ಮೈಸೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ 2 ವರ್ಷ ಪೂರೈಸಿದ್ದು, ರಾಜ್ಯದಲ್ಲಿ ಆಶ್ವಾಸನೆ ನೀಡಿದಂತಹ 5 ಗ್ಯಾರೆಂಟಿ ಯೋಜನೆಗಳನ್ನು ಈಡೇರಿಸಿ ಜನರ ಜೀವನಮಟ್ಟವನ್ನು ಸುಧಾರಿಸಿದೆ ಎಂದು ನರಸಿಂಹರಾಜ ವಿಧಾನ ಸಭೆ ಕ್ಷೇತ್ರದ ಶಾಸಕ ತನ್ವೀರ್ ಶೇಠ್ ಹೇಳಿದರು.
ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಸರ್ಕಾರದ 2ನೇ ವರ್ಷದ ಸಾಧನೆ ಹಾಗೂ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರಗಳು ಜನರ ಹಿತ ಕಾಪಾಡಲು, ಜನರ ಒಳಿತಿಗಾಗಿ ಕೆಲಸ ಮಾಡಲು, ಜೊತೆಗೆ ಒಂದು ರಾಜಕೀಯ ಪಕ್ಷವಾಗಿ ಜನರ ಮನಸ್ಸನ್ನು ಗೆಲ್ಲುವಂತಹ ಸಂದರ್ಭಗಳಲ್ಲಿ ನೀಡಿದಂತಹ ಆಶ್ವಾಸನೆಗಳು ಈ ಯೋಜನೆಗಳಾಗಿವೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜಿಸಿ ಜನರ ಗಮನ ಸೆಳೆಯುವಂತೆ ಮಾಡುತ್ತಿದ್ದು, ಈ ಯೋಜನೆಗಳು ಜನರ ಮನೆಯ ಬಾಗಿಲಿಗೆ ತಲುಪಿಸುವುದರ ಜೊತೆಗೆ ಸರ್ಕಾರದಿಂದ ಜಾರಿ ಮಾಡುವಂತಹ ಯೋಜನೆಗಳ ಸೌಲಭ್ಯಗಳನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜನರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ್ದು, ಇನ್ನೂ ಈ ಸರ್ಕಾರ ಜಾರಿ ಮಾಡುವಂತಹ ಕಾರ್ಯಗಳಿಂದ ಜನರಿಗೆ ಹೆಚ್ಚು ಲಾಭ ಲಭಿಸಲಿ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯನ್ನು ಪ್ರತಿ ತಿಂಗಳಿಗೆ 4.08 ಕೋಟಿ ಫಲಾನುಭವಿಗಳು ಪಡೆದುಕೊಳ್ಳುತಿದ್ದು, ಪ್ರತಿ ತಿಂಗಳು ಪಡಿತದಾರರಿಗೆ 10 ಕೆ.ಜಿ ಅಕ್ಕಿ ನೀಡುವುದರ ಮೂಲಕ ಈ ವರೆಗೆ 14.023 ಕೋಟಿ ಅನುದಾನವನ್ನು ವ್ಯಯಿಸಲಾಗಿದೆ.
ಗೃಹಜ್ಯೋತಿ ಯೋಜನೆಯ ಮೂಲಕ ಪ್ರತಿ ಮನೆಗಳಿಗೂ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು, 1.63 ಕೋಟಿ ಕುಟುಂಬಗಳಿಗೆ ಬೆಳಕಾಗಿದೆ. ಈ ವರೆಗೆ 14.950 ಕೋಟಿ ಅನುದಾನವನ್ನು ವ್ಯಯಿಸಲಾಗಿದೆ.
ಗೃಹಲಕ್ಷೀ ಯೋಜನೆಯ ಮೂಲಕ ಪ್ರತಿ ಯಜಮಾನಿಗೆ ಪ್ರತಿ ತಿಂಗಳು ರೂ. 2000/- ಸಾವಿರ ನೀಡಲಾಗುತ್ತಿದ್ದು, 1.27 ಕೋಟಿ ಫಲಾನುಭಾವಿಗಳನ್ನು ಒಳಗೊಂಡಿದೆ. ಈ ವರೆಗೆ 42.530 ಕೋಟಿ ಅನುದಾನವನ್ನು ವ್ಯಾಯಿಸಲಾಗಿದೆ.
ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿರುವುದರ ಮೂಲಕ ಮಹಿಳೆಯರ ಶಕ್ತಿಯಾಗಿ ನಿಂತಿದ್ದು, 455 ಕೋಟಿ ಬಾರಿ ಫಲಾನುಭವಿಗಳು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ವರೆಗೆ 11,403 ಕೋಟಿ ಅನುದಾನವನ್ನು ವ್ಯಯಿಸಲಾಗಿದೆ.
ಯುವ ನಿಧಿ ಯೋಜನೆ ಪ್ರತಿ ತಿಂಗಳು ಪದವೀಧರರಿಗೆ 3,000 ಡಿಪ್ಲೋಮಾದಾರರಿಗೆ ರೂ. 1,500 ನಿರುದ್ಯೋಗ ಭತ್ಯೆ ನೀಡುವುದರ ಮೂಲಕ ಎಷ್ಟೋ ವಿದ್ಯಾರ್ಥಿಗಳ ಬದುಕಿನಲ್ಲಿ ಭರವಸೆ ಮೂಡಿಸಿದೆ. 2.74 ಕೋಟಿ ಫಲಾನುಭವಿಗಳ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದು, ಈ ವರೆಗೆ 327 ಕೋಟಿ ಅನುದಾನ ವ್ಯಯಿಸಲಾಗಿದೆ ಎಂದು ವಿವರಿಸಿದರು.
ಈ ವಸ್ತು ಪ್ರದರ್ಶನದಲ್ಲಿ ಕಂಡುಬಂದ ವಿಶೇಷತೆ ಇಂತಿವೆ ;
ಮಹಿಳೆಯರಿಗಾಗಿ ಮಾಜಿ ದೇವದಾಸಿಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಸವದತ್ತಿಯಲ್ಲಿ 48 ಮಾರಾಟ ಮಳಿಗೆಗಳನ್ನು ಸಾಪಿಸಿದೆ. 69,919 ಅಂಗನವಾಡಿ ಕೇಂದ್ರಗಳಲ್ಲಿ 46.44 ಲಕ್ಷ ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ, ಹಾಲು ಮತ್ತು ಮೊಟ್ಟೆ ವಿತರಣೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಭರಮ ಸಾಗರದಲ್ಲಿ ಕುರಿ, ಆಡು ಮತ್ತು ಕೋಳಿ ಸಾಕಾಣಿಕೆ ಘಟಕ, ಉಡುಪಿಯಲ್ಲಿ ಅಡಿಕೆ ಹಾಳೆತಟ್ಟೆ ನಿರ್ಮಾಣ ಘಟಕ ಪ್ರಾರಂಭ ಮಾಡುವುದರ ಮೂಲಕ ಮಹಿಳೆಯರ ಶಕ್ತಿಯಾಗಿ ನಿಂತಿದೆ.
ಅನ್ನಭಾಗ್ಯದ ಮೂಲಕ 4.21 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಮಾಸಿಕ 10 ಕೆ.ಜಿ ಅಕ್ಕಿ ವಿತರಣೆ, 80 ವರ್ಷ ಮೇಲ್ಪಟ್ಟ ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಅನ್ನ-ಸುವಿಧಾ ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ವಿತರಣೆ, 2023-24 ರಲ್ಲಿ 22,65,755 ಹಾಗೂ 19,04,273 ಕ್ವಿಂಟಾಲ್ ಜೋಳ ಖರೀದಿ ಮಾಡುವುದರ ಮೂಲಕ ಹಸಿವು ಮುಕ್ತ ಕರ್ನಾಟಕದತ್ತ ದಾಪುಗಾಲು ಇಟ್ಟಿದೆ.
