ಮೈಸೂರು

ಜನವರಿ.26ರಿಂದ 31ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ

ಕೆ.ಬಿ.ರಮೇಶ್‌ ನಾಯಕ 

ಮುಖ್ಯಮಂತ್ರಿ, ಮಾಜಿ ಸಿಎಂಗಳು ಸೇರಿ ಹಲವು ಗಣ್ಯರು ಭಾಗಿ

ನಿತ್ಯ ೩ ಲಕ್ಷದಂತೆ ೨೦ ಲಕ್ಷಕ್ಕೂ ಹೆಚ್ಚು ಮಂದಿಗೆ ಪ್ರಸಾದ ವಿನಿಯೋಗಕ್ಕೆ ಸಕಲ ಸಜ್ಜು

ಮೈಸೂರು: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಪಿಲಾ ತೀರದ ತಟದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜ.೨೬ರಿಂದ ೩೧ರವರೆಗೆ ಸುತ್ತೂರಿನಲ್ಲಿ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

೬ ದಿನಗಳ ಕಾಲ ಮಿನಿ ದಸರಾ ಮಹೋತ್ಸವದಂತೆ ನಡೆಯುವ ಸುತ್ತೂರು ಜಾತ್ರೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತು ಪ್ರದರ್ಶನ, ಕುಸ್ತಿ ಪಂದ್ಯಾವಳಿ, ದನಗಳ ಜಾತ್ರೆ, ನಾಟಕಗಳು, ಕೃಷಿ ಬ್ರಹ್ಮಾಂಡ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಜಾತ್ರಾ ಮಹೋತ್ಸವದಲ್ಲಿ ನಡೆಯಲಿದ್ದು, ಅದಕ್ಕಾಗಿ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ.

ಜ.೨೬ರಂದು ವಸ್ತು ಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ, ದೋಣಿವಿಹಾರ, ಜ..೨೭ಕ್ಕೆ ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾಮೇಳ, ದೇಸಿ ಆಟಗಳು, ಸೋಬಾನೆಪದ, ರಂಗೋಲಿ ಸ್ಪರ್ಧೆ ಹಾಗೂ ಸುತ್ತೂರು ಜಾತ್ರಾಮಹೋತ್ಸವದ ನಾಟಕ ಉದ್ಘಾಟನೆ, ೨೮ರಂದು ರಥೋತ್ಸವ, ಧಾರ್ಮಿಕಸಭೆ, ವೀರಭದ್ರೇಶ್ವರ ಕೊಂಡೋತ್ಸವ, ೨೯ರಂದು ಮಹದೇಶ್ವರ ಕೊಂಡೋತ್ಸವ, ೩೦ರಂದು ಲಕ್ಷದೀಪೋತ್ಸವ, ೩೧ರಂದು ಅನ್ನ ಬ್ರಹ್ಮೋತ್ಸವ ಮುಂತಾದ ಧಾರ್ಮಿಕ ಕಾರ್ಯಗಳ ಜತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ,ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ,ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಸೇರಿದಂತೆ ವಿವಿಧ ಮಠಾಧೀಶರು, ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಯೂ ಆಗಿರುವ ಜಾತ್ರಾ ಮಹೋತ್ಸವ ಸಮಿತಿ ಎಸ್.ಪಿ. ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುತ್ತೂರು ಮಠದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಭಜನಾ ಮೇಳದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು ೮೦೦ಕ್ಕೂ ಹೆಚ್ಚು ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟು ಏಳು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು. ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುವಾನಗಳನ್ನು ನೀಡಲಾಗುವುದು.

