ಮೈಸೂರು

ಆಂದೋಲನ ವಿಶೇಷ ಲೇಖನ: ನೀರಿನಾಟ ಮೈಮರೆತರೆ ಪ್ರಾಣಕ್ಕೆ ಕಂಟಕ – ಭಾಗ-1

‘ನೀರು ಮತ್ತು ಬೆಂಕಿ ಜತೆಗೆ ಸರಸ ಸಲ್ಲದು’ ಎಂಬ ಹಿರಿಯರ ಮಾತು ಏನೇ ಇರಲಿ ಕೆರೆ, ಹೊಳೆ, ನದಿ, ಸಮುದ್ರ ಕಂಡಾಗ ನೀರಿನ ಮೋಹಕ್ಕೆ ಒಳಗಾಗದವರಿಲ್ಲ. ಈಜು ಬರದಿದ್ದರೂ ಮುಳುಗಿ ಮಿಂದೇಳುವ ತವಕ. ನೀರಿನ ಈ ಸೆಳೆತಕ್ಕೆ ಸಿಲುಕಿ ಬಾರದ ಲೋಕಕ್ಕೆ ಪಯಣಿಸಿದ ಜೀವಗಳಿಗೆ ಲೆಕ್ಕವಿಲ್ಲ. ಸರ್ಕಾರಿ ಲೆಕ್ಕಾಚಾರ (ರಾಷ್ಟ್ರೀಯ ಅಪರಾಧ ವರದಿ ಬ್ಯೂರೋ) ಪ್ರಕಾರ ನಮ್ಮ ದೇಶದಲ್ಲಿ ವರ್ಷವೊಂದಕ್ಕೆ ಕನಿಷ್ಠ 30 ಸಾವಿರ ಜನರು ಅಂದರೆ ದಿನವೊಂದಕ್ಕೆ 80ಕ್ಕೂ ಹೆಚ್ಚು ಮಂದಿ ನೀರುಪಾಲಾಗುತ್ತಾರೆ. ಕರ್ನಾಟಕ ರಾಜ್ಯವೊಂದರಲ್ಲಿಯೇ ದಿನವೊಂದಕ್ಕೆ ಸರಾಸರಿ 7 ರಿಂದ 8 ಜನ ನೀರಿಗೆ ಬಿದ್ದು ಸಾವು ಕಾಣುತ್ತಾರೆ. ಲ್ಯಾನ್ಸೆಟ್ ಪತ್ರಿಕೆ ವರದಿ ಪ್ರಕಾರ ಪ್ರತೀ ವರ್ಷ ಸಂಭವಿಸುವ ಸಾವಿನ ನೈಜ ಸಂಖ್ಯೆ ಇದರ ಎರಡು ಪಟ್ಟು ಹೆಚ್ಚು. ಆಕಸ್ಮಿಕ ಸಾವಿನ ಪಟ್ಟಿಯಲ್ಲಿ ಶೇ.೫೦ಕ್ಕಿಂತ ಹೆಚ್ಚು ಮಂದಿ ಅಪಘಾತದಲ್ಲಿ ಮೃತಪಟ್ಟವರಾದರೆ ಶೇ.10ರಷ್ಟು ಮಂದಿ ನೀರುಪಾಲಾದವರು.

