ಮೈಸೂರು

ಮೈಸೂರಿನಲ್ಲಿ ನಾಳೆ ಇಂದ ಮೂರು ದಿನ ದೇಸಿ ಎಣ್ಣೆ ಮೇಳ : ಮೇಳೈಸಲಿದೆ ಸಾಂಪ್ರದಾಯಿಕ ಎಣ್ಣೆ

ಮೈಸೂರು : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ. ಕೋವಿಡ್ ನಂತರ ಗ್ರಾಹಕರಲ್ಲಿ ಅರಿವು ಹೆಚ್ಚುತ್ತಿರುವುದರಿಂದ, ಮೂಲೆಗುಂಪಾಗಿದ್ದ ಹುಚ್ಚೆಳ್ಳು, ಎಳ್ಳು, ಕುಸುಬೆ, ಹರಳು, ಅಗಸೆ ಮೊದಲಾದ ಎಣ್ಣೆಕಾಳು ಬೆಳೆಗಳಿಂದ ತಯಾರಾಗುವ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ರೈತರಿಗೆ ಬೆಳೆ ವೈವಿಧ್ಯತೆ ಹೆಚ್ಚಿಸಿಕೊಳ್ಳಲು, ಮತ್ತು ಆದಾಯ ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಹವಾಮಾನ ವೈಪರಿತ್ಯಕ್ಕೆ ಹೈರಾಣಾಗಿರುವ ರೈತರು ಸುಲಭವಾಗಿ ಎಣ್ಣೆಕಾಳು ಬೆಳೆಗಳನ್ನು ಬೆಳೆದುಕೊಳ್ಳಬಹುದು.

ಮಾರುಕಟ್ಟೆಯಲ್ಲಿ ಸಿಗುವ ಅಡುಗೆ ಎಣ್ಣೆಗೆ ಲಿಕ್ವಿಡ್ ಪ್ಯಾರಾಪಿನ್ ಕಲಬೆರಕೆ ಮಾಡುವುದರಿಂದ ಹೃದಯಾಘಾತ, ಕ್ಯಾನ್ಸರ್, ಸ್ಥೂಲಕಾಯ, ರಕ್ತದೊತ್ತಡ ಮೊದಲಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬಿಟಿ ಹತ್ತಿಯ ಕಾಳಿನ ಎಣ್ಣೆಯನ್ನು ಅಡುಗೆ ಎಣ್ಣೆಗೆ ಮಿಶ್ರಮಾಡುವುದರಿಂದ ಅನಾರೋಗ್ಯವನ್ನು ಆಹ್ವಾನಿಸಿದಂತಾಗುತ್ತದೆ. ಶುಧ್ಧವಾಗಿ ತಯಾರಿಸಿದ ಗಾಣದ ಎಣ್ಣೆಗಳ ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ಸಾಂಪ್ರದಾಯಿಕ ಎಣ್ಣೆಗಳ ಕೃಷಿ ಮತ್ತು ಬಳಕೆಯ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸಲು, ಸಹಜ ಸಮೃದ್ಧ ಸಂಸ್ಥೆಯು ದೇಸಿರಿ ಜೊತೆಗೂಡಿ ಜನವರಿ 9 ರಿಂದ 11 ರವರೆಗೆ ‘ದೇಸಿ ಎಣ್ಣೆ ಮೇಳ’ ವನ್ನು ಏರ್ಪಡಿಸಿದೆ.

ಮೂರು ದಿನಗಳ ಕಾಲ ಮೈಸೂರಿನ ನಂಜಬಹದ್ದೂರು ಛತ್ರದಲ್ಲಿ ನಡೆಯಲಿರುವ ಎಣ್ಣೆ ಮೇಳದಲ್ಲಿ 50 ಕ್ಕೂ ಹೆಚ್ಚು ಸಾಂಪ್ರದಾಯಿಕ ಎಣ್ಣೆಗಳನ್ನು ಪರಿಚಯಿಸಲಾಗುವುದು. ಎತ್ತಿನ ಗಾಣದಿಂದ ಅಡುಗೆ ಎಣ್ಣೆ ತೆಗೆಯುವ ಹಾಗೂ ಹರಳೆಣ್ಣೆ ತೆಗೆಯುವ ಪ್ರಾತ್ಯಕ್ಷಿಕೆಯನ್ನು ಮೇಳದಲ್ಲಿ ಖುದ್ದಾಗಿ ನೋಡಬಹುದು.

