ಬಾಲಕನ ಕೊಂದ ಹುಲಿಯಿಂದ ಕಾಫಿ ತೋಟದ ಕಾರ್ಮಿಕನ ಮೇಲೆ ದಾಳಿ
ಮಡಿಕೇರಿ: ಕೊಡಗಿನ ಪೊನ್ನಂಪೇಟೆಯಲ್ಲಿ ಭಾನುವಾರ ಬಾಲಕನ ಬಲಿ ಪಡೆದ ಹುಲಿ ಸೋಮವಾರ ಕಾರ್ಮಿಕರೊಬ್ಬರನ್ನು ಸಾಯಿಸಿದೆ. ಪೊನ್ನಂಪೇಟೆಯ ನಾಲ್ಕೇರಿಯಲ್ಲಿ ಈ ಘಟನೆ ನಡೆದಿದೆ. ರಾಜು(60) ಹುಲಿದಾಳಿಗೆ ಬಲಿಯಾದ ವ್ಯಕ್ತಿ. ನಾಲ್ಕೇರಿ ಗ್ರಾಮದ ಪೂಣಚ್ಚ ಎಂಬುವವರ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ರಾಜು ಅವರು ಸೋಮವಾರ ಬೆಳಿಗ್ಗೆ ಲೈನ್ ಮನೆಯಿಂದ ಕೆಲಸಕ್ಕೆ ಹೊರ ಬರುತ್ತಿದ್ದಂತೆ ಕಾಫಿ ತೋಟದಲ್ಲಿ ಅವಿತಿದ್ದ ಹುಲಿ ಅವರ ಮೇಲೆ ದಾಳಿ ಮಾಡಿದೆ. ಹುಣಸೂರು ತಾಲ್ಲೂಕು ಕೊಳವಿಗೆ ಹಾಡಿಯ ನಿವಾಸಿಯಾಗಿರುವ ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕುಟ್ಟ ಸಮೀಪದ ಚೂರಿಕಾಡು ಎಂಬಲ್ಲಿ ಭಾನುವಾರ ಹುಲಿ ದಾಳಿ ಮಾಡಿ ಚೇತನ್ ಎಂಬ 12 ವರ್ಷದ ಬಾಲಕನನ್ನು ಬಲಿ ತೆಗೆದುಕೊಂಡಿತ್ತು. ಈ ಕಹಿ ಘಟನೆ ಮರೆಯಾಗುವ ಮುನ್ನವೇ ಮತ್ತೊಂದು ಜೀವ ಹುಲಿಗೆ ಆಹಾರವಾಗಿದೆ.
2 ದಿನದಲ್ಲಿ 2 ಜೀವ ವ್ಯಾಘ್ರನ ಅಟ್ಟಹಾಸಕ್ಕೆ ಬಲಿಯಾಗಿರುವುದು ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕೂಡಲೇ ಹುಲಿ ಸೆರೆಗೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.