ಮೈಸೂರು : ರೈತರಿಗೆ ಬರ ಪರಿಹಾರ ನೀಡುವುದಕ್ಕಿಂತ ಮುಖ್ಯವಾದ ಬೇರೆ ಕೆಲಸ ಇದೆಯಾ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಬರ ಪರಿಹಾರ ಹಣದ ದುರ್ಬಳಕೆ ತಡೆಯುವ ಹಾಗೂ ರೈತರಿಗೆ ಶೀಘ್ರ ಪರಿಹಾರ ನೀಡುವ ಸಲುವಾಗಿ ರೈತರ ಜಮೀನಿನ ವಿಸ್ತೀರ್ಣದ ಮಾಹಿತಿಯನ್ನು “ಫ್ರೂಟ್ಸ್” ತಂತ್ರಾಂಶದಲ್ಲಿ ನವೀಕರಿಸುವಂತೆ ಆದೇಶಿಸಿ ಹಲವು ತಿಂಗಳಾಗಿದೆ. ಆದರೂ, ಮೈಸೂರಿನಲ್ಲಿ ಫ್ರೂಟ್ಸ್ ನವೀಕರಣ ಶೇ.75 ಮೀರಿಲ್ಲ” ಎಂದು ಅಸಮಾಧಾನ ಹೊರಹಾಕಿದರು.
ಬರಗಾಲದ ಕಾರಣಕ್ಕೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಪರಿಹಾರ ಕೇಳಿ ಕೇಂದ್ರಕ್ಕೆ ಮೆಮೊರಾಂಡಮ್ ಸಲ್ಲಿಸಿದ್ದು, ಕೇಂದ್ರದ ತಂಡವೂ ರಾಜ್ಯಕ್ಕೆ ಆಗಮಿಸಿ ಬರ ಅಧ್ಯಯನ ನಡೆಸಿದೆ.
ಆದರೂ ಕೇಂದ್ರದಿಂದ ಪರಿಹಾರ ಹಣ ಬಂದಿಲ್ಲ. ಹೀಗಾಗಿ ಮೊದಲ ಕಂತಿನ ಹಣವನ್ನು ರಾಜ್ಯ ಸರ್ಕಾರವೇ ಬರಿಸಲು ನಿರ್ಧರಿಸಿದೆ. ಆದರೆ, ಫ್ರೂಟ್ಸ್ ನವೀಕರಿಸದೆ ಅಧಿಕಾರಿಗಳು ಅಸಡ್ಡೆ ತೋರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಫ್ರೂಟ್ಸ್ ತಂತ್ರಾಂಶ ನವೀಕರಿಸದೆ ರೈತರಿಗೆ ನ್ಯಾಯಯುತ ಪರಿಹಾರ ನೀಡುವುದು ಸಾಧ್ಯವಿಲ್ಲ. ರೈತರು ತಮ್ಮ ಜಮೀನಿನ ವಿಸ್ತೀರ್ಣವನ್ನು ನಮೂದಿಸಲು ಮುಂದಾಗದಿದ್ದರೆ ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರರು ಪತ್ರಿಕಾ ಪ್ರಕಟಣೆ ನೀಡಿ ರೈತರಲ್ಲಿ ಅರಿವು ಮೂಡಿಸಿ ಮುಂದಿನ ವಾರದಲ್ಲಿ ನವೀಕರಣದ ಕೆಲಸ ಮುಗಿಸಿ ಎಂದು ಗಡುವು ನೀಡಿದರು.
ರೈತರ ಆಧಾರ್ ಲಿಂಕ್ ನಮ್ಮ ಆದ್ಯತೆ: ರೈತರ ಆರ್‌ಟಿಸಿ ಜೊತೆಗೆ ಆಧಾರ್ ಲಿಂಕ್ ಜೋಡಣೆ ನಮ್ಮ ಮುಂದಿನ ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಗಮನ ಸೆಳೆದ ಅವರು, “ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಕನಿಷ್ಠ ಶೇ.77 ರಷ್ಟಿದೆ. ಆದರೆ, ಕೇಂದ್ರ ಸರ್ಕಾರದ ಅಂಕಿಅಂಶದ ಪ್ರಕಾರ ಈ ಸಂಖ್ಯೆ ಕೇವಲ ಶೇ.44 ರಷ್ಟು ಮಾತ್ರ. ಪರಿಣಾಮ ಕೇಂದ್ರದ ಮಾನದಂಡದ ಪ್ರಕಾರ ರಾಜ್ಯಕ್ಕೆ ಕನಿಷ್ಠ ಮೊತ್ತದ ಬರ ಪರಿಹಾರ ಲಭ್ಯವಾಗುತ್ತಿದೆ.
ಹೀಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿ ನಮೂದಿಸುವಾಗ ಅವರ ಆರ್ಟಿಸಿ ಜೊತೆಗೆ ಆಧಾರ್ ಲಿಂಕ್ ಮಾಡಬೇಕು. ಆ ಮೂಲಕ ಪರಿಹಾರದ ಹಣ ತಲುಪಿಸುವ ಜೊತೆಗೆ ರಾಜ್ಯದ ರೈತರ ನಿಖರ ಅಂಕಿಅಂಶ ಪಡೆಯಬಹುದು ಎಂದು ಅವರು ವಿವರಿಸಿದರು.
ಕುಡಿಯುವ ನೀರಿನ ಬಗ್ಗೆ ಇರಲಿ ಎಚ್ಚರ: ಮೈಸೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿಲ್ಲ. ಆದರೆ, ಬೇಸಿಗೆಯಲ್ಲಿ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು.
ಟಾಸ್ಕ್ ಫೋರ್ಸ್ ಸಭೆ ನಡೆಸಬೇಕು. ಈಗಲೇ ಖಾಸಗಿ ಟ್ಯಾಂಕರ್ ಹಾಗೂ ಬೋರ್ ಬೆಲ್ ಗಳನ್ನು ಗುರುತಿಸಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಮೇವು ಪೂರೈಕೆಗೆ ಸೂಚನೆ: ಜನವರಿ, ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಅನುಕೂಲವಾಗುವಂತೆ ರಾಜ್ಯಾದ್ಯಂತ 7,63,000 ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ.
ಈ ಕಿಟ್‌ಗಳನ್ನು ಗ್ರಾಮಪಂಚಾಯತಿ ಮಟ್ಟದಲ್ಲಿ ಪಾರದರ್ಶಕವಾಗಿ ವಿತರಿಸಬೇಕು. ಈ ಕೆಲಸಕ್ಕೆ ಹಾಲು ಉತ್ಪಾಕರ ಸಹಕಾರ ಸಂಘದ ಸಹಾಯ ಪಡೆದುಕೊಳ್ಳಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು
ಕಂದಾಯ ಗ್ರಾಮಗಳ ಶೀಘ್ರ ಘೋಷಣೆಗೆ ಸೂಚನೆ: ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.
ಮೈಸೂರು ಜಿಲ್ಲೆಯಲ್ಲಿ ಒಟ್ಟು 110 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ, ಈವರೆಗೆ 52 ಗ್ರಾಮಗಳಿಗೆ ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಬಾಕಿ ಉಳಿದ ಗ್ರಾಮಗಳನ್ನೂ ಶೀಘ್ರವಾಗಿ ಕಂದಾಯ ಗ್ರಾಮಗಳೆಂದು ಘೋಷಿಸಿ.
ಜಿಲ್ಲೆಯಲ್ಲಿ ಒಟ್ಟಾರೆ 20163 ಮನೆಗಳಿಗೆ ಹಕ್ಕುಪತ್ರ ನೀಡಬೇಕಿದ್ದು, 2884 ಮನೆಗಳಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಹೀಗಾಗಿ ಉಳಿದ ಮನೆಗಳಿಗೂ ಶೀಘ್ರ ಹಕ್ಕುಪತ್ರ ನೀಡಲು ಕ್ರಮವಹಿಸಿ.
ಅಲ್ಲದೆ, ಮತ್ತಷ್ಟು ಅರ್ಹ ಗ್ರಾಮಗಳಿದ್ದರೆ, ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಿ ಬಡವರ ಪರವಾಗಿ ಕೆಲಸ ಮಾಡಿ ಎಂದು ಅವರು ಕಿವಿಮಾತು ಹೇಳಿದರು.
ಬಗರ್ ಹುಕುಂ ಅರ್ಜಿ ವಿಲೇಗೆ ಒತ್ತು: ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಹರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, “ಈ ಹಿಂದೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ವೇಳೆ ಅನರ್ಹರಿಗೂ ಜಮೀನು ಮಂಜೂರು ಮಾಡಲಾಗಿದೆ. ನಿಯಮ ಮೀರಿ ಸಾಕಷ್ಟು ಅಕ್ರಮ ನಡೆಸಲಾಗಿದೆ.
ಆದರೆ ಈ ಬಾರಿ ಅಂತಹ ಯಾವುದೇ ಪ್ರಹಸನಗಳಿಗೆ ಆಸ್ಪದ ಇಲ್ಲ. ಬಗರ್ ಹುಕುಂ ಸಭೆಯ ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು” ಎಂದು ತಾಕೀತು ಮಾಡಿದರು.
ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು.