ವಸ್ತುಪ್ರದರ್ಶನ: ಜಾತ್ರೆಯ ಪ್ರಮುಖ ಆಕರ್ಷಣೆಯಾದ ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಕರಕುಶಲ ಉತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹ ಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರುತ್ತದೆ. ಜೆಎಸ್‌ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ೨೦೦ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳಿರುತ್ತವೆ. ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ವೈದ್ಯಕೀಯ ಹಾಗೂ ತಾಂತ್ರಿಕ ವಸ್ತು ಪ್ರದರ್ಶನವು ಇರುತ್ತದೆ. ‌

ಕೃಷಿ ಮೇಳ: ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ತಾಂತ್ರಿಕತೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲು ಈ ವರ್ಷ ನಿಖರ ಕೃಷಿ ಬೇಸಾಯ ಎಂಬ ಶೀರ್ಷಿಕೆಯಡಿ ಸಾಂಪ್ರದಾಯಿಕ ಹಾಗೂ ಆಧುನಿಕ ತಂತ್ರಜ್ಞಾನಾಧಾರಿತ ಕೃಷಿಮೇಳ ನಡೆಯಲಿದ್ದು, ಸಮಗ್ರ ಬೆಳೆ ನಿರ್ವಹಣೆ, ವೈವಿಧ್ಯಮಯ ಬೆಳೆಗಳ ಪ್ರಾತ್ಯಕ್ಷಿಕೆ ಇರುತ್ತದೆ. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ವಾರಾಟದ ವ್ಯವಸ್ಥೆ ಮಾಡಲಾಗಿದೆ. ಹನಿ ನೀರಾವರಿಯಲ್ಲಿ ಬತ್ತ ಬೆಳೆಯುವ ಪ್ರಾತ್ಯಕ್ಷಿಕೆ, ಒಂದು ಎಕರೆಯಲ್ಲಿ ‘‘ಕೃಷಿ ಬ್ರಹ್ಮಾಂಡ’’ ಪ್ರದರ್ಶನ, ಸಿರಿ ಧಾನ್ಯಗಳು, ದ್ವಿದಳ ಧಾನ್ಯಗಳ ವಿವಿಧ ತಳಿಗಳ ಪ್ರದರ್ಶನವಿರುತ್ತದೆ. ಹಸು, ಕುರಿ, ಮೇಕೆ, ಕೋಳಿಗಳ ದೇಸಿ ತಳಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕೃಷಿ ವಿಚಾರ ಸಂಕಿರಣ: ೨೯ರ ಬುಧವಾರದಂದು ಸುಸ್ಥಿರ ಕೃಷಿಗಾಗಿ ನಿಖರ ಬೇಸಾಯ ಕ್ರಮಗಳ ಕುರಿತು ಕೃಷಿ ವಿಚಾರ ಸಂಕಿರಣ ಮತ್ತು ರೈತರು ಮತ್ತು ಅವರ ಮಕ್ಕಳಿಗಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.

ಸ್ಥಳದಲ್ಲೇ ಚಿತ್ರ ರಚಿಸುವ ಸ್ಪರ್ಧೆ: ೧ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬೇರೆ ಬೇರೆ ಗುಂಪುಗಳಲ್ಲಿ ಸ್ಥಳದಲ್ಲೇ ಚಿತ್ರ ಬರೆಯುವ ರಾಜ್ಯಮಟ್ಟದ ಸ್ಪರ್ಧೆ ೨೯ ರಂದು ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗುತ್ತದೆ.

ಚಿತ್ರಸಂತೆ: ರಾಜ್ಯದ ಕಲಾವಿದರ ಜೊತೆಗೆ ಹೊರ ರಾಜ್ಯಗಳ ಕಲಾವಿದರುಗಳಿಂದ ಕಲಾಕೃತಿಗಳ ಪ್ರದರ್ಶನ, ಮಾರಾಟ ಹಾಗೂ ಸ್ಥಳದಲ್ಲೇ ಸಾರ್ವಜನಿಕರ ಭಾವಚಿತ್ರ ರಚನೆ ಮಾಡಿ ಮಾರಾಟ ಮಾಡುವ ವ್ಯವಸ್ಥೆಯು ಜಾತ್ರೆಯು ಎಲ್ಲಾ ದಿನಗಳಲ್ಲಿ ಇರುತ್ತದೆ.

