ಜಿಲ್ಲೆಗಳು

ಪೊಲೀಸಪ್ಪನ ಪತ್ನಿ ಲಕ್ಷ್ಮಮ್ಮ ಈಗ ಹೂವು ಮಾರುವಾಕೆ!

‘ಸ್ವಾಭಿಮಾನದ ಬದುಕಿಗೆ ಮಾದರಿಯಾದ ಹಿರಿಯ ಜೀವ’

ಬಿ.ಎನ್.ಧನಂಜಯಗೌಡ

ಮೈಸೂರು: ‘ನಮ್ಮ ಯಜಮಾನ್ರು ಪೊಲೀಸ್ ಆಗಿದ್ರು. ಆದ್ರೆ, ತುಂಬಾ ದಿನ ಅವರು ಆ ಕೆಲಸದಲ್ಲೂ ಇರಲಿಲ್ಲ. ಅವರೊಂದಿಗೆ ಜೀವನ ನಡೆಸುವ ಭಾಗ್ಯವನ್ನು ಆ ದೇವ್ರ ನನಗೂ ಕೊಡಲಿಲ್ಲ. ಆ ನಂತರ ಬದುಕಿಗೆ ಆಸರೆಯಾಗಿದ್ದು ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಇರುವಂತಿಗೆ, ಕನಕಾಂಬರ, ಗುಲಾಬಿ…’
ಹೀಗೆ ಅಂದಿದ್ದು ೮೩ ವರ್ಷ ವಯಸ್ಸಿನಲ್ಲಿಯೂ ಹೂವು ಮಾರುವ ‘ಲಕ್ಷ್ಮಮ್ಮ’. ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದಿಂದ ಇರ್ವೀನ್ ರಸ್ತೆ ಕಡೆಗೆ ಬರುವ ಮಾರ್ಗದ ಮೂಲೆಯೊಂದರಲ್ಲಿ ಕಣ್ಣಗಲಿಸಿಕೊಂಡು ಸೂಜಿಗೆ ದಾರ ಪೋಣಿಸಿ, ಹೂವು ಕಟ್ಟುತ್ತಾ, ಮಾರುವ ಈ ಲಕ್ಷ್ಮಜ್ಜಿಯ ಕಥೆ ಎಂತಹವರಿಗೂ ಪ್ರೇರಣದಾಯಕವಾದುದು.
ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆಗೆ ಹೋಗುವ ಬಸ್ಸುಗಳು ನಿಲ್ಲುವ ಇರ್ವೀನ್ ರಸ್ತೆ ಕಡೆಗೆ ಹೋಗುವ ಮೂಲೆಯಲ್ಲಿ ೪೫ ವರ್ಷಗಳಿಂದ ಹೂವು ಮಾರುವ ಈ ಲಕ್ಷ್ಮಮ್ಮನಿಗೆ ಈಗಲೂ ದುಡಿಯುವ ಹುರುಪು.
‘ಇಷ್ಟು ವರ್ಷವಾದ್ರೂ ನನಗೆ ಯಾವ ಕಾಯಿಲೆ ಇಲ್ಲ. ಮನೆಯಲ್ಲಿ ಕುಂತ್ರೆ ಏನೇನೋ ಕೆಟ್ಟ ಯೋಚನೆ. ಕೈಯಲ್ಲಿ ಆಗೋವರೆಗೂ, ಹೂವು ಮಾರೋದಾ ಬಿಡೋದಿಲ್ಲ’ ಎನ್ನುತ್ತಾ ಹೆಬ್ಬಾಳದ ಭೈರವೇಶ್ವರ ನಗರದಲ್ಲಿ ವಾಸಿಸುತ್ತಿರುವ ಲಕ್ಷ್ಮಮ್ಮ. ಬೆಳಿಗ್ಗೆ ೭ ಗಂಟೆ ಆಗುತ್ತಿದ್ದಂತೆ ತನ್ನ ಕಾಯಕ ಸ್ಥಳಕ್ಕೆ ಹಾಜರಾಗುತ್ತಾರೆ.
