ಮೈಸೂರು: ಭಾರತವು 780ಕ್ಕೂ ಹೆಚ್ಚು ಭಾಷೆ, ಉಪಭಾಷೆ, ಸಾವಿರಾರು ಸಂಸ್ಕೃತಿ, ಉಪಸಂಸ್ಕೃತಿ, ಆಚರಣೆ, ಕಟ್ಟು-ಕಟ್ಟಳೆಗಳನ್ನು ಹೊಂದಿದ ದೇಶವಾಗಿದ್ದು ಹಿಂದುತ್ವದ ಪರಿಕಲ್ಪನೆ ಈ ಎಲ್ಲ ಸಂಸ್ಕೃತಿ, ಆಚರಣೆಗಳನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ಖ್ಯಾತ ಚಿಂತಕ, ದಿಲ್ಲಿಯ ಜವಹರ್ಲಾಲ್ ನೆಹರೂ ವಿವಿ ಮಾಜಿ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಅವರು ಅಭಿಪ್ರಾಯಪಟ್ಟರು.
ಮೈಸೂರಿನ ‘ಬಯಲು’ ತೋಟದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಲಾದ ’ಕರ್ನಾಟಕದ ಆಸ್ಮಿತೆ ಮತ್ತು ಸವಾಲುಗಳು’ ಮೇಲೆ ಉಪನ್ಯಾಸ ನೀಡಿದ ಅವರು, ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ದೇಶದ ಸಂಸ್ಕೃತಿಗೆ ಇಲ್ಲಿನ ಪ್ರತಿಯೊಂದು ಜಾತಿ, ಜನಾಂಗ,ಸಮುದಾಯ, ಧರ್ಮಗಳ ಜನರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ನೂರೆಂಟು ಭಾಷೆಗಳೂ ಒಂದೊಂದು ಸಂಸ್ಕೃತಿಯ ಪ್ರತಿರೂಪವಾಗಿವೆ. ಇವುಗಳೆಲ್ಲವೂ ಒಟ್ಟು ಸೇರಿದರಷ್ಟೇ ಭಾರತೀಯ ಸಂಸ್ಕೃತಿ ಎನಿಸಿಕೊಳ್ಳಲು ಸಾಧ್ಯ. ಹಿಂದುತ್ವವು ಕೆಲವೇ ಜನರಿಗೆ ಸೀಮಿತವಾದ ಪರಿಕಲ್ಪನೆ. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರು ಎಲ್ಲ ಹಿಂದೂಗಳನ್ನು ಸಮಾನವಾಗಿ ಕಾಣುವ ಹಿಂದೂ ಸಂಹಿತೆ ರೂಪಿಸುವಂತೆ ಹಿಂದೂ ಮಹಾ ಸಭಾಗೆ ಪತ್ರ ಬರೆದಿದ್ದರು. ಆದರೆ ಅದಕ್ಕೆ ಮಾರುತ್ತರ ಬಂದಿರಲಿಲ್ಲ ಎಂದವರು ಹೇಳಿದರು.
ದೇಶದ ಸಂಸ್ಕೃತಿ, ಪರಂಪರೆಯನ್ನು ಈರುಳ್ಳಿಗೆ ಹೋಲಿಸಿದ ಅವರು ಈರುಳ್ಳಿಯ ಪ್ರತಿ ಪದರವೂ ಅದರ ಭಾಗ. ಒಂದೊಂದು ಪದರವನ್ನು ಕಿತ್ತು ಇದಷ್ಟೇ ನಮ್ಮ ನಮ್ಮ ಸಂಸ್ಕೃತಿ ಎಂದು ಹೇಳಲು ಸಾಧ್ಯವಿಲ್ಲ. ಈ ದೇಶಕ್ಕೆ ವಲಸೆ ಬಂದವರು, ದಂಡೆತ್ತಿ ಬಂದವರು ಸೇರಿದಂತೆ ಎಲ್ಲರೂ ಈಗ ಈ ಮಣ್ಣಿನ ಭಾಗವಾಗಿದ್ದಾರೆ. ಅವರನ್ನು ದೂರವಿರಿಸಿ ಸಮೃದ್ಧ ದೇಶವನ್ನು ಕಟ್ಟಲು ಸಾಧ್ಯವಿಲ್ಲ ಎಂದವರು ವಿಶ್ಲೇಷಿಸಿದರು.
