ಮೈಸೂರು

ಮಕ್ಕಳು ಪರಿಸರ ಪ್ರೇಮ ಬೆಳೆಸಿಕೊಂಡು ಗಿಡ ನೆಡಬೇಕು : ಶಾಸಕ ಜಿಟಿಡಿ

ಮೈಸೂರು: ವಿದ್ಯಾರ್ಥಿಗಳು ಪರಿಸರ ಪ್ರೇಮದ ಕಾಳಜಿ ಇಟ್ಟುಕೊಂಡು ಮರ-ಗಿಡಗಳನ್ನು ನೆಟ್ಟು ಪೋಷಿಸಬೇಕು. ಪರಿಸರ ಉಳಿದರೆ ನಾವು ಉಳಿಯುತ್ತೇವೆ. ಪರಿಸರ ವಿನಾಶವಾದರೆ ಮಾನವ ದೊಡ್ಡ ಬೆಲೆ ತೆತ್ತಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನಗರದ ದಕ್ಷ ಪಿಯು ಕಾಲೇಜಿನ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಪರಿಸರ ಸಂರಕ್ಷಣೆ ಮಾಡಬೇಕು. ಒಂದು ಮರವನ್ನು ಕಡಿದರೆ ಹತ್ತು ಮರಗಳನ್ನು ನೆಡಬೇಕು. ಮಳೆ, ಗಾಳಿ, ಬೆಳಕು ಸಿಗಬೇಕಾದರೆ ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು ಎಂದರು.

ನಾನು ಸಹಕಾರ ಸಚಿವನಾಗಿದ್ದಾಗ ವಿಧಾನಸಭಾದ್ಯಕ್ಷ ಕೆ.ಆರ್.ಪೇಟೆ ಕೃಷ್ಣ, ವಿಧಾನ ಪರಿಷತ್ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ ಅವರೊಂದಿಗೆ ಸಮಾಲೋಚಿಸಿ ಸಾಲು ಮರದ ತಿಮ್ಮಕ್ಕ ಅವರನ್ನು ಮೈಸೂರಿಗೆ ಕರೆತಂದು ಒಂದೇ ದಿನದಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವಂತೆ ಮಾಡಿದೆ. ಶಾಲೆ, ಆಸ್ಪತ್ರೆ, ರಸ್ತೆಗಳು, ಪಾರ್ಕ್‌ಗಳು ಮೊದಲಾದ ಕಡೆಗಳಲ್ಲಿ ಒಂದೇ ದಿನ ಲಕ್ಷ ಗಿಡ ನೆಡುವಂತೆ ನೋಡಿಕೊಂಡಿದ್ದೆ. ಅದೇ ರೀತಿ ಜಿ.ಪಂ. ಅಧ್ಯಕ್ಷನಾಗಿದ್ದಾಗ ಮೈಸೂರಿನಿಂದ ಕುಶಾಲನಗರ, ಕೆ.ಆರ್. ನಗರ, ಹುಣಸೂರಿನಿಂದ ಹನಗೋಡು ತನಕ ಮರಗಳನ್ನು ನೆಡುವಂತೆ ಮಾಡಿದ್ದರಿಂದ ದೊಡ್ಡದಾಗಿ ಬೆಳೆದು ಬೈಕ್‌ನಲ್ಲಿ ಹೋಗುವವರಿಗೆ ಆನಂದ ಕೊಡಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಸ್ತುತ ದಿನದಲ್ಲಿ ಸತ್ಯದ ಹಾದಿಯಲ್ಲಿ ನಡೆಯುವವರು ಕಡಿಮೆಯಾಗುತ್ತಿರುವ ಜತೆಗೆ, ಪ್ರಾಮಾಣಿಕತೆ,ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಬೆಲೆ ಕಡಿಮೆಯಾಗಿ ಅಸತ್ಯದಲ್ಲಿ ನಡೆಯುವವರಿಗೆ ಪ್ರೋತ್ಸಾಹ ದೊರೆಯುವಂತಾಗಿದೆ. ಇಂದು ಸತ್ಯವನ್ನು ಹೇಳುವವರಿಗೆ ಬೆಲೆ ಇಲ್ಲ. ಸತ್ಯ ಹೇಳುತ್ತೇನೆಂದರೆ ಅಂತಹವರ ಬಾಯಿ ಮುಚ್ಚಿಸಲಾಗುತ್ತಿದೆ. ಪ್ರಾಮಾಣಿಕರಿಗಿಂತ ಅಸತ್ಯದ ಹಾದಿಯಲ್ಲಿ ಸಾಗುವವರಿಗೆ ಬೆಲೆ. ಸತ್ಯವಾಗಿ ನಡೆಯುತ್ತೇನೆಂದು ಹೊರಟವರಿಗೆ ಆರ್‌ಟಿಐ ಮೂಲಕ ತೊಂದರೆ ಕೊಡುವ ಕೆಲಸ ನಡೆಯುತ್ತಿದೆ ಎಂದು ಅತೃಪ್ತಿವ್ಯಕ್ತಪಡಿಸಿದರು.

