ಮೈಸೂರಿಗೆ ಹರಿದುಬರುತ್ತಿರುವ ಹೊರ ರಾಜ್ಯಗಳ ಪ್ರವಾಸಿಗರು * ದೀಪಾಲಂಕಾರ ಸೊಬಗು ಸವಿಯಲು ಸಂಜೆ ವೇಳೆ ಜನವೋ ಜನ
ಕೆ.ಬಿ.ರಮೇಶನಾಯಕ
ಮೈಸೂರು: ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಹಿನ್ನಡೆ ಅನುಭವಿಸಿದ್ದ ಪ್ರವಾಸೋದ್ಯಮಕ್ಕೆ ಈ ಬಾರಿಯ ದಸರಾ ಮಹೋತ್ಸವ ಭರ್ಜರಿ ಟಾನಿಕ್ ನೀಡಿ ಆದಾಯ ತಂದುಕೊಟ್ಟಿದ್ದು, ಪ್ರವಾಸಿತಾಣಗಳತ್ತ ಪ್ರವಾಸಿಗರ ಪ್ರವಾಹ ಹರಿದುಬರುತ್ತಿದೆ.
ಜಂಬೂಸವಾರಿ ಮುಗಿದು ನಾಲ್ಕು ದಿನಗಳು ಕಳೆದರೂ ಹೊರ ಜಿಲ್ಲೆ, ಹೊರರಾಜ್ಯಗಳಿಂದ ಪ್ರವಾಸಿಗರು ಮೈಸೂರಿನತ್ತ ದಾಂಗುಡಿ ಇಡುತ್ತಿರುವುದರಿಂದಾಗಿ ಪಂಚತಾರಾ ಹೋಟೆಲ್‌ಗಳು ಸೇರಿದಂತೆ ಮೈಸೂರಿನ ವಸತಿಗೃಹಗಳಲ್ಲಿ ಕೊಠಡಿಗಳು ಖಾಲಿ ಇಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ. ನವರಾತ್ರಿ ಆರಂಭದ ದಿನಗಳಿಂದ ಈತನಕ ತ್ರಿತಾರಾ, ಪಂಚತಾರಾ ಹೋಟೆಲ್‌ಗಳು, ಐಷಾರಾಮಿ ವಸತಿ ಗೃಹಗಳು, ಸಾಮಾನ್ಯ ಹೋಟೆಲ್‌ಗಳು ಸೇರಿದಂತೆ ೧೦,೫೦೦ ಕೊಠಡಿಗಳು ಭರ್ತಿಯಾಗಿದ್ದು, ಮುಂದಿನ ಬುಧವಾರದ ತನಕ ಬುಕ್ಕಿಂಗ್ ಆಗಿದೆ. ವಾರದ ರಜಾದಿನವಾದ ಭಾನುವಾರ ಅರಮನೆ ಸೇರಿದಂತೆ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ದಂಡೇ ನೆರೆದಿದ್ದನ್ನು ನೋಡಿದರೆ ಒಂದು ವಾರ ಕಾಲ ಪ್ರವಾಸೋದ್ಯಮಕ್ಕೆ ಮತ್ತಷ್ಟು ಆದಾಯ ಸಂಗ್ರಹವಾಗುವ ಸಾಧ್ಯತೆ ಇದೆ.
ಎತ್ತ ನೋಡಿದರೂ ಜನಜಂಗುಳಿ: ವಾರದ ರಜಾದಿನವಾದ ಭಾನುವಾರ ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ, ದಸರಾ ವಸ್ತು ಪ್ರದರ್ಶನ, ಚಾಮುಂಡಿಬೆಟ್ಟ, ಕೆ.ಆರ್.ಎಸ್., ನಂಜನಗೂಡು, ಶ್ರೀರಂಗಪಟ್ಟಣ, ಗುಂಬಜ್, ನಿಮಿಷಾಂಬ ದೇವಾಲಯ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಕಾಲಿಡಲೂ ಜಾಗವಿಲ್ಲದ ರೀತಿಯಲ್ಲಿ ಜನರು ಜಮಾಯಿಸಿದ್ದರು.
