‘ನವೆಂಬರ್ 1ರೊಳಗೆ ಬೇರೆ ಭಾಷೆ ಫಲಕಗಳನ್ನು ತೆಗೆಯಿರಿ, ಇಲ್ಲವೇ ಮಸಿ ಬಳಿಯುತ್ತೇವೆ’

ಮೈಸೂರು: ನಗರದ ಎಲ್ಲ ಅಂಗಡಿ, ವ್ಯಾಪಾರ, ವಾಣಿಜ್ಯ ಸಂಸ್ಥೆಗಳು ಅಳವಡಿಸಿರುವ ಇತರೆ ಭಾಷೆಗಳ ನಾಮಫಲಕಗಳನ್ನು ಕನ್ನಡ ರಾಜ್ಯೋತ್ಸವದ ಆಚರಣೆಯೊಳಗೆ ತೆಗೆಯಬೇಕು. ಇಲ್ಲವಾದರೆ ಕನ್ನಡ ಪರ ಸಂಘಟನೆಗಳ ಜತೆಗೂಡಿ ನಾಗರಿಕ ಹಿತ ರಕ್ಷಣಾ ವೇದಿಕೆ ನಾಮಫಲಕಗಳಿಗೆ ಮಸಿ ಬಳಿಯಲಾಗುವುದು ಎಂದು ವೇದಿಕೆ ಅಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿ ರಸ್ತೆ, ಬೆಂಗಳೂರು- ಮೈಸೂರು ರಸ್ತೆಗಳಲ್ಲಿನ ಎಲ್ಲ ಮಳಿಗೆಗಳಲ್ಲಿ ಕೇವಲ ಇಂಗ್ಲಿಷ್ ಹಾಗೂ ಇತರ ಭಾಷಾ ನಾಮಫಲಕಗಳೇ ಇವೆ. ಕನ್ನಡ ಭಾಷೆಗೆ ಆದ್ಯತೆ ನೀಡದಿರುವವರು ಈ ನಾಡಿನಲ್ಲಿ ವ್ಯಾಪಾರ ವಹಿವಟು ನಡೆಸಲು ಯೋಗ್ಯರಲ್ಲ. ಹೀಗಾಗಿ ಮಳಿಗೆಗಳಲ್ಲಿ ಅಳವಡಿಸಿರುವ ಇತರೆ ಭಾಷೆಯ ನಾಮಫಲಕಗಳನ್ನು ನವೆಂಬರ್ ಒಂದರ ಮುನ್ನ ತೆರವುಗೊಳಿಸಿ, ಕನ್ನಡಕ್ಕೆ ಬದಲಾಯಿಸದಿದ್ದಲ್ಲಿ ಮಸಿ ಬಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದ ಎಲ್ಲ ಆಭರಣ ಮಳಿಗೆ, ಕಾರ್ಖಾನೆಗಳು, ಮೊದಲಾದ ಕಡೆಗಳಲ್ಲಿನ ಕೆಲಸಕ್ಕೆ ಹೊರ ರಾಜ್ಯದವರನ್ನೇ ಸೇರಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಇವುಗಳಲ್ಲಿ ಕನ್ನಡಿಗರಿಗೇ ಕೆಲಸ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ನಗರದ ಜ್ಯುವೆಲ್ಲರಿ ಮಳಿಗೆಗಳಲ್ಲಿ ಕೇರಳ, ರಾಜಸ್ತಾನದ ಕೆಲಸಗಾರರೇ ತುಂಬಿದ್ದಾರೆ. ಜೊತೆಗೆ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಹೊರ ರಾಜ್ಯದವರಿಗೇ ಕೆಲಸ ನೀಡಲಾಗುತ್ತಿದೆ. ಇದಕ್ಕೆ ತಮ್ಮ ಅಭ್ಯಂತರವಿಲ್ಲ. ಆದರೆ ಮೊದಲ ಆದ್ಯತೆ ಕನ್ನಡಿಗರಿಗೆ ನೀಡಬೇಕೆಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಬಾಲಕೃಷ್ಣೇಗೌಡ, ರಾಮಪ್ರಕಾಶ್, ಕಿರಣ್‌ಸಿಂಗ್, ನಾಗರಾಜ್ ಹಾಗೂ ಮಹೇಶ್ ಹಾಜರಿದ್ದರು.

× Chat with us