ಸಾಮೂಹಿಕ ವಿವಾಹ: ೨೭ ರಂದು ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ೧೫೫ಕ್ಕೂ ಹೆಚ್ಚು ಜೋಡಿಗಳ ಜಾತಿ-ಮತ ಭೇದವಿಲ್ಲದೆ ಸರ್ವಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ಅಂತರ್ಜಾತಿ, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧೂ-ವರರು ಸಹ ಪಾಲ್ಗೊಳ್ಳಲಿದ್ದಾರೆ. ವಿವಾಹಗಳ ನೋಂದಣಿಯನ್ನು ಮಾಡಿಸಲಾಗುತ್ತದೆ. ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗೂ ಕಾಲುಂಗುರಗಳನ್ನು, ವರನಿಗೆ ಪಂಚೆ, ವಲ್ಲಿ, ಶರ್ಟ್‌ಗಳನ್ನು ನೀಡಲಾಗುತ್ತದೆ. ಸಾಮೂಹಿಕ ವಿವಾಹ ವ್ಯವಸ್ಥೆಯಲ್ಲಿ ಈವರೆಗೆ ೩೨೦೯ಕ್ಕೂ ಹೆಚ್ಚು ಮಂದಿ ದಂಪತಿಗಳಾಗಿದ್ದಾರೆ. ವಧೂ-ವರರು ವಿವಾಹದ ದೃಢೀಕರಣಪತ್ರ ಹಾಗೂ ನೋಂದಣಿ ಪತ್ರಗಳನ್ನು ಸಲ್ಲಿಸಿ, ಸರ್ಕಾರ ನೀಡುವ ಪ್ರೋತ್ಸಾಹಧನವನ್ನು ಸ್ವಂತ ಜವಾಬ್ದಾರಿಯಿಂದ ಪಡೆದುಕೊಳ್ಳಬಹುದಾಗಿದೆ.

ಪ್ರಭಾತ್ ಪೇರಿ: ಪ್ರತಿದಿನ ಬೆಳಗ್ಗೆ ಅಕ್ಕಪಕ್ಕದ ಗ್ರಾಮಗಳಲ್ಲಿ ಸ್ನೇಹ-ಸೌಹಾರ್ದ-ಶಾಂತಿ ಪ್ರಾರ್ಥನಾ ಸಂಚಲನದ ಪ್ರಭಾತ್ ಪೇರಿ ಇರುತ್ತದೆ. ನಂತರ ಶ್ರೀಗಳವರೊಬ್ಬರು ಧ್ವಜಾರೋಹಣ ನೆರವೇರಿಸುತ್ತಾರೆ. ಮತ್ತೊಬ್ಬರು ಧರ್ಮಸಂದೇಶ ನೀಡುತ್ತಾರೆ. ಸೋಬಾನೆಪದ, ರಂಗೋಲಿ, ಗಾಳಿಪಟ ಸ್ಪರ್ಧೆಗಳು: ಗ್ರಾಮೀಣ ಕಲೆಗಳಾದ ಸೋಬಾನೆಪದ ಹಾಗೂ ರಂಗೋಲಿ ಸ್ಪರ್ಧೆಗಳನ್ನು ೨೬ ರಂದು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಳಿಪಟ ಸ್ಪರ್ಧೆಯನ್ನು ೨೯ ರಂದು ಬೆಳಿಗ್ಗೆ ೧೦ ಗಂಟೆಗೆ ಏರ್ಪಡಿಸಲಾಗಿದೆ.

ಕುಸ್ತಿ ಪಂದ್ಯಾವಳಿ: ಜನವರಿ.೩೦ರಂದು ರಾಷ್ಟ್ರಮಟ್ಟದ ನಾಡ ಕುಸ್ತಿ ಪಂದ್ಯಗಳು ನಡೆುಂಲಿವೆ. ಈ ಬಾರಿ ಎರಡು ಮಾರ್‌ಪಿಟ್ ಕುಸ್ತಿಗಳಿರುತ್ತದೆ. ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆುಂಲ್ಲಿ ವಿಜೇತರಿಗೆ ‘ಸುತ್ತೂರು ಕೇಸರಿ ಪ್ರಶಸ್ತಿ’ ಹಾಗೂ ಸ್ಥಳೀಯ ಉತ್ತಮ ಕುಸ್ತಿ ಸ್ಪರ್ಧೆ ವಿಜೇತರಿಗೆ ‘ಸುತ್ತೂರು ಕುಮಾರ ಪ್ರಶಸ್ತಿ’ಗಳನ್ನು ನೀಡಲಾಗುವುದು.