ಸತ್ಯವಂತರ ಬಾಯಿಗಳು ಕಡಿಮೆಯಾಗಿ ಅಸತ್ಯ, ಸುಳ್ಳುಗಳನ್ನು ಹೇಳಿಕೊಂಡು ಓಡಾಡುವವರಿಗೆ ಬೆಲೆ ಬಂದು ಬಿಟ್ಟಿದೆ. ಇಂದು ಸರಳತೆಯ ಸೌಂದರ್ಯಕ್ಕಿಂತ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಸರವನ್ನು ಹಾಕಿಕೊಂಡು ಓಡಾಡುವವರನ್ನು ನೋಡುತ್ತಾರೆ ಎಂದರು.

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಕ್ಷ ಕಾಲೇಜಿನ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿರುವುದು ಸಂತಸದ ಸಂಗತಿ. ದಕ್ಷ ಶಿಕ್ಷಣ ಸಂಸ್ಥೆಯನ್ನು ಕಟ್ಟಬೇಕು. ಆ ಮೂಲಕ ವಿದ್ಯೆ ಕೊಡಬೇಕು. ಎಲ್ಲರ ಬದುಕನ್ನು ಶಿಕ್ಷಣ ಕ್ಷೇತ್ರವನ್ನು ನಂಬಿ ಕಟ್ಟಬೇಕು ಎನ್ನುವ ಕಾರಣಕ್ಕಾಗಿ ಭವಿಷ್ಯದ ಉಜ್ವಲದ ನಾಯಕತ್ವ ಕೊಡಬೇಕು. ಶಿಕ್ಷಣ,ಸಂಘಟನೆ ಮತ್ತು ಹೋರಾಟ ಮುಖ್ಯವಾಗಿದೆ. ಯಾವುದೇ ಸಮಸ್ಯೆಗಳಿದ್ದರೂ ಶಿಕ್ಷಣ ಕಲಿತರೆ ಪರಿಹಾರಕ್ಕೆ ದೊರೆಯಲಿದೆ ಎಂದರು.

ನಾನು ಪದವಿ ಪಡೆದಿಲ್ಲ ಅಂದರೂ ಉನ್ನತ ಶಿಕ್ಷಣ ಸಚಿವ ಸ್ಥಾನ ಕೊಟ್ಟರು. 20 ದಿನಗಳ ಕಾಲ ಕಾದು ಗ್ರಾಮೀಣಾಭಿವೃದ್ದಿ, ಸಹಕಾರ ಸೇರಿದಂತೆ ಬೇರೆ ಖಾತೆ ಕೊಡುವಂತೆ ಕೇಳಿದ್ದೆ, ಕೊನೆಗೆ ಖಾತೆ ಬದಲಾಗದ ಕಾರಣ ಉನ್ನತ ಶಿಕ್ಷಣ ಸಚಿವ ಸ್ಥಾನದ ಹೊಣೆಯನ್ನು ಹೊತ್ತು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೆ. ಸಚಿವನಾದ ಮೊದಲಿಗೆ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆದು ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿ ಹಲವಾರು ಮಾಹಿತಿಗಳನ್ನು ಅರಿತುಕೊಂಡಿದ್ದೆ. ಸೂಟು-ಬೂಟು, ಟೈನಿಂದ ನಿಮ್ಮನ್ನು ಗುರುತಿಸುತ್ತಾರೆ. ಒಳ್ಳೆಯ ಕಟ್ಟಡಗಳನ್ನು ನಿರ್ಮಾಣ ಮಾಡಿ ಸುಮ್ಮನಾಗುವ ಬದಲಿಗೆ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದ್ದೆ. ಅದೇ ರೀತಿ ನನ್ನ ಕಾಲದಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಗಮನಹರಿಸಿ ಕೆಲಸ ಮಾಡಿದೆ ಎಂದು ನುಡಿದರು.

ಶಿಕ್ಷಣ ಕ್ಷೇತ್ರದ ಪ್ರಮುಖರಿಗೆ ಹಳ್ಳಿಗಳನ್ನು ದತ್ತು ಪಡೆದು ಶಿಕ್ಷಣವನ್ನು ಕೊಟ್ಟರೆ ಮಾದರಿ ಗ್ರಾಮವನ್ನಾಗಿ ಮಾಡಬಹುದೆಂದು ಹೇಳಿದ್ದೆ. ಇದರಿಂದಾಗಿ ಅಂದು ಪ್ರತಿಯೊಂದು ವಿವಿ ವ್ಯಾಪ್ತಿಯಲ್ಲಿ ಐದು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಹೇಳಿದ್ದರಿಂದ ಅನೇಕರು ದತ್ತು ಸ್ವೀಕರಿಸಿ ಕೆಲಸ ಮಾಡಿದರು. ಶಿಕ್ಷಕರು, ಮುಖ್ಯಶಿಕ್ಷಕರು ಎನ್ನುವ ತಾರತಮ್ಯದಿಂದ ನೋಡದೆ ಎಲ್ಲರೂ ಒಂದೇ ಎನ್ನುವ ಭಾವನೆ ಬರಬೇಕು. ಸಂಬಳಕ್ಕಾಗಿ ದುಡಿಯುತ್ತಿದ್ದೇವೆ ಎನ್ನುವ ಭಾವನೆ ಬಿಟ್ಟು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ,ಉತ್ತಮ ನಾಯಕತ್ವ ರೂಪಿಸುವಂತಹ ರೀತಿಯಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದರು.

