ಹನೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ 4 ರ ಯೋಜನೆಯಡಿ ಪಟ್ಟಣ ಪಂಚಾಯಿತಿಗೆ ಬಿಡುಗಡೆಯಾಗಿರುವ 5 ಕೋಟಿ ಅನುದಾನದಲ್ಲಿ ಪಟ್ಟಣದ 13 ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಬಂಡಳ್ಳಿ ರಸ್ತೆ ಐಟಿಐ ಕ್ರಾಸ್ ಬಳಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
5 ಕೋಟಿ ರೂ.ಅನುದಾನದಲ್ಲಿ ಸಮುದಾಯ ಕಾಮಗಾರಿಗಳು ಸೇರಿದಂತೆ ಸ್ಮಶಾನ ಅಭಿವೃದ್ಧಿ, ಎಸ್ಸಿಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ ವಿತರಣೆ ಇನ್ನಿತರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಈ ಪೈಕಿ 2.18 ಕೋಟಿ ರೂ.ಗಳನ್ನು ರಸ್ತೆ ಕಾಮಗಾರಿಗಳಿಗೆ ಬಳಸಲಾಗುವುದು. ಈ ಕಾಮಗಾರಿಗಳು ಪೂರ್ಣಗೊಂಡರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡಗಳ ಶೇ 70 ರಿಂದ 80 ರಷ್ಟು ರಸ್ತೆಗಳ ಕಾಮಗಾರಿಗಳು ಪೂರ್ಣಗೊಂಡಂತಾಗುತ್ತದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗೆ ಒತ್ತನ್ನು ನೀಡಬೇಕು ಎಂದು ಇದೇ ವೇಳೆ ಸೂಚಿಸಿದರು.
ತೀರಾ ಹದಗೆಟ್ಟ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಹನೂರು, ಮಣಗಳ್ಳಿ, ಬಂಡಳ್ಳಿ ಮುಖ್ಯ ರಸ್ತೆ ತೀರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆದು ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಬಂಡಳ್ಳಿ ತೆಳ್ಳನೂರು ರಸ್ತೆ ಹಾಗೂ ರಾಮಪುರ ನಾಲ್ ರೋಡ್ ರಸ್ತೆ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಗೆ ಇಲ್ಲಿಯವರೆಗೆ ಯಾರು ಮುಂದೆ ಬಂದಿಲ್ಲ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಶೀಘ್ರದಲ್ಲೇ ಈ ರಸ್ತೆ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಕಾಮಧೇನು ಯೋಜನೆ ತಂದ ಸರ್ಕಾರ ಗೋ ಶಾಲೆ ತೆರೆಯಲಿ: ಗೋವುಗಳ ರಕ್ಷಣೆಗೆ ಸರ್ಕಾರ ಕಾಮಧೇನು ಯೋಜನೆಯನ್ನು ಜಾರಿಗೆ ತಂದಿದೆ. ವಯಸ್ಸಾದ ಹಾಗೂ ಸಂತಾನಾಭಿವೃದ್ಧಿಯನ್ನು ಹೊಂದದ ಹಸುಗಳ ನಿರ್ವಹಣೆಗೆ ಆಯಾ ತಾಲೂಕುಗಳಲ್ಲೊಂದು ಗೋಶಾಲೆಯನ್ನು ತೆರೆಯಬೇಕು. ಕೆಲಸಕ್ಕೆ ಬಾರದ ಗೋವುಗಳನ್ನು ರೈತರು ಒಲ್ಲದ ಮನಸ್ಸಿನಿಂದಲೇ ಮಾರಾಟ ಮಾಡಿ ಆರ್ಥಿಕ ಲಾಭ ಪಡೆಯುತ್ತಿದ್ದರು. ಆದರೆ ಈ, ಯೋಜನೆಯಿಂದ ಇತ್ತ ಮಾರಾಟ ಮಾಡಲು ಆಗದೆ ನಿರ್ವಹಣೆ ಮಾಡಲಾಗದೆ ರೈತರು ಹೊರೆ ಮತ್ತು ತೊಂದರೆಗೆ ಸಿಲುಕುವಂತಾಗಿದೆ ಆದ್ದರಿಂದ ಈ ಕೂಡಲೇ ತಾಲೂಕಿನಲ್ಲಿ ಗೋಶಾಲೆ ತೆರೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಪಶು ವೈದ್ಯರು ಮತ್ತು ಸಿಬ್ಬಂದಿಗಳ ನೇಮಕಕ್ಕೆ ಒತ್ತಾಯ: ಕ್ಷೇತ್ರದಲ್ಲಿ ಹೆಚ್ಚಿನ ರೈತರು ಹೈನುಗಾರಿಕೆಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. 15 ಪಶು ವೈದ್ಯರು ಇರಬೇಕಾದ ಪ್ರದೇಶದಲ್ಲಿ ಕೇವಲ ಮೂರು ಜನ ವೈದ್ಯರು ಇದ್ದಾರೆ. 160 ಸಿಬ್ಬಂದಿಗಳು ಬೇಕಾದ ಪ್ರದೇಶದಲ್ಲಿ 120 ಜನ ಸಿಬ್ಬಂದಿಗಳಿದ್ದಾರೆ. ಇತ್ತೀಚಿಗೆ ಚರ್ಮ ಗಂಟು ರೋಗ ವ್ಯಾಪಕವಾಗಿ ಬಾಧಿಸುವ ಸೂಚನೆ ದೊರೆತಿದ್ದು, ನಿಯಂತ್ರಣಕ್ಕೆ ಕೂಡಲೇ ಸರ್ಕಾರ ಗುತ್ತಿಗೆ ಆಧಾರದ ಮೇಲೆ ಹೆಚ್ಚಿನ ಪಶು ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರದ ಜನತೆ ಪರವಾಗಿ ಒತ್ತಾಯಿಸುತ್ತೇನೆ ಎಂದ ಅವರು ಕ್ಷೇತ್ರದಲ್ಲಿ ಹೆಚ್ಚಿನ ಗೋವುಗಳಿದ್ದು, ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಇಂಜೆಕ್ಷನ್ ಗಳ ದಾಸ್ತಾನು ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಒಟ್ಟಾರೆ ಕೊರೋನಾ ಸಂದರ್ಭದಲ್ಲಿ ಸರ್ಕಾರ ಸಮಾರೂಪ ಹಾದಿಯಲ್ಲಿ ಕೊರೋನಾ ನಿಯಂತ್ರಣ ಮಾಡಿದಂತೆ ಚರ್ಮ ಗಂಟು ರೋಗವನ್ನು ನಿಯಂತ್ರಣ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಹರೀಶ್ ಕುಮಾರ್, ಸೋಮಶೇಖರ್, ಸಂಪತ್ ಕುಮಾರ್, ಮಹೇಶ್, ಮಹೇಶ್ ನಾಯಕ್, ಸುದೇಶ್, ನಾಮನಿರ್ದೇಶಿತ ಸದಸ್ಯ ಪುಟ್ಟರಾಜು, ಸಿ ಒ ಮೂರ್ತಿ,ಮಾಜಿ ಉಪಾಧ್ಯಕ್ಷ ಬಸವರಾಜು, ಗುತ್ತಿಗೆದಾರ ಇಂದು ಶೇಖರ್, ಅಭಿಯಂತರ ದೇವರಾಜು, ಸುರೇಶ್ ಪಟ್ಟಣದ ವಿವಿಧ ಸಮುದಾಯದ ಮುಖಂಡರುಗಳು, ಸಾರ್ವಜನಿಕರು ಹಾಜರಿದ್ದರು.
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…