ಸಿಎಫ್‌ಟಿಆರ್‌ಐ ವಿಜ್ಞಾನಿಗಳು ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚುವ ವಿಧಾನವನ್ನು ತೋರಿಸಿಕೊಡಲಿದ್ದಾರೆ. ಆಯುರ್ವೇದ ವೈದ್ಯರಿಂದ ಉಚಿತ ಸಲಹೆ ಮತ್ತು ಎಣ್ಣೆ ಬಳಕೆಯ ಮಾರ್ಗದರ್ಶನ ನೀಡಲಿದ್ದಾರೆ. ಆಹಾರ ತಜ್ಞರು ವಿವಿಧ ದೇಹ ಪ್ರಕೃತಿಗಳಿಗೆ ಯೋಗ್ಯವಾದ ಎಣ್ಣೆಗಳ ಬಳಕೆಯ ತಿಳಿಸಿಕೊಡಲಿದ್ದಾರೆ.

ಶುಕ್ರವಾರ ( ಜ.9) ಸಂಜೆ 6 ಘಂಟೆಗೆ ಡಾ. ಖಾದರ್ ವಲಿ ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮವಿರುತ್ತದೆ. ಶನಿವಾರ ( ಜ.10) ಬೆಳಿಗ್ಗೆ 11 ಘಂಟೆಗೆ ಎಣ್ಣೆ ಬೆಳೆಗಳ ಕೃಷಿ ಮತ್ತು ಮೌಲ್ಯವರ್ಧನೆಯ ಬಗ್ಗೆ ತರಬೇತಿ ಏರ್ಪಾಡಾಗಿದೆ.

ಭಾನುವಾರ ( ಜ.11)ರಂದು ಬೆಳಿಗ್ಗೆ 10.30 ಕ್ಕೆ ಸಾಂಪ್ರದಾಯಿಕ ಎಣ್ಣೆಗಳ ಬಗ್ಗೆ ಎಳೆಯರಲ್ಲಿ ಅರಿವು ಮೂಡಿಸಲು 5-12 ವರ್ಷದ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿದೆ. ಎಣ್ಣೆ ಬೀಜಗಳು ಮತ್ತು ಕೃಷಿ, ಎತ್ತುಗಳಿಂದ ಚಾಲಿತವಾಗುವ ಗಾಣ, ರೈತರು ಮತ್ತು ಎಣ್ಣೆ ಹೊರತೆಗೆಯುವ ಪ್ರಕ್ರಿಯೆಯನ್ನು ಚಿತ್ರದ ಮೂಲಕ ತೋರಿಸಬೇಕು. ಆರೋಗ್ಯಕರ ಎಣ್ಣೆ, ಹಳ್ಳಿಯ ಆರ್ಥಿಕತೆ, ಮತ್ತು ಪರಿಸರ ಸ್ನೇಹಿ ಎಂಬ ಸಂದೇಶಗಳನ್ನು ಚಿತ್ರವು ಒಳಗೊಂಡಿರಬೇಕು.

ಭಾನುವಾರ ಮಧ್ಯಾಹ್ನ 12 ಘಂಟೆಗೆ ‘ಸಾಂಪ್ರದಾಯಿಕ ಎಣ್ಣೆಗಳ ಅಡುಗೆ ಸ್ಪರ್ಧೆ’ ಏರ್ಪಡಿಸಲಾಗಿದೆ. ಸಾಂಪ್ರದಾಯಿಕ ಎಣ್ಣೆಗಳಿಂದ ತಯಾರಿಸಿದ ಅಡುಗೆಗಳನ್ನು ಸ್ಪರ್ಧೆಗೆ ತರಬೇಕು. ಅಪರೂಪದ ಎಣ್ಣೆ ಬಳಸಿದ ಅಡುಗೆಗಳಿಗೆ ಆದ್ಯತೆ ನೀಡಲಾಗುವುದು. ಬಹುಮಾನ ಗಳಿಸಿದ ಸ್ಪರ್ಧಿಗಳಿಗೆ ನಗದು ಬಹುಮಾನ ನೀಡಲಾಗುವುದು.