ಜಮೀನು ಮಾರಿ ಮದುವೆ: ನನ್ನ ಮಕ್ಕಳಿಗೆ ತಿರುಪತಿಯಲ್ಲಿ ಸರಳ ವಿವಾಹ ಮಾಡಿದೆ. ನನ್ನ ತಮ್ಮನ ಮಗನ ಮದುವೆಯನ್ನೂ ಧರ್ಮಸ್ಥಳದಲ್ಲಿ ಮಾಡಿದೆ. ಆದರೆ, ಕೆಲವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ವೈಭವದ ಮದುವೆ ಮಾಡುತ್ತಿದ್ದಾರೆ ಎಂದು ಬೇಸರಿಸಿದರು.

ಒಬ್ಬೊಬ್ಬರಿಗೆ 2 ರಿಂದ ನೂರು ಎಕರೆ ತನಕ ಜಮೀನು ಇತ್ತು. ಜಮೀನು ಮಾರಾಟ ಮಾಡಿ ದುಂದುವೆಚ್ಚಗಳನ್ನು ಮಾಡಿದ್ದರಿಂದ ಜಮೀನು ಇಲ್ಲದೆ ಕುಳಿತಿದ್ದಾರೆ. ಒಂದು ಎಕರೆ ಜಮೀನು ಮಾರಾಟ ಮಾಡಿ ಮಗಳ, ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಮದುವೆ ಮಾಡುವುದಕ್ಕೂ ಒಬ್ಬರಿಗೊಬ್ಬರು ಪೈಪೋಟ ಶುರು ಮಾಡಿದ್ದಾರೆ. ಸಿಹಿಯನ್ನೇ ತಿನ್ನುವ ಜನರು ಕಡಿಮೆಯಾಗಿದ್ದರೂ ಎರಡು,ಮೂರು ರೀತಿಯ ಸಿಹಿ ಬಡಿಸುತ್ತಿದ್ದಾರೆ ಎಂದರು.

ಮಕ್ಕಳು ಪೋಷಕರಿಗೆ ನಮಸ್ಕಾರ ಮಾಡುವುದನ್ನು ಕಲಿಯಬೇಕು. ತಂದೆ-ತಾಯಿಯೇ ನಮಗೆ ಮುಖ್ಯ. ನಾನು 16 ವರ್ಷ ವಯಸ್ಸಾಗಿದ್ದಾಗ ಭೀಕರ ಬರಗಾಲ. ಒಂದು ದಿನ ಹಸುಗಳಿಗೆ ಹುಲ್ಲು ತರಲು ಕೆ.ಆರ್.ನಗರಕ್ಕೆ ಹೋಗಬೇಕಿತ್ತು. ಆ ವೇಳೆ ನಮ್ಮ ಅಪ್ಪನಿಗೆ ನಮಸ್ಕಾರ ಮಾಡಿ ಹೋಗಬೇಕೆಂದು ಅನ್ನಿಸಿತು. ಮತ್ತೆ ವಾಪಸ್ ಬಂದು ನಮಸ್ಕರಿಸಿ ಹೋಗಿದ್ದೆ ಎಂದು ಹಳೆಯದನ್ನು ನೆನಪಿಸಿಕೊಂಡರು. ಇಂದು ಅನಾಥಾಲಯಗಳು ಹೆಚ್ಚಾಗುತ್ತಿವೆ. ಪ್ರೀತಿಯಿಂದ ತಂದೆ-ತಾಯಿಗಳನ್ನು ನೋಡಿಕೊಳ್ಳುವುದು ಕಡಿಮೆಯಾಗಿದೆ. ದಕ್ಷ ಕಾಲೇಜು ಆಡಳಿತ ಮಂಡಳಿಯ ಜಯಚಂದ್ರರಾಜೇ ಅರಸ್, ಗೌತಮ್‌ರಾಜೇ ಅರಸ್, ನಿರ್ದೇಶಕ ಪಿ.ಹರೀಶ್, ಪ್ರಾಂಶುಪಾಲ ಡಾ.ಮಹೇಶ್, ಉಪ ಪ್ರಾಂಶುಪಾಲ ಎಂ.ಡಿ.ಬಷೀರ್ ಮತ್ತಿತರರು ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

3 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

4 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

5 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

7 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

9 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

9 hours ago