ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಶಿಕ್ಷಣ ಸಂಸ್ಥೆ ನಿರ್ಮಾಣ: ಜಿಲ್ಲೆಯಲ್ಲಿಯೇ ದೊಡ್ಡದಾದ ವಸತಿ ಶಾಲೆ ಎಂಬ ಹೆಗ್ಗಳಿಕೆ
ಲಕ್ಷಿಕಾಂತ್ ಕೋವಾರಪ್ಪ
ಸೋಮವಾರಪೇಟೆ: ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ನಗರದಿಂದ ಸುಮಾರು ೧೦ ಕಿ.ಮಿ. ದೂರದಲ್ಲಿರುವ ಗ್ರಾಮೀಣ ಪ್ರದೇಶವಾದ ತೋಳೂರುಶೆಟ್ಟಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ವಸತಿ ಶಾಲೆಯ ಕಾಮಗಾರಿಯು ಭರದಿಂದ ಸಾಗುತ್ತಿದ್ದು, ಸುಮಾರು ೨೫ ಕೋಟಿ ರೂ. ವೆಚ್ಚದಲ್ಲಿ ಈ ಶಿಕ್ಷಣ ಸಂಸ್ಥೆ ತಲೆ ಎತ್ತುತ್ತಿದೆ. ನೀಲನಕ್ಷೆಯಂತೆ ಯೋಜನೆ ಪೂರ್ಣಗೊಂಡರೆ, ಜಿಲ್ಲೆಯಲ್ಲಿಯೇ ದೊಡ್ಡದಾದ ವಸತಿ ಶಾಲೆ ಎಂಬ ಹೆಗ್ಗಳಿಕೆಗೆ ಭಾಜನವಾಗಲಿದೆ.
ಕೊಡಗು ಜಿಲ್ಲೆಗೆ ೨ ವಸತಿ ಶಾಲೆಗಳನ್ನು ಮಂಜೂರಾಗಿದ್ದು, ಮಡಿಕೇರಿಯ ನಾಪೋಕ್ಲು ಹಾಗೂ ಸೋಮವಾರಪೇಟೆಯ ತೋಳೂರುಶೆಟ್ಟಳ್ಳಿಯಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಅದರಂತೆ ತೋಳೂರುಶೆಟ್ಟಳ್ಳಿಯಲ್ಲಿ ಭರದಿಂದ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಶೇ.೮೦ರಷ್ಟು ಪೂರ್ಣಗೊಂಡಿದೆ. ಎರಡು ಅಂತಸ್ತಿನ ಕಟ್ಟಡಗಳ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಮಳೆಗಾಲ ಹಾಗೂ ಅಕಾಲಿಕ ಮಳೆಯಿಂದಾಗಿ ಕಾಮಗಾರಿಯ ವೇಗಕ್ಕೆ ತಡೆಯಾಗಿತ್ತು. ಇದೀಗ ಮಳೆ ನಿಂತಿದ್ದು, ಕಾಮಗಾರಿಯೂ ಚುರುಕು ಪಡೆಯುತ್ತಿದೆ.
ನೀಲನಕ್ಷೆಯ ಪ್ರಕಾರ ೫೯೮೦.೩೩ ಚದರ ಮೀಟರ್‌ನಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಶಾಲಾ ಕಟ್ಟಡ(ನೆಲ ಮತ್ತು ಒಂದನೇ ಅಂತಸ್ತು) ೧೨೦೮.೬೩ ಚದರ ಮೀಟರ್‌ನಲ್ಲಿ ನಿರ್ಮಾಣವಾಗುತ್ತಿದ್ದು, ಇದರಲ್ಲಿ ೫ ಬೋಧನಾ ಕೊಠಡಿ, ೩ ಪ್ರೋಯೋಗಾಲಯ, ಗಣಕಯಂತ್ರದ ಕೊಠಡಿ, ಪ್ರಾಂಶುಪಾಲರ ಕೊಠಡಿ, ಸಿಬ್ಬಂದಿ ಕೊಠಡಿ, ೧೨ ಶೌಚಾಲಯಗಳು, ಕಚೇರಿ, ೨ ಉಗ್ರಾಣ, ಗ್ರಂಥಾಲಯ, ಕ್ರೀಡಾ ಕೊಠಡಿ, ವಿವಿಧೋದ್ದೇಶ ಕೊಠಡಿಗಳು ನಿರ್ಮಾಣವಾಗುತ್ತಿವೆ.
೧೨೫ ವಿದ್ಯಾರ್ಥಿಗಳಿಗೆ ಒಂದರಂತೆ ೨ ವಿಭಾಗಗಳಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಾಣಗೊಳ್ಳಲಿದ್ದು, ಒಂದೊಂದು ವಿಭಾಗದಲ್ಲೂ ೯ ವಸತಿ ಕೊಠಡಿ, ಮೇಲ್ವಿಚಾರಕರು ಹಾಗೂ ಪ್ರಥಮ ಚಿಕಿತ್ಸಾ ಕೊಠಡಿ, ೨೧ ಸ್ನಾನ ಗೃಹಗಳು, ೨೪ ಶೌಚಾಲಯ, ಓದುವ ಕೊಠಡಿ, ಗ್ರಂಥಾಲಯ ೧,ಯೋಗ ಕೊಠಡಿ, ಕೈ ತೊಳೆಯುವ ಸ್ಥಳ, ಅಂಗವಿಕಲರ ಸ್ನಾನ ಗೃಹ, ಶೌಚಾಲಯ, ಸಂದರ್ಶಕರ ಕೊಠಡಿ, ಮನೋರಂಜನಾ ಕೊಠಡಿಗಳ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
ವಿದ್ಯಾರ್ಥಿ ವಸತಿ ಗೃಹಗಳು ಶೇ.೬೦, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ವಸತಿ ಗೃಹ ಶೇ. ೯೦ರಷ್ಟು ಪೂರ್ಣಗೊಂಡಿದೆ. ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವ ಕಾರ್ಯ, ಅಡುಗೆ ಮನೆಯ ಗೋಡೆಗಳ ನಿರ್ಮಾಣ, ಟೈಲ್ಸ್ ಅಳವಡಿಕೆ, ನೂತನ ಬೋರ್‌ವೆಲ್ ತೆಗೆಯುವುದು, ಆವರಣಕ್ಕೆ ಇಂಟರ್‌ಲಾಕ್, ಒಳಾಂಗಣದಲ್ಲಿ ರಸ್ತೆ ನಿರ್ಮಾಣ ಕಾರ್ಯಗಳು ಬಾಕಿ ಉಳಿದಿವೆ. ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ೧೮ ತಿಂಗಳ ಕಾಲಾವಧಿ ನೀಡಲಾಗಿದೆ. ಈ ನಡುವೆ ಮಳೆಗಾಲ ಮತ್ತು ಅಕಾಲಿಕ ಮಳೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಇದೀಗ ಕಾಮಗಾರಿಗೆ ವೇಗ ನೀಡಲಾಗಿದ್ದು, ಪಶ್ಚಿಮಬಂಗಾಳ, ರಾಜಸ್ಥಾನ ಹಾಗೂ ಆಂಧ್ರಪ್ರದೇಶದ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ವಸತಿ ಶಾಲೆ ಆರಂಭಕ್ಕೆ ದಿನಗಣಗೆ
ತೋಳೂರುಶೆಟ್ಟಳ್ಳಿಯಲ್ಲಿ ೨೫.೨೧ ಕೋಟಿ ರೂ. ವೆಚ್ಚದಲ್ಲಿ ಬೃಹತ್ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಎನ್‌ಎಸ್‌ಎಲ್ ಕನ್‌ಸ್ಟ್ರಕ್ಷನ್ ಸಂಸ್ಥೆ ಟೆಂಡರ್ ಪಡೆದುಕೊಂಡಿದ್ದು, ಸುಮಾರು ೮ ಎಕರೆ ಪ್ರದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ತಲೆ ಎತ್ತುತ್ತಿದೆ. ಇದರಲ್ಲಿ ೨೫೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ವಾಡಬಹುದಾಗಿದೆ. ತೋಳೂರುಶೆಟ್ಟಳ್ಳಿಯಲ್ಲಿ ಸ್ಥಳೀಯ ದಾನಿಗಳು ನೀಡಿದ ಜಾಗದಲ್ಲಿ ಪ್ರಾರಂಭವಾಗಿದ್ದ ಪ್ರಸಾದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಯನ್ನು ಮುಚ್ಚಲಾಗಿತ್ತು. ಇದನ್ನು ಆದಿಚುಂಚನಗಿರಿ ಮಠಕ್ಕೆ ನೀಡುವ ಬಗ್ಗೆಯೂ ಒಂದಿಷ್ಟು ಪ್ರಯತ್ನಗಳು ನಡೆದಿದ್ದವು. ಕೆಲವೊಂದು ಗೊಂದಲಗಳಿಂದ ಮಠದ ಬದಲಿಗೆ ಸರ್ಕಾರದ ಸ್ವತ್ತಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಜಾಗವನ್ನು ನೀಡಿರುವುದರಿಂದ ಬೃಹತ್ ವಸತಿ ಶಾಲೆ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ.