ಮುಂದಿನ 6 ತಿಂಗಳಲ್ಲಿ ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು,ಸಾಗುವಳಿ ಚೀಟಿ ನೀಡುತ್ತಿದ್ದಂತೆ ಹೊಸ ಸರ್ವೇ ನಂಬರ್ ಪೋಡಿಯನ್ನೂ ಸಹ ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಹೈಕೋರ್ಟ್ ಕೇಸ್ಗಳ ಬಗ್ಗೆ ಇಷ್ಟು ತಾತ್ಸಾರವೇಕೆ?
ಮೈಸೂರು ಜಿಲ್ಲೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಒಟ್ಟು 721 ಪ್ರಕರಣಗಳಿವೆ. ಈ ಪೈಕಿ 386 ಪ್ರಕರಣಗಳಲ್ಲಿ ತೆಗೆದುಕೊಂಡಿರು ಕ್ರಮ ಶೂನ್ಯ. ತಹಶೀಲ್ದಾರರು ನ್ಯಾಯಾಲಯದಲ್ಲಿ ಕನಿಷ್ಟ ವಕಾಲತ್ತನ್ನೂ ಸಹ ಸಲ್ಲಿಸಿಲ್ಲ. ವಕಾಲತ್ತು ಸಲ್ಲಿಸಲು ಏನ್ರೀ ಸಮಸ್ಯೆ ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.
ಕಳೆದ ಆಗಸ್ಟ್ ತಿಂಗಳಿನಿಂದ ಸತತ ಸೂಚನೆ ನೀಡಿದ ನಂತರವೂ ಮೈಸೂರು ಜಿಲ್ಲೆಯಿಂದ ಅಧಿಕ ಸಂಖ್ಯೆಯ ಪ್ರಕರಣಗಳು ಹೈಕೋರ್ಟ್ ನಲ್ಲಿವೆ. ಆದರೆ, ತಹಶಿಲ್ದಾರರು ಹಾಗೂ ಎಸಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಪರಿಣಾಮ ಹೈಕೋರ್ಟ್ ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ.
ನೀವು ಮಾಡುವ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕ? ಎಂದು ಅವರು ಕಿಡಿಕಾರಿದರು.
ಮುಂದುವರೆದು, ತಹಶಿಲ್ದಾರರು ಈಗಲಾದರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಹೈಕೋರ್ಟ್ ನಲ್ಲಿರುವ ಎಲ್ಲಾ ಪ್ರಕರಣಗಳಲ್ಲೂ ವಕಾಲತ್ತು ಸಲ್ಲಿಸಬೇಕು.
ಮೂರು ತಿಂಗಳಲ್ಲಿ ಪ್ರಗತಿ ಕಾಣದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಎಚ್ಚರಿಸಿದರು.
ಇ-ಆಫೀಸ್ ಬಳಸದ ಅಧಿಕಾರಿಗಳಿಗೆ ನೋಟೀಸ್ : ಸಭೆಯ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಕಡ್ಡಾಯ ಇ-ಆಫೀಸ್ ಬಳಕೆಗೆ ಸೂಚಿಸಿ ಆರು ತಿಂಗಳಾಗಿದೆ. ಮೈಸೂರಿನ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನವಾಗಿದೆ ಎಂದು ವರದಿ ನೀಡಿದ್ದೀರಿ. ಆದರೆ, ಇ-ಆಫೀಸ್ ನಲ್ಲಿ ಎಷ್ಟು ಫೈಲ್ ರಚಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ ಕೆ.ವಿ. ರಾಜೇಂದ್ರ ಅವರು, “ಉಪ ವಿಭಾಗಾಧಿಕಾರಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಎಲ್ಲಾ ಕಡತಗಳನ್ನೂ ಇ-ಆಫೀಸ್ ಮೂಲಕವೇ ಕಳುಹಿಸಲಾಗುತ್ತಿದೆ. ತಹಶೀಲ್ದಾರ್ ಕಚೇರಿಗಳಲ್ಲೂ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ” ಎಂದರು.
ತದನಂತರ ಅಧಿಕಾರಿಗಳಿಗೆ ಕಟು ಎಚ್ಚರಿಕೆ ನೀಡಿದ ಸಚಿವರು, “ಎಲ್ಲಾ ತಹಶೀಲ್ದಾರ್ ಗಳೂ ಇನ್ಮುಂದೆ ಇ-ಆಫೀಸ್ ಮೂಲಕವೇ ಕಡತಗಳ ವಿಲೇವಾರಿ ನಡೆಸಬೇಕು.
ಭೌತಿಕ ಕಡತಗಳನ್ನು ಸ್ವೀಕರಿಸುವುದಿಲ್ಲ. ಶೇ. 80ಕ್ಕೂ ಹೆಚ್ಚು ಕಡತಗಳನ್ನು ಇ-ಆಫೀಸ್ ಮೂಲಕ ವಿಲೇವಾರಿ ನಡೆಸದ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದು ಎಂದರು.
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…
ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…
ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…
ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…
ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ…