ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಕಾಂಗ್ರೆಸ್ ವೇಗ ನೀಡಿದೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಎಐಸಿಸಿ ಮಟ್ಟದಲ್ಲಿ ಸ್ಕ್ರೀನಿಂಗ್ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತರಾಗಿರುವ, ರಾಜಸ್ಥಾನ ಮೂಲದ 73 ವರ್ಷದ ಹಿರಿಯ ರಾಜಕಾರಣಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸ್ಕ್ರೀನಿಂಗ್ ಸಮಿತಿಯನ್ನು ರಚನೆ ಮಾಡಲಾಗಿದೆ. ಉಳಿದಂತೆ ಒಡಿಶಾ ಮೂಲದ ಸಂಸದ ಸಪ್ತಗಿರಿ ಉಳಕ, ರಾಜಸ್ಥಾನದ ರಾಜ್ಯಸಭಾ ಸದಸ್ಯ ನೀರಜ್ ಡಾಂಗೆ, ಬಿಹಾರದ ಸಂಸದ ಮೊಹಮ್ಮದ್ ಜಾವೇದ್ ಅವರನ್ನು ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ.
ಅಧಿಕೃತ ಸದಸ್ಯರನ್ನಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪರಿಷತ್ ಪ್ರತಿಪಕ್ಷ ನಾಯಕ ಬಿಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯ ಉಸ್ತುವಾರಿಯಲ್ಲಿರುವ ಎಐಸಿಸಿ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.
ಚುನಾವಣಾ ಸಮಿತಿಯ ಶಿಫಾರಸುಗಳನ್ನು ಈ ಕಮಿಟಿ ಸ್ಕ್ರೀನಿಂಗ್ ಮಾಡಲಿದೆ.ಇನ್ನು, ಕಮಿಟಿ ಸದಸ್ಯರಾದ ನೀರಜ್ ದಾಂಗಿ ಕೂಡ ರಾಜಸ್ಥಾನದವರು. ರಾಜ್ಯಸಭಾ ಸಂಸದರಾಗಿರುವ ಅವರು ಕರ್ನಾಟಕದ ಸುರತ್ಕ ಲ್ ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದವರು. ಮತ್ತೊಬ್ಬ ಸದಸ್ಯ ಮೊಹಮ್ಮದ್ ಜಾವೇದ್ ಬಿಹಾರದ ಲೋಕಸಭಾ ಸದಸ್ಯರಾಗಿದ್ದಾರೆ. ಇನ್ನು ಸಪ್ತಗಿರಿ ಶಂಕರ್ ಉಲಕ ಲೋಕಸಭಾ ಸಂಸದರಾಗಿದ್ದು, ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ರಾಜ್ಯದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಐದು ದಿನಗಳ ಹಿಂದೆ, ಅಂದರೆ ಫೆಬ್ರುವರಿ 2ರಂದು ಅಭ್ಯರ್ಥಿಗಳ ಆಯ್ಕೆಗೆ ಕರ್ನಾಟಕ ಪ್ರದೇಶ ಚುನಾವಣಾ ಸಮಿತಿ ಸಭೆ ಸೇರಿತ್ತು. ಸಮಿತಿಯು ಅಭ್ಯರ್ಥಿಗಳ ಶಾಟ್ರ್ಲಿಸ್ಟ್ ಮಾಡುತ್ತದೆ. ಸ್ಕ್ರೀನಿಂಗ್ ಕಮಿಟಿ ಅಂತಿಮ ಪಟ್ಟಿ ಮಾಡುತ್ತದೆ. ಸದ್ಯ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷ 100ಕ್ಕೂ ಹೆಚ್ಚು ಅಭ್ಯರ್ಥಿಗಳಿರುವ ಮೊದಲ ಪಟ್ಟಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