ಇಂದಿರಾ ಕ್ಯಾಂಟಿನ್ ಅನ್ನು ತೆರೆಯುವುದರ ಮೂಲಕ ಪ್ರತಿದಿನವೂ 30 ಲಕ್ಷಕ್ಕಿಂತ ಹೆಚ್ಚು ಜನರಿಗೆ ಬೆಳಗಿನ ಉಪಹಾರ ರೂ. 5/-ಕ್ಕೆ, ಮಧ್ಯಾಹ್ನ ಮತ್ತು ರಾತ್ರಿ ಭೋಜನ ರೂ. 10/-ಕ್ಕೆ ನೀಡಲಾಗುತ್ತಿದ್ದು, ಕರ್ನಾಟಕ ಸರ್ಕಾರ ಯಾವುದೇ ವ್ಯಕ್ತಿಯು ಹಸಿವಿನಿಂದ ಬಳಲದಂತೆ ಖಚಿತಪಡಿಸಿ ಹಸಿವು ಮುಕ್ತ ಕರ್ನಾಟಕಕ್ಕಾಗಿ ಮಾಡುವಲ್ಲಿ ಮುಂದಾಗಿದೆ.
ಕೃಷಿ ಕ್ಷೇತ್ರದಲ್ಲಿ 2 ವರ್ಷಗಳಲ್ಲಿ 14,182 ಕೃಷಿ ಹೊಂಡ, ಪೂರಕ ಘಟಕಗಳ ನಿರ್ಮಾಣ. ತೊಗರಿ ಬೆಳೆ ಹಾನಿಗೊಳಗಾದ 2.80 ಲಕ್ಷ ರೈತರಿಗೆ ರೂ. 223 ಕೋಟಿ ನೇರ ನಗದು ವರ್ಗಾವಣೆ. ರೂ. 128 ಕೋಟಿ ವೆಚ್ಚದಲ್ಲಿ 344 ಹೈಟೆಕ್ ಹಾರ್ವೆಸ್ಟರ್ ಹಬ್ಗಳ ಸ್ಥಾಪನೆ. ಪ್ರಾಕೃತಿಕ ವಿಕೋಪಗಳಿಂದಾಗಿ ಬೆಳೆ ಹಾನಿಗೊಳಗಾದ 27 ಲಕ್ಷ ರೈತರಿಗೆ 13,432 ಕೋಟಿ ಬೆಳೆ ಪರಿಹಾರ ವಿತರಣೆ ಮಾಡುವುದರ ಮೂಲಕ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ ಯೋಜನೆಯಡಿ 72,316 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿದೆ. ಮೆಟ್ರಿಕ್ ಪೂರ್ವ ಹಾಗೂ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 4,58,877 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ. ಶುಲ್ಕ ವಿನಾಯಿತಿಯಡಿ 9,05,026 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ. 174 ಮೊರಾರ್ಜಿ ದೇಸಾಯಿ ವಸತಿ ಶಾಲೆ- ಕಾಲೇಜುಗಳಲ್ಲಿ 43,070 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವುದರ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಪಣ ತೊಟ್ಟಿದೆ.
ಮನೆ ಇಲ್ಲದವರಿಗೆ ರೂ. 5,356 ಕೋಟಿ ವೆಚ್ಚದಲ್ಲಿ ವಸತಿ ರಹಿತ ಕುಟುಂಬಗಳಿಗೆ 3.69 ಲಕ್ಷ ಮನೆಗಳ ನಿರ್ಮಾಣ. ಕೊಳಗೇರಿ ನಿವಾಸಿಗಳಿಗೆ 1,66,867 ಮನೆಗಳ ಹಕ್ಕು ಪತ್ರ ವಿತರಣೆ. 1,18,359 ಪಿಎಂ ಆವಾಸ್ ಫಲಾನುಭವಿಗಳಿಗೆ 5 ಲಕ್ಷ ರೂ. ಇದ್ದ ವಂತಿಗೆ ಹಣವನ್ನು 1 ಲಕ್ಷ ರೂ.ಗೆ ಮಿತಿಗೊಳಿಸಿ, ಉಳಿದ ಮೊತ್ತ ಸರ್ಕಾರದಿಂದಲೇ ಪಾವತಿಸುವುದರ ಮೂಲಕ ಸರ್ವರಿಗೂ ಸೂರನ್ನು ಕಟ್ಟಿಕೊಟ್ಟಿದೆ.
