ಮೈಸೂರು: ಆಧ್ಯಾತ್ಮ, ಮಾನವೀಯ ಮೌಲ್ಯಗಳು, ಸಾಮಾಜಿಕ ಸಮಾನತೆ, ವಿಶಿಷ್ಟಾದ್ವೈತದ ಅನನ್ಯತೆಯನ್ನು ಜನತೆಗೆ ಸಾರಿದ ಮಹಾನ್ ವ್ಯಕ್ತಿ ಶ್ರೀರಾಮಾನುಜಾಚಾರ್ಯರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್.ಕೆ ಲೋಕನಾಥ್ ಅಭಿಪ್ರಾಯಪಟ್ಟರು.
ಬುಧವಾರ(ಆ.7) ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ “ವಿಶಿಷ್ಟಾದ್ವೈತದ – ನಯಚಿಂತನಮ್” ಎಂಬ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೇದಾಂತಶಾಸ್ತ್ರ ಪ್ರಪಂಚಕ್ಕೆ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ ಮಾಹಾನಿಯರಾದ ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಹಾಗೂ ಶಂಕರಚಾರ್ಯರ ವಿಚಾರ ಲಹರಿಗಳನ್ನು ಜನ ಸಾಮಾನ್ಯರಿಗೂ ತಿಳಿಸುವ ಕೆಲಸ ಮಾಡಬೇಕು ಎಂದರು.
ಶ್ರೀರಾಮಾನುಜಾಚಾರ್ಯರು ಶಾಸ್ತ್ರಾಭ್ಯಾಸಗಳನ್ನು ಅನುಸರಿಸಿ ಜನರಲ್ಲಿ ವೈಷ್ಣವ ಭಕ್ತಿಯ ಬೀಜವನ್ನು ಬಿತ್ತಿದರು. ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತ ಪ್ರವರ್ತಕರಾಗಿ ಮಹಾ ವಿಷ್ಣುವಿನ ಆರಾಧಕರಾಗಿ ವಿಶಿಷ್ಟಾದ್ವೈತ ಸಿದ್ಧಾಂತವನ್ನ ಹಿಮಾಲಯದೆತ್ತರಕ್ಕೆ ಬೆಳೆಸಿದರು. ವಿಷ್ಣುವಿನಲ್ಲಿ ಭಕ್ತಿ ಇಟ್ಟರೆ ಪರಮಾತ್ಮನನ್ನು ಒಲಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು ಎಂದು ತಿಳಿಸಿದರು.
ವಿಷ್ಣುವಿನ ಭಕ್ತಿಯಲ್ಲಿ ಯಾವುದೇ ತಾರತಮ್ಯವಿಲ್ಲ. ಪಂಡಿತ ಪಾಮರರಿಗೆ ಭೇದವಿಲ್ಲ ಎಂದು ನಿರೂಪಿಸಿದ ವಿಶಿಷ್ಟ ಪ್ರಮೇಯವನ್ನು ಮಂಡಿಸಿದ ರಾಮಾನುಜಾಚಾರ್ಯರಲ್ಲಿ ಪ್ರತಿಭೆ ಹಾಗೂ ವೈಶಾಲತೆಯನ್ನು ಕಾಣಬಹುದು. ವಿಶಿಷ್ಟಾದ್ವೈತ ಸಿದ್ಧಾಂತವನ್ನು ಅನುಸರಿಸುವ ಹಾಗೂ ಅಳವಡಿಸಿಕೊಳ್ಳುವ ಒಂದು ದೊಡ್ಡ ಪಂಗಡ ಇಂದಿಗೂ ಇದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಸಂಸ್ಕೃತ ಭಾಷೆ. ನಮ್ಮ ಸಂಸ್ಕೃತದ ಭಾಷೆಯಲ್ಲಿ ಇವೆಲ್ಲವೂ ಸಹ ಅಡಗಿದೆ. ನಮ್ಮ ಜಲ, ನೆಲ ಭಾಷೆ ಈ ಮೂರಕ್ಕೂ ಸಹ ನಾವು ಬಹಳ ಪ್ರಾಮುಖ್ಯತೆಯನ್ನು ನೀಡಬೇಕು ಎಂದರು.
ಪ್ರಸ್ತುತ ಪ್ರಚಲಿತದಲ್ಲಿರುವ ಎಲ್ಲಾ ರೀತಿಯ ತಾಂತ್ರಿಕ ಕೌಶಲ್ಯಗಳನ್ನು ಆ ಕಾಲದಲ್ಲಿಯೇ ಸಂಸ್ಕೃತ ಭಾಷೆ ಒಳಗೊಂಡಿತ್ತು. ಸಂಸ್ಕೃತ ಭಾಷೆಯಲ್ಲಿ ಹೆಚ್ಚು ಸಂಶೋಧನೆಗಳು ಜರುಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಹ ಕೈಜೋಡಿಸಬೇಕು. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಸಿದ್ಧಾಂತದ ಸೂಕ್ಷ್ಮ ವಿಷಯಗಳನ್ನು ಹಾಗೂ ಸಂಸ್ಕೃತ ಭಾಷೆಯನ್ನು ಜನಸಾಮಾನ್ಯರಿಗೂ ತಿಳಿಸಬೇಕು ಆ ಮೂಲಕ ವಿಚಾರ ಸಂಕಿರಣವನ್ನು ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನ ಕುಲ ಸಚಿವರಾದ ಡಾ.ಎಸ್. ಕುಮಾರ್, ವಿದ್ವತ್ ಪರಂಪರೆಯಲ್ಲಿ ಬೆಳೆದಂತಹ ಭಗವಾನ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯು ತನ್ನ 50 ನೇ ವರ್ಷದ ಸಂಭ್ರಮಾಚರಣೆಯ ಆಸುಪಾಸಿನಲ್ಲಿದೆ. ಇದರ ಮೂಲ ಉದ್ದೇಶ ಶ್ರೀಭಗವಾನ್ ರಾಮಾನುಜಾಚಾರ್ಯರ ಸಿದ್ದಾಂತಗಳನ್ನು ಸಂಶೋಧನೆ ಮಾಡುವ ಮೂಲಕ ಸಂಸ್ಕೃತದ ಬಳಕೆಯನ್ನು ಮುಂದೆ ತರುವುದಾಗಿದೆ ಎಂದರು.
