿರವಾಗುತ್ತಿದೆ. ಈ ಸೆಳೆತದಲ್ಲಿನ ಮಾನವೀಯ ಸಮುದಾಯದ ಪ್ರತಿನಿಧಿ ಇಂದಿನ ಕಾಯಕ ರತ್ನ ಡಾ.ಅಶ್ವಿನಿ!
ದಂತವೈದ್ಯೆಯಾದ ಡಾ.ಅಶ್ವಿನಿ ಅವರು ಸುಮಾರು ಹತ್ತು ವರ್ಷಗಳ ಕಾಲ ಬ್ರಿಟನ್‌ನಲ್ಲಿ ಮಾಹಿತಿ ವಿಶ್ಲೇಷಕಿಯಾಗಿ ದುಡಿದವರು. ಆದರೆ ಇಂದು ಅಶ್ವಿನಿ ಮೂಕಪ್ರಾಣಿಗಳ ನೋವಿನ ಅನುಸಂಧಾನಗಾರ್ತಿಯಾಗಿರುವುದು ಸೋಜಿಗವಾದರೂ ಅನುಕರಣೀಯ. ಬಾರ್ಬಿ ಎಂಬ ಬೀದಿ ನಾಯಿಮರಿಯೊಂದು ಅಶ್ವಿನಿಯವರೊಳಗೆ ಒಬ್ಬ ಶ್ವಾನ ಸಂರಕ್ಷಕಿಯನ್ನು ಸೃಷ್ಟಿಸಿತ್ತು ಎಂಬುದು ಅವರಿಗೇ ಗೊತ್ತಿರಲಿಲ್ಲ. ಉನ್ನತ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ತೆರಳುವ ಮುನ್ನ ಅಶ್ವಿನಿ, ಬಾರ್ಬಿಗೆ ಆಹಾರ ನೀಡಿ ಮುದ್ದಿಸಿ, ಸಲ್ಲಾಪ ನಡೆಸಿದ್ದರು. ಬಾರ್ಬಿಯನ್ನು ಬಿಟ್ಟು ಬ್ರಿಟನ್‌ಗೆ ಹೋಗಿದ್ದ ಅವರು, ರಜೆಯಲ್ಲಿ ವಾಪಸ್ಸಾದಾಗ, ಬಾರ್ಬಿ ಸೊಂಟ ಮುರಿದುಕೊಂಡು ಮೂಲೆ ಸೇರಿರುವುದನ್ನು ತಿಳಿದು ವ್ಯಥೆಪಟ್ಟಿದ್ದರು. ಅದಕ್ಕೆ ನಡೆಯಲನುಕೂಲವಾಗುವಂತೆ ತಾವೇ ಚಕ್ರಗಳಿರುವ ಪರಿಕರವೊಂದನ್ನು ತಯಾರಿಸಿ, ಜೋಡಿಸಿ ಅದು ಓಡಾಡುವಂತೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಪುನರ್ವಸತಿ ಕೇಂದ್ರಕ್ಕೂ ಸೇರಿಸಿದ್ದರು. ಲಂಡನ್‌ನಲ್ಲಿ ಬಿಡುವಿನ ಸಮಯದಲ್ಲಿ ಶ್ವಾನ ಜೀವನದ ಬಗ್ಗೆ ಅಂರ್ತಜಾಲದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾಗಲೇ, ಶ್ವಾನಗಳ ರಕ್ಷಣೆಗೆ ಆಂಬ್ಯುಲೆನ್ಸ್‌ವೊಂದು ಬೇಕಾಗಿದೆ ಎಂದು ಬೆಂಗಳೂರಿನ ಸಂಸ್ಥೆಯೊಂದು ವಿನಂತಿಸಿತ್ತು. ಅಶ್ವಿನಿ, ತಾವು ದುಡಿದ ದುಡಿಮೆಯಲ್ಲೇ ಆಂಬ್ಯುಲೆನ್ಸ್ ಕೊಡಿಸಿದರು. ಭಾರತದಲ್ಲಿ ಪ್ರಾಣಿಗಳ ಮೇಲೆ ನಡೆಯುತ್ತಿರುವ ಹಿಂಸೆ ಒಂದೆಡೆ, ಅವುಗಳ ರಕ್ಷಣೆಗೆ ಶ್ರಮಿಸುವವರು ಇನ್ನೊಂದೆಡೆ! ಇವೆಲ್ಲವನ್ನೂ ದಿನಿನಿತ್ಯ ಗಮನಿಸುತ್ತಲೇ ಶ್ವಾನಾನುರಾಗಿಯಾಗಿ ಅಶ್ವಿನಿ ಭಾರತಕ್ಕೆ ಮರಳಿ ತಾವು ಕೂಡಿಟ್ಟಿದ್ದ ಹಣದ ಸಹಾಯದೊಡನೆ ಶ್ವಾನಗಳ ಸಂರಕ್ಷಣೆಗಿಳಿದು ಇಂದು ಸಂಪೂರ್ಣವಾಗಿ ಈ ಕಾಯಕದಲ್ಲೇ ಕಳೆದುಹೋಗಿದ್ದಾರೆ.