ಆರೋಗ್ಯ ವಿಷಯದಲ್ಲಿ ಅನಿಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ ಜಾರಿ, ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಏಕ ಬಳಕೆಯ 934 ಡಯಾಲಿಸಿಸ್ ಯಂತ್ರಗಳ ಅಳವಡಿಕೆ, ಆಶಾಕಿರಣ ಯೋಜನೆಯಡಿ 3.5 ಲಕ್ಷ ಉಚಿತ ಕನ್ನಡಕ, 95,200 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಗೃಹ ಆರೋಗ್ಯ ಯೋಜನೆಯಡಿ 3,72,836 ಜನರಿಗೆ ಸಮಗ್ರ ತಪಾಸಣೆ, ಔಷಧಿಗಳ ವಿತರಣೆ ಮಾಡುವುದರ ಮೂಲಕ ಸರ್ವರಿಗೂ ಗುಣಮಟ್ಟದ ಆರೋಗ್ಯ ಸೌಲಭ್ಯವನ್ನು ಹೊದಗಿಸುತ್ತ ಬರುತ್ತಿದೆ.
ವಿಧಾನಸೌಧದ ಆವರಣದಲ್ಲಿ 25 ಅಡಿ ಎತ್ತರದ ಕಂಚಿನ ನಾಡದೇವಿ ಭುವನೇಶ್ವರಿಯ ಪ್ರತಿಮೆ ಸ್ಥಾಪನೆ, ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡವನ್ನು ಕಡ್ಡಾಯವಾಗಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ -2022 ಜಾರಿ, ‘ಕರ್ನಾಟಕ ಸಂಭ್ರಮ-50′ ಅಭಿಯಾನದಡಿ ವರ್ಷವಿಡಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಕಾರ್ಯಕ್ರಮ, ಎರಡು ವರ್ಷಗಳಲ್ಲಿ 137 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವುದರ ಮೂಲಕ ಕನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿರುವುದು ಕಂಡುಬಂದಿದೆ.
ಗ್ಯಾರoಟಿ ಯೋಜನೆಗಳು ನಾಡಿನ ಜನರ ಕಷ್ಟ-ಕಾರ್ಪಣ್ಯಗಳನ್ನು ತಗ್ಗಿಸಿ, ಘನತೆಯ ಜೀವನದ ಮೂಲಕ ಬದುಕು ಕಟ್ಟಿಕೊಳ್ಳಲು ಒದಗಿಸಿರುವ ರಕ್ಷಣೆಗಳಾಗಿವೆ. ಬೆಲೆ ಏರಿಕೆ, ಆರ್ಥಿಕ ಹೊರೆ, ಬಡತನಗಳಂತಹ ಮಹಾಮಾರಿಗಳ ವಿರುದ್ಧ ಒದಗಿಸಿರುವ ಪ್ರಬಲ ಅಸ್ತçಗಳಾಗಿವೆ. ಪ್ರತಿಯೊಬ್ಬ ನಾಗರಿಕನೂ ಸಮಾಜದಲ್ಲಿ ಆತ್ಮಗೌರವದಿಂದ ಬಾಳಲು, ತನ್ನ ಪ್ರಾಥಮಿಕ ಅವಶ್ಯಕತೆಗಳಿಗಾಗಿ ಯಾರ ಮುಂದೆಯೂ ದೈನ್ಯನಾಗದೆ ಬದುಕಲು ಒದಗಿಸಿರುವ ಆಸರೆಗಳಾಗಿವೆ.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗದ ನಿಯಂತ್ರಣಾಧಿಕಾರಿ ಬಿ.ವೀರೇಶ್, ವಿಭಾಗೀಯ ಸಂಚಾರಾಧಿಕಾರಿಯಾದ ಹೇಮಂತ್ ಕುಮಾರ್, ವಾರ್ತಾ ಸಹಾಯಕರಾದ ಕೆ.ಎನ್. ರಮೇಶ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.