ಪೌರಕಾರ್ಮಿಕರ ಕುಟುಂಬಕ್ಕೆ ಮನೆ ನಿರ್ಮಿಸಲು ಭೂಮಿ ಹಸ್ತಾಂತರಿಸದ ಮುಡಾ ವಿರುದ್ಧ ಕೋಟೆ ಎಂ.ಶಿವಣ್ಣ ಗರಂ
ಮೈಸೂರು: ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದು ಮತ್ತಷ್ಟು ಉನ್ನತೀಕರಿಸುವ ಸಂಬಂಧಿಸಿದಂತೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಏರ್ಪಡಿಸಿದ್ದ ಸಂವಾದಕ್ಕೆ ಭಾಗವಹಿಸದೆ ದೂರ ಉಳಿದ ಡಿಡಿಪಿಐ, ಬಿಇಒಗೆ ನೋಟಿಸ್ ಜಾರಿಗೊಳಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಗಂಗೋತ್ರಿ ಬಡಾವಣೆಯ ಕುದುರೆ ಮಾಳದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಗದಿಂದ ಏರ್ಪಡಿಸಿದ್ದ ಸಂವಾದದಲ್ಲಿ ಸಮಾಜ ಕಲ್ಯಾಣ ಇಲಾಖೆ, ನಗರಪಾಲಿಕೆ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಪಾಲ್ಗೊಂಡಿದ್ದರೂ ಪ್ರಾಥಮಿಕ ಶಿಕ್ಷಣ ಇಲಾಖೆ ಅಧಿಕಾರಿಗಳೇ ಗೈರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ನಾನೇನೂ ಕಾಟಾಚಾರಕ್ಕೆ ಶಾಲೆ ನೋಡಿಕೊಂಡು ಹೋಗಲು ಬಂದಿಲ್ಲ. ಸಂವಾದ ಎಂದರೆ ಏನು ಅಂದುಕೊಂಡಿದ್ದಾರೆ. ವಿಷಯ ತಿಳಿದಿದ್ದರೂ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.
ಈ ವೇಳೆ ನಗರಪಾಲಿಕೆ ಹೆಚ್ಚುವರಿ ಆಯುಕ್ತರಾದ ಎಂ.ಜಿ.ರೂಪಾ ಅವರು ದೂರವಾಣಿ ಮೂಲಕ ಡಿಡಿಪಿಐ ಬಿ.ಎಸ್.ರಾಮಚಂದ್ರರಾಜೇ ಅರಸ್ ಅವರನ್ನು ಸಂಪರ್ಕಿಸಿದಾಗ ಬಿಇಒ ಅವರನ್ನು ಕಳುಹಿಸುವೆ ಎಂದರು. ಇದರಿಂದ ಸಿಟ್ಟಾದ ಕೋಟೆ ಎಂ.ಶಿವಣ್ಣರವರು ಪೌರಕಾರ್ಮಿಕರ ಮಕ್ಕಳು ಓದುವ ಶಾಲೆ ಅಂದರೆ ಇಷ್ಟೊಂದು ತಾತ್ಸಾರವೇ? ಸಭೆಗೆ ಬರುವುದೇ ಬೇಡ. ಡಿಡಿಪಿಐ, ಬಿಇಒ ಅವರಿಗೆ ನೋಟಿಸ್ ಜಾರಿಗೊಳಿಸಿ ಅವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲು ಕಾರ್ಯದರ್ಶಿಗೆ ಸೂಚಿಸಿದರು.
ಶಿಥಿಲಗೊಂಡಿರುವ 8ಕೊಠಡಿಗಳು: ಪೌರಕಾರ್ಮಿಕರ ಮಕ್ಕಳೇ ಓದುವ ಈ ಶಾಲೆಯಲ್ಲಿ 8 ಕೊಠಡಿಗಳಿದ್ದು, ನಿರ್ವಹಣೆ ಕಾಣದೆ ಮಳೆ ಬಂದಾಗ ಸೋರುತ್ತಿವೆ. ಹಲವು ಬಾರಿ ಎಸ್‌ಡಿಎಂಸಿ ಅಧ್ಯಕ್ಷರು, ಶಾಲೆ ಮುಖ್ಯೋಪಾಧ್ಯಾಯರು ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳು ಬಂದು ಕಟ್ಟಡ ಪರಿಶೀಲಿಸಿ ಹೋಗಿದ್ದಾರೆಯೇ ಹೊರತು ದುರಸ್ತಿಯಾಗಿಲ್ಲ ಎಂದು ಕಾಲೋನಿಯ ಮುಖಂಡರು ಅಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯೋ ಪಾಧ್ಯಾಯಿನಿ ಜಯಲಕ್ಷ್ಮೀ, ಕಟ್ಟಡಗಳು ದುರಸ್ತಿಯಲ್ಲಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಎರಡು ಬಾರಿ ದುರಸ್ತಿಗೆ ಶಾಲೆಯನ್ನು ಸೇರಿಸಲಾಗಿದೆ ಎನ್ನುವ ಮಾಹಿತಿ ಕೊಡಲಾಗಿತ್ತು. ಆದರೆ, ಈವರೆಗೆ ಹಣ ಬಂದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಸಿ.ವೇದಾವತಿ ಅವರು ಶಾಲಾ ಕೊಠಡಿಗಳ ದುರಸ್ತಿ ಮಾಡಿಸುವಂತೆ ನಾನೇ ಮನವಿ ಮಾಡಿದ್ದೇನೆ. ಪೌರಕಾರ್ಮಿಕರ ಮಕ್ಕಳು ಓದುವ ಶಾಲೆ ಅಂತ ಗೊತ್ತಿದ್ದರೂ ನಿರ್ಲಕ್ಷ್ಯವಹಿಸಲಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಶಾಲೆಯಲ್ಲಿ 32 ಮಕ್ಕಳಿದ್ದು, ನಾಲ್ಕು ಶಿಕ್ಷಕರು ಇದ್ದಾರೆ. ಕೊಠಡಿಗಳ ದುರಸ್ತಿ, ಶೌಚಾಲಯದ ಸಮಸ್ಯೆ ಹಲವಾರು ಕಾರಣಗಳಿಂದ ಇಲ್ಲಿನ ಮಕ್ಕಳನ್ನು ಗಂಗೋತ್ರಿ ಮತ್ತು ಸರಸ್ವತಿಪುರಂ, ಕುವೆಂಪು ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಕಾಲೋನಿ ಶಾಲೆಗೆ ಮೂಲ ಸೌಲಭ್ಯವಿದ್ದರೆ ದೂರಕ್ಕೆ ಹೋಗುವುದು ತಪ್ಪಲಿದೆ ಎಂದು ಕಾಲೋನಿ ಮುಖಂಡರೊಬ್ಬರು ವಿವರಿಸಿದರು.
