ಎಚ್. ಎಸ್. ದಿನೇಶ್ ಕುಮಾರ್
ಮೈಸೂರು: ಇದು ‘ಹಾವು ಹೊಡೆದು ಹದ್ದಿಗೆ ಹಾಕು’ ಎಂಬ ಗಾದೆಯಂತಿದೆ. ಸಾರಿಗೆ ಇಲಾಖೆಯಲ್ಲಿ ಮಧ್ಯವರ್ತಿಗಳ ಕಾಟ ತಪ್ಪಿಸುವ ಉದ್ದೇಶದಿಂದ ಎಲ್ಲವೂ ಆನ್‌ಲೈನ್ ಮೂಲಕವೇ ಆಗಲಿ ಎಂಬ ಸರ್ಕಾರದ ಉದ್ದೇಶ ಇದೀಗ ಸಾರ್ವಜನಿಕರಿಗೆ ಕಂಟಕವಾಗಿ ಪರಿಣಮಿಸಿದ್ದು, ಆನ್‌ಲೈನ್ ಸೆಂಟರ್ ನಡೆಸುವವರು ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದ್ದಾರೆ.
ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುವ ಸರ್ಕಾರಿ ಕಚೇರಿಗಳಲ್ಲಿ ಸಾರಿಗೆ ಇಲಾಖೆಯೂ ಒಂದು. ವಾಹನ ಚಾಲನಾ ಪರವಾನಗಿ, ಚಾಲನಾ ಪರವಾನಗಿ ನವೀಕರಣ, ಎಲ್‌ಎಲ್‌ಆರ್ ಹೀಗೆ ವಾಹನ ಚಾಲನೆಗೆ ಸಂಬಂಧಿಸಿದ ಹಲವಾರು ಕೆಲಸಗಳಿಗಾಗಿ ಸಾರ್ವಜನಿಕರು ಪ್ರತಿನಿತ್ಯ ಸಾರಿಗೆ ಇಲಾಖೆಗೆ ಎಡತಾಕುತ್ತಾರೆ. ಈ ಹಿಂದೆ ಆರ್‌ಟಿಒ ಕಚೇರಿಗೆ ಆಗಮಿಸುತ್ತಿದ್ದ ಬಹುತೇಕರು ತಮ್ಮ ಕೆಲಸಗಳಿಗಾಗಿ ಮಧ್ಯವರ್ತಿಗಳನ್ನು ಅವಲಂಬಿಸುತ್ತಿದ್ದರು.
ಅರ್ಜಿ ತುಂಬಿಸಲು ಹಾಗೂ ಆರ್‌ಟಿಒ ಕಚೇರಿಗಳಲ್ಲಿ ಆಗಬೇಕಾದ ಕೆಲಸಗಳನ್ನು ಅವರ ಮೂಲಕವೇ ಮಾಡಿಸುತ್ತ್ತಿದ್ದರು.
ಅರ್ಜಿ ತುಂಬಿಸಲು ಅವರು ಮಧ್ಯವರ್ತಿಗಳಿಗೆ 30 ರೂ.ನಿಂದ 50 ರೂ. ವರೆಗೆ ಮಾತ್ರ ಹಣ ನೀಡುತ್ತಿದ್ದರು. ಮಧ್ಯವರ್ತಿಗಳು ಹಣ ಪಡೆಯುವ ಬಗ್ಗೆ ಆಗಾಗ್ಗೆ ದೂರುಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಸಾರಿಗೆ ಇಲಾಖೆಯಲ್ಲಿ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿತು.
ಜನೋಪಯೋಗಿಯಾಗಬೇಕಾಗಿದ್ದ ಈ ಯೋಜನೆ ಇದೀಗ ಕೆಲವರು ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿದೆ. ಸಾರಿಗೆ ಕಚೇರಿಗಳ ಸುತ್ತಮುತ್ತ ಇರುವ ಆನ್‌ಲೈನ್ ಸೆಂಟರ್‌ಗಳ ಮಾಲೀಕರು ಸಾರ್ವಜನಿಕರಿಂದ ಸುಲಿಗೆ ಆರಂಭಿಸಿವೆ. ಆದರೆ, ಅವರನ್ನು ಅಂಕೆಯಲ್ಲಿಡಲು ಯಾರಿಗೂ ಅಧಿಕಾರವಿಲ್ಲ.
