ದಲಿತರಿಗಿರಲಿ, ದಲಿತರ ನಾಯಿಗಳಿಗೂ ಸ್ವಾತಂತ್ರ್ಯ ಇಲ್ಲ!

ಇದೇ ಆಗಸ್ಟ್ 15ರಂದು ನಮ್ಮ ದೇಶವು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವೈಭವದಿಂದ ಆಚರಿಸುತ್ತಿದ್ದರೆ, ಇತ್ತ ದಲಿತ ಸಂಘರ್ಷ ಸಮಿತಿ ಕೆಲ ಕಾರ್ಯಕರ್ತರು ಬಂಡಾಯ ಕವಿ ಸಿದ್ದಲಿಂಗಯ್ಯ ಅವರ ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ… ಎಂಬ ಕ್ರಾಂತಿ ಗೀತೆಯನ್ನು ಕರಪತ್ರ ಮಾಡಿ ನಡುರಸ್ತೆಯಲ್ಲಿ ನಿಂತು ಹಂಚುತ್ತಿದ್ದರು. ಇದನ್ನು ಕಂಡ ಆರಕ್ಷಕ ಪಡೆ ಆ ಕರಪತ್ರವನ್ನು ಕಿತ್ತು ಅವರಿಗೆ ಬುದ್ಧಿ ಹೇಳಿ ಅಲ್ಲಿಂದ ಕಳುಹಿಸಿದರು..?

ಇದಾದ 5 ದಿನಗಳ ಅಂತರದಲ್ಲಿ ಅಂದರೆ ಆಗಸ್ಟ್ 20 ರಂದು ಪಕ್ಕದ ತಮಿಳುನಾಡಿನ ವಿರುದುನಗರ ಜಿಲ್ಲೆಯ ಗ್ರಾಮವೊಂದರಲ್ಲಿ ಅರುಣ್ ದತ್ತಿಯಾರ್ ಎಂಬ ದಲಿತ ಕುಟುಂಬಕ್ಕೆ ಸೇರಿದ ಮುನಿಸ್ವಾಮಿ ಎಂಬುವವರು ಸಾಕಿದ್ದ, ಪಾಪ ಮಾನವ ನಿರ್ಮಿತ ಕೀಳು- ಮೇಲಿನ, ಜಾತಿ, ಧರ್ಮದ ಹಂಗಿಲ್ಲದ ಹೆಣ್ಣು ನಾಯಿಯೊಂದು ಅದೇ ಊರಿನ ಮೇಲಿನ ಕೇರಿಯ ನಾಗರಾಜು ಎಂಬುವವರ ನಾಯಿಗೆ ಬೇಟೆಗೆ ಹೋಗಿದ್ದಾಗ ಕಚ್ಚಿಬಿಡುತ್ತದೆ.

ತಳ ಜಾತಿಯ ನಾಯಿಯೊಂದು ಸವರ್ಣೀಯರ ನಾಯಿಗೆ ಅದು ಹೇಗೆ ಕಚ್ಚಲು ಸಾಧ್ಯ ಎಂದು ಹಠಕ್ಕೆ ಬಿದ್ದು, ಇದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡ ನಾಗರಾಜು ಮತ್ತು ಅವನ ಕುಟುಂಬದ ಮೂವರು ಸೇರಿ ಮುನಿಸ್ವಾಮಿಯವರ ನಾಯಿಯನ್ನು ಸೆರೆಹಿಡಿದು ಅದನ್ನು ಮರವೊಂದಕ್ಕೆ ಕಟ್ಟಿ ಕಲ್ಲು ದೊಣ್ಣೆಗಳಿಂದ ಮನಸೋ ಇಚ್ಛೆ ಹೊಡೆದು, ತಮ್ಮದೇ ಇನ್ನೆರಡು ನಾಯಿಗಳನ್ನು ಬಿಟ್ಟು ಅದನ್ನು ಕಚ್ಚಿಸಿ ಕ್ರೂರವಾಗಿ ಕೊಂದರು. ಅಷ್ಟೇ ಅಲ್ಲದೆ ಆ ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿ ವಿಕೃತ ಆನಂದವನ್ನೂ ಪಟ್ಟಿದ್ದರು.