ದೋಣಿ ವಿಹಾರ: ಸಾರ್ವಜನಿಕರ ಮನರಂಜನೆಗಾಗಿ ಜಾತ್ರೆುಂ ಎಲ್ಲ ದಿನಗಳಲ್ಲೂ ದೋಣಿ ವಿಹಾರವನ್ನು ಏರ್ಪಡಿಸಲಾಗಿದೆ.

ಗ್ರಾಮೀಣ ಜನರು ಹಾಗೂ ಪ್ರಾಥಮಿಕ ಮತ್ತು ಜೆಎಸ್‌ಎಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಸಿ ಆಟಗಳು: ಗ್ರಾಮೀಣ ಪುರುಷರಿಗೆ ೨೮ ರಂದು ಮತ್ತು ಮಹಿಳೆಯರಿಗೆ ೨೯ರಂದು ಹಾಗೂ ವಿದ್ಯಾರ್ಥಿಗಳಿಗೆ ೨೮ಮತ್ತು ೨೯ ರಂದು ದೇಸಿ ಆಟಗಳಾದ ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ, ಕುಂಟೆಬಿಲ್ಲೆ, ಅಳಿಗುಳಿ ಮನೆ, ಅಣ್ಣೆಕಲ್ಲು, ಚದುರಂಗ, ಚೌಕಬಾರ ಜತೆಗೆ ೫೦ ಕೆಜಿ ತೂಕದ ಚೀಲ ಹೊತ್ತುಕೊಂಡು ಓಡುವುದು, ಕಲ್ಲುಗುಂಡು ಎತ್ತುವುದು, ನೀರು ತುಂಬಿದ ಬಿಂದಿಗೆುಂನ್ನು ತಲೆುಂ ಮೇಲೆ ಹೊತ್ತು ಓಡುವುದು ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜೇತರಾದವರಿಗೆ ನಗದು ಬಹುಮಾನ, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.

ದನಗಳ ಜಾತ್ರೆ: ದನಗಳ ಜಾತ್ರೆುಂನ್ನು ಆರಂಭಿಸಿ ೫೩ ವರ್ಷಗಳಾಗಿದ್ದು, ೫೪ನೇ ದನಗಳ ಜಾತ್ರೆಯಲ್ಲಿ ವಿವಿಧ ಬಗೆಯ ರಾಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉತ್ತಮ ರಾಸುಗಳಿಗೆ ಬಹುವಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು.

ಸಾಂಸ್ಕೃತಿಕ ಮೇಳ: ಜೆಎಸ್‌ಎಸ್ ಅಂತರಸಂಸ್ಥೆಗಳ ಸಾಂಸ್ಕೃತಿಕ ಮೇಳದಲ್ಲಿ ೩,೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಭರತನಾಟ್ಯ, ಸಾಮೂಹಿಕ ನೃತ್ಯ, ಶಾಸ್ತ್ರೀಯ ಸಂಗೀತ, ವಚನಾಧಾರಿತ ನೃತ್ಯ, ಸಾಮೂಹಿಕ ಗಾಯನ ಸ್ಪರ್ಧೆಗಳ ಮೂಲಕ ಸುವಾರು ೪೦೦ಕ್ಕೂ ಹೆಚ್ಚು ಕಾರ್ಯಕ್ರಮಗಳಿರುತ್ತವೆ. ಪ್ರತಿ ದಿನ ಸಂಜೆ ೭ ರಿಂದ ೯ ರವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಹೊರಗಿನ ಕಲಾವಿದರು ನೀಡುತ್ತಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಗದ್ದುಗೆಯ ಆವರಣದಲ್ಲಿ ನಗರ ಪ್ರದೇಶಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಗಾಯನ, ನೃತ್ಯ ಹಾಗೂ ನಾಟಕಗಳಿರುತ್ತದೆ. ಗ್ರಾಮಾಂತರ ಪ್ರದೇಶದ ನಾಟಕ ತಂಡಗಳಿಂದ ೨೪ ಸಾವಾಜಿಕ ಮತ್ತು ಪೌರಾಣಿಕ ನಾಟಕಗಳು ಏಕಕಾಲದಲ್ಲಿ ನಾಲ್ಕು ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಜ.೨೭, ೨೮, ೨೯ರಂದು ಮೊದಲ ಬಾರಿಗೆ ವಸ್ತು ಪ್ರದರ್ಶನದ ಆವರಣದಲ್ಲಿ ಜಾತ್ರಾ ನಾಟಕೋತ್ಸವ ಜರುಗಲಿದೆ.

