ಜಿಲ್ಲೆಗಳು

ಅಲೆಮಾರಿಗಳ ಹೋರಾಟಕ್ಕೆ ಸಿಗುವುದೇ ಜಯ ?

ಏಕಲವ್ಯ ನಗರದ ಅಲೆಮಾರಿ ಜನರ ನಿರಶನ ಅಂತ್ಯ, ಸಮಸ್ಯೆ ಜೀವಂತ

          ಗಿರೀಶ್‌ ಹುಣಸೂರು     

    ಮೈಸೂರು: ಇವರು ಹಗಲಿನಲ್ಲಿ ರಾಜ ಮಹಾರಾಜರಾಗಿ ಮೆರೆಯುವವರು. ಬೇರೆಯವರ ಭವಿಷ್ಯವನ್ನು ತಮ್ಮ ಗ್ರಹಿಕೆಯಲ್ಲಿ ಹೇಳಿ ಸಾಂತ್ವನ ತುಂಬುವವರು. ಕಾಯಿಲೆ ಕಸಾಲೆಗಳಿಗೆ ಮದ್ದು ನೀಡುವವರು. ಹುಲಿ ಚರ್ಮ, ಉಗುರು ಎಂದು ಹೇಳಿ ಉಳ್ಳವರ ಬಳಿ ಚೌಕಾಶಿ ನಡೆಸುವವರು. ಆದರೆ ಕತ್ತಲಾಯಿತೆಂದರೆ ಇವರ ಮನೆಯಿಲ್ಲದ ಮನಗಳಲ್ಲೂ ಕತ್ತಲು ಆವರಿಸುತ್ತಿತ್ತು. ಎಲ್ಲೋ ರಸ್ತೆ ಬದಿಯಲ್ಲಿ ಹಾಕಿದ ಟೆಂಟ್‌ ಗಳಲ್ಲಿ ನಿದ್ದೆಗೆ ಜಾರುವಷ್ಟರಲ್ಲಿ ಜನರು ಬಂದು ಗದ್ದಲ ಎಬ್ಬಿಸುತ್ತಿದ್ದರು. ಹಿರಿಯರಿಂದ ಬಂದ ಅಲೆಮಾರಿ ಜೀವನ ಸಾಕಾಯಿತೆಂದು ಸ್ವಂತ ನೆಲೆಗಾಗಿ ಹೋರಾಡುತ್ತಿರುವ ಅಲೆಮಾರಿ ಜನಾಂಗದ ಕಥೆ ಇದು.

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬರೋಬ್ಬರಿ 56 ದಿನಗಳ ಕಾಲ ಅಹೋರಾತ್ರಿ ನಿರಶನ ನಡೆಸಿದ ಅಲೆಮಾರಿಗಳು ನೂತನ ಡಿಸಿ ಭರವಸೆ ಮೇರೆಗೆ ಶನಿವಾರ ತಮ್ಮ ನಿರಶನ ಕೊನೆಗೊಳಿಸಿದ್ದಾರೆ. ನಮಗೆ ಜಾಗದ ಹಕ್ಕುಪತ್ರ ನೀಡಿ, ಪ್ರತ್ಯೇಕ ಮನೆಗಳನ್ನು ನಿರ್ಮಿಸಿಕೊಡಿ ಎಂಬ ಆಗ್ರಹ ಈಡೇರುವುದೋ ಇಲ್ಲವೋ ಗೊತ್ತಿಲ್ಲ. ಆದರ ಅಲೆಮಾರಿ ಜೀವನ ಬಿಟ್ಟು ಒಂದೆಡೆ ನೆಲೆಸಿ ಜೀವನ ಕಟ್ಟಿಕೊಳ್ಳಲು ಇವರು ಮುಂದಾಗಿರುವುದು ನಿಜ.