ಇದರಿಂದ ತೀವ್ರವಾಗಿ ನೊಂದ ಮುನಿಸ್ವಾಮಿ ಊರಿನ ಹಿರಿಯರಿಗೆ ಈ ವಿಷಯ ತಿಳಿಸಿ ಅವರಿಂದಲೂ ನ್ಯಾಯ ಸಿಗದಿದ್ದಾಗ ಪೊಲೀಸ್ ಠಾಣೆಯ ಮೆಟ್ಟಿಲೇರಿ ಕೃತ್ಯ ಎಸಗಿದವರ ವಿರುದ್ಧ ದೂರು ದಾಖಲಿಸಿದ್ದನು. ತದನಂತರ ಊರಿನ ಹಿರಿಯರ ಮಧ್ಯಸ್ಥಿಕೆ ಮತ್ತು ತಳ ಜಾತಿಯ ಕೇವಲ ಹತ್ತು ಕುಟುಂಬ ಮಾತ್ರ ಆ ಊರಲ್ಲಿ ಇರುವ ಭಯದಿಂದ ಮುನಿಸ್ವಾಮಿ ದೂರು ವಾಪಸ್ ಪಡೆದು ತನ್ನ ನಾಯಿಯ ಕಳೇಬರವನ್ನು ಊರ ಹೊರಗೆ ಅಂತ್ಯಕ್ರಿಯೆ ಮಾಡಿ ಸುಮ್ಮನಾದನು. ಇಷ್ಟಕ್ಕೂ ಸುಮ್ಮನಾಗದ ಮೇಲಿನವರು ಇಡೀ ಆ ಊರಿನ ದಲಿತರಾರು ನಾಯಿಗಳನ್ನು ಸಾಕಲೇಬಾರದು ಎಂಬ ಫರ್ಮಾನು ಹೊರಡಿಸುತ್ತಾರೆ.

ಆದರೆ ಇತ್ತ ನಾಯಿಯನ್ನು ಕ್ರೂರವಾಗಿ ಕೊಂದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪ್ರಾಣಿ ದಯಾ ಸಂಘದ ಕಾರ್ಯಕರ್ತನೊಬ್ಬ ಈ ಘಟನೆಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲಾಗಿ ಕೃತ್ಯ ಎಸಗಿದವರ ವಿರುದ್ಧ ʻಪ್ರಾಣಿಗಳ ಕ್ರೌರ್ಯ ಪ್ರತಿಬಂಧಕ ಕಾಯ್ದೆʼ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದೀಗ ವಿಚಾರಣೆ ನಡೆಯುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಯಾವುದೇ ಪ್ರಾಣಿಯ ಮೇಲೆ ದೌರ್ಜನ್ಯ ನಡೆದರೂ ಹೌಹಾರುತ್ತಿದ್ದ ಮೇನಕಾ ಗಾಂಧಿಯವರು ಮೌನಕ್ಕೆ ಶರಣಾಗಿರುವುದು ಮಾತ್ರ ಖೇದಕರ ವಿಷಯ.

ಆದರೆ ಇಂದು ದಲಿತರಿಗೆ ಸಂವಿಧಾನ ಬದ್ಧವಾಗಿ ದಕ್ಕಬೇಕಿದ್ದ ಸಮಾನ ಹಕ್ಕುಗಳು ಅತ್ತಕಡೆ ಇರಲಿ, ಕಡೇ ಪಕ್ಷ ತಮ್ಮಿಷ್ಟದ ನಾಯಿಯನ್ನೂ ಸಾಕಲು ಸ್ವಾತಂತ್ರ್ಯ ಇಲ್ಲದ ಈ ಅಮೃತ ಮಹೋತ್ಸವ ಖಂಡಿತವಾಗಿಯೂ ನಮ್ಮನ್ನು ಮತ್ತೆ ಮತ್ತೆ ಕೇಳುವಂತೆ ಮಾಡುತ್ತಿದೆ. ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ…?

ಕೆಳ ಜಾತಿಯ ನಾಯಿಯೊಂದು ಮೇಲ್ಜಾತಿಯವರ ನಾಯಿಗೆ ಅದು ಹೇಗೆ ಕಚ್ಚಲು ಸಾಧ್ಯ ಎಂದು ಹಠಕ್ಕೆ ಬಿದ್ದು, ಇದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡ ನಾಗರಾಜು ಮತ್ತು ಅವನ ಕುಟುಂಬದ ಮೂವರು ಸೇರಿ ಮುನಿಸ್ವಾಮಿಯವರ ನಾಯಿಯನ್ನು ಸೆರೆಹಿಡಿದು ಅದನ್ನು ಮರವೊಂದಕ್ಕೆ ಕಟ್ಟಿ ಕಲ್ಲು ದೊಣ್ಣೆಗಳಿಂದ ಮನಸೋ ಇಚ್ಛೆ ಹೊಡೆದು, ತಮ್ಮದೇ ಇನ್ನೆರಡು ನಾಯಿಗಳನ್ನು ಬಿಟ್ಟು ಅದನ್ನು ಕಚ್ಚಿಸಿ ಕ್ರೂರವಾಗಿ ಕೊಂದರು. ಅಷ್ಟೇ ಅಲ್ಲದೆ ಆ ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿ ವಿಕೃತ ಆನಂದವನ್ನೂ ಪಟ್ಟಿದ್ದರು.

-ಕೆ. ಶಿವಕುಮಾರ್, ಮೈಸೂರು

× Chat with us