ಮಾಲ್ ಸಂಸ್ಕೃತಿ ತಲೆ ಎತ್ತಿದ್ದರೂ ಇಂದಿಗೂ ತನ್ನ ಆಕರ್ಷಣೆ ಕಳೆದುಕೊಳ್ಳದ ಮಾರುಕಟ್ಟೆಗೆ ಬೇಕಿದೆ ಕಾಯಕಲ್ಪ
ಗಿರೀಶ್ ಹುಣಸೂರು
ಮೈಸೂರು: ಮೈಸೂರು ನಗರದ ಜನತೆಗೆ ಹೂವು-ಹಣ್ಣು, ಸೊಪ್ಪು-ತರಕಾರಿ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿ ದೊರಕಬೇಕೆಂಬ ಮಹದುದ್ದೇಶದಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿಸಿದ್ದ ದೇವರಾಜ ಮಾರುಕಟ್ಟೆ, ಮೈಸೂರಿನಲ್ಲಿ ಮಾಲ್ ಸಂಸ್ಕೃತಿ ತಲೆ ಎತ್ತಿದ್ದರೂ ಇಂದಿಗೂ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ. ಆದರೆ, ನಿರ್ವಹಣೆ ಕೊರತೆಯಿಂದ ಅವನತಿಯತ್ತ ಸಾಗುತ್ತಿದೆ.
ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನಸಂದಣಿಯನ್ನು ಈ ಮಾರುಕಟ್ಟೆಯಲ್ಲಿ ಕಾಣಬಹುದು. ಜತೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಹೂ ಮಾರಾಟಗಾರರೂ ಸಹ ಇಂದಿಗೂ ದೇವರಾಜ ಮಾರುಕಟ್ಟೆಯನ್ನೇ ಆಶ್ರಯಿಸಿದ್ದು, ಸಗಟು ವರ್ತಕರಿಂದ ಹೂ ಖರೀದಿಸಿ ಕೊಂಡೊಯ್ಯಲು ನಿತ್ಯ ಮೈಸೂರಿಗೆ ಬಂದು ಹೋಗುತ್ತಾರೆ.
ಅರಮನೆಗೆ ಕಾವೇರಿ ನೀರು ತರುವ ಸಂಬಂಧ ಕಾಲುವೆ ತೋಡುವಾಗ ಈ ಜಾಗದಲ್ಲಿ ಬೃಹತ್ ಬಂಡೆಗಳು ಎದುರಾಗಿದ್ದರಿಂದ ಆರ್ಥಿಕವಾಗಿ ಹೆಚ್ಚು ಹೊರೆಯಾಗಲಿದೆ ಎಂಬ ಕಾರಣಕ್ಕೆ ಅಂದಿನ ದಿವಾನರಾದ ಪೂರ್ಣಯ್ಯನವರ ಸೂಚನೆ ಮೇರೆಗೆ ಇಲ್ಲಿ ಕಾಲುವೆ ತೋಡುವ ಕಾಮಗಾರಿಯನ್ನು ನಿಲ್ಲಿಸಲಾಗುತ್ತದೆ. ಮೈಸೂರಿಗೆ ನಿತ್ಯ ಸೊಪ್ಪು-ತರಕಾರಿ ಮಾರಲು ಬರುತ್ತಿದ್ದ ಹಳ್ಳಿಗರು ತಮ್ಮಲ್ಲಿ ಉಳಿದ ಪದಾರ್ಥಗಳನ್ನು ಹೀಗೆ ತೋಡಿದ್ದ ಗುಂಡಿಗೆ ಸುರಿದು ಹೋಗತೊಡಗಿದ್ದರಿಂದ ಮಳೆ ಬಂದಾಗ ಕೊಳೆತು ನಗರದಲ್ಲಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿತ್ತು.
