ಮೈಸೂರು

ʻಕನ್ನಡʼ ಕಡ್ಡಾಯ ಆಡಳಿತ ಭಾಷೆಯಾಗಲಿ ; ಪುರುಷೋತ್ತಮ ಬಿಳಿಮಲೆ

ಮೈಸೂರು: ಕನ್ನಡ ಭಾಷೆಯನ್ನು ಆಡಳಿತದಲ್ಲಿ ಕಡ್ಡಾಯವಾಗಿ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಹೇಳಿದರು.

ಶನಿವಾರ ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡವನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರಗಳು ಹಲವು ಆದೇಶಗಳನ್ನು ಹೊರಡಿಸಿವೆ. 2000 ವರ್ಷಗಳ ಇತಿಹಾಸ ಇರುವ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. 19519 ಮಾತೃ ಭಾಷೆಗಳು ಭಾರತದಲ್ಲಿ ಇವೆ. ಹಲವು ಭಾಷೆಗಳು ನಶಿಸಿ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡದಲ್ಲಿ ಹೆಚ್ಚು ಕೃತಿಗಳನ್ನು ರಚನೆ ಮಾಡಿದವರು ಕುವೆಂಪು. ಮೈಸೂರು ಸಾಹಿತಿಗಳ ತವರೂರು. ಬೇರೆ ಭಾಷೆಗಳನ್ನು ಕಲಿಯಿರಿ ಆದರೆ ಕನ್ನಡವನ್ನು ಹೆಚ್ಚು ಬಳಕೆ ಮಾಡಬೇಕು. ಕನ್ನಡ ಬಳಕೆಗೆ 3000 ಆದೇಶಗಳನ್ನು ಮಾಡಲಾಗಿದೆ. ಕೇವಲ ಆದೇಶಗಳಿಂದ ಬಾಷೆ ಉಳಿಸಲು ಸಾಧ್ಯವಿಲ್ಲ. ಕನ್ನಡವನ್ನು ಬಳಕೆ ಮಾಡುವ ಮೂಲಕ ಉಳಿಸಬೇಕು ಎಂದು ತಿಳಿಸಿದರು.

ಕನ್ನಡ ಭಾಷೆಯ ಬೋಧನೆಯನ್ನು ಸುಲಭ ಗೊಳಿಸಿ ಬೋಧನೆ ಮಾಡಬೇಕು. ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕನ್ನಡ ಬೋಧನೆಯನ್ನು ಹೆಚ್ಚು ಮಾಡಬೇಕು. ಬ್ಯಾಂಕ್ ಗಳಲ್ಲಿ ಹೆಚ್ಚಾಗಿ ಹೊರ ರಾಜ್ಯದವರು ಇರುತ್ತಾರೆ ಆದರೆ ಅವರು 3 ತಿಂಗಳ ಒಳಗೆ ಕನ್ನಡವನ್ನು ಕಲಿತು ವ್ಯವಹಾರ ನಡೆಸಬೇಕು. ಇಲ್ಲದಿದ್ದಲ್ಲಿ ಸ್ಥಳೀಯರೊಂದಿಗೆ ವ್ಯವಹಾರ ಮಾಡಲು ಕಷ್ಟ ಆಗುತ್ತದೆ.

ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಜಿಲ್ಲೆಯಲ್ಲಿ ಇರುವ ನಾಮಫಲಕಗಳು ಕನ್ನಡಲ್ಲಿ ಇವೆ ಆದರೆ ಕೆಲವು ಕಡೆ 60: 40 ರೇಶಿಯೋ ಇಲ್ಲ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪರವಾನಗಿ ರಿನಿವಲ್ ಗೆ ಬಂದಾಗ ಈ ಬಗ್ಗೆ ಷರತ್ತನ್ನು ವಿಧಿಸಿ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಸಂತೋಷ್ ಹಾನಗಲ್ ಅವರು ಮಾತನಾಡಿ ಸರ್ಕಾರದ ಇಲಾಖೆಗಳ ಅಂತರ್ಜಾಲ ಪುಟ ಕನ್ನಡದಲ್ಲಿ ಇರಬೇಕು. ಜಿಲ್ಲೆಯ ಅಂಗಡಿ ಮುಗ್ಗಟ್ಟು ಗಳ ಬೋರ್ಡುಗಳು ಶೇಕಡಾ 60 ರಷ್ಟು ಕನ್ನಡದಲ್ಲಿ ಇರಬೇಕು. ಸರ್ಕಾರಿ ಇಲಾಖೆಗಳ ಕಡತಗಳಲ್ಲಿ ಕನ್ನಡವನ್ನು ಬಳಕೆ ಮಾಡಬೇಕು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಮಕ್ಕಳು ಅನುತ್ತೀರ್ಣ ಆಗುತ್ತಿರುವ ಬಗ್ಗೆ ವರದಿ ಇದ್ದು, ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಿ ಬೋಧನೆ ಮಾಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರಾದ ಟಿ ಗುರುರಾಜ್ ಅವರು ಮಾತನಾಡಿ ಎಲ್ಲಾ ನಾಮಫಲಕಗಳು ಶೇಕಡಾ 60 ರಷ್ಟು ಕನ್ನಡದಲ್ಲಿ ಇರಬೇಕು ಆದರೆ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎನ್ ಪಿ ಎಸ್ ಶಾಲೆಯ ನಾಮಫಲಕ ಸಂಪೂರ್ಣ ಇಂಗ್ಲಿಷ್ ಮಯವಾಗಿದ್ದು ಶೇಕಡಾ 60 ರಷ್ಟು ನಾಮಫಲಕ ಕನ್ನಡದಲ್ಲಿ ಇರಬೇಕು ಎಂಬ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಲವು ಇಲಾಖೆಗಳ ಮೋಹರುಗಳು ಇಂಗ್ಲಿಷ್ ನಲ್ಲಿ ಇದ್ದು ಕನ್ನಡದ ಮೋಹರುಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕನ್ನಡ ಕ್ರಿಯಾ ಸಮಿತಿಯ ಕಾರ್ಯಾಧ್ಯಕ್ಷರಾದ ಸಾರಾ ಸುದರ್ಶನ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ ಎಂ ಗಾಯತ್ರಿ, ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ. ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಮೈಸೂರಿನಲ್ಲಿ ಮಳೆ ನೀರು ಕೊಯ್ಲು ಥೀಮ್ ಪಾರ್ಕ್ ಕನ್ನಡಿಯೊಳಗಿನ ಗಂಟು