ಎಲ್ಲರನ್ನೂ ತನ್ನವರೆಂದು ಸ್ವೀಕರಿಸುವ ವಿಶಿಷ್ಟವಾದ ಗುಣ ಕನ್ನಡಿಗರದ್ದು. ಉತ್ತರ ದಕ್ಷಿಣಕ್ಕೆ ಕರ್ನಾಟಕವೇ ಸೇತುವಾಗಿತ್ತು. ಕ್ರಿಸ್ತ ಪೂರ್ವದಲ್ಲಿಯೇ ಚಂದ್ರಗುಪ್ತ ಮೌರ್ಯ ಶ್ರವಣಬೆಳಗೊಳಕ್ಕೆ ಬಂದು ಸಲ್ಲೇಖನ ವ್ರತ ಕೈಗೊಳ್ಳುತ್ತಾನೆ. ಶಂಕಾರಾಚಾರ್ಯರ ಎದುರು ವಾದದಲ್ಲಿ ಸೋತ ಮಂಡನ ಮಿಶ್ರಾ ಮತ್ತು ಪತ್ನಿ ಉಭಯ ಭಾರತಿ ಅವರು ದೂರದ ಬಿಹಾರದಿಂದ ಬಂದು ಶೃಂಗೇರಿ ಮಠದ ಮೊದಲ ಮುಖ್ಯಸ್ಥರಾಗುತ್ತಾರೆ. ಚೋಳರ ವಿರೋಧಕ್ಕೊಳಗಾದ ರಾಮಾನುಜಾಚಾರ್ಯರಿಗೆ ಹೊಯ್ಸಳರು ಆಶ್ರಯ ನೀಡುತ್ತಾರೆ. ಬಸವಣ್ಣನ ಕಾಯಕ ತತ್ವಕ್ಕೆ ಮನಸೋತ ಅಲ್ಲಮ ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಾನೆ. ಟರ್ಕಿಯಿಂದ ಬಂದ ಮಹಮ್ಮದೀಯರು ಬಹುಮನಿ ಸುಲ್ತಾನರಾಗುತ್ತಾರೆ. ಧರ್ಮ ಪ್ರಚಾರಕ್ಕೆ ಬಂದ ಜರ್ಮನ್ನರು ಕನ್ನಡದ ನೆಲದಲ್ಲಿ ಸಾರ್ವತ್ರಿಕ ಶಿಕ್ಷಣಕ್ಕೆ ಬುನಾದಿ ಹಾಡುತ್ತಾರೆ. ಎಲ್ಲರನ್ನೂ ಆದರಿಸುವ ಈ ಪರಂಪರೆ ಕರ್ನಾಟಕದ ವೈಶಿಷ್ಟ್ಯ ಎಂದವರು ವಿಶ್ಲೇಷಿಸಿದರು.
ಕನ್ನಡಿಗರ ಸಂಸ್ಕೃತಿ ಎಂದರೆ ಇಲ್ಲಿನ ಜನಪದರ ಸಂಸ್ಕೃತಿ, ವೈಷ್ಣವರು, ಶೈವರು, ಶಾಕ್ತರು, ಶರಣರು, ಬೌದ್ಧ, ಜೈನ, ಮಹಮ್ಮದೀಯ, ಕ್ರೈಸ್ತರ ಸಂಸ್ಕೃತಿ ಸೇರಿದಂತೆ ನೂರಾರು ಸಂಸ್ಕೃತಿಗಳು, ಜೀವನ ದರ್ಶನಗಳ ಭಾಗವಾಗಿದೆ. ಗಣಪತಿಯನ್ನು ಮೊದಲು ಆರಾಧಿಸುವ ವೈದಿಕ ಪದ್ದತಿಗೆ ಭಿನ್ನವಾಗಿ ನಮ್ಮ ಜನಪದರು ಯಾವ ವಿಗ್ರಹಗಳೂ ಇಲ್ಲದೆ ದೀಪವನ್ನಷ್ಟೇ ಬೆಳಗಿಸಿ ಸ್ತುತಿಸುವ ಸಂಸ್ಕೃತಿ ಹೊಂದಿದ್ದರು. ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಂಡು ನಾಡಿನ ಅಸ್ಮಿತೆಯಾಗಿವೆ. ಈ ಕಾರಣಕ್ಕಾಗಿಯೇ ನಮ್ಮದು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಹಿಂದುತ್ವ ಅಥವಾ ಏಕರೂಪದ ನಾಗರಿಕ ಸಂಹಿತೆ ಎನ್ನುವುದು ನಮ್ಮ ಬಹುರೂಪಿ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದವರು ಅಭಿಪ್ರಾಯಪಟ್ಟರು.
ಮಾನವ ಬಂಧುತ್ವ ವೇದಿಕೆಯ ಡಾ. ಲೀಲಾ ಸಂಪಿಗೆ, ಎ.ಕೆ. ಕರುಣಾಕರ, ಲೇಖಕಿ, ಕವಯತ್ರಿ ಕೆ. ಷರೀಫಾ, ಪ್ರಾಧ್ಯಾಪಕಿಯರಾದ ಡಾ.ಲೋಲಾಕ್ಷಿ, ಡಾ. ಮೀರಾ, ಹಿರಿಯ ಪತ್ರಕರ್ತ ಜಯ ಕುಮಾರ್,ಕಲಾವಿದ ವಿಶ್ವ ವಿನ್ಯಾಸ್,ದೇವರಾಜ ಕೊಪ್ಪ,ಸುಭಾಷ್ ಮಾಡ್ರಳ್ಳಿ,ರಂಗಸ್ವಾಮಿ,ಡಾ.ಸೋಮಶೇಖರ್ ಸೇರಿದಂತೆ ನಾನಾ ಜಿಲ್ಲೆಗಳ ಚಿಂತಕರು, ಬರಹಗಾರರು ಭಾಗವಹಿಸಿದ್ದರು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…