ಕಲಾತಂಡಗಳಿಂದ ಪ್ರದರ್ಶನ: ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳ ಕಲಾತಂಡಗಳವರು ವರ್ಣರಂಜಿತ ಕಲಾಪ್ರದರ್ಶನಗಳನ್ನು ಜಾತ್ರೆಯ ಮೊದಲಿನಿಂದ ಕೊನೆಯವರೆಗೂ ನೀಡುತ್ತಾರೆ.

ಪ್ರಸಾದ ಮತ್ತು ವಸತಿ ವ್ಯವಸ್ಥೆ: ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಪ್ರತಿನಿತ್ಯವೂ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದದ ವ್ಯವಸ್ಥೆ ಇರುತ್ತದೆ. ದೂರದಿಂದ ಬರುವವರಿಗೆ ತಾತ್ಕಾಲಿಕ ಕುಟೀರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಾತ್ರಾ ಸಮಿತಿಯ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಉದಯ್‌ ಶಂಕರ್, ದಾಸೋಹ ಸಮಿತಿ ಸಂಚಾಲಕ ಪ್ರೊ ಸುಬ್ಬಪ್ಪ ಹಾಜರಿದ್ದರು.

೨೦ ಲಕ್ಷ ಮಂದಿಗೆ ಪ್ರಸಾದ ವ್ಯವಸ್ಥೆ: ಈ ಬಾರಿ ಜಾತ್ರಾ ಮಹೋತ್ಸವದ ವೈಭವ ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದ್ದು ಅಂದಾಜು ೨೦ ಲಕ್ಷ ಮಂದಿಗೆ ಪ್ರಸಾದದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ೬ ದಿನಗಳ ಕಾಲ ಪ್ರತಿದಿನ ಪ್ರಸಾದ ವ್ಯವಸ್ಥೆ ಇದ್ದು ವಿಐಪಿ, ಸಾರ್ವಜನಿಕರು, ಮಠಾಧೀಶರು, ಸ್ವಯಂಸೇವಕರು ಹಾಗೂ ಕ್ರೀಡಾಪಟುಗಳಿಗೆ ೫ ಕಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುವಾರು ೫೦೦ ಮಂದಿ ಬಾಣಸಿಗರು ಅಡುಗೆ ತಯಾರಿಸಲಿದ್ದು, ಐದು ಸಾವಿರ ಸ್ವಯಂ ಸೇವಕರು ಊಟ ಬಡಿಸುವ ಕಾರ್ಯ ನಿರ್ವಹಿಸಲಿದ್ದಾರೆ. ಮಹಾದಾಸೋಹಕ್ಕಾಗಿ ರಾಯಚೂರಿನಿಂದ ೧ಸಾವಿರ ಕ್ವಿಂಟಲ್ ಅಕ್ಕಿ, ೨೪೦ ಕ್ವಿಂಟಲ್ ತೊಗರಿ ಬೇಳೆ, ೧೫೦೦ ಕ್ಯಾನ್ ಅಡುಗೆ ಎಣ್ಣೆ, ೧೨ ಟನ್ ಬೆಲ್ಲ, ೩೫೦೦ಕೆಜಿ ಖಾರದಪುಡಿ, ೧೧೦ ಕ್ವಿ ಕಡ್ಲೆಹಿಟ್ಟು, ೨೦೦ ಕ್ವಿ ಸಕ್ಕರೆ, ೫೦೦ ಕೆಜಿ ನಂದಿನಿ ತುಪ್ಪ, ತಲಾ ೮೦೦ಕೆಜಿ ದ್ರಾಕ್ಷಿ, ಗೋಡಂಬಿ, ೧೦೦೦ ಲೀಟರ್ ಹಾಲು, ೩೦ ಸಾವಿರ ಲೀಟರ್ ಮೊಸರು, ೨೫ ಸಾವಿರ ತೆಂಗಿನಕಾಯಿ, ೫೦೦೦ ಕೆಜಿ ಉಪ್ಪಿನಕಾಯಿ ಬಳಸಲಾಗುತ್ತದೆ. ಈಗಾಗಲೇ ಒಂದು ಕೋಟಿ ರೂ. ಪದಾರ್ಥಗಳನ್ನು ಸಂಗ್ರಹಿಸಿದ್ದು, ಇದರಲ್ಲಿ ಶೇ.೫೦ರಷ್ಟು ದಾನಿಗಳು ನೀಡಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಕೊಳ್ಳೇಗಾಲ| ಮಾವನಿಂದ ದೈಹಿಕ ಕಿರುಕುಳ ಆರೋಪ: ಸೊಸೆ ಆತ್ಮಹತ್ಯೆ?