ಬಿ.ಎನ್.ಧನಂಜಯಗೌಡ

ಕಳೆದ ವರ್ಷ ಏಪ್ರಿಲ್ ತಿಂಗಳ 21ನೇ ತಾರೀಕು. ಬೇಸಿಗೆ ರಜೆಯಲ್ಲಿದ್ದ ಟಿ.ನರಸೀಪುರ ತಾಲ್ಲೂಕಿನ ಹೆಮ್ಮಿಗೆ ಬಿ ಗ್ರಾಮದ ನಾಲ್ವರು ಸ್ನೇಹಿತರು ಕಾವೇರಿ ನದಿಯಲ್ಲಿ ಈಜಲು ತೆರಳಿದ್ದರು. ಯಶವಂತ ಕುಮಾರ್, ಮಹದೇವಪ್ರಸಾದ್, ಆಕಾಶ್ ಹಾಗೂ ಕಿಶೋರ್ ಈ ನಾಲ್ವರೂ 13ರಿಂದ 15ರೊಳಗಿನ ಹೈಸ್ಕೂಲು ವಿದ್ಯಾರ್ಥಿಗಳು. ‘ ಜಾಗ್ರತೆ, ಬೇಗ ಬನ್ನಿ’ ಎಂಬ ಅಮ್ಮಂದಿರ ಎಚ್ಚರಿಕೆ ನುಡಿಗೆ ತಲೆಯಾಡಿಸಿ ಹೊರಟಿದ್ದ ಇವರು ಮತ್ತೆ ಮನೆಗೆ ಬಂದಿದ್ದು ಶವವಾಗಿ. ನದಿಯ ಸುಳಿಗೆ ಸಿಕ್ಕ ಒಬ್ಬ ಗೆಳೆಯನನ್ನು ಉಳಿಸಲು ಹೋಗಿ ಎಲ್ಲರೂ ನೀರುಪಾಲಾಗಿದ್ದರು. ಇದೇ ದಿನ ಶ್ರೀರಂಗಪಟ್ಟಣದ ಬಳಿ ಇನ್ನಿಬ್ಬರು ಸಹೋದರರು ಕಾವೇರಿ ಪಾಲಾಗಿದ್ದರು. ಮಕ್ಕಳ ಮುಡಿ ಹರಕೆ ತೀರಿಸಲೆಂದು ಕೆಆರ್‌ಎಸ್ ಸಮೀಪದ ಕಾಳಮ್ಮ ದೇಗುಲಕ್ಕೆ ಬಂದಿದ್ದ ಹುಣಸೂರು ತಾಲೂಕಿನ ಮಲ್ಲಿನಾಥಪುರದ ಬಸವರಾಜು (20) ಮತ್ತು ಜವರೇ ಗೌಡ (32) ಸ್ನಾನಕ್ಕೆಂದು ವಿಶ್ವೇಶ್ವರಯ್ಯ ನಾಲೆಗೆ ಇಳಿದವರು ನೀರಿನ ಸೆಳೆತದಲ್ಲಿ ಕೊಚ್ಚಿ ಹೋಗಿದ್ದರು. ಮುಡಿ ಸೇವೆ ಸಂದಾಯವಾದ ದಿನವೇ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದರು.

ಈಜಲು ಹೋಗಿ ನೀರುಪಾಲು, ಸ್ನಾನಕ್ಕಿಳಿದವರು ನೀರು ಪಾಲು, ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರುಪಾಲು, ಮುಳುಗಿದ ಸೇತುವೆ ದಾಟಲು ಹೋಗಿ ನೀರುಪಾಲು, ಜಲಪಾತ ವೀಕ್ಷಣೆಗೆ ಹೋದವರು ನೀರು ಪಾಲು, ಗಣೇಶನ ವಿಸರ್ಜನೆಗೆ ಹೋದವರು ನೀರುಪಾಲು, ಚಿತಾಭಸ್ಮ ವಿಸರ್ಜಿಸಲು ಹೋಗಿ ನೀರು ಪಾಲು.. ಪತ್ರಿಕೆಗಳಲ್ಲಿ ದಿನನಿತ್ಯ ಎಂಬಂತೆ ಓದುವ ಈ ಸುದ್ದಿಗಳು ನಮ್ಮ ಪಾಲಿಗೆ ಮಾಮೂಲಿ ಅವಘಡಗಳು. ಆದರೆ ಕುಟುಂಬಕ್ಕೆ ಆಧಾರವಾಗಿದ್ದ, ಕುಟುಂಬದ ಕೀರ್ತಿ ಬೆಳಗಬೇಕಿದ್ದ ಜೀವಗಳು ಕಮರಿ ಹೋದರೆ ನಂಬಿದ ಕುಟುಂಬದ ಮುಂದಿನ ಬದುಕಿಡೀ ಕಣ್ಣೀರ ಕೋಡಿಯಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಜಗತ್ತಿನಲ್ಲಿ ಪ್ರತೀವರ್ಷ 2.36 ಲಕ್ಷ ಜನರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾಯುತ್ತಾರೆ.

