ಮೈಸೂರು : ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಅರಮನೆಯ ಮುಂಭಾಗದಲ್ಲಿ ವಿಶೇಷವಾಗಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಅರಮನೆಗೆ ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆಗಳಾದ ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್ ಮತ್ತು ಹೆಣ್ಣಾನೆಗಳಾದ ವಿಜಯ ಹಾಗೂ ವರಲಕ್ಷ್ಮಿ ಆನೆಗಳಿಗೆ ಅರಮನೆಯ ಮುಂಭಾಗದ ಆನೆ ಮಾವುತರ ಶೆಡ್‌ನ ಹಿಂಭಾಗದಲ್ಲಿ ಮೈಸೂರಿನ ಅರಮನೆ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
ಕಳೆದ 26 ವರ್ಷಗಳಿಂದ ಗಜಪಡೆಗೆ ಪೂಜೆ ಸಲ್ಲಿಸುತ್ತಿರುವ ಅರ್ಚಕರಾದ ಪ್ರಹ್ಲಾದ್ ರಾವ್ ಮಾತನಾಡಿ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಪ್ರತ್ಯಕ್ಷ ಗಣಪತಿಯಾದ ಗಜಪಡೆಯ ಕಾಲು ತೊಳೆದು, ಅರಿಶಿಣ ಕುಂಕುಮ, ಬಿಲ್ವಪತ್ರೆ ಇಟ್ಟು, ಗಣಪತಿಗೆ ವಿಶೇಷವಾದ ಪಂಚಫಲಗಳನ್ನು ಇಟ್ಟು ಮಹಾಮಂಗಳಾರತಿ ಮಾಡಲಾಗುತ್ತದೆ. ಜೊತೆಗೆ ಆನೆಗಳಿಗೆ ನವಧಾನ್ಯಗಳನ್ನು ಕೊಟ್ಟು, ದೃಷ್ಟಿ ತೆಗೆದು ಪೂಜೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಈ ಬಾರಿ ಚಾತುರ್ಮಾಸ ವ್ರತಾಚರಣೆಯ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲೇ ಇರುವ ಪೇಜಾವರ ಶ್ರೀಗಳು, ಗಣೇಶ ಗೌರಿ ಹಬ್ಬದ ಹಿನ್ನೆಲೆಯಲ್ಲಿ ಅರಮನೆಗೆ ಆಗಮಿಸಿ, ಗಜಪಡೆಗೆ ಪೂಜೆ ಸಲ್ಲಿಸಿ, ನಂತರ ಎಲ್ಲಾ ಗಜಪಡೆಗೂ ಬಾಳೆಹಣ್ಣು ತಿನ್ನಿಸಿದರು. ಬಳಿಕ, ಈ ಬಾರಿ ನಾಡ ಹಬ್ಬ ದಸರಾ ಯಾವುದೇ ವಿಘ್ನಗಳಿಲ್ಲದೆ ನಿರ್ವಿಘ್ನವಾಗಿ ನಡೆಯಲಿ ಎಂದು ವಿನಾಯಕ ಹಾಗೂ ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಬಳಿಕ ಡಿಸಿಎಫ್ ಸೌರವ್ ಕುಮಾರ್ ಮಾತನಾಡಿ, ಗಣೇಶ ಚತುರ್ಥಿಯ ದಿನ ಗಜಪಡೆಗೆ ಪೂಜೆ ಸಲ್ಲಿಸುವಾಗಲೇ ಮಳೆ ಕೂಡ ಬಂದಿದ್ದು, ಇದು ಶುಭ ಸೂಚನೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಮಳೆ ಬರಲಿ, ಎಲ್ಲವೂ ಒಳ್ಳೆಯದಾಗಲಿ ಎಂದು ತಾಯಿಯನ್ನು ಪ್ರಾರ್ಥಿಸುತ್ತೇನೆ ಎಂದರು.
ರಾಜ್ಯದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ಉಂಟಾಗಿದ್ದರೂ, ಗಜಪಡೆಗೆ ಪೂಜೆ ಸಲ್ಲಿಸುವಾಗ ಜೋರಾದ ಮಳೆ ಬಂದು, ಪೂಜೆ ನಿಂತ ನಂತರ ಮಳೆಯೂ ನಿಂತುಹೋಗಿದ್ದು ವಿಶೇಷ.
ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…
ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…
ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…
ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…
ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…
ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…