ಉದ್ಯೋಗ ಖಾತ್ರಿ ಮತ್ತಷ್ಟು ಮಹಿಳಾ ಸ್ನೇಹಿ, ಜಿಲ್ಲಾ ಪಂಚಾಯಿತಿಯಿಂದ ಮೂರು ತಿಂಗಳ ವಿಶೇಷ ಅಭಿಯಾನ
ಮೈಸೂರು : ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮ-ನರೇಗಾ) ಯೋಜನೆಯಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಸ್ತ್ರೀ ಚೇತನ ಯೋಜನೆಯನ್ನು ಜಾರಿಗೊಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ತವರು ಮೈಸೂರು ಜಿಲ್ಲೆಯಲ್ಲೂ ಅಭಿಯಾನ ಪ್ರಾರಂಭಗೊಂಡಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರಿ ಚೇತನಾ ಅಭಿಯಾನದ ಮೂಲಕ ಪ್ರಯತ್ನ ನಡೆಸಿದೆ. ಮ-ನರೇಗಾ ಸಂಪೂರ್ಣವಾಗಿ ಮಹಿಳಾ ಸ್ನೇಹಿ ಎಂಬುದಾಗಿ ಪರಿಚಯಿಸುವ ಉದ್ದೇಶವನ್ನು ಸ್ತ್ರೀ ಚೇತನ ಅಭಿಯಾನ ಒಳಗೊಂಡಿದೆ.
ಮ-ನರೇಗಾದಲ್ಲಿ ಶೇ.50ರಷ್ಟಿರುವ ಮಹಿಳಾ ಕೂಲಿಕಾರ್ಮಿಕರ ಸಂಖ್ಯೆಯನ್ನು ಶೇ.60ಕ್ಕೆ ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ.
ಮಾತ್ರವಲ್ಲದೆ, ಮೂರು ತಿಂಗಳು ಮಹಿಳಾ ಕೂಲಿಕಾರರಿಗೆ ನಿರಂತರ ಕೆಲಸ ಆದ್ಯತೆ ನೀಡುವುದು. ತಾಯಿ ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಮಕ್ಕಳಿಗಾಗಿ ಕೂಸಿನ ಮನೆ, ವೈಯಕ್ತಿಕ ಕಾಮಗಾರಿಗಳಾದ ಇಂಗುಗುಂಡಿ, ವೈಯಕ್ತಿಕ ಶೌಚಾಲಯ, ಪೌಷ್ಟಿಕ ಕೈತೋಟ, ದನ ಮತ್ತು ಕುರಿ ಕಾಮಗಾರಿಗಳನ್ನು ನೀಡುವುದಾಗಿದೆ. ಮ-ನರೇಗಾ ಯೋಜನೆ ಮೂಲಕ ಮಹಿಳಾ ಸಬಲೀಕರಣ ಕೈಗೊಳ್ಳುವ ಬಹುಮುಖ್ಯ ಉದ್ದೇಶವನ್ನು ಸ್ತ್ರೀ ಚೇತನ ಕಾರ್ಯಕ್ರಮ ಹೊಂದಿದೆ.
ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯ ಮಾರ್ಗದರ್ಶನದ ಮೂಲಕ ಸ್ಥಳೀಯ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿವೆ. ಮ-ನರೇಗಾ ಕಾಮಗಾರಿಗಳಲ್ಲಿ ಪ್ರಸ್ತುತ ಮಹಿಳಾ ಪಾಲ್ಗೊಳ್ಳುವಿಕೆಯ ಪ್ರಮಾಣವು ರಾಜ್ಯ ಮಟ್ಟದಲ್ಲಿ ಶೇ 53.51ರಷ್ಟಿದ್ದರೆ ಮೈಸೂರು ಶೇ.50ರಷ್ಟಿದ್ದು, ಅದನ್ನು ವೃದ್ಧಿಸುವ ಉದ್ದೇಶವಿದೆ. “ಸ್ತ್ರೀ ಚೇತನ” ಅಭಿಯಾನವು ಮೂರು ತಿಂಗಳವರೆಗೆ ಜಾರಿಯಲ್ಲಿರಲಿದ್ದು, ಈ ಸಂದರ್ಭದಲ್ಲಿ ನರೇಗಾ ಯೋಜನೆಯಲ್ಲಿ ಮಹಿಳೆಯರಿಗೆ ಇರುವ ಸವಲತ್ತು ಮತ್ತು ಸೌಲಭ್ಯಗಳ ಬಗ್ಗೆ ಮನದಟ್ಟು ಮಾಡಿಕೊಡಲಾಗುತ್ತದೆ. ಈ ಮೂಲಕ ಮ-ನರೇಗಾ ಯೋಜನೆಯಲ್ಲಿ ಮತ್ತಷ್ಟು ಮಹಿಳೆಯರು ಪಾಲ್ಗೊಳ್ಳುವಂತೆ ಉತ್ತೇಜಿಸುವ ನೂತನ ಪ್ರಯತ್ನಕ್ಕೆ ಜಿಲ್ಲಾ ಪಂಚಾಯಿತಿ ಮುಂದಾಗಿರುವುದು ವಿಶೇಷ.