ಮೇಳದಲ್ಲಿ 50ಕ್ಕೂ ಹೆಚ್ಚು ಗುಡಿ ಕೈಗಾರಿಕೆ ಮಳಿಗೆಗಳು ಇರಲಿವೆ. ವೈವಿಧ್ಯಮಯ ದೇಸಿ ಆಹಾರ ಸವಿಯಬಹುದು. ಸಾವಯವ ಉತ್ಪನ್ನಗಳು, ಸಿರಿಧಾನ್ಯ, ನಾಟಿ ಬೀಜ ಮತ್ತು ಹಣ್ಣಿನ ಗಿಡಗಳು ಕೊಳ್ಳಲು ಸಿಗಲಿವೆ.

ದೇಸಿ ಎಣ್ಣೆ ಮೇಳವನ್ನು ಶ್ರೀ ಮಂಟೇಸ್ವಾಮಿ ಮಠ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಮಠಾಧಿಪತಿಗಳಾದ ಶ್ರೀಕಂಠ ಸಿದ್ಧಲಿಂಗ ರಾಜೇ ಅರಸ್ ಅವರು‌ ಉದ್ಘಾಟಿಸಲಿದ್ದಾರೆ. ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಸಾಂಪ್ರದಾಯಿಕ ಎತ್ತಿನ ಗಾಣಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷರಾದ ಲಾವಣ್ಯ ಬಲ್ಲಾಳ್ ಜೈನ್, ಸಿಎಫ್‌ಟಿಆರ್‌ಐ ನಿರ್ದೇಶಕರಾದ ಡಾ. ಗಿರಿಧರ್ ಪಾರ್ವತಮಂ ಮತ್ತು ಪ್ರಿಸಿಷನ್ ಮೆಡಿಸಿನ್ ವಿಜ್ಞಾನಿ ಡಾ.ಮಮತ ಶೇಖರ್ ಭಾಗವಹಿಸಲಿದ್ದಾರೆ.

ದೇಸಿ ಎಣ್ಣೆ ಮೇಳದ ಪ್ರಮುಖ ಆಕರ್ಷಣೆಗಳು

– ಸಾಂಪ್ರದಾಯ ಪದ್ದತಿಯಲ್ಲಿ ಎತ್ತಿನ ಗಾಣದಿಂದ ಅಡುಗೆ ಎಣ್ಣೆ ತೆಗೆಯುವ ಹಾಗು ಹರಳೆಣ್ಣೆ ತೆಗೆಯುವ ಪ್ರಾತ್ಯಕ್ಷಿತೆ
– 50 ಕ್ಕೂ ಹೆಚ್ಚು ವಿವಿಧ ಬಗೆಯ ಎಣ್ಣೆಗಳನ್ನು ಪ್ರದರ್ಶನಕ್ಕೆ ಇಡಲಾಗುವುದು.
– ವಿವಿಧ ಎಣ್ಣೆ ಕಾಳು ಬೆಳೆಗಳ ಬೀಜದ ಪ್ರದರ್ಶನ
– ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚುವ ವಿಧಾನದ ಪ್ರಾತ್ಯಕ್ಷಿತೆ
– ಆಯುರ್ವೇದ ವೈದ್ಯರಿಂದ ಉಚಿತ ಸಲಹೆ ಮತ್ತು ಆರೋಗ್ಯಕ್ಕೂ ಎಣ್ಣೆಗಳಿಗೂ ಇರುವ ಸಂಬAಧದ ಮಾಹಿತಿ
– ಡಾ. ಖಾದರ್ ವಲಿ ಅವರ ಉಪನ್ಯಾಸ ಜನವರಿ 9 ರಂದು ಸಂಜೆ 6 ಗಂಟೆಗೆ.
– ಎಣ್ಣೆಕಾಳು ಕೃಷಿ ಮತ್ತು ಮೌಲ್ಯವರ್ಧನೆಯ ರೈತ ತರಬೇತಿ ಕಾರ್ಯಕ್ರಮ ಜನವರಿ 10 ರಂದು ಬೆಳಗ್ಗೆ 11 ಗಂಟೆಗೆ.
– ಜನವರಿ 11 ರಂದು ಬೆಳಗ್ಗೆ 10.30ಕ್ಕೆ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಮತ್ತು ಮಧ್ಯಾಹ್ನ 12 ಗಂಟೆಗೆ ಅಡುಗೆ ಸ್ಪರ್ಧೆ
– ಹೋಮಿಯೋಪತಿ, ಅಲೋಪತಿ, ಆಯುರ್ವೇದ, ಯುನಾನಿ ಮತ್ತು ಪೌಷ್ಟಿಕತೆ ತಜ್ಞ ವೈದ್ಯರೊಂದಿಗೆ ಸಂವಾದ
– ಗುಡಿ ಕೈಗಾರಿಕೆ ಉದ್ಯಮಗಳ ಮಾರಾಟ ಮಳಿಗೆಗಳು
– ಸಾಂಪ್ರದಾಯಿಕ ಎಣ್ಣೆ ಬಳಸಿದ ಅಡುಗೆ ಮಳಿಗೆಗಳಲ್ಲಿ, ವೈವಿಧ್ಯಮಯ ಆಹಾರ ಸವಿಯುವ ಅವಕಾಶ
– ದೇಸಿ ಬೀಜ, ಹಣ್ಣಿನ ಗಿಡ, ಸಾವಯವ ಬೆಲ್ಲ, ಅಕ್ಕಿ , ಸಿರಿಧಾನ್ಯ ಮತ್ತು ಕೃಷಿ ಉತ್ಪನ್ನಗಳ ಮಾರಾಟ
-ಸಂಕ್ರಾತಿಗಾಗಿ ಸಾವಯವ ಎಳ್ಳು ಬೆಲ್ಲ, ಅವರೆ, ಶೇಂಗಾ, ಗೆಣಸು ಕೊಳ್ಳುವ ಅವಕಾಶ

ಹೆಚ್ಚಿನ ವಿವರಗಳಿಗೆ 7090009944 ಸಂಪರ್ಕಿಸಬಹುದು. 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಸಂಕ್ರಾಂತಿ ವಿಶೇಷ : ಮೈಸೂರು – ಟ್ಯುಟಿಕಾರನ್‌ ನಡುವೆ ವಿಶೇಷ ರೈಲು

ಮೈಸೂರು : ಮುಂದಿನ ವಾರ ಸಂಕ್ರಾಂತಿ/ಪೊಂಗಲ್‌ ಹಬ್ಬದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚು ಜನರು ಪ್ರಯಾಣಿಸುವುದರಿಂದ ಅವರಿಗೆ ಸೌಲಭ್ಯ ಕಲ್ಪಿಸಲು ಮೈಸೂರು-ಕೊಡಗು…

13 mins ago

ಸಂಶೋಧನೆಗೆ ಸಿಗದ ಪ್ರಾಮುಖ್ಯತೆ : ವಿಶ್ರಾಂತ ಕುಲಪತಿ ರಂಗಪ್ಪ ಬೇಸರ

ಮೈಸೂರು : ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಜೊತೆಗೆ ಸಂಶೋಧನೆಗೆ ಕಡಿಮೆ ಹಣವನ್ನು ವೆಚ್ಚ…

30 mins ago

ಆಹಾರದ ಮಹತ್ವ ಕುರಿತು ಅರಿವು ಅಗತ್ಯ : ಕೃಷಿ ಸಚಿವ.ಚಲುವರಾಯಸ್ವಾಮಿ

ಮಂಡ್ಯ : ಆಹಾರದ ಮಹತ್ವ ಹೆಚ್ಚಿದೆ. ಎಲ್ಲರೂ ಆಹಾರದ ಮಹತ್ವದ ಕುರಿತು ತಿಳಿದುಕೊಳ್ಳಬೇಕು. 30-40 ವರ್ಷಗಳ ಹಿಂದೆ ಭಾರತ ಆಹಾರದ…

56 mins ago

ದೇಸಿ ಎಣ್ಣೆ ಮೇಳಕ್ಕೆ ವಿದ್ಯುಕ್ತ ಚಾಲನೆ ; ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ಮೈಸೂರು : ಸಹಜ ಸಮೃದ್ಧ ಸಂಸ್ಥೆ ಹಾಗೂ ದೇಸಿರಿ ನ್ಯಾಚುರಲ್ಸ್ ಸಹಯೋಗದಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಮೂರು ದಿನಗಳ…

1 hour ago

ಐತಿಹಾಸಿಕ ಕ್ಷಣ | ಆಸ್ಕರ್‌ ರೇಸ್‌ನಲ್ಲಿ ಕಾಂತಾರ ಚಾಪ್ಟರ್‌-1

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಚಿತ್ರವು…

1 hour ago

ವಂಚನೆ ಪ್ರಕರಣ | ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ನಾಗೇಂದ್ರಗೆ ಸಿಬಿಐ ನೋಟಿಸ್‌

ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ…

2 hours ago