ಮೈಸೂರು

ಮೈಸೂರು | ಧ್ವಜಾರೋಹಣ ನೆರವೇರಿಸಿದ ಸಚಿವ ಮಹದೇವಪ್ಪ : ಸಂವಿಧಾನ ರಕ್ಷಿಸಲು ಕರೆ

ಮೈಸೂರು : ಭಾರತದ ಸಂವಿಧಾನವು ನಮ್ಮ ದೇಶದ ಆತ್ಮವಾಗಿದ್ದು, ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯದ ಮೂಲಭೂತ ತತ್ವಗಳನ್ನು ನೀಡಿದೆ. ಈ ಸಂವಿಧಾನದ ಮಹತ್ವವನ್ನು ಅರಿತುಕೊಂಡು, ದೃಢವಾದ, ಸಮೃದ್ಧ ಮತ್ತು ಭವ್ಯವಾದ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬ ಭಾರತೀಯನೂ ಮುಂದಾಗಬೇಕು ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಕರೆ ನೀಡಿದರು.

ನಗರದ ಪಂಜಿನ ಕವಾಯತು ಮೈದಾನದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಧ್ವಜರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯರಿಗೂ ಮಹತ್ವವಾದ ಮತ್ತು ಪವಿತ್ರವಾದ ದಿನ. ಎಲ್ಲ ಭಾರತೀಯರನ್ನು ಭಾವನಾತ್ಮಕವಾಗಿ, ಭಾಷಿಕವಾಗಿ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬೆಸುಗೆ ಹಾಕಿದ ದಿನ ಮತ್ತು ನಮ್ಮ ದೇಶದ ಶ್ರೇಷ್ಠ ಸಂವಿಧಾನವನ್ನು ಗೌರವಿಸೋಣ ಎಂದರು.

ಭಾರತವು ಸ್ವಾತಂತ್ರ್ಯಗೊಂಡ ನಂತರ, ಇಡೀ ದೇಶವನ್ನು ಭೌಗೋಳಿಕವಾಗಿ, ಭಾಷಿಕವಾಗಿ ಒಗ್ಗೂಡಿಸುವ ಅನಿವಾರ್ಯತೆ ಉದ್ಭವಿಸಿತು. ಜೊತೆಗೆ ಏಕರೂಪದ ಕಾನೂನು ಹಾಗೂ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ದೇಶದ ಏಕತೆಯನ್ನು ಬಲಪಡಿಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ “ಭಾರತ ಸಂವಿಧಾನ ಕರಡು ರಚನಾ ಸಮಿತಿ”ಯನ್ನು ರಚಿಸಲಾಯಿತು. ಎರಡು ವರ್ಷ ಹನ್ನೆಂದು ತಿಂಗಳು ಹದಿನೆಂಟು ದಿನಗಳ ಸುಧೀರ್ಘ ಅವಲೋಕನ ಮತ್ತು ಚರ್ಚೆಯ ನಂತರ, ಅಂತಿಮವಾಗಿ 26 ನೇ ನವೆಂಬರ್ 1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಡಾ. ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನು ದೇಶಾದ್ಯಂತ 26 ನೇ ಜನವರಿ 1950 ರಿಂದ ಜಾರಿಗೆ ತರಲಾಯಿತು. ಅದಕ್ಕಾಗಿಯೇ ನಾವು ಈ ದಿನವನ್ನು ಸಂವಿಧಾನ ದಿನ ಹಾಗೂ ಗಣರಾಜ್ಯೋತ್ಸವ ದಿನವನ್ನಾಗಿ ಸಂಭ್ರಮದಿಂದ ಆಚರಿಸುತ್ತೇವೆ ಎಂದು ಗಣರಾಜ್ಯೋತ್ಸವದ ಮಹತ್ವವನ್ನು ಸಾರಿದರು.

ಭಾರತ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ, ಭಗತ್ಸಿಂಗ್, ಸುಭಾಷ್ಚಂದ್ರ ಬೋಸ್, ಜವಾಹರ್ ಲಾಲ್ ನೆಹರು, ಲಾಲಾ ಲಜಪತ್ರಾಯ್, ಲಾಲ್ ಬಹದ್ದೂರ್ ಶಾಸ್ತ್ರಿ, ಬಾಲಗಂಗಾಧರ್ ತಿಲಕ್ ಸೇರಿದಂತೆ ಹಲವಾರು ಸ್ವಾತಂತ್ರ ಹೋರಾಟಗಾರರನ್ನು ನೆನೆಯುವುದರ ಜೊತೆಗೆ ನಮ್ಮ ದೇಶದ ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ಸೈನಿಕರನ್ನು ಗೌರವ ಪೂರ್ವಕವಾಗಿ ಸದಾ ಸ್ಮರಿಸಬೇಕಿದೆ. ಭವ್ಯ ಸಂವಿಧಾನದ ಆಶಯಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರ್ಕಾರ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ವಾಚನವನ್ನು ಕಡ್ಡಾಯಗೊಳಿಸಿದೆ. ಇದರಿಂದ ಸಂವಿಧಾನದ ಮಹತ್ವವನ್ನು ಅರಿಯಲು ಅದರಂತೆ ನಡೆದುಕೊಳ್ಳಲು ಆ ಮೂಲಕ ಅಂಬೇಡ್ಕರ್ ಅವರು ಸೇರಿದಂತೆ ಹಲವು ಮಹನೀಯರ ಸಂವಿಧಾನ ರಚನಾಶ್ರಮಕ್ಕೆ ನಮ್ಮ ಅಭಿನಂದನೆ ಸಲ್ಲಿಸೋಣ ಎಂದರು.

ಸಿಎಂ ಸಿದ್ದರಾಮಯ್ಯರವರು ಹಾಗೂ ನನ್ನ ತವರು ಜಿಲ್ಲೆ ಮೈಸೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸಲು ತೀರ್ಮಾನಿಸಿ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಂದಿಕೊಂಡಿರುವ ಒಂದು ನಗರ ಸಭೆ, ನಾಲ್ಕು ಪಟ್ಟಣ ಪಂಚಾಯಿತಿಗಳು ಹಾಗೂ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ಇಪ್ಪತ್ತು ಹಳ್ಳಿಗಳನ್ನು ವಿಲೀನಗೊಳಿಸುವುದರ ಮೂಲಕ “ಬೃಹತ್ ಮೈಸೂರು ಮಹಾನಗರ ಪಾಲಿಕೆ” ಯನ್ನು ರಚಿಸಲು ಸರ್ಕಾರದಿಂದ ಅಧಿಸೂಚಿಸಲಾಗಿದ್ದು, ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.

ಸ್ವಚ್ಫ ಸರ್ವೇಕ್ಷಣ್ 2025-26ರ ಅಡಿಯಲ್ಲಿ ಮೈಸೂರು ನಗರವು ಈಗ “ 7 ಸ್ಟಾರ್ ಗಾರ್ಬೇಜ್ ಫ್ರೀ ಸಿಟಿ” ಪ್ರಮಾಣೀಕರಣ ಪಡೆಯುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಿದೆ. ನಾವೆಲ್ಲರೂ, ಮನೆಮಟ್ಟದಲ್ಲೇ ಶೇ.100 ರಷ್ಟು ತ್ಯಾಜ್ಯ ವಿಂಗಡಣೆ, ಏಕಬಳಕೆ ಪ್ಲಾಸ್ಟಿಕ್ ಬಳಕೆಯ ಕಡಿತ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸ್ವಚ್ಫತೆ, ಶಾಲೆ, ಮಾರುಕಟ್ಟೆ, ಕಚೇರಿ ಹಾಗೂ ಸಂಸ್ಥೆಗಳ ಸಕ್ರಿಯ ಪಾಲ್ಗೊಳುವಿಕೆಯ ಮೂಲಕ ಈ ಗುರಿಯನ್ನು ಸಾಧಿಸಲು ಸಮಸ್ತ ನಾಗರೀಕರ ಸಹಕಾರವನ್ನು ಈ ಮೂಲಕ ಕೋರುತ್ತೇನೆ ಎಂದು ಹೇಳಿದರು.

ಸಮಾಜದ ಶ್ರೇಯೋಭಿವೃದ್ಧಿಯೇ ಸಂವಿಧಾನದ ಅಂತಿಮ ಆಶಯವೆಂದು ಅರಿತು ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಡುತ್ತಿದ್ದೇವೆ. ನಮ್ಮ ಸರ್ಕಾರದ ಮೂಲಧ್ಯೇಯ ಜನಪರ ಆಡಳಿತ ಮತ್ತು ಆಡಳಿತಯಂತ್ರವನ್ನು ಜನ ಸಾಮಾನ್ಯರ ಬಳಿ ಕೊಂಡೊಯ್ಯುವುದಾಗಿದೆ. ಸರ್ಕಾರ ರೂಪಿಸುವ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಎಲ್ಲರ ಸಹಕಾರ ಮತ್ತು ಬದ್ಧತೆ ಅಗತ್ಯವಾಗಿದೆ. ಸರ್ವರ ಒಳಿತಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಜೆಡಿಎಸ್‌ ಬಿಟ್ಟಿದ್ದು ದ್ರೋಹ ಹೇಗಾಗುತ್ತೆ: ಶಾಸಕ ಶಿವಲಿಂಗೇಗೌಡ

ಹಾಸನ: ನಾನು ಜೆಡಿಎಸ್‌ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್‌ ಜಾಸ್ತಿ ಆಗೋದು ಅಷ್ಟೇ. ಏನು…

5 mins ago

ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲರಿಗೆ ಅಡ್ಡಿಪಡಿಸಿದ ವಿಚಾರ: ರಾಷ್ಟ್ರಪತಿಗೆ ವರದಿ ರವಾನಿಸಿದ ಲೋಕಭವನ

ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಕಾಂಗ್ರೆಸ್‌ ಸದಸ್ಯರು…

14 mins ago

ಮಳವಳ್ಳಿ: ಈಜಲು ಹೋಗಿದ್ದ ಯುವಕ ಸಾವು

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…

19 mins ago

ಮಂಡ್ಯದಲ್ಲಿ 3 ಕೋಟಿ ವೆಚ್ಚದಲ್ಲಿ ಗಾಂಧಿಭವನ ನಿರ್ಮಾಣ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…

22 mins ago

ಗ್ರಾಮ ಪಂಚಾಯತ್‌ಗಳ 590 ಸಿಬ್ಬಂದಿಗಳಿಗೆ ಅನುಮೋದನೆ: ಆದೇಶ ಪ್ರತಿ ವಿತರಿಸಿದ ಸಚಿವ ಎನ್‌.ಚಲುವರಾಯಸ್ವಾಮಿ

ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…

25 mins ago

ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್‌ ಗೌಡ ಅರೆಸ್ಟ್‌

ಚಿಕ್ಕಬಳ್ಳಾಪುರ: ನಗರಸಭೆ ಪೌರಾಯುಕ್ತೆಗೆ ನಿಂದನೆ, ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.…

40 mins ago