ಅರ್ಧಕೂಲಿ, ಪೂರ್ತಿ ಸಂಬಳ
ರಾಷ್ಟ್ರೀಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡುವ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಆಯಾ ದಿನದ ನಿಗದಿತ ಅವಧಿಯಲ್ಲಿ ಅರ್ಧ ಕೆಲಸ ನಿರ್ವಹಿಸಿದರೂ ಪೂರ್ತಿ ಕೂಲಿ ಕೈಸೇರಲಿದೆ. ಅದರಂತೆ ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗೆ ಕೆಲಸದಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಿರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗರ್ಭಿಣಿಯರು ಹಾಗೂ ಬಾಣಂತಿಯರ ರಿಯಾಯಿತಿ ನೀಡಿದೆ. ನರೇಗಾ ಕೆಲಸ ಮಾಡುವ 6 ತಿಂಗಳು ತುಂಬಿದ ಗರ್ಭಿಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯರಿಗೆ ಮಗುವಿನ ಜನನದ ನಂತರದ ಆರು ತಿಂಗಳವರೆಗೆ ನಿಗದಿತ ಕೂಲಿ ಪಡೆಯಲು ಕೆಲಸದಲ್ಲಿ ಶೇ.50ರಷ್ಟು ರಿಯಾಯತಿ ಸೌಲಭ್ಯ ನೀಡುತ್ತಿರುವುದು ವಿಶೇಷ.
ಮಹಿಳಾ ಸಬಲೀಕರಣದ ಜತೆಗೆ ಮ-ನರೇಗಾದಡಿ ಮಹಿಳಾ ಕೂಲಿಕಾರರ ಪಾಲ್ಗೊಳ್ಳುವಿಕೆಯನ್ನು ಶೇ.60ಕ್ಕೆ ಹೆಚ್ಚಿಸುವ ಉದ್ದೇಶದಿಂದ “ಸ್ತ್ರೀ ಚೇತನಾ” ಅಭಿಯಾನ ಎಂಬ ಮಹಿಳಾ ಸ್ನೇಹಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು. ಅರ್ಹ ಮಹಿಳೆಯರು ಯೋಜನೆ ಸದುಪಯೋಗಪಡಿಸಿಕೊಳ್ಳುವ ಮೂಲಕ ಮಹಿಳಾ ಸಬಲೀಕರಣಕ್ಕೆ ಕೈ ಜೋಡಿಸಲಿ. –ಎಸ್.ಯುಕೇಶ್ ಕುಮಾರ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ, ಮೈಸೂರು
ಗ್ರಾಮೀಣ ಭಾಗದಲ್ಲಿ ಮಹಿಳೆಯರನ್ನು ಹೊರಗೆ ಕಳುಹಿಸಲು ಹಿಂಜರಿಯುತ್ತಾರೆ. ಅಂತಹವರಿಗೆ ಮಹಿಳೆಯರು ತಾವು ಇರುವಲ್ಲಿಯೇ ಬದುಕು ರೂಪಿಸಿಕೊಳ್ಳಲು ನರೇಗಾ ಸ್ತ್ರೀ ಚೇತನ ಅಭಿಯಾನ ಮಹಿಳಾ ಸ್ನೇಹಿಯಾಗಿದೆ. ಈ ಯೋಜನೆಯನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಈ ಮೂರು ತಿಂಗಳ ಕಾಲ ನರೇಗಾ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಮಾಹಿತಿ ನೀಡುವ ಕೆಲಸವು ಆಗಲಿದೆ. ಡಾ.ಎಂ.ಕೃಷ್ಣರಾಜು, ಉಪಕಾರ್ಯದರ್ಶಿ(ಅಭಿವೃದ್ಧಿ), ಜಿಲ್ಲಾ ಪಂಚಾಯಿತಿ, ಮೈಸೂರು
ಬೆಳಗಾವಿ: ಸಿಎಂ ಆಯ್ಕೆ ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಸಿಎಂ ಬದಲಾವಣೆ…
ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ನಿರ್ದೇಶಕರ…
ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ…
ಬೆಳಗಾವಿ: ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ವಾಪಸ್ ಹೋಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…
ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ…
ಮೈಸೂರು: ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ…