ಮೈಸೂರು : ನನ್ನ ಜನ್ಮದಿನ ನನಗೇ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ಬರ್ತ್ ಡೇ ಆಚರಿಸಿಕೊಳ್ಳುವ ಬಗ್ಗೆ ನನಗೆ ಯಾವುದೇ ಆಸಕ್ತಿಯಿಲ್ಲ. ಆಗಸ್ಟ್ 3 ಮತ್ತು ಆಗಸ್ಟ್ 12 ಎರಡೂ ಕೂಡ ತಪ್ಪು ದಿನಾಂಕಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದಾಖಲೆಗಳ ಪ್ರಕಾರ ಆಗಸ್ಟ್ 3, 1947 ನನ್ನ ಹುಟ್ಟಿದ ದಿನ. ಆದರೆ, ಎರಡು ಕೂಡ ಸರಿಯಿಲ್ಲ ಎಂದು ಕೂಡ ಹೇಳಿದರು.
ಮೈಸೂರಿನಲ್ಲಿ ತಮ್ಮ ಜನ್ಮದಿನದ ಬಗ್ಗೆ ಮಾತನಾಡಿದ ಅವರು, ಆಗಸ್ಟ್ 3, ಆಗಸ್ಟ್ 12 ಎರಡೂ ಕೂಡ ತಪ್ಪು ದಿನಾಂಕಗಳು. ಒಂದು ನನ್ನ ಮೇಷ್ಟ್ರು ಬರೆಸಿರೋದು. ಇನ್ನೊಂದು ನಮ್ಮ ಅಪ್ಪ ಯಾವುದೋ ಒಂದು ಡೇಟ್ ಬರೆಸಿರೋದು. ಹೀಗಾಗಿ ಎರಡೂ ದಿನಾಂಕಗಳು ತಪ್ಪು. ನನ್ನ ಜನ್ಮ ದಿನಾಂಕ ನನಗೇ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ನನಗೆ ಯಾವ ಆಸಕ್ತಿಯೂ ಇಲ್ಲ ಎಂದು ಹೇಳಿದರು.
ಇನ್ನು, ಗೃಹಲಕ್ಷ್ಮೀ ಯೋಜನೆ ಜಾರಿ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನೋಂದಣಿ ಮುಗಿದ ಮೇಲೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು. ಗೃಹಲಕ್ಷ್ಮೀ ಯೋಜನೆಗೆ 1.33 ಕೋಟಿ ಜನರ ನೋಂದಣಿ ಆಗಬೇಕು. ಇದುವರೆಗೆ 1.6 ಕೋಟಿ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಇನ್ನೂ ನೋಂದಣಿ ಬಾಕಿ ಇದೆ. ನೋಂದಣಿ ಪ್ರಕ್ರಿಯೆ ಮುಗಿಯಬೇಕು. ಆಗಸ್ಟ್ ಅಂತ್ಯದಲ್ಲೇ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುತ್ತೇವೆ. ದಿನಾಂಕ ಮುಂದೂಡಿಕೆ ಆಗಿಲ್ಲ. ರಾಹುಲ್ ಗಾಂಧಿ ಅವರ ಸಮಯ ಕೇಳಿದ್ದೇವೆ. ಇನ್ನೂ ಟೈಮ್ ಕೊಟ್ಟಿಲ್ಲ ಎಂದರು.