ಪೊಲೀಸಪ್ಪನ ಹೆಂಡತಿ ಕಥೆ: ಕುಂಬಾರಕೊಪ್ಪಲಿನ ಲಕ್ಷ್ಮಮ್ಮ ಅವರು ಮಂಡಿ ಮೊಹಲ್ಲಾದ ವೆಂಕಟರಾಮಯ್ಯ ಎಂಬವರನ್ನು ವಿವಾಹವಾಗುತ್ತಾರೆ. ವೆಂಕಟರಾಮಯ್ಯ ಅವರು ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದವರು. ಆದರೆ, ಅನಾರೋಗ್ಯ ಕಾರಣದಿಂದ ವೃತ್ತಿಗೆ ರಾಜೀನಾಮೆ ನೀಡುವ ಅವರು, ಮದುವೆಯಾದ ಹೆನ್ನೆರಡು-ಹದಿಮೂರು ವರ್ಷಗಳಿಗೆಲ್ಲ ಅನಾರೋಗ್ಯದಿಂದ ನಿಧನರಾಗುತ್ತಾರೆ. ಆನಂತರದಲ್ಲಿ ಕುಟುಂಬದ ಹೊರೆ ಲಕ್ಷ್ಮಮ್ಮ ಅವರ ಮೇಲೆ ಬೀಳುತ್ತದೆ. ಇದಕ್ಕಾಗಿ ಹೂವು ಮಾರುವ ಕಾಯಕ ಹಿಡಿದ ಅವರು ೪೫ ವರ್ಷಗಳಿಂದ ಒಂದೇ ಜಾಗದಲ್ಲಿ ಹೂವು ಮಾರಾಟ ಮಾಡುತ್ತಿದ್ದಾರೆ.
ಮಗ ಮತ್ತು ಮಗಳನ್ನು ಸಾಕಿ ಮದುವೆ ಮಾಡಿರುವ ಅವರು, ಹೂವು ಮಾರಾಟ ಮಾಡುತ್ತಲೇ ಭೈರವೇಶ್ವರ ನಗರದಲ್ಲಿ ೨೫ ವರ್ಷಗಳ ಹಿಂದೆ ಸ್ವಂತ ನಿವೇಶನ ಖರೀದಿಸಿ, ಮೂರು ಅಂತಸ್ತಿನ ಸ್ವಂತ ಮನೆಯನ್ನು ಮಾಡಿದ್ದಾರೆ. ಒಂದು ಅಂತಸ್ತಿನ ಮನೆಯನ್ನು ಭೋಗ್ಯಕ್ಕೆ ನೀಡಿದ್ದು, ಇನ್ನುಳಿದ ಎರಡು ಅಂತಸ್ತನ್ನು ಇಬ್ಬರೂ ಮಕ್ಕಳಿಗೂ ಭಾಗವಾಗಿ ನೀಡಿದ್ದಾರೆ. ಇವರು ಮಗನ ಮನೆಯಲ್ಲಿಯೇ ಇದ್ದಾರೆ.
ವ್ಯಾಪಾರ ಮುಂಚೆ ತರ ಇಲ್ಲ. ಅಷ್ಟೋ, ಇಷ್ಟೋ ಆಗುತ್ತೆ ಎನ್ನುವ ಲಕ್ಷ್ಮಮ್ಮ. ಪ್ರತಿನಿತ್ಯ ಬೆಳಿಗ್ಗೆ ೭ ಗಂಟೆಗೆ ಹೂವು ಮಾರಲು ಬರುತ್ತಾರೆ. ಮನೆಯಿಂದ ನಾನಿರುವಲ್ಲಿಗೆ ತಿಂಡಿ ಬರುತ್ತದೆ. ಮಧ್ಯಾಹ್ನ ಇಲ್ಲೇ ಹೋಟೆಲ್ ಅಲ್ಲಿ ಏನಾದ್ರೂ ತಿನ್ಕೋತಿನಿ. ರಾತ್ರಿ ೮ ಗಂಟೆಗೆ ಮನೆಗೆ ಆಟೋದಲ್ಲಿ ವಾಪಸ್ಸು ಆಗುತ್ತೇನೆ. ಮುಂಚೆ ಬೆಳಿಗ್ಗೆ ೫ ಗಂಟೆಯಿಂದ ವ್ಯಾಪಾರ ಶುರು ಮಾಡುತ್ತಿದ್ದೆ. ಈಗ ಅಷ್ಟು ಹೊತ್ತಿಗೆ ಎದ್ದು ಬರೋಕೆ ಆಗಲ್ಲ ಎಂದು ತಮ್ಮ ಪರಿಶ್ರಮವನ್ನು ವಿವರಿಸುತ್ತಾರೆ.