ಕೊಳ್ಳೇಗಾಲ: ಮಾವನಿಂದ ದೈಹಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ…

16 mins ago

ರನ್ಯಾರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌: ಸರ್ಕಾರಿ ವಾಹನದಲ್ಲೇ ಚಿನ್ನ ಸಾಗಾಟ?

ಬೆಂಗಳೂರು: ನಟಿ ರನ್ಯಾರಾವ್‌ ಅವರನ್ನು ಗೋಲ್ಟ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ತನಿಖೆಯಲ್ಲಿ ದುಬೈನಿಂದ ಅಕ್ರಮವಾಗಿ ತಂದ…

18 mins ago

ಎಚ್.ಡಿ.ಕೋಟೆ: ಜಿಂಕೆ ಬೇಟೆಯಾಡಿದ ಹುಲಿ

ಎಚ್.ಡಿ.ಕೋಟೆ: ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿರುವ ಅಪರೂಪದ ದೃಶ್ಯ ಪ್ರವಾಸಿಗರ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಕಾಕನಕೋಟೆ ಸಫಾರಿ ವೇಳೆ…

32 mins ago

ಅಪಘಾತದಲ್ಲಿ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ: ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಶಿಫ್ಟ್‌

ದಾವಣಗೆರೆ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ವಿಧಾನಸಭೆ ಉಪಸ್ಪೀಕರ್‌ ರುದ್ರಪ್ಪ ಲಮಾಣಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲು…

1 hour ago

ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್‌ ಕಾರ್ನಿ ಪ್ರಮಾಣ ವಚನ ಸ್ವೀಕಾರ

ಒಟ್ಟಾವಾ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್‌ ಕಾರ್ನಿ ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇದಕ್ಕೂ ಮೊದಲು ಮಾರ್ಕ್‌ ಕಾರ್ನಿ ಬ್ಯಾಂಕ್‌…

1 hour ago

ಬಹುಭಾಷಾ ಪಂಡಿತ ಪಂಚಾಕ್ಷರಿ ಹಿರೇಮಠ ನಿಧನ

ಕೊಪ್ಪಳ: ಹೈದರಾಬಾದ್‌ ಕರ್ನಾಟಕ ವಿಮೋಚನಾ ಹೋರಾಟಗಾರ ಹಾಗೂ ಬಹುಭಾಷಾ ಪಂಡಿತ ಡಾ.ಪಂಚಾಕ್ಷರಿ ಹಿರೇಮಠ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.…

2 hours ago