ಹಕ್ಕಿಪಿಕ್ಕಿ, ದೊಂಬಿದಾಸ, ಶಿಳ್ಳೆಕ್ಯಾತ, ಬುಡಬುಡಿಕೆ ಮತ್ತಿತರೆ ಅಲೆಮಾರಿ ಸಮುದಾಯದ ಈ ಜನರು ಮೊದಲು ಹೆಬ್ಬಾಳ ಕೆರೆ ಅಂಗಳದಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದರು. ಡಾ.ಸುಧಾಮೂರ್ತಿ ಅವರ ಇನ್ಫೋಸಿಸ್ ಪ್ರತಿಷ್ಠಾನ ಹೆಬ್ಬಾಳ ಕೆರೆ ಅಭಿವೃದ್ಧಿಗೆ ಮುಂದಾದ ಹಿನ್ನೆಲೆಯಲ್ಲಿ ಅಲೆಮಾರಿಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಿದ ಜಿಲ್ಲಾಡಳಿತ, ಅನತಿ ದೂರದಲ್ಲಿರುವ ಶ್ಯಾದನಹಳ್ಳಿಯ ಸ.ನಂ 53ರಲ್ಲಿನ 9.17 ಎಕರೆ ಗೋಮಾಳ ಪ್ರದೇಶದಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸಲು ಅವಕಾಶ ನೀಡಿತು. 2004ರಲ್ಲಿ 354 ಅಲೆಮಾರಿ ಕುಟುಂಬಗಳನ್ನು ಪಟ್ಟಿ ಮಾಡಿ ಸ.ನಂ. 37ರ ಬಿ ಖರಾಬು ಜಾಗಕ್ಕೆ ಸ್ಥಳಾಂತರಿಸಲಾಯಿತು.

ನಂತರ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಏಕಲವ್ಯ ನಗರದಲ್ಲಿ ಜೆ–.ನರ್ಮ್ ಯೋಜನೆಯಡಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ, ಲಾಟರಿ ಮೂಲಕ ಮನೆಗಳನ್ನು ಹಂಚಿಕೆ ಮಾಡಲಾಯಿತು. ಆದರೆ ಮೂಲಭೂತ ಸೌಕರ್ಯಗಳಿಲ್ಲದ ಗುಂಪು ಮನೆಗಳಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳು, ವಯೋವೃದ್ಧರು ಮಹಡಿ ಮನೆಗಳಿಗೆ ಹತ್ತಿ-ಇಳಿಯಲು ಆಗುತ್ತಿಲ್ಲ. ಕುರಿ-ಕೋಳಿಗಳನ್ನು ಸಾಕಿಕೊಂಡಿರುವುದರಿಂದ ಮಹಡಿ ಮನೆಗಳಲ್ಲಿ ವಾಸಿಸಲು ಆಗುವುದಿಲ್ಲ. ಶ್ಯಾದನಹಳ್ಳಿಯಲ್ಲಿಯೇ ನಮಗೆ ವೈಯಕ್ತಿಕ ಮನೆಗಳನ್ನು ಕಟ್ಟಿಕೊಡಿ. ಜಾಗದ ಹಕ್ಕು ಪತ್ರ ಕೊಡಿ
ಎಂದು ಹಲವರು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಅರ್ಜಿ ನೀಡಿದರು. ಹೀಗೆ ಹಲವರು ಅರ್ಜಿ ಸಲ್ಲಿಸಿದರೂ ಕೇವಲ 32 ಮಂದಿಗೆ ಮಾತ್ರ ಸ್ವೀಕೃತಿ ಪತ್ರ ನೀಡಲಾಗಿದೆ ಎಂದು ಆರೋಪಿಸುತ್ತಾರೆ ಪ್ರತಿಭಟನಾ ನಿರತ ಅಲೆಮಾರಿಗಳು.

