ದಾನಿಗಳ ಅಭಾವ: ಮೈಸೂರು ಜಿಲ್ಲೆಯಲ್ಲಿ ಪ್ಲೇಟ್‌ಲೆಟ್‌ ಕೊರತೆ

ಮೈಸೂರು: ಮೈಸೂರು ನಗರದಲ್ಲಿ ಡೆಂಗ್ಯೂ ಏರುಮುಖವಾಗಿದ್ದು, ಪ್ಲೇಟ್‌ಲೆಟ್‌ ಪೂರೈಕೆಯಲ್ಲಿ ಶೇ.25ರಷ್ಟು ಕೊರತೆ ಉಂಟಾಗುತ್ತಿದೆ.

ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್‌ಲೆಟ್‌ ಕಡಿಮೆಯಾಗಿರುವುದರಿಂದ ಪ್ಲೇಟ್‌ಲೆಟ್‌ ನೀಡಬೇಕಾಗುತ್ತದೆ. ಅದಕ್ಕಾಗಿ ಮೈಸೂರು ನಗರದಲ್ಲಿ ಮುಖ್ಯವಾಗಿ ಕೆ.ಆರ್.ಆಸ್ಪತ್ರೆ, ಜೆಎಸ್‌ಎಸ್‌, ಅಪೋಲೋ ಆಸ್ಪತ್ರೆ, ಸಂತ ಜೋಸೆಫರ ಆಸ್ಪತ್ರೆ, ಕಾವೇರಿ ಆಸ್ಪತ್ರೆ, ಲಯನ್ಸ್‌ ಜೀವಧಾರ ಬ್ಲಡ್‌ ಬ್ಯಾಂಕ್‌ ಸೇರಿದಂತೆ ಆರು ಕಡೆಗಳಲ್ಲಿ ಪ್ಲೇಟ್‌ಲೆಟ್‌ ಸಂಗ್ರಹಿಸಿ ಅಗತ್ಯ ಇರುವವರಿಗೆ ನೀಡಲಾಗುತ್ತದೆ.

ಇಷ್ಟೂ ಸಂಗ್ರಹ ಕೇಂದ್ರಗಳಿಂದ ನಿತ್ಯವೂ ಒಟ್ಟು 100 ಪ್ಲಿಂಟ್‌ ಪ್ಲೇಟ್‌ಲೆಟ್‌ ಸಂಗ್ರಹಿಸಲಾಗುತ್ತದೆ. ಆದರೆ, ನಗರದ ಎಲ್ಲಾ ಆಸ್ಪತ್ರೆಗಳಿಂದ ದಿನಕ್ಕೆ 125 ರಿಂದ 130 ಪ್ಲಿಂಟ್‌ ಪ್ಲೇಟ್‌ಲೆಟ್‌ ಬೇಕಾಗುತ್ತದೆ. ಹೀಗಾಗಿ ನಿತ್ಯವೂ 25 ರಿಂದ 30 ಪ್ಲಿಂಟ್‌ನಷ್ಟು ಕೊರತೆಯಾಗುತ್ತಿದೆ.

ಒಬ್ಬ ವ್ಯಕ್ತಿಯಿಂದ 350 ರಿಂದ 400 ಮಿಲಿ ಲೀಟರ್‌ ರಕ್ತದಿಂದ 50 ರಿಂದ 60 ಮಿಲಿ ಮೀಟರ್‌ ಪ್ಲೇಟ್‌ಲೆಟ್‌ ತೆಗೆಯಲಾಗುತ್ತದೆ. ಒಬ್ಬ ವ್ಯಕ್ತಿಗೆ ಕನಿಷ್ಠ 4 ಪ್ಲಿಂಟ್‌ ಪ್ಲೇಟ್‌ಲೆಟ್‌ ಬೇಕಾಗುತ್ತದೆ. ಅದಕ್ಕಾಗಿ ನಾಲ್ಕು ಮಂದಿ ಡೋನರ್‌ ಅವಶ್ಯಕ. ಆದರೆ ಅಗತ್ಯವಿರುವ ರೋಗಿಗಳ ಕಡೆಯಿಂದ ಕೇವಲ ಒಬ್ಬರು ಇಲ್ಲವೇ ಇಬ್ಬರು ಬರುತ್ತಾರೆ. ಆಗ ಇಬ್ಬರು ದಾನಿಗಳ ಕೊರತೆ ಉಂಟಾಗುತ್ತದೆ.

ಇದಲ್ಲದೇ ಸಿಂಗಲ್‌ ಡೋನರ್‌ ಆಗಿದ್ದಲ್ಲಿ ಆತನ ರಕ್ತಕ್ಕೆ ಬದಲಾಗಿ ದೇಹದಿಂದಲೇ ನೇರವಾಗಿ 350 ರಿಂದ 400 ಎಂಎಲ್‌ ಪ್ಲೇಟ್‌ಲೆಟ್‌ ತೆಗೆಯಬಹುದು. ಆದರೆ, ಇದಕ್ಕೆ ದಾನಿ ಎರಡು ಮೂರು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಕನಿಷ್ಠ ನಾಲ್ಕು ಗಂಟೆ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಇದಲ್ಲದೇ ಈ ಮಾದರಿ ಪ್ಲೇಟ್‌ಲೆಟ್‌ ಪಡೆಯುವ ಕಿಟ್‌ ವೆಚ್ಚವೇ 7000 ರೂ ಆಗಿದ್ದು, ಒಟ್ಟು ವೆಚ್ಚ 13 ಸಾವಿರ ರೂ ಆಗಲಿದೆ.

ಈ ದುಬಾರಿ ವೆಚ್ಚ ಭರಿಸಲು ಬಡ, ಮಧ್ಯಮ ವರ್ಗದವರಿಗೆ ಆಗುವುದಿಲ್ಲ. ಆದರೆ, ರಕ್ತದಿಂದ ಒಂದು ಪ್ಲಿಂಟ್‌ ಪ್ಲೇಟ್‌ಲೆಟ್‌ ತೆಗೆಯಲು 400 ರೂನಂತೆ ಒಟ್ಟು 1600 ರೂ ವೆಚ್ಚವಾಗಲಿದೆ. ಹಾಗಾಗಿ ಈ ವಿಧಾನಕ್ಕೆ ಆದ್ಯತೆ ದೊರೆಯುತ್ತಿದೆ. ಆದರೆ ದಾನಿಗಳ ಕೊರತೆ ಉಂಟಾಗುತ್ತಿದೆ.

ಆದರೆ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ನಿಯಂತ್ರಣ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಸದ್ಯ ಮಳೆಗಾಲವಾಗಿರುವುದರಿಂದ ಡೆಂಗ್ಯೂ ಹೆಚ್ಚಾಗಿದ್ದು, ಪ್ಲೇಟ್‌ಲೆಟ್‌ಗೆ ಬೇಡಿಕೆಯೂ ಹೆಚ್ಚಾಗಿದೆ. ಹೀಗಾಗಿ ನಿತ್ಯವೂ ಶೇ.25ರಷ್ಟು ಪ್ಲೇಟ್‌ಲೆಟ್‌ ಕೊರತೆಯಾಗುತ್ತಿದೆ.