ದ್ವಿಚಕ್ರ ವಾಹನದ ಎಲ್‌ಎಲ್‌ಆರ್ ಪಡೆಯಬೇಕಾದಲ್ಲಿ ಸಾರಿಗೆ ಇಲಾಖೆ ನಿಗಧಿಪಡಿಸಿರುವ ಮೊತ್ತ 150 ರೂ. ಹಾಗೂ ಆನ್‌ಲೈನ್ ಪರೀಕ್ಷೆಗೆಂದು 50ರೂ. ನಿಗಧಿಪಡಿಸಿದೆ. ಆನ್‌ಲೈನ್ ಮೂಲಕ ಅರ್ಜಿ ತುಂಬಿಸಿ ಹಣ ಪಾವತಿಸಿದಲ್ಲಿ ಸಂಜೆಯ ವೇಳೆಗೆ ಅರ್ಜಿ ಹಾಕಿದ ಸ್ಥಳದಲ್ಲಿಯೇ ಎಲ್‌ಎಲ್‌ಆರ್ ಪಡೆಯುವ ವ್ಯವಸ್ಥೆ ಇದೆ.
ಆದರೆ, ಎಲ್‌ಎಲ್‌ಆರ್ ಮಾಡಿಕೊಡಲು ಆನ್‌ಲೈನ್ ಸೆಂಟರ್‌ಗಳು ಪಡೆಯುತ್ತಿರುವ ಹಣ 700 ರೂ. ಆನ್‌ಲೈನ್ ಮೂಲಕ ಅರ್ಜಿ ಹಾಕಲು 100ರೂ. ಪರೀಕ್ಷೆ ತೆಗೆದುಕೊಳ್ಳಲು200ರೂ. ಸಾರಿಗೆ ಇಲಾಖೆಯ ಶುಲ್ಕ200 ರೂ. ಹಾಗೂ ನಿಮ್ಮ ಅರ್ಜಿ ಸ್ವೀಕಾರವಾಗಬೇಕಾದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗೆ 200 ರೂ. ಕೊಡಬೇಕು ಎಂದು ಹೇಳಿ ಹಣವನ್ನು ವಸೂಲು ಮಾಡುತ್ತಿದ್ದಾರೆ.
ಪರೀಕ್ಷೆ ಎದುರಿಸುವುದಿಲ್ಲ: ಈ ಹಿಂದೆ ಎಲ್‌ಎಲ್‌ಆರ್ ಪರೀಕ್ಷೆಯನ್ನು ಸಾರಿಗೆ ಇಲಾಖೆ ಕಚೇರಿಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಅಭ್ಯರ್ಥಿಗಳು ಎದುರಿಸುತ್ತಿದ್ದರು. 15 ಅಂಕಗಳನ್ನು ಪಡೆದರೆ ಮಾತ್ರ ಎಲ್‌ಎಲ್‌ಆರ್ ಪಡೆಯಲು ಅರ್ಹರಾಗುತ್ತಿದ್ದರು. ಆದರೀಗ ಆನ್‌ಲೈನ್ ಸೆಂಟರ್‌ಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿಲ್ಲ. ಪರೀಕ್ಷೆಗೆಂದು 200 ರೂ. ಪಡೆಯುತ್ತಿರುವ ಆನ್‌ಲೈನ್ ಸೆಂಟರ್ ಮಾಲೀಕರು ತಮ್ಮ ಆಪರೇಟರ್‌ಗಳ ಮೂಲಕವೇ ಪರೀಕ್ಷೆಯನ್ನು ಎದುರಿಸಿ ಅಭ್ಯರ್ಥಿಗಳನ್ನು ಪಾಸ್ ಮಾಡಿಸುತ್ತಿದ್ದಾರೆ.
