ಮೈಸೂರು

ಎಚ್.ಡಿ.ಕೋಟೆ: ಪುನರ್ವಸತಿ ಜಮೀನಿಗಾಗಿ ದಲಿತ ಕುಟುಂಬಗಳಿಂದ ನಿರಂತರ ಪ್ರತಿಭಟನೆ

ಮಂಜು ಕೋಟೆ 

ಎಚ್.ಡಿ.ಕೋಟೆ: ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳು ಪುನರ್ವಸತಿಯ ಜಮೀನಿಗಾಗಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಲ್ಲೂಕಿನ ಕೆಂಚನಹಳ್ಳಿ ಪುನರ್ವಸತಿಯ ೨೦೦ ದಲಿತ ಕುಟುಂಬಗಳಿಗೆ ೩೫೦ ಎಕರೆ ಜಮೀನು ಮತ್ತು ಹಕ್ಕುಪತ್ರವನ್ನು ನ.೧೫ರೊಳಗೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ನೀಡುತ್ತೇವೆ ಎಂದು ಸಭೆ ನಡೆಸಿದ್ದರು. ಆದರೆ ಇದುವರೆಗೂ ಹಕ್ಕು ಪತ್ರ ನೀಡದ ಅಧಿಕಾರಿಗಳ ವಿರುದ್ಧ ಗ್ರಾಮದ ದಲಿತ ಕುಟುಂಬದವರು ನಾಲ್ಕು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಲ್ಲೂಕಿನ ಕೆಂಚನಹಳ್ಳಿಯ ಸರ್ವೆ ನಂಬರ್ ೧ರ ಬಳಿ ಹಗಲು -ಇರುಳೆನ್ನದೆ ದಲಿತ ಕುಟುಂಬದವರು, ಮುಖಂಡರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಂಸದ ಸುನಿಲ್ ಬೋಸ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಇತ್ತ ಸುಳಿವು ನೀಡದೆ, ನೀಡಿದ ಭರವಸೆಯನ್ನೂ ಬಗೆಹರಿಸದಿರುವುದರಿಂದ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ಮಗ್ಗೆಮಳಲಿ ಗ್ರಾಮದ ಸುಮಾರು ೪೦೦ ಕುಟುಂಬಗಳನ್ನು ೧೯೬೯ರಲ್ಲಿ ಕಬಿನಿ ಡ್ಯಾಂ ಕಟ್ಟುವಾಗ ಹಿನ್ನೀರಿಗೆ ಮುಳುಗಡೆ ಆಗಿದ್ದವರನ್ನು ರಾತ್ರೋರಾತ್ರಿ ಟಿಪ್ಪರ್‌ನಲ್ಲಿ ತುಂಬಿಕೊಂಡು ಕೆಂಚನಹಳ್ಳಿ ಭಾಗಕ್ಕೆ ತಂದು ಬಿಟ್ಟರು. ಇಂದಿಗೂ ಅನೇಕರಿಗೆ ಭೂಮಿ ಮತ್ತು ಪುನರ್ವಸತಿ ಕಲ್ಪಿಸದೆ ನಿರ್ಗತಿಕರನ್ನಾಗಿ ಮಾಡಿದ ಸರ್ಕಾರದ ನಡೆ ಇಂದಿಗೂ ಜನವಿರೋಧಿಯಾಗಿದೆ.

ಇದನ್ನು ಓದಿ: ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ: ಮಾಜಿ ಸಂಸದೆ ರಮ್ಯಾ ಹೇಳಿದ್ದಿಷ್ಟು.!

1969-70ರಲ್ಲಿ ಮನೆ ನಿವೇಶನ, ಭೂಮಿ ಮತ್ತು ಬದುಕನ್ನು ಕಳೆದುಕೊಂಡ ದಲಿತ, ನಿರಾಶ್ರಿತ ಕುಟುಂಬಗಳಿಗೆ ಅಂದಿನ ಸರ್ಕಾರ ಆದೇಶ ಮಾಡಿ ಪ್ರತಿ ಕುಟುಂಬಕ್ಕೂ ಸಮಗ್ರ ಪುನರ್ವಸತಿ ಕಲ್ಪಿಸುವ ಸಲುವಾಗಿ ಕೆಂಚನಹಳ್ಳಿ ಗ್ರಾಮದ ಸರ್ವೇ ನಂ.೧ರ ೯೬೧ ಎಕರೆ ಸಾಮಾಜಿಕ ಅರಣ್ಯವನ್ನು, ಕಂದಾಯ ಭೂಮಿಯನ್ನು ಪರಿವರ್ತಿಸಿ ಇದರಲ್ಲಿ ೮೦ ಎಕರೆ ಭೂಮಿಯನ್ನು ನಿವೇಶನಕ್ಕೆ ಹಂಚಿಕೆ ಮಾಡಿ ಉಳಿದ ಭೂಮಿಯನ್ನು ಕುಟುಂಬಕ್ಕೆ ತಲಾ ೨-೩ ಎಕರೆ ಭೂಮಿ ವ್ಯವಸಾಯಕ್ಕೆ ಹಂಚಬೇಕು ಎಂದು ಆದೇಶ ಮಾಡಿತ್ತು. ಆದರೆ ಅಂದಿನ ಅಧಿಕಾರಿ ವರ್ಗ ಇವರ ಪುನರ್ವಸತಿ ಬಗ್ಗೆ ಮುತುವರ್ಜಿ ವಹಿಸದೆ ಜನರನ್ನು ಎತ್ತುವಳಿ ಮಾಡಿದ್ದನ್ನು ಬಿಟ್ಟರೆ ಬೇರ‍್ಯಾವ ಕೆಲಸವನ್ನು ಮಾಡದ ಕಾರಣ ಕೂಲಿಯನ್ನೇ ಆಶ್ರಯಿಸಿ ಬದುಕುತ್ತಿದ್ದ ಈ ಜನರು, ಕೂಲಿಗಾಗಿ ಕೆಂಚನಹಳ್ಳಿ ಗ್ರಾಮವನ್ನು ಬಿಟ್ಟು ೧೯೭೫-೭೬ರಲ್ಲಿ ವಲಸೆ ಹೋದರು. ೧೯೯೫-೯೬ರಲ್ಲಿ ಮತ್ತೆ ವಾಪಸ್ ಬಂದು ಸರ್ಕಾರ ಕೊಟ್ಟ ಜಮೀನಿನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದಾಗ ಅರಣ್ಯ ಇಲಾಖೆಯವರು ಈ ನಿರಾಶ್ರಿತರನ್ನು ತಡೆದು ಇದು ಅರಣ್ಯ ಇಲಾಖೆಗೆ ಸೇರಿದ್ದು ಎಂದು ತಡೆಹಿಡಿದರು.

ಇದು ನಮ್ಮ ಭೂಮಿ, ಸರ್ಕಾರ ನಮಗೆ ನೀಡಿರುವುದು ಎಂದು ಪ್ರತಿಭಟನೆಗೆ ಇಳಿದಾಗ ಅರಣ್ಯ ಇಲಾಖೆ ಮತ್ತು ಪೊಲೀಸರು ಏಕಾಏಕಿ ಸುಮಾರು ೧೫೦ ಜನರ ಮೇಲೆ ಪ್ರಕರಣ ದಾಖಲು ಮಾಡಿ ೪೫ ದಿನಗಳ ಕಾಲ ಜೈಲುವಾಸ ಮಾಡಿಸಿದರು.

ಈ ವಿಚಾರವಾಗಿ ನಾವು ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಅಂದಿನಿಂದ ಇಲ್ಲಿಯ ತನಕವೂ ಅಧಿಕಾರಕ್ಕೆ ಬರುವ ಶಾಸಕರು, ಸಂಸದರು, ಮಂತ್ರಿಗಳು, ಮುಖ್ಯಮಂತ್ರಿಗಳು, ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕ ಮಾಡಿ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಾ ಬರುತ್ತಿದ್ದೇವೆ. ಆದರೂ ನಮಗೆ ಭೂಮಿ ಸಿಗದೇ ಜೀವನ ನಡೆಸಲು ಕಷ್ಟಕರವಾಗಿದೆ.

ಈ ಹೋರಾಟವನ್ನು ತಾರ್ಕಿಕ ಹಂತಕ್ಕೆ ತಲುಪಿಸುವ ನಿಟ್ಟಿನಲ್ಲಿ ಇಡೀ ಗ್ರಾಮವೇ ತಿರ್ಮಾನಿಸಿ ನಮಗಾಗಿ ಕಾಯ್ದಿರಿಸಿದ ಸರ್ವೇ ನಂ .೧ ರಲ್ಲಿಯೇ ಅನಿರ್ದಿಷ್ಟಾವಧಿ ಧರಣಿ, ಪ್ರತಿಭಟನೆ ನಡೆಸುತ್ತಿದೆ.

ಆಂದೋಲನ ಡೆಸ್ಕ್

Recent Posts

ಶೇ.56ರಷ್ಟು ಮೀಸಲಾತಿ | 9ನೇ ಶೆಡ್ಯೂಲ್‌ಗೆ ಸೇರಿಸಲು ವಿ.ಎಸ್.ಉಗ್ರಪ್ಪ ಆಗ್ರಹ

ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…

11 hours ago

Padma Award | ಧರ್ಮೇಂದ್ರಗೆ ಪದ್ಮವಿಭೂಷಣ, ಮಮ್ಮುಟಿಗೆ ಪದ್ಮಭೂಷಣ ಪ್ರಶಸ್ತಿ

ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…

12 hours ago

ನ್ಯಾಯಾಂಗ ಸ್ವಾತಂತ್ರ್ಯಕ್ಕೆ ʼಆಂತರಿಕ ಅಪಾಯʼ : ಸುಪ್ರೀಂ ನ್ಯಾಯಾಧೀಶರಿಂದ ಕಾರ್ಯಾಂಗದ ಬಗ್ಗೆ ಅಸಮಾಧಾನ

ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…

12 hours ago

ಅಧಿಕಾರಿಗಳು ಜನಪ್ರತಿನಿಧಿಗಳ ಕರೆ ಸ್ವೀಕರಿಸಿ : ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಮುಖ್ಯಕಾರ್ಯದರ್ಶಿ ಖಡಕ್ ಸೂಚನೆ

ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…

14 hours ago

ಬುದ್ಧಗಯಾ ವಿಮೋಚನಾ ಚಳವಳಿ ಬೆಂಬಲಿಸಿ

ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…

14 hours ago

ಮೈಸೂರಲ್ಲಿ ಸಂಭ್ರಮದ ರಥಸಪ್ತಮಿ

ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…

14 hours ago