ಭಾರತವೊಂದರಲ್ಲಿಯೇ ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಮಂದಿ ನೀರುಪಾಲಾಗುತ್ತಾರೆ. ಅಂದರೆ ಪ್ರತಿದಿನ 80ಕ್ಕೂ ಹೆಚ್ಚು ಮಂದಿ ಜಲ ಅವಘಡದಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಕರ್ನಾಟಕ ರಾಜ್ಯವೊಂದರಲ್ಲಿಯೇ ದಿನವೊಂದಕ್ಕೆ ಸರಾಸರಿ ಏಳರಿಂದ 8 ಜನ ನೀರಿಗೆ ಬಿದ್ದು ಸಾವು ಕಾಣುತ್ತಾರೆ.

ಎನ್‌ಸಿಆರ್‌ಬಿ ವರದಿ ಪ್ರಕಾರ ಮಂಡ್ಯ ಜಿಲ್ಲೆಯೊಂದರಲ್ಲಿಯೇ 2019ರಿಂದ ಈ ತನಕ 455ಮಂದಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 377ಜನರ ಜೀವ ನೀರುಪಾಲಾಗಿದೆ. ಇದೇ ಅವಧಿಯಲ್ಲಿ ಕೊಡಗಿನಲ್ಲಿ 250ಕ್ಕೂ ಹೆಚ್ಚು , ಚಾಮರಾಜನಗರದಲ್ಲಿ 150ಕ್ಕೂ ಹೆಚ್ಚು ಮಂದಿ ಜಲ ಸಮಾಧಿಯಾಗಿದ್ದಾರೆ.

ಎನ್‌ಸಿಆರ್‌ಬಿಯ 2020ರ ವರದಿ ಪ್ರಕಾರ, ಆಕಸ್ಮಿಕ ಸಾವಿನ ಪ್ರಕರಣಗಳಲ್ಲಿ ಶೇ.10.1ರಷ್ಟು ಸಾವು ಜಲಕಂಟಕಕ್ಕೆ ಸಂಬಂಧಿಸಿದ್ದು. ಈ ಅವಧಿಯಲ್ಲಿ 37,238 ಮಂದಿ ಜಲ ಅವಘಡ ಪ್ರಕರಣ ದಾಖಲಾಗಿದ್ದು, ಈ ಪೈಕಿ 29178 ಪುರುಷರು, 8060 ಮಹಿಳೆಯರು. ಇದೇ ವರ್ಷ ಕರ್ನಾಟಕದಲ್ಲಿ 2291 ಪ್ರಕರಣಗಳು ದಾಖಲಾಗಿದ್ದು, ೨೪೬೫ ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಮುಕ್ಕಾಲು ಪಾಲು (1944) ಪುರುಷರಾದರೆ ಕಾಲುಭಾಗದಷ್ಟು (521) ಮಹಿಳೆಯರು.