ರಾಮಾನುಜರ ಉಜ್ವಲ ವ್ಯಕ್ತಿತ್ವ, ಬುದ್ದಿ ತೀಕ್ಷ್ಣತೆ, ಅದ್ಭುತ ಗ್ರಂಥರಚನಾ ಸಾಮರ್ಥ್ಯ, ಅಸದೃಶ್ಯ ಪಾಂಡಿತ್ಯ, ಕಾರ್ಯತತ್ಪರತೆ, ಕಾರುಣ್ಯ, ಪರಿಶುದ್ಧ ಜೀವನ, ತೀರ್ಥಯಾತ್ರೆ, ದೇವಾಲಯ ಪುನರುದ್ಧಾರ ಇತ್ಯಾದಿ ಗುಣಗಳೆಲ್ಲ ಇವರ ಸಿದ್ಧಾಂತ ಸ್ಥಾಪನೆಗೂ, ವಿಸ್ತಾರ ಪ್ರಚಾರಕ್ಕೂ ಸಹಾಯಕವಾದವು. ಹಿಂದಿನ ಸಂಪ್ರದಾಯವನ್ನು ಸಿದ್ಧಾಂತ ಮಟ್ಟಕ್ಕೆ ಏರಿಸಿ, ಅದಕ್ಕೆ ಗಣ್ಯವಾದ ವೈಷ್ಣವ ದರ್ಶನ ಸ್ಥಾನವನ್ನು ಸಂಪಾದಿಸಿದ ಕೀರ್ತಿ ರಾಮಾನುಜರಿಗೆ ಸಲ್ಲುತ್ತದೆ ಎಂದರು.
ರಾಮಾನುಜಾಚಾರ್ಯರ ಸಿದ್ಧಾಂತಗಳು, ವಿಚಾರ ಲಹರಿಗಳು, ವೇದಾಂತ ದರ್ಶನ, ಅವರ ಗ್ರಂಥಗಳಿಗೆ ಸಂಬoಧಿಸಿದoತೆ ಸಾಮಾಜಿಕ ಚಿಂತನೆ, ಸಿದ್ಧಾಂತಗಳ ಕೊಡುಗೆಗಳನ್ನು ಮೇಲುಕೋಟೆ ಸುತ್ತಮತ್ತಲೂ ಪ್ರಚಾರ ಮಾಡುವುದರ ಜೊತೆಗೆ ರಾಷ್ಟ್ರದಾದ್ಯಂತ ಪ್ರಚಾರ ಮಾಡಬೇಕು. ಈ ನಿಟ್ಟಿನಲ್ಲಿ ರಾಮಾನುಜರ ವಿಚಾರ ಸಂಕಿರಣ ಉಪನ್ಯಾಸಗಳನ್ನು ಆನ್‌ಲೈನ್ ಮೂಲಕ ಆಯೋಜಿಸಲಾಗಿದೆ ಎಂದರು.
ಪ್ರಾಚ್ಯವಿದ್ಯಾ ಸಂಶೋಧನಾಲಯವು ಅನೇಕ ಸಂಸ್ಕೃತ ತಾಳೆಗರಿಗಳ ಸಂಶೋಧನೆಗೆ ಅನುವು ಮಾಡಿಕೊಡುತ್ತಿದೆ. ಈಗಾಗಲೇ ಸಂಸ್ಕೃತ ಭಾಷೆ ಬೆಳೆದು ಅಳಿವಿನ ಅಂಚಿನಲ್ಲಿದೆ. ಸಂಸ್ಕೃತದಲ್ಲಿರುವ ಶಾಸ್ತ್ರ, ಧರ್ಮ, ಗ್ರಂಥ ವ್ಯಾಸಂಗಗಳನ್ನು ಸಾಮಾನ್ಯ ಜನರಿಗೂ ಕೂಡ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕರಾದ ಡಾ.ಡಿ.ಪಿ ಮಧುಸೂಧನಾಚಾರ್ಯ, ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾಪಾಠ ಶಾಲೆಯ ಪ್ರಾಂಶುಪಾಲರಾದ ಡಾ. ಬಿ ಸತ್ಯನಾರಾಯಣ, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪನಿರ್ದೇಶಕರಾದ ವಿದ್ವಾನ್ ಡಾ.ಟಿ.ವಿ ಸತ್ಯನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…
ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…
ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…