ಶ್ವಾನ ಸಂತತಿಗೆ ಮನುಷ್ಯನೊಡನೆ ಸುಮಾರು ನಲವತ್ತು ಸಾವಿರ ವರ್ಷಗಳ ಅವಿನಾಭಾವ ಸಂಬಂಧವಿದೆಯೆಂದು ಅಧ್ಯಯನವೊಂದು ಹೇಳುತ್ತದೆ. ಇಂತಹ ಸುದೀರ್ಘ ಸಂಬಂಧದಲ್ಲಿ ಸ್ವಾರ್ಥಿ ಮನುಷ್ಯ ಮಾತ್ರ ಶ್ವಾನವನ್ನು ಬಳಸಿ ಮರೆತಂತೆ ನಟಿಸಿದರೂ, ಅದು ತನ್ನ ಬಾಲವನ್ನಾಡಿಸುತ್ತಲೇ ಮನುಷ್ಯನ ಹಿಂದೆ ಬಿದ್ದಿದೆ. ಜನಸಾಮಾನ್ಯ ಏರಲಾರದ ಆನೆ ಹಾಗೂ ಕುದುರೆಗಳನ್ನು ಹೊರತುಪಡಿಸಿ ಮನುಷ್ಯನ ಮನಸ್ಸಿನಾಳವನ್ನು ಶ್ವಾನ ಅರಿತಷ್ಟು ಗಾಢವಾಗಿ ಬೇರೊಂದು ಪ್ರಾಣಿ ಅರಿತಿರಲಾರದು. ಆಧುನಿಕ ಮನುಷ್ಯ ಮಾತ್ರ ಶ್ವಾನಗಳ ಮೂಕ ಭಾಷೆಯನ್ನು ಅರಿಯದೇ ಹೋದದ್ದು ವಿಪರ್ಯಾಸ. ಅಂತಹವುದರಲ್ಲಿ ಡಾ.ಅಶ್ವಿನಿಯಂತಹ ಬೆರಳಣಿಕೆಯ ಜನರು ಮಾತ್ರ ಈ ಜೀವಿಗಳ ದುಗುಡ-ದುಮ್ಮಾನದ ಅತಂತ್ರ ಜೀವನದ ಮನವಿಗಳನ್ನು ಸ್ವೀಕರಿಸುವ ಹರಿಕಾರರಾಗಿ ಅವುಗಳ ಬದುಕುವ ಹಕ್ಕನ್ನು ಮರಳಿಸುವತ್ತಾ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವುದು ಒಂದು ಮಾನವೀಯತೆಯ ಬೆಳ್ಳಿ ರೇಖೆಯಾಗಿದೆ.
“ಜನರು ಬೀದಿ ನಾಯಿಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಸಾರ್. ಒಂದಂತೂ ಸತ್ಯ ನಮ್ಮಂತೆಯೇ ಅವುಗಳಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ. ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳಿರುವ ಪ್ರದೇಶಗಳಲ್ಲಿ ಈ ಪ್ರಾಣಿಗಳ ನಡವಳಿಕೆಗಳು ಮನುಷ್ಯನಿಗಿಂತಲೂ ಉತ್ತಮವಾಗಿದೆ. ಆ ಏರಿಯಾಗಳನ್ನು ಕಾಯುವ ಗೂರ್ಖರಂತೆ ಅವು ಜೀವಿಸುತ್ತಿವೆ. ಅವೇಳೆಯಲ್ಲಿ ಬರುವ ಕಳ್ಳ-ಕಾಕರು, ಪ್ರಾಣಿಗಳು ಹಾಗೂ ಹಾವುಗಳಿಂದಾಗಿ ಶ್ವಾನಗಳು ಸಹಜವಾಗಿಯೇ ಹೆಚ್ಚು ಬೊಗಳುತ್ತವೆ. ಕೆಲವು ಬಾರಿ ನಾಯಿಗಳು ವಾಹನಗಳನ್ನು ಅಟ್ಟಿಸಿಕೊಂಡು ಬರುವುದುಂಟು. ಶ್ವಾನಗಳ ಸೂಕ್ಷ್ಮ ಶಬ್ದ ಗ್ರಹಿಕೆ ವಾಹನಗಳ ಕರ್ಕಶ ಶಬ್ದಗಳಿಂದ ಕಿರಿಕಿರಿಗೊಂಡಾಗ ಹಾಗೂ ಸವಾರರ ನಿರ್ಲಕ್ಷ್ಯಕ್ಕೆ ಅವುಗಳ ಮರಿಗಳು ಬಲಿಯಾದಾಗ ಭಾವನಾತ್ಮಕವಾಗಿ ಜರ್ಜರಿತವಾದ ಶ್ವಾನಗಳು ವಾಹನಗಳನ್ನು ಅಟ್ಟಿಸುವ ಗೀಳಿಗೆ ಬಿದ್ದಿರುತ್ತವೆ. ಈ ಸ್ಥಿತಿಗೆ ನಾವೆಷ್ಟು ಹೊಣೆ?” ಎಂದು ಡಾ.ಅಶ್ವಿನಿ ಮರುಪ್ರಶ್ನಿಸುತ್ತಾರೆ.
ರೋಗ ಹಾಗೂ ಅಪಘಾತಕ್ಕೀಡಾದ ಶ್ವಾನಗಳಿಗೆ ವೈಯಕ್ತಿಕ ಗಮನ ನೀಡಿ ಗುಣಪಡಿಸಿ, ಸ್ವಸ್ಥಾನಕ್ಕೆ ಬಿಡುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯ ‘ಪೀಪಲ್ ಫಾರ್ ಅನಿಮಲ್’ ಸಂಸ್ಥೆಯೊಡನೆ ಕೈ ಜೋಡಿಸಿ ಶ್ವಾನಗಳ ಸಂತಾನ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶುದ್ಧ ಸಸ್ಯಹಾರಿಯಾಗಿದ್ದಾಗಿಯೂ, ಶ್ವಾನಗಳ ಹಕ್ಕಿಗೆ ವಂಚನೆಯಾಗದಂತೆ ಮಾಂಸಾಹಾರವನ್ನೂ ಬಡಿಸುತ್ತಿದ್ದಾರೆ. ಬಹುಶಃ ಮೈಸೂರಿಗೇ ಮೊದಲಿಗರಾಗಿ “ರ‍್ಯಾಬಿಸ್ ಚುಚ್ಚುಮದ್ದು ಅಭಿಯಾನ”ವನ್ನು ಪ್ರಾರಂಭಿಸಿ, ನೂರಾರು ಶ್ವಾನಗಳಿಗೆ ಲಸಿಕೆ ನೀಡುವುದರ ಮೂಲಕ ಅವುಗಳ ಹಾಗೂ ನಾಗರಿಕರ ಆರೋಗ್ಯವನ್ನೂ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. “ಶ್ವಾನ ಸಂತಾನವೃದ್ಧಿ ಹಾಗೂ ಮಾರಾಟ ಪ್ರತಿಷ್ಠೆಯ ವ್ಯಾಪಾರವಾಗಿದೆ. ಪರದೇಶಿ ನಾಯಿಗಳು ರಾಜಭೋಗದಲ್ಲಿದ್ದು, ಸ್ಥಳೀಯ ಶ್ವಾನಗಳು ಬೀದಿಯಲ್ಲಿರುವುದು ಯಾವ ನ್ಯಾಯ? ಕನಿಷ್ಠ ನಿರ್ವಹಣೆಯ, ಸದೃಢ ಹಾಗೂ ಸ್ಪಂದನಾಶೀಲ ನಾಟಿ ತಳಿಗಳನ್ನು ನಾಗರಿಕರು ದತ್ತು ತೆಗೆದುಕೊಳ್ಳವುದು ಹಾಗೂ ವೈಜ್ಞಾನಿಕವಾಗಿ ಅವುಗಳ ಸಂತಾನ ನಿಯಂತ್ರಣ ಮಾಡುವುದರಿಂದ ಬೀದಿಯಲ್ಲಿ ಅವು ಅಂಡಲೆಯದಂತೆ ತಡೆಯಬಹುದು” ಎಂಬ ಡಾ.ಅಶ್ವಿನಿ ಅವರ ಮಾತುಗಳಲ್ಲಿ ಹೊಸ ಆಶಯ, ದೃಷ್ಟಿಕೋನ ಕಾಣುತ್ತವೆ.
ಸಮಾನ ಮನಸ್ಕ ಸ್ವಯಂಸೇವಕರುಗಳ ಸಹಾಯದೊಡನೆ ಸ್ವದೇಶಿ ಶ್ವಾನಗಳ ರಕ್ಷಣೆ ಮತ್ತು ದತ್ತು ಸ್ವೀಕಾರದ ಚಳುವಳಿಯನ್ನೇ ಹಮ್ಮಿಕೊಂಡಿದ್ದಾರೆ. ಜೀವಿಸುವ ಸಮಾನ ಹಕ್ಕನ್ನು ಶ್ವಾನಗಳಿಗೂ ವಿಸ್ತರಿಸಿ ಅವುಗಳ ಅಳಲನ್ನು ಸಂವೇದನೆಯೊಡನೆ ಮನುಷ್ಯ ಭಾಷೆಗಿಳಿಸಿ, ಜೀವಪರವಾಗಿ ಜೀವಪ್ರಭೇದಗಳ ಸಮತೋಲನಕ್ಕಾಗಿ ಬಾಳುತ್ತಿರುವ ಡಾ.ಅಶ್ವಿನಿಯಂತಹ ಪ್ರಾಮಾಣಿಕ, ನಿಷ್ಠೂರ ನಡೆಯ ವ್ಯಕ್ತಿಗಳ ಸಂತತಿ ಇನ್ನಷ್ಟು ವೃದ್ಧಿಸಲಿ.

ಒಡನಾಡಿ ಸ್ಟ್ಯಾನ್ಲಿ  

× Chat with us