ಬೆಳಿಗ್ಗೆಯಿಂದಲೇ ಅರಮನೆ ಕಡೆಗೆ ಬರುತ್ತಿದ್ದ ಪ್ರವಾಸಿಗರು ಅರಮನೆ ಸೌಂದರ್ಯವನ್ನು ವೀಕ್ಷಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ನೇರವಾಗಿ ಮೃಗಾಲಯದ ಕಡೆಗೆ ತೆರಳುತ್ತಿದ್ದು ದು ಸರ್ವೆ ಸಾಮಾನ್ಯವಾಗಿತ್ತು. ಹಲವರು ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿದೇವಿಯ ದರ್ಶನ ಪಡೆದುಕೊಂಡ ಬಳಿಕ ನೇರವಾಗಿ ಅರಮನೆಗೆ ಸಾಲು ಸಾಲಾಗಿ ಆಗಮಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ಕೊಠಡಿಗಳಿಗೆ ಅಲೆದಾಟ: ಕುಟುಂಬ ಸಮೇತ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹರಿದು ಬರುತ್ತಿರುವ ಪ್ರವಾಸಿಗರು ಕೊಠಡಿಗಳಿಗೆ ಅಲೆದಾಡುವಂತಾಗಿದೆ. ಒಂದು ಕೊಠಡಿಯೂ ಖಾಲಿ ಇಲ್ಲದೆ ಸರ್ಕಾರಿ ಅತಿಥಿಗೃಹ, ಸರ್ವಿಸ್ ಅಪಾರ್ಟ್‌ಮೆಂಟ್‌ಗಳಲ್ಲಿ ವಿಚಾರಿಸಿದರೂ ಖಾಲಿ ಇಲ್ಲ ಎನ್ನುವ ಸಂದೇಶ ಬರುತ್ತಿತ್ತು. ಇದರಿಂದಾಗಿ ಕೇರಳದಿಂದ ಕುಟುಂಬ ಸಮೇತ ಬರುತ್ತಿದ್ದವರೂ ಸಂಜೆ ತನಕ ವೀಕ್ಷಣೆ ಮಾಡಿ ವಾಪಸ್ ಹೋಗುತ್ತಿದ್ದರು.
ವಿದ್ಯುತ್ ದೀಪಾಲಂಕಾರ ನೋಡಿ ಮೈಸೂರಿನಲ್ಲಿ ವಾಸ್ತವ್ಯ ಮಾಡಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಹೋಗಬೇಕೆಂದು ದೂರದ ಚೆನ್ನೈನಿಂದ ಆಗಮಿಸಿದ್ದ ಕುಟುಂಬವೊಂದು ಕೊಠಡಿಗೆ ಅಲೆದಾಡಿದರೂ ಸಿಗಲಿಲ್ಲ. ಒಂದು ಕೊಠಡಿಗೆ ಹೆಚ್ಚುವರಿ ೨ ಸಾವಿರ ರೂ.ಕೊಡುತ್ತೇವೆಂದು ಹೇಳಿದರೂ ರೂಮ್ ಇಲ್ಲವೆನ್ನುವ ಉತ್ತರ ಬರುತ್ತಿದ್ದರಿಂದ ಬೇಸರದಿಂದಲೇ ಹೊರ ನಡೆದರು. ಮತ್ತೊಂದೆಡೆ ವಿದ್ಯುತ್ ದೀಪಾಲಂಕಾರ ಅವಧಿ ವಿಸ್ತರಣೆ ಮಾಡಿರುವುದರಿಂದ ಸ್ಥಳೀಯರು ಸೇರಿದಂತೆ ಹೊರಗಿನವರು ಕಣ್ತುಂಬಿಕೊಳ್ಳುತ್ತಿದ್ದಾರೆ. ಅರಮನೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನಗಳ ಸಂಚಾರ ನಿಷೇಧ ಮಾಡಿರುವ ಕಾರಣ ದೂರದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಸಂಜೆ ಹೊತ್ತು ಒಂದು ಸುತ್ತು ಹಾಕಿ ದೀಪಾಲಂಕಾರದ ಸೊಬಗು ಸವಿಯುತ್ತಿರುವುದು ಹೆಚ್ಚಾಗಿದೆ.