ಅನರ್ಹರೂ ಪಡೆಯಬಹುದು: ಈ ಹಿಂದೆ ದೃಷ್ಟಿ ದೋಷ, ಅಂಗವಿಕಲತೆಯನ್ನು ಹೊಂದಿರುವವರು ಎಲ್‌ಎಲ್‌ಆರ್ ಅಥವಾ ಡಿಎಲ್‌ಗೆ ಅರ್ಜಿ ಸಲ್ಲಿಸಿದಲ್ಲಿ ಅಂತಹವರನ್ನು ಮುಖತಃ ಭೇಟಿ ಮಾಡುತ್ತಿದ್ದ ಅಧಿಕಾರಿಗಳು ಅಂತಹ ಅರ್ಜಿಯನ್ನು ತಿರಸ್ಕರಿಸುತ್ತಿದ್ದರು. ಆದರೀಗ ಅನರ್ಹರೂ ಎಲ್‌ಎಲ್‌ಆರ್ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಸೆಂಟರ್‌ಗಳ ಸುಲಿಗೆಗೆ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಆನ್‌ಲೈನ್ ಸೆಂಟರ್‌ನವರು ವಸೂಲಿ ಮಾಡುವ ಹಣ
* ಎಲ್‌ಎಲ್‌ಆರ್ ಮಾಡಿಕೊಡಲು 700 ರೂ.
* ಆನ್‌ಲೈನ್ ಮೂಲಕ ಅರ್ಜಿ ಹಾಕಲು100 ರೂ.
* ಪರೀಕ್ಷೆ ತೆಗೆದುಕೊಳ್ಳಲು 200 ರೂ.
* ಸಾರಿಗೆ ಇಲಾಖೆಯ ಶುಲ್ಕ200 ರೂ.
* ಸಾರಿಗೆ ಇಲಾಖೆಯ ಅಧಿಕಾರಿಗೆ200 ರೂ.
ಸಾರಿಗೆ ಕಚೇರಿಯ ಆವರಣದಲ್ಲಿಯೇ ಆನ್‌ಲೈನ್ ಸೆಂಟರ್ ತೆರೆಯಬೇಕು. ಅರ್ಜಿ ಸಲ್ಲಿಸಲು ಇಂತಿಷ್ಟು ಹಣವನ್ನು ಸರ್ಕಾರವೇ ನಿಗದಿಪಡಿಸಬೇಕು. ಇದರಿಂದ ಸರ್ಕಾರಕ್ಕೂ ಹಣ ಬರುತ್ತದೆ ಮತ್ತು ಕೆಲವರಿಗೆ ಉದ್ಯೋಗ ನೀಡಿದಂತಾಗುತ್ತದೆ. ಈಗಾಗಲೇ ಹೊಸದಿಲ್ಲಿಯಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.
–ಎಂ.ಎಸ್.ಧನಂಜಯ, ಬಿಜೆಪಿ ಮುಖಂಡರು.
ನಿಗದಿತ ಶುಲ್ಕದೊಡನೆ ಆನ್‌ಲೈನ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳಿಗೆ ಆಯಾ ದಿನವೇ ಅನುಮೋದನೆ ನೀಡಲಾಗುತ್ತದೆ. ಇದಕ್ಕಾಗಿ ಯಾರೂ ಹೆಚ್ಚಿನ ಹಣ ನೀಡಬೇಕಾಗಿಲ್ಲ. ಸಾರಿಗೆ ಅಧಿಕಾರಿಗಳಿಗೆ ಹಣ ನಿಡಬೇಕು ಎಂದು ಯಾರಾದರೂ ಒತ್ತಾಯಿಸಿದರೆ ದೂರು ಸಲ್ಲಿಸಬಹುದು. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
–ಭೀಮನಗೌಡ ಪಾಟೀಲ್, ಸಾರಿಗೆ ಅಧಿಕಾರಿ, ಮೈಸೂರು ಪೂರ್ವ.
ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…
ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…
ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…