ಮೈಸೂರು ನಗರದಲ್ಲಿ ಮಳೆನೀರು ಕೊಯ್ಲು ಥೀಮ್ ಪಾರ್ಕ್ ಸ್ಥಾಪಿಸುವ ಹಿಂದಿನ ಹಾಗೂ ಈಗಿನ ಸರ್ಕಾರಗಳ ಭರವಸೆ ಇನ್ನೂ ಕನ್ನಡಿಯೊಳಗಿನ ಗಂಟಾಗಿಯೇ…

42 mins ago

ಓದುಗರ ಪತ್ರ: ಅಂಕೇಗೌಡರಿಗೆ ಸಿಕ್ಕ ಪದ್ಮಶ್ರೀ ಸಾರಸ್ವತ ಲೋಕಕ್ಕೆ ಸಂದ ಗೌರವ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಪುಸ್ತಕ ಪ್ರೇಮಿ ೭೮ ವರ್ಷದ ಅಂಕೇಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕನ್ನಡ…

44 mins ago

ಓದುಗರ ಪತ್ರ: ರಾಮಕೃಷ್ಣನಗರಕ್ಕೆ ಮತ್ತಷ್ಟು ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ರಾಮಕೃಷ್ಣನಗರ ಮಾರ್ಗಕ್ಕೆ ಪ್ರತಿದಿನ ನಗರ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಆದರೆ ಈ ಮಾರ್ಗದಲ್ಲಿ ಓಡಾಡುವ ಬಸ್ಸುಗಳ ಸಂಖ್ಯೆ ಮಾತ್ರ…

46 mins ago

ವಿಜೃಂಭಣೆಯಿಂದ ನಡೆದ ಸಂತೆ ಮಾಸ್ತಮ್ಮನವರ ಜಾತ್ರೆ

ಸರಗೂರು: ಪಟ್ಟಣದಲ್ಲಿ ಗ್ರಾಮದೇವತೆ ಶ್ರೀ ಸಂತೆ ಮಾಸ್ತಮ್ಮನವರ ೩೧ನೇ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ…

48 mins ago

ಕಬಿನಿ ಹಿನ್ನೀರಿನ ರೆಸಾರ್ಟ್‌ಗಳ ದಾಖಲಾತಿ ಪರಿಶೀಲನೆ

ರೆಸಾರ್ಟ್‌ಗಳು, ಹೋಂಸ್ಟೇಗಳಿಗೆ ಅಕ್ರಮ ರೆಸಾರ್ಟ್‌ಗಳ ತನಿಖಾ ಸಮಿತಿಯವರ ದಿಢೀರ್ ಭೇಟಿ ಹೆಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಹಿನ್ನೀರಿನ ನಾಗರಹೊಳೆ ಮತ್ತು ಬಂಡೀಪುರ…

51 mins ago

ಬೀದಿ ನಾಯಿ ಪುನರ್ವಸತಿ ಕೇಂದ್ರ ಸ್ಥಾಪನೆಗೆ ವಿರೋಧ

ಕೆ.ಬಿ.ಶಂಶುದ್ಧೀನ್ ಗ್ರಾಮಕ್ಕೆ ಹುಲಿ, ಚಿರತೆಗಳು ಲಗ್ಗೆಯಿಡುವ ಆತಂಕ; ಹೋರಾಟದ ಎಚ್ಚರಿಕೆ ನೀಡಿದ ಹಕ್ಕೆ ಗ್ರಾಮಸ್ಥರು ಕುಶಾಲನಗರ: ಬೀದಿ ನಾಯಿಗಳ ಹಾವಳಿ…

55 mins ago