120 ವರ್ಷಗಳನ್ನು ಪೂರೈಸಿರುವ ಕಟ್ಟಡ ಕೊನೆಯ ದಿನಗಳನ್ನು ಎಣಿಸುತ್ತಿದೆ
ಕೆ.ಬಿ.ರಮೇಶ ನಾಯಕ
ಮೈಸೂರು: ಮೈಸೂರು ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಮಂಡಿ ಮಾರುಕಟ್ಟೆ ಕೂಡ ನಿರ್ವಹಣೆ ಕೊರತೆಯಿಂದ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ.
ಚಾಮರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿರುವ ಈ ಮಾರುಕಟ್ಟೆ ಕಟ್ಟಡಕ್ಕೆ ಬರೋಬ್ಬರಿ ೧೨೦ ವರ್ಷಗಳಾಗಿದ್ದು, ಹಲವು ಕಡೆಗಳಲ್ಲಿ ಶಿಥಿಲವಾಗಿರುವ ಕಾರಣ ವರ್ತಕರು ಜೀವ ಕೈಯಲ್ಲಿ ಹಿಡಿದುಕೊಂಡು ವ್ಯಾಪಾರ ಮಾಡಬೇಕಿದೆ.
ಬೆಂಕಿ ನವಾಬ ಬೀದಿ, ಅಕ್ಬರ್ ರಸ್ತೆಗೆ ಹೊಂದಿಕೊಂಡಂತೆ ಮಂಡಿ ಮೊಹಲ್ಲಾದಲ್ಲಿ ನಿರ್ಮಾಣ ಮಾಡಲಾಗಿರುವ ಮಾರುಕಟ್ಟೆ ಕಟ್ಟಡ ಚೌಕಾಕಾರದ ಪೆಟ್ಟಿಗೆಯಂತಿದ್ದು, ಅಕ್ಬರ್ ರಸ್ತೆಗೆ ಮುಖ ಮಾಡಿದಂತೆ ೧೩ ಮಳಿಗೆಗಳು, ಬೆಂಕಿ ನವಾಬ ಬೀದಿ ಕಡೆಗೆ ೨೦, ಮಾರುಕಟ್ಟೆ ಒಳಗೆ ೯೬ ಮಳಿಗೆಗಳಿವೆ. ಇದರಲ್ಲಿ ಮೇಕೆ-ಕುರಿ ಮಾಂಸ ಮಾರಾಟಕ್ಕೆ ಹದಿನಾಲ್ಕು ಮಳಿಗೆಗಳು ಇವೆ.ಈ ಕಟ್ಟಡದ ಗೋಡೆಗಳನ್ನು ಸೈಜುಗಲ್ಲು, ಸುಟ್ಟ ಇಟ್ಟಿಗೆಗಳು, ಕಲ್ಲುಗಳು, ಸುಣ್ಣದ ಗಾರೆ ಬಳಸಿ ನಿರ್ಮಿಸಲಾಗಿದೆ. ಮೇಲ್ಚಾವಣಿಗೆ ಮದ್ರಾಸ್ ಆರ್‌ಸಿಸಿ ಹಾಕಲಾಗಿದೆ. ಮಾರುಕಟ್ಟೆಯ ಮುಂಭಾಗ ಹಾಕಿದ್ದ ಸುಣ್ಣದ ಗಾರೆ ಕಳಚಿ ಬೀಳುತ್ತಿದೆ. ಪ್ರವೇಶ ದ್ವಾರದ ಇಕ್ಕೆಲಗಳೂ ಶಿಥಿಲವಾಗಿವೆ. ಮತ್ತೊಂದು ಪ್ರವೇಶದಲ್ಲಿ ಇಟ್ಟಿಗೆ ಚೂರುಗಳು ಉದುರುತ್ತಿದ್ದು, ಮಳೆ ನೀರು ಸೋರಿಕೆಯಾಗಿ ಪಾಚಿ ಕಟ್ಟಿರುವುದರಿಂದ ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ.ಕಟ್ಟಡದ ಮತ್ತೊಂದು ದಿಕ್ಕಿನಲ್ಲಿ ಹೆಂಚುಗಳು ಹಾಳಾಗಿದ್ದರಿಂದ ನೀರು ನಿಂತು ಗೋಡೆಗಳಲ್ಲಿ ತೇವಾಂಶ ಏರಿದೆ. ಇದರಿಂದಾಗಿ ಅನೇಕರು ಅಂಗಡಿಗಳನ್ನು ಮುಚ್ಚಿ ಬೇರೆ ಬೇರೆ ಕಡೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಪಟ್ವೇಗಾರ್ ಬೀದಿಯ ಬದಿಗೆ ಇರುವ ಮಳಿಗೆಗಳ ಗೋಡೆಯ ಹಿಂಭಾಗ ತುಂಬಾ ಹಾಳಾಗಿ ಹೋಗಿದ್ದು ದುರಸ್ತಿಯಿಂದ ಹಾಗೆಯೇ ಬಿಟ್ಟಿದ್ದರಿಂದ ಗಿಡ-ಗಂಟಿಗಳು ಬೆಳೆದಿವೆ. ಮಾರುಕಟ್ಟೆ ಒಳಗಿನ ೮ ಅಂಗಡಿಗಳು ಬಾಗಿಲು ಮುಚ್ಚಿರುವುದರಿಂದ ಹಕ್ಕಿಪಕ್ಷಿಗಳ ತಾಣವಾಗಿದೆ. ಕಟ್ಟಡದ ದುರಸ್ತಿ ಮಾಡಿಸಿಕೊಡುವಂತೆ ನಗರಪಾಲಿಕೆಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದೆ ಬಾಡಿಗೆದಾರರು ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಇದರಿಂದಾಗಿ ನಗರಪಾಲಿಕೆಗೆ ಬರಬೇಕಿದ್ದ ಆದಾಯವು ಕಡಿಮೆಯಾಗಿದೆ. ಈರುಳ್ಳಿ, ತರಕಾರಿ, ಹಣ್ಣು ವ್ಯಾಪಾರಿಗಳು ಪ್ಲಾಸ್ಟಿಕ್ ಹೊದಿಕೆ ಹಾಕಿಸಿಕೊಂಡು ಮಳೆಯಿಂದ ರಕ್ಷಣೆ ಮಾಡಿಕೊಂಡಿದ್ದರೆ, ಮುಖ್ಯದ್ವಾರದ ಮಳಿಗೆಗಳಲ್ಲಿ ವ್ಯಾಪಾರ ಮಾಡುವವರು ಮಳಿಗೆಗೆ ತಾವೇ ಸಣ್ಣಪುಟ್ಟ ತೇಪೆ ಹಾಕಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.
೫೦ ವರ್ಷಗಳಿಂದ ಇದೇ ಜಾಗದಲ್ಲಿ ಕುಳಿತು ಬಾಳೆಹಣ್ಣು ಮಾರುತ್ತಿದ್ದೇನೆ. ೨ ಪೈಸೆ ಇದ್ದ ಬಾಡಿಗೆ ೧೦ ರೂ. ಆಗಿದೆ. ಅಂದು ೨ ಪೈಸೆ ಬಾಡಿಗೆ ಕೊಡಲು ಹೋದರೆ ಆ ಪುಣ್ಯಾತ್ಮ ಬೇಡ ಮಗುವಿಗೆ ಹಾಲು ಕುಡಿಸಲು ಇಟ್ಟುಕೋ ಎನ್ನುತ್ತಿದ್ದ. ಈಗ ನಾನು ಕುಳಿತಿರುವ ಕಡೆ ಮಳೆ ಬಂದರೆ ಸೋರುತ್ತಿದೆ. ಕಟ್ಟಡ ದುರಸ್ತಿ ಮಾಡಿಸಿದರೆ ಅಮಾಯಕರ ಜೀವ ಉಳಿಯಲಿದೆ.
-ಭದ್ರಮ್ಮ, ಬಾಳೆಹಣ್ಣು ವ್ಯಾಪಾರಿ
ಮಳಿಗೆಗಳನ್ನು ದುರಸ್ತಿ ಮಾಡಿಸುತ್ತೇವೆಂದು ಹೋದವರು ಮತ್ತೆ ಈ ಕಡೆಗೆ ಬಂದಿಲ್ಲ. ಅನೇಕ ಕಡೆಗಳಲ್ಲಿ ನೀರು ಸೋರಿ ಕಟ್ಟಡ ಹಾಳಾಗಿದೆ. ನಮ್ಮಂತಹ ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ದುರಸ್ತಿ ಮಾಡಿಸಿದರೆ ಉತ್ತಮ.
– ಹೇಮಂತ್ ಕುಮಾರ್, ಸೊಪ್ಪಿನ ವ್ಯಾಪಾರಿ
ಈ ಕಟ್ಟಡವನ್ನು ಮಹಾರಾಜರ ಕಾಲದಲ್ಲಿ ನಿರ್ಮಿಸಿ ಉಚಿತವಾಗಿ ಕೊಡಲಾಗಿತ್ತು. ನಿರ್ವಹಣೆ ಇಲ್ಲದೆ ಕಟ್ಟಡದ ಪರಿಸ್ಥಿತಿ ಹದಗೆಟ್ಟಿದೆ. ಒಂದು ಬಾರಿ ೩೦ ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ಮಾತು ಕೇಳಿ ಬಂತು. ಆದರೆ, ದುರಸ್ತಿ ಮಾಡಲಿಲ್ಲ. ಕಟ್ಟಡ ಸಂಪೂರ್ಣ ಬಿದ್ದು ಹೋದರೆ ವ್ಯಾಪಾರಿಗಳು ಖಾಲಿ ಮಾಡುತ್ತಾರೆ ಎಂಬ ಮನಸ್ಥಿತಿ ಹೊಂದಿದ್ದಾರೆ. ಜೀವಹಾನಿಯಾಗುವ ಮುನ್ನ ಎಚ್ಚೆತ್ತು ದುರಸ್ತಿ ಮಾಡಿಸಲಿ.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…