‘ಕಾಸಿಲ್ಲ ಕಷ್ಟ ಅಂದಾಗ ಮಕ್ಕಳಿಗೂ…ಅಷ್ಟೋ ಇಷ್ಟೋ ಕೊಡ್ಬೇಕಲ್ಲ’
ಮಗ ಆಟೋ ಓಡಿಸ್ತಾನೆ. ಈ ಕಾಲದಲ್ಲಿ ಅವರವರ ಸಂಸಾರ ಸಾಕೋದೆ ಕಷ್ಟವಾಗುತ್ತೆ. ಹೀಗಿರುವಾಗ ನನ್ನ ಖರ್ಚಿಗೆ ಅವರನ್ನು ಕಾಸು ಕೇಳೋಕೆ ಆಗುತ್ತಾ. ಅದ್ಕೆ, ನನ್ನ ಕೈಯಲಿ ಆಗೋವರೆಗೂ ಹೂವು ಮಾರಿ ಕಾಸು ಕೂಡಿ ಹಾಕ್ತಿನಿ. ಈಗೇನೋ ಆರೋಗ್ಯ ಚೆನ್ನಾಗಿದೆ. ಮುಂದೆನೋ?, ಹಿಂಗೆ ಇರುತ್ತೇ ಅಂಥ ಯಾರಿಗೆ ಗೊತ್ತು. ಆಗ ಖರ್ಚುಗಿರ್ಚು ಅಂತ ಬರಲ್ವಾ ಎಂದು ಮುಗ್ಧತೆಯಿಂದ ಮಾತನಾಡುವ ಲಕ್ಷ್ಮಮ್ಮ ‘ಕಾಸಿಲ್ಲ ಕಷ್ಟ ಅಂದಾಗ ಮಕ್ಕಳಿಗೂ…ಅಷ್ಟೋ ಇಷ್ಟೋ ಕೊಡ್ಬೇಕಲ್ಲ’ ಎಂದು ಹೇಳುವ ಮೂಲಕ ತಾಯ್ಕರುಳಿನ ಪ್ರೀತಿಯನ್ನು ತೆರೆದಿಡುತ್ತಾರೆ.

andolanait

Recent Posts

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

27 mins ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

32 mins ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

52 mins ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

1 hour ago

ರಾಜ್ಯದಲ್ಲಿ ತೀವ್ರ ಚಳಿ, ದಟ್ಟ ಮಂಜು : ವಾಹನ ಸವಾರರಿಗೆ ಮುನ್ನೆಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ…

1 hour ago

ಅರಣ್ಯ ಇಲಾಖೆ ಖಾಯಂ ಅಧಿಕಾರಿ, ಸಿಬ್ಬಂದಿಗೆ ಸಿಹಿ ಸುದ್ದಿ : ೧ ಕೋಟಿ ರೂ.ಅಪಘಾತ ವಿಮೆ

ಬೆಂಗಳೂರು : ಅರಣ್ಯ ಇಲಾಖೆಯ ಖಾಯಂ ಅಧಿಕಾರಿ, ಸಿಬ್ಬಂದಿಗೆ ೧ ಕೋಟಿ ರೂ. ಅಪಘಾತ (ಮರಣ)ವಿಮೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ…

1 hour ago