ವಿಶೇಷ ಎಂದರೆ ಪ್ರತೀ ವರ್ಷವೂ ಸರಾಸರಿ ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ. 10 ವರ್ಷಗಳ ಹಿಂದೆ ದಿನನಿತ್ಯದ ಸಾವಿನ ಪ್ರಮಾಣ 70 ಇತ್ತು. ಈಗ ೮೩ಕ್ಕೇರಿದೆ. ಇನ್ನು ನೀರಿಗೆ ಹಾರಿ ತಾವಾಗಿಯೇ ಸಾವಿನ ಕದ ತಟ್ಟಿದವರ ಸಂಖ್ಯೆಯನ್ನು ತೆಗೆದುಕೊಂಡರೆ ಈ ಸಂಖ್ಯೆ ದುಪ್ಪಟ್ಟಾಗುತ್ತದೆ. ನೇಣಿಗೆ ಶರಣಾಗಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಮೊದಲ ಎರಡು ಆಯ್ಕೆಗಳಾದರೆ ನೀರಿಗೆ ಹಾರುವುದು ಮೂರನೇ ಪ್ರಮುಖ ಆಯ್ಕೆ.
ಶೇ. ೯೦ರಷ್ಟು ಜಲಸಂಬಂಧಿ ಅವಘಡಗಳು ಕೆಳ ಮತ್ತು ಮಧ್ಯಮ ಆದಾಯ ಇರುವ ದೇಶಗಳಲ್ಲಿಯೇ ಸಂಭವಿಸುತ್ತಿದ್ದು ನಿರ್ಲಕ್ಷ್ಯವೇ ಮೊದಲ ಕಾರಣವೆಂದು ಕಂಡು ಬಂದಿದೆ. 2017ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಲ ಅವಘಡಗಳನ್ನು ತಪ್ಪಿಸುವುದಕ್ಕಾಗಿಯೇ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಇದೇ ಕಾರಣಕ್ಕೆ ಪ್ರತೀ ವರ್ಷ ಜುಲೈ ೨೫ರಂದು world drowning prevention day ಈ ಆಚರಿಸಲಾಗುತ್ತಿದೆ. ಆದರೆ ಭಾರತವೂ ಸೇರಿದಂತೆ ಏಷ್ಯಾದ ದೇಶಗಳಲ್ಲಿ ಜಲಸಮಾಧಿ ಪ್ರಕರಣಗಳು ಏರುತ್ತಲೇ ಸಾಗಿದೆ.

ಮನಕಲುಕುವ ಪ್ರಕರಣಗಳು

ಕಳೆದ ಮೇ 29ರಂದು ಹೈದರಾಬಾದಿನ 16 ಜನರ ತಂಡ ಕೊಡಗು ಪ್ರವಾಸಕ್ಕೆ ಬಂದಿದ್ದರು. ಮಡಿಕೇರಿಯ ಅಬ್ಬಿ ಜಲಪಾತದ ಸೌಂದರ್ಯವನ್ನು ಸವಿಯುತ್ತಿರುವಾಗಲೇ ಜವರಾಯ ಹೊಂಚು ಹಾಕಿ ಕುಳಿತಿದ್ದ. ಒಬ್ಬಾತ ಜಾರಿ ಜಲಪಾತದ ನೀರಿಗೆ ಬಿದ್ದ. ಆತನನ್ನು ರಕ್ಷಿಸಲು ಹೋದ ಇನ್ನಿಬ್ಬರೂ ಸೇರಿ ಮೂವರು ಕೊಚ್ಚಿ ಹೋದರು.

ಮೈಸೂರಿನ ರಾಜೀವ ನಗರದ ದಿವಾಕರ್ ಆರಾಧ್ಯ (40) ಅವರು ತಮ್ಮ ಸಹಾಯಕ ಕೆ.ಜಿ .ಕೊಪ್ಪಲಿನ ನಿಂಗಪ್ಪ (65) ಅವರೊಂದಿಗೆ ವಸ್ತು ಪ್ರದರ್ಶನವೊಂದರಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಹೋಗಿದ್ದರು. ಮೇ 30ರ ಬೆಳಗ್ಗೆ ಸಮುದ್ರ ವಿಹಾರಕ್ಕೆಂದು ಪಣಂಬೂರು ಬೀಚಿಗೆ ತೆರಳಿದ್ದರು. ದೊಡ್ಡ ಅಲೆಯೊಂದು ಬಂದು ಆರಾಧ್ಯ ಮುಳುಗೇಳುತ್ತಿದ್ದಾಗ ರಕ್ಷಣೆಗೆ ಧಾವಿಸಿದ ನಿಂಗಪ್ಪ ಅವರೂ ಸೇರಿ ಇಬ್ಬರೂ ಸಮುದ್ರಪಾಲಾದರು. ಈ ಘಟನೆ ಎರಡೂ ಕುಟುಂಬಗಳನ್ನು ಶಾಶ್ವತವಾಗಿ ದು:ಖದ ಕಡಲಲ್ಲಿ ಮುಳುಗಿಸಿದೆ.