ತೋಳೂರುಶೆಟ್ಟಳ್ಳಿಯಲ್ಲಿ ಅಂಬೇಡ್ಕರ್ ವಸತಿ ಶಾಲೆ ಅಧಿಕೃತವಾಗಿ ಕಾರ್ಯಾರಂಭ ಆದಲ್ಲಿ ವಿವಿಧ ಭಾಗಗಳ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಓಡಾಟ ಹೆಚ್ಚಾಗಲಿದೆ. ವಾಹನಗಳ ಓಡಾಟವೂ ಹೆಚ್ಚಲಿದ್ದು, ಸ್ಥಳೀಯವಾಗಿ ವ್ಯಾಪಾರ ವಹಿವಾಟು ಚೇತರಿಸಿಕೊಳ್ಳಲಿದೆ. ಇದರೊಂದಿಗೆ ಮೂಲಭೂತ ಸೌಲಭ್ಯಗಳೂ ಒದಗಲಿವೆ.
-ಕೆ.ಕೆ. ಸುಧಾಕರ್, ಸ್ಥಳೀಯರು, ದೊಡ್ಡ ತೋಳೂರು
ಸೋಮವಾರಪೇಟೆಗೆ ಮಂಜೂರಾಗಿದ್ದ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ಕುಶಾಲನಗರಕ್ಕೆ ಸ್ಥಳಾಂತರಿಸಲು ೨೦೧೮ರಲ್ಲಿ ಕೆಲ ಅಧಿಕಾರಿಗಳು ಹಾಗೂ ಪ್ರಾಂಶುಪಾಲರು ಸಾಕಷ್ಟು ಪ್ರಯತ್ನ ನಡೆಸಿದ್ದರು. ಅದರೆ ಸ್ಥಳೀಯ ಜನಪ್ರತಿನಿದಿಗಳು ಅಂಬೇಡ್ಕರ್ ವಸತಿ ಶಾಲೆ ಸೋಮವಾರಪೇಟೆ ತಾಲ್ಲೂಕಿನಲ್ಲಿಯೇ ಉಳಿಸಬೇಕೆಂದು ಪಣತೊಟ್ಟ ಪರಿಣಾಮ ಬೃಹತ್ನ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
-ಬಿ.ಜೆ.ದೀಪಕ್, ಜಿಲ್ಲಾ ಪಂಚಾಯಿತಿ ವಾಜಿ ಸದಸ್ಯರು, ಕೊಡಗು
ಮಂಡ್ಯ: ಮಧು ಜಿ.ಮಾದೇಗೌಡ ಅವರ ಅಭಿಮಾನಿಗಳ ಬಳಗದ ವತಿಯಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತಿ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ…
ಮೈಸೂರು: ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಮಾತ್ರ ಸೀಮಿತವಾಗದೆ, ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ…
ಬೆಂಗಳೂರು: ಕೆಪಿಎಸ್ಸಿ ವತಿಯಿಂದ ಇದೇ ಡಿಸೆಂಬರ್ 29ಕ್ಕೆ ಕೆಎಎಸ್ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…