ಇದರಿಂದ ರಾಜಾಡಳಿತ, ಸುಮಾರು 125 ವರ್ಷಗಳ ಹಿಂದೆಯೇ ಗುಂಡಿ ಮುಚ್ಚಿ ಇಂದಿನ ಸೂಪರ್ ಮಾರ್ಕೆಟ್ ಯೋಜನೆಯಂತೆಯೇ ದೇವರಾಜ ಮಾರುಕಟ್ಟೆ ನಿರ್ಮಿಸಿತು ಎನ್ನುತ್ತಾರೆ. ಪಾರಂಪರಿಕ ತಜ್ಞರು. ಸುಟ್ಟ ಇಟ್ಟಿಗೆ ಮತ್ತು ಸುಣ್ಣದ ಗಾರೆ ಬಳಸಿ ಹೊಸ ಭಾಗದ ನಾಲ್ಕು ದಿಕ್ಕುಗಳಲ್ಲೂ ದಪ್ಪನಾದ ಗೋಡೆ ನಿರ್ಮಿಸಿ, ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗಿದೆ. ಒಳಭಾಗದಲ್ಲಿ ಕಬ್ಬಿಣದ ಕಂಬಗಳ ಮೇಲ್ಗಡೆ ಮಂಗಳೂರು ಹೆಂಚಿನ ಚಾವಣಿ ಹಾಗೂ ಜಗಲಿ ನಿರ್ಮಿಸಿ ಹಣ್ಣು-ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೊಸ ಭಾಗದ ನಾಲ್ಕು ದಿಕ್ಕುಗಳಲ್ಲೂ ಇರುವ ಅಂಗಡಿ ಮಳಿಗೆಗಳಲ್ಲಿ ಕಿರಾಣಿ ವಸ್ತುಗಳು, ಬೇಕರಿ, ಸ್ಟೇಷನರಿ ಅಂಗಡಿಗಳಿವೆ.
ಅವನತಿಯತ್ತ ಸಾಗುತ್ತಿದ್ದ ದೇವರಾಜ ಮಾರುಕಟ್ಟೆಯ ಸಂರಕ್ಷಣೆಗಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 10 ಕೋಟಿ ರೂ. ಅನುದಾನ ನೀಡಿದ್ದರು. ಬಾಂಬೆಯ ಮೆ.ಸಾವನಿ ಕನ್‌ಸ್ಟ್ರ ಕ್ಷನ್ ಕಂಪೆನಿಯವರು ದೇವರಾಜ ಮಾರುಕಟ್ಟೆಯ ಒಳಭಾಗದಲ್ಲಿನ ಕಬ್ಬಿಣದ ಕಂಬಗಳ ತೆರೆದ ಪಡಸಾಲೆ, ಮಂಗಳೂರು ಹೆಂಚನ್ನು ಹೊಸದಾಗಿ ಅಳವಡಿಸಿದ್ದರು. ಇತ್ತ ಧನ್ವಂತ್ರಿ ರಸ್ತೆ ಭಾಗದ ಕಮಾನು ಗೇಟು ದುರಸ್ತಿ ಮಾಡುವಾಗಲೇ ಕುಸಿದು ಬಿದ್ದಿದ್ದರಿಂದ ಸಂರಕ್ಷಣೆಯ ಕೆಲಸ ಅರ್ಧಕ್ಕೆ ನಿಂತುಹೋಯಿತು.
ಗೋಪುರ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ವಿರುದ್ಧವೂ ಎಫ್‌ಐಆರ್ ದಾಖಲಿಸಲಿಲ್ಲ. ತನಿಖೆಯೂ ಆಗಲಿಲ್ಲ. ಒಟ್ಟಾರೆ ಆ ಬಗ್ಗೆ ಮಹಾನಗರಪಾಲಿಕೆಯವರು ವರದಿಯನ್ನೇ ತರಿಸಿಕೊಳ್ಳಲಿಲ್ಲ. ಮೂರ್ನಾಲ್ಕು ಪಾರಂಪರಿಕ ತಜ್ಞರ ಸಮಿತಿಗಳಿಂದ ಪಾಲಿಕೆ ವರದಿಗಳನ್ನು ಪಡೆಯಿತಾದರೂ ಕಾರ್ಯರೂಪಕ್ಕೆ ತರಲಿಲ್ಲ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯಲ್ಲಿ ಕೆಲಸ ಮಾಡಿರುವ ತಜ್ಞ ಕೇರಳದ ಗೋವಿಂದನ್ ಕುಟ್ಟಿ ಅವರು ದೇವರಾಜ ಮಾರುಕಟ್ಟೆ ಕಟ್ಟಡವನ್ನು ಸಂರಕ್ಷಣೆ ಮಾಡಬಹುದು ಎಂದು ಪ್ರತ್ಯೇಕ ವರದಿ ಸಲ್ಲಿಸಿದ್ದರೂ ಅದನ್ನೂ ಪರಿಗಣಿಸಿಲ್ಲ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಪಾರಂಪರಿಕ ಕಟ್ಟಡವಾಗಿರುವ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿದ ಮೇಲೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರಿಂದ ಹೈಕೋರ್ಟ್ ತಡೆ ನೀಡಿದೆ.
ಧನ್ವಂತ್ರಿ ರಸ್ತೆ ತಿರುವಿನಿಂದ ಓಲ್ಡ್ ಬ್ಯಾಂಕ್ ಗೇಟ್ ವರೆಗಿನ ಒಳ-ಹೊರ ಭಾಗದ ಗೋಡೆಗಳ ಎರಡೂ ಭಾಗದ ಗಾರೆ ತೆಗೆದು ಹೊಸದಾಗಿ ಗಿಲಾವ್ ಮಾಡಬೇಕು. ವಿದ್ಯುತ್ ಸಂಪರ್ಕದ ವೈರಿಂಗ್ ಅನ್ನು ಸಂಪೂರ್ಣ ಹೊಸದಾಗಿ ಮಾಡಬೇಕು. ಚಪ್ಪಡಿ ಕಲ್ಲುಗಳ ಅಲೈನ್‌ಮೆಂಟ್‌ನ್ನು ಸರಿಪಡಿಸಿದರೆ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಇನ್ನೂ ೫೦ ವರ್ಷಗಳ ಕಾಲ ಕಾಪಾಡಿಕೊಳ್ಳಬಹುದು.
-ಪ್ರೊ.ಎನ್.ಎಸ್.ರಂಗರಾಜು, ಪಾರಂಪರಿಕ ತಜ್ಞ
ಪಾರಂಪರಿಕ ತಜ್ಞರ ಸಮಿತಿ ಸದಸ್ಯರ ವಿಭಿನ್ನ ವರದಿಯಿಂದಾಗಿ ಕಟ್ಟಡದ ಸಂರಕ್ಷಣೆ ಮಾಡಬೇಕೋ? ಪುನರ್ ನಿರ್ಮಾಣ ಮಾಡಬೇಕೋ ಎಂಬ ವಿಚಾರ ನನೆಗುದಿಗೆ ಬಿದ್ದಿದೆ. ಮೈಸೂರು ಮಹಾನಗರಪಾಲಿಕೆಯವರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದೇವೆ ಅನ್ನುತ್ತಾರೆ. ಆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಹೈಕೋರ್ಟ್ ಆದೇಶಕ್ಕೆ ಎದುರು ನೋಡುತ್ತಿದ್ದೇವೆ.
-ಪೈ.ಎಸ್.ಮಹದೇವ್, ಅಧ್ಯಕ್ಷರು, ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘ
ಮೈಸೂರು: ಮೈಸೂರು ಮಹಾನಗರ ಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆ ವತಿಯಿಂದ ಇಂದು ಬೀದಿ ನಾಯಿಗಳನ್ನು ದತ್ತು ನೀಡುವ ಕಾರ್ಯಕ್ರಮವನ್ನು…
ಮೈಸೂರು: ರಾಜ್ಯ ಸರ್ಕಾರದ ದುರಾಡಳಿತದಿಂದ ರಾಜ್ಯದಲ್ಲಿ 2800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.…
ಮೈಸೂರು: ಆರ್‌ಸಿಬಿ ಅಭಿಮಾನಿಗಳಿಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಗುಡ್‌ನ್ಯೂಸ್ ನೀಡಿದ್ದು, ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ…
ಬೆಂಗಳೂರು: ಮಗಳಿಗಾಗಿ ಪತ್ನಿ ಹಾಗೂ ನಟಿ ಚೈತ್ರಾರಾಮ್ ಅವರನ್ನು ನಿರ್ಮಾಪಕ ಹರ್ಷವರ್ಧನ್ ಕಿಡ್ನ್ಯಾಪ್ ಮಾಡಿದ ಘಟನೆ ನಡೆದಿದ್ದು, ಪ್ರಕರಣ ಸುಖಾಂತ್ಯವಾಗಿದೆ.…
ಬೆಳಗಾವಿ: ಕುಣಿಗಲ್ ತಾಲ್ಲೂಕಿನ ಸಹಕಾರಿ ರಂಗಕ್ಕೆ ಅನುದಾನ ನೀಡಿಕೆಯಲ್ಲಿ ತಾರತಮ್ಯವಾಗಿದ್ದಲ್ಲಿ, ಮುಂದಿನ ವರ್ಷದಿಂದ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.…
ಬೆಳಗಾವಿ: 2023ರಂತೆ 2028ರಲ್ಲಿಯೂ ಜನಾರ್ಶೀವಾದದೊಂದಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರು ಸದಾ ವಿರೋಧಪಕ್ಷದ ಸ್ಥಾನದಲ್ಲಿಯೇ ಇರಲಿದ್ದಾರೆ ಎಂದು ಮುಖ್ಯಮಂತ್ರಿ…