ಹುಣಸೂರು ತಾಲ್ಲೂಕಿನ ಹೆಗ್ಗಂದೂರು ಗ್ರಾಮದ ಶರತ್ ರಾವ್ ಮತ್ತು ಶಶಿಕುಮಾರ್ ದ್ವಿತೀಯ ಪಿಯು ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದರು. ಜೂನ್ ೧೮ರಂದು ಫಲಿತಾಂಶ ಬಂದು ತೇರ್ಗಡೆಯಾದ ಖುಷಿಯಲ್ಲಿಯೇ ಸಮೀಪದ ಲಕ್ಷ್ಮಣತೀರ್ಥ ನದಿಗೆ ಈಜಲು ತೆರಳಿದ್ದರು. ಆದರೆ ಭವಿಷ್ಯದ ಹೊಂಗನಸು ಕಾಣುತ್ತಿದ್ದಾಗಲೇ ಇವರ ಬದುಕು ನೀರಲ್ಲಿ ಮುಳುಗಿತು. ಎದೆ ಮಟ್ಟಕ್ಕೆ ಬೆಳೆದು ನಿಂತ ಮಕ್ಕಳನ್ನು ಕಳೆದುಕೊಂಡ ಕುಟುಂಬದ ಪಾಲಿಗೆ ಮುಂದಿನ ದಿನಗಳು ಕರಾಳವಾಗಿಯೇ ಕಾಣುತ್ತಿವೆ.

ಹುಣಸೂರು ತಾಲ್ಲೂಕಿನ ಉಂಡವಾಡಿ ಗ್ರಾಮದ ಸಿ.ದಿನೇಶ್ (46) ಹಾಗೂ ನಿಲುವಾಗಿಲು ಗ್ರಾಮದ ಗಿರೀಶ್ (44) ವೃತ್ತಿಯಲ್ಲಿ ವಕೀಲರು. ಪ್ರಕರಣವೊಂದರ ಸಂಬಂಧ ಕಳೆದ ಜುಲೈ 30ರಂದು ಎಚ್.ಡಿ.ಕೋಟೆಗೆ ಕಾರಿನಲ್ಲಿ ತೆರಳಿದ್ದರು. ಮರಳುವಾಗ ದಾರಿ ಮಧ್ಯೆ ಸಾಗರೆ ಸಮೀಪದ ಬೆಟ್ಟಯ್ಯನ ಸೇತುವೆ ಬಳಿ ರಸ್ತೆ ಕ್ರಾಸ್ ಇರುವುದು ಗಮನಕ್ಕೆ ಬಾರದೆ ಕಾರು ನೇರವಾಗಿ ನಾಲೆಗೆ ಹಾರಿತು. ನೀರಿನ ಸೆಳೆತದಲ್ಲಿ ಇಬ್ಬರೂ ಪ್ರಾಣ ತೆತ್ತರು. ಇವರನ್ನೇ ನಂಬಿಕೊಂಡಿದ್ದ ಕುಟುಂಬ ಸದಸ್ಯರ ಬದುಕು ಗಾಳಿಯಲ್ಲಿ ಸಿಕ್ಕ ಉಯ್ಯಾಲೆಯಾಗಿದೆ.