ರೂಮ್‌ಗಳಿಗಾಗಿ ಮೂರ್ನಾಲ್ಕು ದಿನಗಳಿಂದ ನಿತ್ಯ ೫೦ರಿಂದ ೬೦ ಫೋನ್ ಕರೆಗಳು ಬರುತ್ತಿವೆ. ಈಗ ಮುಂದಿನ ಬುಧವಾರದ ತನಕ ಕೊಠಡಿಗಳು ಭರ್ತಿಯಾಗಿವೆ. ಒಂದು ತಿಂಗಳ ಹಿಂದೆ ಬುಕ್ಕಿಂಗ್ ಮಾಡಿಕೊಂಡಿರುವ ಕಾರಣ ಅನೇಕರಿಗೆ ಅವಕಾಶ ಇಲ್ಲ. ಸುಮಾರು ವರ್ಷಗಳ ಬಳಿಕ ಇಷ್ಟೊಂದು ಭರ್ತಿ ಆಗಿದ್ದು ಇದೇ ಮೊದಲಾಗಿದೆ.
-ಸಿಂಚನ, ಸ್ವಾಗತಕಾರಿಣಿ.
ಮೈಸೂರು: ಇಂದು ಮುಂಜಾನೆ ಚಳಿ, ಮಳೆಯನ್ನು ಲೆಕ್ಕಿಸದೇ ಮೈಸೂರಿನ ಸ್ವಚ್ಚತೆಗಾಗಿ ಫಿಟ್ ಮೈಸೂರು ಸಾಮೂಹಿಕ ಆರೋಗ್ಯ ಮತ್ತು ಜಾಗೃತಿ ನಡಿಗೆ…
ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ಹಿನ್ನೆಲೆಯಲ್ಲಿ, ಮಲಯಾಳಂ ಭಾಷಾ ಮಸೂದೆ ೨೦೨೫ ಅನ್ನು…
ನಮ್ಮ ರಾಜ್ಯದ ಗಡಿಭಾಗಗಳಲ್ಲಿನ ಅನ್ಯಭಾಷಾ ಮಾಧ್ಯಮ ಶಾಲೆಗಳಲ್ಲಿ (ತಮಿಳು, ಮರಾಠಿ, ಮಲಯಾಳಂ, ಉರ್ದು, ತೆಲುಗು) ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯಗೊಳಿ…
ಮಂಡ್ಯ ಸೀಮೆಯ ಆರ್ಥಿಕ, ಸಾಮಾಜಿಕ, ಕೈಗಾರಿಕೆ, ನೀರಾವರಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕಾರ್ಯದಲ್ಲಿ ಮೈಸೂರು ರಾಜವಂಶಸ್ಥರ ಕೊಡುಗೆ ಅಪಾರ.…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಪಶ್ಚಿಮ ಬಂಗಾಳದ ರಾಜಕಾರಣ ಎಂದರೆ ಅದು ಬೀದಿ ಕಾಳಗ. ಈ ಬೀದಿ ಕಾಳಗದ ರಾಜಕಾರಣ…
ಕೃಷ್ಣ ಸಿದ್ದಾಪುರ ಕಳಪೆ ರಸ್ತೆ ಕಾಮಗಾರಿ; ೩೦ ಲಕ್ಷ ರೂ. ಅನುದಾನ ವ್ಯರ್ಥ ಸಿದ್ದಾಪುರ: ಇಲ್ಲಿನ ಕರಡಿಗೋಡು ಗ್ರಾಮದಲ್ಲಿ ರಸ್ತೆ…