ಅಲೆಮಾರಿಗಳ ಈ ಬೇಡಿಕೆ ಒಪ್ಪದ ಸರಕಾರ ಶ್ಯಾದನಹಳ್ಳಿಯಲ್ಲಿ ಜಾಗದ ಹಕ್ಕು ಪತ್ರ ಕೊಡಲು ನಿರಾಕರಿಸುತ್ತಾ ಬಂದಿದೆ. ಇದನ್ನು ಪ್ರತಿಭಟಿಸಿದ ಅಲೆಮಾರಿಗಳು ಸೆಪ್ಟೆಂಬರ್‌ 11ರಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಶನ ಆರಂಭಿಸಿದರು. ಇಲ್ಲಿಯೇ ಟೆಂಟ್‌ ಕಟ್ಟಿಕೊಂಡು, ಆಹಾರಾದಿಗಳನ್ನು ಇಲ್ಲಿಯೇ ತಯಾರಿಸಿಕೊಂಡು ಅಹೋರಾತ್ರಿ ಧರಣಿ ಕುಳಿತರು. ದಲಿತ ಸಂಘರ್ಷ ಸಮಿತಿ ಇವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರಿಂದ ಪ್ರತಿಭಟನೆಯ ಕಾವು ಜೋರಾಯಿತು. ಹಗಲು-ರಾತ್ರಿ ಎನ್ನದೇ ಮಳೆ-ಬಿಸಿಲಿಗೆ ಮೈಯೊಡ್ಡಿ, ಹೆಂಗಸರು, ಮಕ್ಕಳು, ವಯೋವೃದ್ಧರು ಪ್ರತಿಭಟನೆಯಲ್ಲಿ ತೊಡಗಿದರು. ಜಿಲ್ಲಾಧಿಕಾರಿ ಕಚೇರಿ ಬಳಿಯ ಟೆಂಟ್‌ಗಳಲ್ಲೇ ಅಡುಗೆ-ಊಟ, ರಸ್ತೆ ಬದಿಯಲ್ಲೇ ಸ್ನಾನ, ಶೌಚಾದಿಗಳನ್ನು ಮಾಡುತ್ತಾ 50 ದಿನಗಳು ಕಳೆದರೂ ಜಿಲ್ಲಾಡಳಿತವಾಗಲೀ, ಉಸ್ತುವಾರಿ ಸಚಿವರಾಗಲಿ ತಿರುಗಿ ನೋಡಲೇ ಇಲ್ಲ.

ಆದರೆ ಮೈಸೂರು ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿಯಾಗಿ ಬಂದ ಕೆ.ವಿ. ರಾಜೇಂದ್ರ ಅವರು ಇದೀಗ ಪ್ರತಿಭಟನಾ ನಿರತರ ಬೇಡಿಕೆಗಳಿಗೆ ಕಿವಿಯಾಗಿದ್ದಾರೆ. ಅವರ ಭರವಸೆ ಮೇರೆಗೆ ಅಲೆಮಾರಿಗಳ ಸುದೀರ್ಘ ನಿರಶನ ಸದ್ಯಕ್ಕೆ ಕೊನೆಗೊಂಡಿದೆ. ಜಿಲ್ಲಾಡಳಿತವೂ ಮುಜುಗರದಿಂದ ಪಾರಾಗಿದೆ.

ಅಲೆಮಾರಿಗಳ ಬೇಡಿಕೆ ನಿಯಮಾನುಸಾರ ಇದೆಯೋ, ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಲು ಮೈಸೂರು ಉಪವಿಭಾಗಾಧಿಕಾರಿಗೆ ಸೂಚಿಸಲಾಗಿದೆ. ಶ್ಯಾದನಹಳ್ಳಿಯ ಅದೇ ಸರ್ವೇ ನಂಬರ್ ನಲ್ಲಿ ಹತ್ತು ಎಕರೆ ಜಮೀನನ್ನು ನಿವೇಶನಕ್ಕಾಗಿ ಕಾದಿರಿಸಲಾಗಿದೆ. ಅಲ್ಲಿ ನಿವೇಶನ ನೀಡುವ ಬಗ್ಗೆ ಗ್ರಾಮಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಆಂದೋಲನ ಡಿಜಿಟಲ್‌ ಗೆ ತಿಳಿಸಿದ್ದಾರೆ.

1995ರಿಂದ 2015ರ ತನಕ ಮಳವಳ್ಳಿಯ ವ್ಯಕ್ತಿಯೊಬ್ಬರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಜಾಗದಲ್ಲಿ ಅಲೆಮಾರಿಗಳು ಸಣ್ಣಪುಟ್ಟ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದರು. ಆದರೆ ಭೂ ಮಾಫಿಯಾದವರು ಈ ಜಾಗದಲ್ಲಿ ಅಲೆಮಾರಿಗಳಿಗೆ ಹಕ್ಕುಪತ್ರ ಕೊಡಲು ಬಿಡುತ್ತಿಲ್ಲ.ಈ ವಿಷಯದಲ್ಲಿ ಜಿಲ್ಲಾಡಳಿತ ಮೌನವಹಿಸಿದೆ. ಶಾಸಕರು-, ಸಂಸದರು ನಮ್ಮ ಅಹವಾಲು ಕೇಳಲು ಬರಲಿಲ್ಲ ಎಂದು ದೂರುತ್ತಾರೆ ದಸಂಸ ಮೈಸೂರು ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ.