ಸಂವಾದದಲ್ಲಿ ಪಾಲ್ಗೊಂಡಿದ್ದ ವಿವಿಧ ತರಗತಿಯ ಮಕ್ಕಳು ವೈದ್ಯರಾಗುವುದು, ಪೊಲೀಸರಾಗುವ ಕುರಿತ ಮುಂದಿನ ಕನಸಗಳನ್ನು ಬಿಚ್ಚಿಟ್ಟರು.
ಕಾಲೋನಿಗೆ ಭೇಟಿ: ಶಾಲಾ ಮಕ್ಕಳ ಸಂವಾದದ ಬಳಿಕ ಕುದುರೆಮಾಳ ಕಾಲೋನಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸಿದರು. ವಲಯ ಸಹಾಯಕ ಆಯುಕ್ತರಾದ ಚಂದ್ರಮ್ಮ, ಆಯೋಗದ ಕಾರ್ಯದರ್ಶಿ ಚಂದ್ರಕಲಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಮಾಲತಿ, ಸ್ಲಂ ಬೋರ್ಡ್ ಎಇಇ ಬಿ.ಎಸ್.ರಾಮಚಂದ್ರ ಇನ್ನಿತರರು ಹಾಜರಿದ್ದರು.
ಭೂಮಿ ಹಸ್ತಾಂತರ ಮಾಡದಿದ್ದಕ್ಕೆ ಕಿಡಿ
ಮೈಸೂರು: ಕಾಲೋನಿಯ ನಿವಾಸಿಗಳಿಗೆ ಗುಂಪು ಮನೆ ಕಟ್ಟಲು ಮುಡಾ ವ್ಯಾಪ್ತಿಯಲ್ಲಿ 1.6 ಎಕರೆ ಜಮೀನು ಬಿಟ್ಟುಕೊಡಲು ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆಯಾಗಿದ್ದರೂ ಈವರೆಗೆ ಹಸ್ತಾಂತರ ಮಾಡದಿರುವ ಬಗ್ಗೆ ಮುಡಾ ಅಧಿಕಾರಿಗಳ ಕಾರ್ಯವೈಖರಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
2019ರಲ್ಲಿ ಹಸ್ತಾಂತರ ಮಾಡಲು ಒಪ್ಪಿಗೆ ಕೊಡಲಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಹಣ ಕಟ್ಟಲು ರೆಡಿಯಾಗಿದ್ದೇವೆ. ಮುಡಾದಿಂದ ಒಪ್ಪಿಗೆ ಪತ್ರ ಸಿಗಬೇಕಿದೆ ಎಂದು ಇಇ ಹರೀಶ್ ಹೇಳಿದರು. ಇದಕ್ಕೆ ಸ್ಪಂದಿಸಿದ ಕೋಟೆ ಎಂ.ಶಿವಣ್ಣರವರು, ಮುಡಾ ಅಧಿಕಾರಿಗಳಿಗೆ ನೋಟಿಸ್ ಜಾರಿ ವಿವರಣೆ ಪಡೆಯಬೇಕು. ಏನಾದರೂ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಪೌರಕಾರ್ಮಿಕರು ವಾಸವಿರುವ ಕುದುರೆಮಾಳದಲ್ಲಿ ಶಾಲೆಯ ಸ್ಥಿತಿ ಮತ್ತು ಮಕ್ಕಳ ಸಮಸ್ಯೆ ಆಲಿಸಲು ಶಾಲೆಗೆ ಭೇಟಿ ನೀಡಿದ್ದು, ಈ ವೇಳೆ ಕಟ್ಟಡ ಶಿಥಿಲವಾಗಿರುವುದು ಹಾಗೂ ಮೂಲ ಸೌಲಭ್ಯದ ಕೊರತೆ ಇರುವುದು ಕಂಡುಬಂದಿದೆ. ಈ ಬಗ್ಗೆ ಸೂಚನೆ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಇಲ್ಲದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.
-ಎಂ.ಶಿವಣ್ಣ, ಅಧ್ಯಕ್ಷರು, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…