ನಿತ್ಯ ಎಂಟು ಗಂಟೆ ವೀಕ್ಷಣೆಗೆ ಅವಕಾಶ: ಭದ್ರತೆಗೂ ವಿಶೇಷ ಒತ್ತು
ಗಿರೀಶ್ ಹುಣಸೂರು
ಮೈಸೂರು: ಕನ್ನಡ ಚಲನಚಿತ್ರ ರಂಗದ ನಾಯಕ ನಟ ದಿ.ವಿಷ್ಣುವರ್ಧನ್ ಅವರು ನಿಧನರಾಗಿ ೧೩ ವರ್ಷಗಳ ಬಳಿಕ ನಿರಂತರ ಹೋರಾಟದ ಫಲವಾಗಿ ತಲೆ ಎತ್ತಿರುವ ‘ವಿಷ್ಣು ಸ್ಮಾರಕ’ ಮೈಸೂರಿನ ಪ್ರವಾಸಿ ತಾಣಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದು, ನೆಚ್ಚಿನ ನಟನ ಸ್ಮಾರಕವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ದೂರದ ಊರುಗಳಿಂದಲೂ ಬಂದು ಹೋಗುತ್ತಿದ್ದಾರೆ.
ಮೈಸೂರು-ಮಾನಂದವಾಡಿ ಹೆದ್ದಾರಿಯಲ್ಲಿ ಬರುವ ಮೈಸೂರು ತಾಲ್ಲೂಕು ಹಾಲಾಳು ಗ್ರಾಮದಲ್ಲಿ ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವಿಷ್ಣು ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಲೋಕಾರ್ಪಣೆ ಮಾಡುವುದರೊಂದಿಗೆ ಮೊದಲ ದಿನವೇ ವಿಷ್ಣುವರ್ಧನ್ ಅವರ ಸಾವಿರಾರು ಅಭಿಮಾನಿಗಳು ಸ್ಮಾರಕವನ್ನು ಕಣ್ತುಂಬಿ ಕೊಂಡಿದ್ದಾರೆ.
ವಿಷ್ಣು ಸ್ಮಾರಕ ವೀಕ್ಷಣೆಗೆ ಬೆಳಿಗ್ಗೆ ೯ ರಿಂದ ಸಂಜೆ ೫ಗಂಟೆವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಸ್ಮಾರಕದ ಭದ್ರತೆಗೆ ಮೂರು ಪಾಳಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು, ಉದ್ಯಾನ ನಿರ್ವಹಣೆ, ಸ್ವಚ್ಛತಾ ಕಾರ್ಮಿಕರು, ಎಲೆಕ್ಟ್ರಿಷಿಯನ್ ಸೇರಿದಂತೆ ಅಗತ್ಯಸಿಬ್ಬಂದಿಯನ್ನು ಹೊರಗುತ್ತಿಗೆಯಡಿ ವಿಷ್ಣು ಸ್ಮಾರಕ ಪ್ರತಿಷ್ಠಾನದಿಂದ ನೇಮಿಸಿಕೊಳ್ಳಲಾಗಿದೆ.
೩.೫೦ ಕೋಟಿ ಬಾಕಿ: ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ೧೧ ಕೋಟಿ ರೂ.ಗಳ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಿ, ನಿರ್ಮಾಣ ಕಾಮಗಾರಿ ಕೈಗೊಂಡ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮಕ್ಕೆ ಈಗಾಗಲೇ ೧೦ ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನುಳಿದ ೧ ಕೋಟಿ ರೂ. ಬಾಕಿ ಹಣದ ಜತೆಗೆ ಹೆಚ್ಚುವರಿಯಾಗಿ ೩.೪೬ ಕೋಟಿ ರೂ. ವೆಚ್ಚವಾಗಿದ್ದು, ನಿಗಧಿತ ಅನುದಾನದ ಶೇ.೨೫ಕ್ಕಿಂತ ಹೆಚ್ಚುವರಿ ಅನುದಾನದ ಅಗತ್ಯವಿದ್ದಲ್ಲಿ ಹಣಕಾಸು ಇಲಾಖೆಯ ಅನುಮತಿ ಅಗತ್ಯವಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚುವರಿ ಅನುದಾನ ಬಿಡುಗಡೆ ಸಂಬಂಧ ಕಡತ ತರಿಸಿಕೊಂಡಿದ್ದು, ಪೊಲೀಸ್ ವಸತಿ ನಿಗಮ ಈವರೆಗೆ ಬಿಡುಗಡೆಯಾದ ಅನುದಾನದ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಿದ ನಂತರ ಹೆಚ್ಚುವರಿ ಅನುದಾನ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಬೇಡಿಕೆಗಳೇನು?
* ಡಾ.ರಾಜ್‌ಕುಮಾರ್ ಸ್ಮಾರಕ ನಿರ್ವಹಣೆಗೆ ಸರ್ಕಾರ ವಾರ್ಷಿಕ ೨೫ ಲಕ್ಷ ರೂ. ಅನುದಾನ ನೀಡುತ್ತಿದೆ. ಅದೇ ರೀತಿಯಲ್ಲಿ ವಿಷ್ಣು ಸ್ಮಾರಕ ನಿರ್ವಹಣೆಗೂ ಸರ್ಕಾರ ಅನುದಾನ ನಿಗದಿಪಡಿಸಬೇಕಿದೆ.
* ಸದ್ಯ ವಿಷ್ಣು ಸ್ಮಾರಕ ಈಗಷ್ಟೇ ಲೋಕಾರ್ಪಣೆಯಾಗಿರುವುದರಿಂದ ಅಲ್ಲಿನ ಥಿಯೇಟರ್‌ನಲ್ಲಿ ಕಾರ್ಯಕ್ರಮಗಳ ಆಯೋಜನೆ, ಗ್ಯಾಲರಿ ನಿರ್ವಹಣೆ ಆಗಬೇಕಿದೆ.
* ವಿಷ್ಣು ವರ್ಧನ್ ಅವರ ಜಯಂತಿ, ಪುಣ್ಯತಿಥಿಗಳಂದು ಕಾರ್ಯಕ್ರಮ ಆಯೋಜನೆಗೂ ಅನುದಾನ ನಿಗದಿಯಾಗಬೇಕಿದೆ.
* ಮುಖ್ಯವಾಗಿ ಪುಣೆಯಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಫಿಲ್ಮ್ ಇನ್ಸ್ಟಿಟ್ಯೂಟ್‌ನ ಪ್ರಾದೇಶಿಕ ಕಚೇರಿಯನ್ನು ಇಲ್ಲಿ ಸ್ಥಾಪಿಸುವ ಉದ್ದೇಶವಿದೆಯಾದರೂ ಸರ್ಕಾರದ ಮಟ್ಟದಲ್ಲಿ ಈ ಕೆಲಸ ಆಗಬೇಕಿದೆ.
* ಸ್ಮಾರಕ ವೀಕ್ಷಣೆಗೆ ಬಂದು-ಹೋಗುವವರು ಉದ್ಭೂರು ಕ್ರಾಸ್‌ನ ಬಸ್ ತಂಗುದಾಣದಲ್ಲಿ ಹತ್ತಿ-ಇಳಿಯಬೇಕಿದೆ. ಈ ಸಮಸ್ಯೆ ಹೋಗಲಾಡಿಸಲು ಹಾಲಾಳು ಗೇಟ್‌ನಲ್ಲೇ ಬಸ್ ತಂಗುದಾಣ ನಿರ್ಮಾಣವಾಗಬೇಕಿದೆ.
ಪ್ರವೇಶಕ್ಕೆ ಟಿಕೆಟ್?
ಮುಖ್ಯವಾಗಿ ಮುಂಬರುವ ದಿನಗಳಲ್ಲಿ ಇಡೀ ಸ್ಮಾರಕ ಇರುವ ಸಮುಚ್ಛಯದ ನಿರ್ವಹಣೆ ದೃಷ್ಟಿಯಿಂದ ಸರ್ಕಾರದ ಅನುದಾನದ ಜತೆಗೆ ಸ್ಥಳೀಯವಾಗಿಯೂ ಸಂಪನ್ಮೂಲ ಕ್ರೋಢಿಕರಿಸಿ ಕೊಳ್ಳಬೇಕಾದ ಅಗತ್ಯತೆ ಇರುವುದರಿಂದ ಸ್ಮಾರಕ ಪ್ರವೇಶಕ್ಕೆ ಟಿಕೆಟ್, ಸಭಾಂಗಣಗಳ ಬಾಡಿಗೆ ನಿಗಧಿಯೂ ವಿಷ್ಣು ಸ್ಮಾರಕ ಪ್ರತಿಷ್ಠಾನದಲ್ಲಿ ಚರ್ಚೆಯಾಗಿ ಸರ್ಕಾರದ ಒಪ್ಪಿಗೆ ಪಡೆಯಬೇಕಾಗಿದೆ.
ಸ್ಮಾರಕದ ಲೋಕಾರ್ಪಣೆಯೊಂದಿಗೆ ಸಾರ್ವಜನಿಕರು, ವಿಷ್ಣುವರ್ಧನ್ ಅಭಿಮಾನಿಗಳ ವೀಕ್ಷಣೆಗೆ ವಿಷ್ಣು ಸ್ಮಾರಕಕ್ಕೆ ಮುಕ್ತ ಪ್ರವೇಶ ಕಲ್ಪಿಸಲಾಗಿದ್ದು, ಬೆಳಿಗ್ಗೆ ೯ ರಿಂದ ಸಂಜೆ ೫ಗಂಟೆವರೆಗೆ ಸ್ಮಾರಕವನ್ನು ವೀಕ್ಷಿಸಬಹುದಾಗಿದೆ.
-ವಿಜಯಾನಂದ, ಸದಸ್ಯ ಕಾರ್ಯದರ್ಶಿ, ಡಾ.ವಿಷ್ಣು ಸ್ಮಾರಕ ಪ್ರತಿಷ್ಠಾನ
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…