ಶ್ಯಾದನಹಳ್ಳಿಯಲ್ಲಿ ನಮ್ಮ30 ಗುಡಿಸಲುಗಳನ್ನು ಸುಟ್ಟುಹಾಕಿ ನಮ್ಮನ್ನು ಹೆದರಿಸಿದ್ದರೂ, ಬಹುಮಹಡಿ ವಸತಿ ಬೇಡ. ಶ್ಯಾದನಹಳ್ಳಿಯಲ್ಲಿಯೇ ಜಾಗ ಕೊಡಿ ಎಂದು 55 ದಿನಗಳಿಂದ ಧರಣಿ ಮಾಡಿದ್ದೇವೆ. ಈಗ ಡಿ.ಸಿ ಯವರ ಭರವಸೆ ಮೇರೆಗೆ ನಿರಶನ ಕೊನೆಗೊಳಿಸಿದ್ದೇವೆ. ಭರವಸೆ ಈಡೇರದೇ ಹೋದರೆ ಮತ್ತೆ ಧರಣಿ ಕೂರುತ್ತೇವೆ ಎನ್ನುತ್ತಾರೆ ಅಲೆಮಾರಿ ತಂಡದ ಭಾಗ್ಯಮ್ಮ.

25 ವರ್ಷಗಳಿಂದ ಶ್ಯಾದನಹಳ್ಳಿಯಲ್ಲಿ ವಾಸಮಾಡುತ್ತಿದ್ದೇವೆ. ಆದರೂ ನಮ್ಮನ್ನು ಒಕ್ಕಲೆಬ್ಬಿಸಲು ಗುಡಿಸಲುಗಳಿಗೆ ಬೆಂಕಿ ಹಾಕಿ ಬೆದರಿಸುತ್ತಾರೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಎಲ್ಲಾ ಕೊಟ್ಟಿದ್ದರೂ ನಮಗೆ ಜಾಗದ ಹಕ್ಕುಪತ್ರ ಮಾತ್ರ ಕೊಡುತ್ತಿಲ್ಲ. ನಮ್ಮ ಪ್ರಾಣ ಇಲ್ಲೇ ಹೋದರೂ ಸರಿ ನ್ಯಾಯ ಸಿಗೋವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎನ್ನುತ್ತಾರೆ ಏಕಲವ್ಯ ನಗರ ನಿವಾಸಿ, ಕಲಾವಿದ ಮಧು.

ಓದು-ಬರಹ ಗೊತ್ತಿಲ್ಲದ ನಾವು ಹೇಗೋ ಬದುಕು ಸಾಗಿಸಿಕೊಂಡು ಬಂದಿದ್ದೇವೆ. ನಮ್ಮ ಮಕ್ಕಳಿಗಾದರೂ ವಿದ್ಯೆಕೊಡಿಸಿ ನೆಮ್ಮದಿಯ ಬದುಕು ಕಟ್ಟಿಕೊಡೋಣವೆಂದರೆ ಈ ಭೂ ಮಾಫಿಯಾದವರು ನಮಗೆ ಜಾಗದ ಹಕ್ಕುಪತ್ರ ಕೊಡಲು ಬಿಡುತ್ತಿಲ್ಲ ಎಂದು ಆರೋಪಿಸುತ್ತಾರೆ ಏಕಲವ್ಯ ನಗರದ ಇನ್ನೊಬ್ಬ ನಿವಾಸಿ ಜಯಮ್ಮ.

                                                                                                                                                                                    -ಗಿರೀಶ್‌ ಹುಣಸೂರು

 

 

 

andolana

Recent Posts

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

13 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

1 hour ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

2 hours ago

ಪಶ್ಚಿಮಘಟ್ಟ: 16114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ :ಈಶ್ವರ ಖಂಡ್ರೆ

ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ…

2 hours ago