ಪಿರಿಯಾಪಟ್ಟಣದ ಕೆಲ್ಲೂರು- ಹೊಸಕೋಟೆಯ ಮಾರ್ಗದ ಕೆರೆ ಏರಿ ಮೇಲೆ ನೆರೆ ಹರಿಯುತ್ತಿತ್ತು. 17 ವರ್ಷದ ಕಾರ್ತಿಕ್ ತನ್ನ ಬುಲೆಟ್ ಬೈಕ್ ತಳ್ಳಿಕೊಂಡು ಹೋಗುವಾಗ ಹೆಲ್ಮೆಟ್ ಕೆಳಗೆ ಬಿತ್ತು. ಅದನ್ನು ಹಿಡಿಯಲು ಹೋದ ಆತ ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಕೊಚ್ಚಿ ಹೋದ. ಈ ಘಟನೆ (ಆಗಷ್ಟ್ ೩)ಯ ಆಘಾತದಿಂದ ಕುಟುಂಬ ಇನ್ನೂ ಹೊರಗೆ ಬಂದಿಲ್ಲ.

ಸ್ವಾತಂತ್ರ್ಯೋತ್ಸವದ ಮರು ದಿನ ಕೊಳ್ಳೆಗಾಲ ತಾಲ್ಲೂಕಿನ ಚಿಕ್ಕಲ್ಲೂರು ಕ್ಷೇತ್ರಕ್ಕೆ ಪೂಜೆಗೆಂದು ಬಂದ ಮಳವಳ್ಳಿ ತಾಲ್ಲೂಕಿನ ಲಿಂಗಪಟ್ಟಣ ಗ್ರಾಮದ ಸುನಿಲ್ (26) ಮತ್ತು ಚಂದ್ರು (19) ಇಲ್ಲಿನ ಕಬಿನಿ ನಾಲೆಯಲ್ಲಿ ಸ್ನಾನಕ್ಕಿಳಿದವರು ಮತ್ತೆ ಮೇಲಕ್ಕೆ ಬರಲಿಲ್ಲ. ಪೂಜೆಯ ಸಂಭ್ರಮದಲ್ಲಿದ್ದ ಕುಟುಂಬ ಸದಸ್ಯರು ಶಾಶ್ವತವಾಗಿ ದು:ಖದ ಮಡುವಿನಲ್ಲಿ ಮುಳುಗಿದ್ದಾರೆ.

ಹಿಮಾಚಲ ಪ್ರದೇಶದ ಗೋವಿಂದ್ ಸಾಗರ್ ಸರೋವರದಲ್ಲಿ ಸ್ನಾನಕ್ಕಿಳಿದ ಒಂದೇ ಕುಟುಂಬದ ಏಳು ಮಂದಿ ನೀರಲ್ಲಿ ಮುಳುಗಿದ್ದು ( ಆಗಷ್ಟ್ 1), ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಅಗಲಿದ ತಂದೆಯ ಚಿತಾಭಸ್ಮವನ್ನು ವಿಸರ್ಜಿಸಲು ಹೊರಟ ತಂದೆ ಮತ್ತು ನಾಲ್ವರು ಮಕ್ಕಳು ನದಿಯಲ್ಲಿ ಹೋಗಿದ್ದು (ಆಗಷ್ಟ್ 12) ಇತ್ತೀಗಷ್ಟೇ ರಾಷ್ಟ್ರಮಟ್ಟದಲ್ಲಿ ವರದಿಯಾದ ಘಟನೆಗಳು.

ಜಿ.ವಿ. ಅತ್ರಿ ಅವರು ಕನ್ನಡ ನಾಡು ಕಂಡ ಅಪರೂಪದ ಗಾಯಕ. ಶೃಂಗೇರಿ ಶಾರದೆಯ ದರ್ಶನಕ್ಕೆ ತೆರಳಿದ ಅವರು ತುಂಗಾ ಪಾಲಾಗಿದ್ದು ಎರಡು ದಶಕಗಳ ಹಿಂದಿನ ಘಟನೆ. ಆದರೆ ಈಗಲೂ ಈ ದುರ್ಘಟನೆ ಸಂಗೀತ ಪ್ರೇಮಿಗಳ ಮನಸ್ಸನ್ನು ಇನ್ನೂ ಕಾಡುತ್ತಿದೆ.

andolana

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

2 hours ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

2 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

12 hours ago