– ಕೆ.ಬಿ.ರಮೇಶನಾಯಕ
ಮೈಸೂರು: ಆರ್ಥಿಕ ಕೊರತೆ ಇದ್ದರೂ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳದ ತೀರ್ಮಾನ ಕೈಗೊಂಡಿದ್ದ ಮೈಸೂರು ವಿವಿಯ ನಡೆಗೆ ಹಣಕಾಸು ಇಲಾಖೆ ಚಾಟಿ ಬೀಸಿದ ಬೆನ್ನಲ್ಲೇ ಕಳೆದ ನಾಲ್ಕು ತಿಂಗಳ ಹಿಂದೆ ನೇಮಕಗೊಂಡಿದ್ದ ಬೋಧಕೇತರ ಸಿಬ್ಬಂದಿ ನೇಮಕಾತಿ ಆದೇಶಕ್ಕೆ ಸಿಂಡಿಕೇಟ್ ಸಭೆಯಲ್ಲಿ ಬ್ರೇಕ್ ಹಾಕಲಾಗಿದ್ದು, ಅತಿಥಿ ಉಪನ್ಯಾಸಕರ ವೇತನ ಹೆಚ್ಚಳದ ನಿರ್ಧಾರವೂ ಡೋಲಾಯಮಾನವಾಗಿದೆ. ಹಣಕಾಸು ಇಲಾಖೆ ಎತ್ತಿದ್ದ ಆಕ್ಷೇಪಣೆಗೆ ಸಮರ್ಪಕ ಪ್ರತ್ಯುತ್ತರ ನೀಡಲು ತಡಬಡಾಯಿಸಿರುವ ಮೈಸೂರು ವಿ.ವಿ. ಆಡಳಿತ ಮಂಡಳಿ, ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರ ಅವಧಿಯಲ್ಲಿ ನೇಮಕಾತಿಯಾಗಿದ್ದ ಸಿಬ್ಬಂದಿಗೆ ಆದೇಶ ನೀಡುವುದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಇದರಿಂದಾಗಿ ನೇಮಕಾತಿ ಆದೇಶ ಪತ್ರದ ನಿರೀಕ್ಷೆಯಲ್ಲಿದ್ದವರಿಗೆ ಬಾರೀ ನಿರಾಶೆ ಮೂಡಿಸಿದ್ದರೆ, ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಭಾಗ್ಯ ಇಲ್ಲದೆ ಮತ್ತೊಮ್ಮೆ ಸರ್ಕಾರದ ಕದ ತಟ್ಟಬೇಕಾಗಿದೆ.
ಪ್ರೊ.ಜಿ.ಹೇಮಂತಕುಮಾರ್ ಅವರ ಅವಧಿ ಅಂತ್ಯವಾಗುವ ಎರಡು ತಿಂಗಳ ಮುನ್ನ ನೇಮಕಾತಿ ಸೇರಿ ಪ್ರಮುಖ ನಿರ್ಣಯಗಳನ್ನು ತಗೆದುಕೊಳ್ಳಲು ನಿಯಮಾನುಸಾರ ಯಾವುದೇ ಅಧಿಕಾರ ಇರುವುದಿಲ್ಲ. ಒಂದು ವೇಳೆ ಸಿಂಡಿಕೇಟ್ ಸಭೆಯಲ್ಲಿ ಅನುಮೋದಿಸಿ ಒಪ್ಪಿಗೆ ಪಡೆದರೂ ಸರ್ಕಾರ ಅಂತಿಮ ತೀರ್ಮಾನ ಮಾಡಬೇಕಾಗಿದೆ. ಆದರೆ, ವಿವಿಯಲ್ಲಿ ಖಾಲಿ ಇದ್ದ ಬೋಧಕೇತರ ಹುದ್ದೆಗೆ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿದ್ದು, ಇದು ಸರ್ಕಾರದ ನಿಯಮಾವಳಿ ವಿರುದ್ಧವಾಗಿದೆ. ಹೀಗಾಗಿ, ಸಿಂಡಿಕೇಟ್ ಸಭೆಯಲ್ಲಿ ಈ ವಿಚಾರವನ್ನು ಸದಸ್ಯರು ಗಂಭೀರವಾಗಿ ಚರ್ಚಿಸಿ, ನೇಮಕಾತಿ ಆದೇಶ ಪತ್ರವನ್ನು ನೀಡಲು ತಡೆ ನೀಡಿದ್ದಾರೆ. ಇದಲ್ಲದೆ, ಪ್ರಸಾರಾಂಗ ಉಪ ನಿರ್ದೇಶಕರ ಹುದ್ದೆ ಕಾಯಂ ಹುದ್ದೆಯಾಗಿದ್ದು, ಈ ಸ್ಥಾನಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿರುವುದಕ್ಕೂ ಬ್ರೇಕ್ ಹಾಕಿ, ಅವರನ್ನು ಹುದ್ದೆಯಿಂದ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಡೋಲಾಯಮಾನ: ಅತಿಥಿ ಉಪನ್ಯಾಸಕರ ವೇತನ ಹೆಚ್ಚಳದ ತೀರ್ಮಾನ ಮಾಡಿದ್ದ ಸಿಂಡಿಕೇಟ್ ಸಭೆಯ ನಿರ್ಣಯಕ್ಕೆ ಹಣಕಾಸು ಇಲಾಖೆ ನಿರಾಕರಿಸಿರುವ ಹಿನ್ನಲೆಯೆಲ್ಲಿ ಮತ್ತೊಮ್ಮೆ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪವಾದರೂ ಸರ್ಕಾರದ ವಿರುದ್ಧ ಹೋಗಲು ಸಾಧ್ಯವಿಲ್ಲದ ಕಾರಣದಿಂದ ವೇತನ ಹೆಚ್ಚಳ ಪ್ರಸ್ತಾಪ ಡೋಲಾಯಮಾನವಾಗಿದೆ.
12 ಗಂಟೆಗಳ ಕಾರ್ಯಭಾರ ಹೊಂದಿರುವ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ವೇತನವನ್ನು 28ರಿಂದ 37 ಸಾವಿರ ರೂ., ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 24ರಿಂದ 26,400 ರೂ. ಹಾಗೂ ಕೆಲವು ಉಪನ್ಯಾಸಕರಿಗೆ ಮಾಸಿಕ ಗರಿಷ್ಟ 60 ಸಾವಿರ ರೂ.ಗಳಿಗೆ ವೇತನ ಹೆಚ್ಚಿಸಿರುವುದು ಯುಜಿಸಿಯು ಪೂರ್ಣಕಾರ್ಯಭಾರಕ್ಕೆ ನಿಗದಿಪಡಿಸಿರುವ ಗರಿಷ್ಟ ವೇತನಕ್ಕಿಂತಲೂ ಹೆಚ್ಚಾಗಿರುತ್ತದೆ. ಇದಲ್ಲದೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನಿಗದಿಪಡಿಸಿರುವ ಸಂಭಾವನೆಗಿಂತಲೂ ಹೆಚ್ಚಿರುತ್ತದೆ. ಹಾಗಾಗಿ, ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ವಯ ವೇತನ ನಿಗದಿಪಡಿಸಲು ಕ್ರಮವಹಿಸುವಂತೆ ಸೂಚನೆ ಕೊಟ್ಟಿರುವುದನ್ನು ಯಥಾವತ್ತಾಗಿ ಪಾಲಿಸಲು ತೀರ್ಮಾನಿಸಲಾಗಿದೆ.
ಪರೀಕ್ಷಾ ಶುಲ್ಕ, ಟ್ಯೂಷನ್‌ಶುಲ್ಕ ಮೊದಲಾದ ಮೂಲಗಳಿಂದ ಅಂದಾಜು 15 ಕೋಟಿ ರೂ. ಸಂಗ್ರಹವಾದರೂ, ಸುಮಾರು 114 ಕೋಟಿ ರೂ. ಹೆಚ್ಚುವರಿ ಖರ್ಚು ಮಾಡಿರುವುದನ್ನು ವರದಿಯಲ್ಲಿ ಗುರುತಿಸಲಾಗಿದೆ. ಇದಲ್ಲದೆ, ವಿಶ್ವವಿದ್ಯಾನಿಲಯದ ವಿವಿಧ ಕಟ್ಟಡ ಕಾಮಗಾರಿಗಳಿಗೆ ಕೊಡಬೇಕಿರುವ ಬಾಕಿ ಮೊತ್ತ 50 ಕೋಟಿ ರೂ. ಇದ್ದು,ಬಿಡುಗಡೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ವರ್ಷಗಳ ಸಂಪನ್ಮೂಲ ಮತ್ತು ವೆಚ್ಚವನ್ನು ಪರಿಗಣಿಸಿದರೆ ಸುಮಾರು 170 ಕೋಟಿ ರೂ.ನಷ್ಟು ಆರ್ಥಿಕ ಕೊರತೆಯನ್ನು ಎದುರಿಸುವ ಮೂಲಕ ದೊಡ್ಡ ಸಂಕಷ್ಟಕ್ಕೆ ಸಿಲುಕಿರುವುದರಿಂದ ಈಗ ವೇತನ ಹೆಚ್ಚಳ ಮಾಡುವುದನ್ನು ಕೈಬಿಡುವ ಮಟ್ಟಕ್ಕೆ ತಲುಪಿದೆ.
ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಪತ್ರ ಬರೆದಿರುವ ಹಿನ್ನಲೆಯಲ್ಲಿ ಮತ್ತೊಂದು ಬಾರಿ ಪ್ರಸ್ತಾವನೆ ಸಲ್ಲಿಸಿ ಸರ್ಕಾರದ ವಿರುದ್ಧ ಹೋಗಲಾಗದು. ಹಿಂದಿನ ಸಿಂಡಿಕೇಟ್ ಸಭೆಯ ನಿರ್ಣಯದಂತೆ ವೇತನ ಕೊಡಬೇಕಾಗಿತ್ತು. ಆದರೆ ಈಗ ಅದನ್ನು ಜಾರಿಗೊಳಿಸಲು ತಡೆ ಹಾಕಲಾಗಿದೆ. ಬೋಧಕೇತರ ಸಿಬ್ಬಂದಿ ನೇಮಕ ವಿಚಾರದಲ್ಲೂ ಹಲವು ತೀರ್ಮಾನ ಮಾಡಲಾಗಿದೆ.
-ಡಾ.ಎಚ್.ರಾಜಶೇಖರ್, ಹಂಗಾಮಿ ಕುಲಪತಿ
ಮೈಸೂರು: ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಸಮಾನತೆ ಕಾಯ್ದುಕೊಳ್ಳದೆ ಒಂದೊಂದು ರೀತಿಯ ವೇತನ ನಿಗದಿಯಾಗಿರುವುದೂ ಬಹಿರಂಗಗೊಂಡಿದ್ದು, ಈ ವ್ಯತ್ಯಾಸ ಸರಿಪಡಿಸುವ ಕೆಲಸಕ್ಕೆ ಸಿಂಡಿಕೇಟ್ ಮುಂದಾಗಿದೆ. ಎಫ್‌ಡಿಎ, ಎಸ್‌ಡಿಸಿ ಮತ್ತು ತಾಂತ್ರಿಕ ಸಿಬ್ಬಂದಿ ವೇತನವನ್ನು ನಿಗದಿಪಡಿಸುವಾಗ ಮಾನದಂಡ ಪಾಲಿಸಬೇಕಿತ್ತಾದರೂ ತಾಂತ್ರಿಕ ಸಿಬ್ಬಂದಿಗೂ, ಎಫ್‌ಡಿಎ ಸಿಬ್ಬಂದಿ ವೇತನವನ್ನೇ ನಿಗದಿಪಡಿಸಿರುವುದು ಕಂಡುಬಂದಿದೆ. ಹಾಗಾಗಿ, ನೇಮಕಾತಿ ಆದೇಶಕ್ಕೆ ತಡೆ ಕೊಡುವ ಜತೆಗೆ ಅವೈಜ್ಞಾನಿಕವಾಗಿ ವೇತನ ನಿಗದಿಪಡಿಸಿರುವ ವಿಚಾರ ಈಗ ವಿವಿ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದೆ.
ತುಮಕೂರು : ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ತೋ ಮಾಡಿಕೊಂಡು ಠಾಣೆಗೆ ತಂದಿದ್ದ ಕಾರನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು…
ಮೈಸೂರು : ಮಾದಕ ವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ದಾಳಿ…
ಮೈಸೂರು : ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣದ ಮೇಲೆ ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ…
ಹೊಸದಿಲ್ಲಿ : ನಾಳೆ ಕೇಂದ್ರ ಸರ್ಕಾರದ 2026-27 ಸಾಲಿನ ಆಯವ್ಯಯ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ…
ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜ.27ರಿಂದ…
ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ…